ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀನದಯಾಳರ ಚಿಂತನೆ ಎಷ್ಟು ಪ್ರಸ್ತುತ?

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, ದೀನದಯಾಳ ಉಪಾಧ್ಯಾಯ ಅವರ ಸಮಗ್ರ ಬರಹಗಳ ಮೊದಲ ಐದು ಸಂಪುಟಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಆಗ ಅವರು `ದೀನದಯಾಳರ ಚಿಂತನೆ ಇಂದಿಗೂ ಪ್ರಸ್ತುತ' ಎನ್ನುವ ಮಾತುಗಳನ್ನೂ ಆಡಿದ್ದಾರೆ. ಅವರ ಚಿಂತನೆ ಇಂದಿಗೆ ಮಾತ್ರ ಅಲ್ಲ. ಎಂದಿಗೂ ಪ್ರಸ್ತುತ ಅಲ್ಲ ಎಂದು ಸಂವಿಧಾನದ ಮೂಲ ಆಶಯಗಳಾದ ಜಾತ್ಯತೀತತೆಯ ಮೇಲೆ ನಂಬಿಕೆ ಇಟ್ಟಂತಹ ನನ್ನಂತಹವರ ಅಭಿಪ್ರಾಯ. ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾ ಸುಳ್ಳು ಪ್ರಚಾರಗಳನ್ನು ಮಾಡುತ್ತಲೇ ಬಂದಿವೆ, ಅದರಲ್ಲಿ ಸ್ವಲ್ಪ ಯಶಸ್ವಿಯೂ ಆಗಿವೆ. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿ ಇದ್ದಾಗಲೂ ಇದೇ ನಡೆದದ್ದು.

ಗೋಲ್ವಾಲ್ಕರ್, ಹೆಡಗೇವಾರ್, ಸಾವರ್ಕರ್, ಶ್ಯಾಮಪ್ರಸಾದ ಮುಖರ್ಜಿ ಬಲರಾಜ ಮುಧೋಕ್, ಇಂಥವರ ಸಾಲಿನಲ್ಲಿ ದೀನದಯಾಳ್ ಉಪಾಧ್ಯಾಯರೂ ಸಂಘ ಪರಿವಾರಕ್ಕೆ ಸೇರಿದ ಒಬ್ಬ ಪ್ರಮುಖರು. ಈ ಮಹನೀಯರು ಆ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ನಮ್ಮ ದೇಶಪ್ರೇಮಿ ನಾಯಕರನ್ನು ಯಾವ ರೀತಿ ಪರಿಹಾಸ್ಯ ಮಾಡುತ್ತಿದ್ದರು ಮತ್ತು ದ್ವೇಷಿಸುತ್ತಿದ್ದರು ಎನ್ನುವುದು ಈಗಿನ ಪೀಳಿಗೆಯವರಿಗೆ ತಿಳಿದಿರಲಿಕ್ಕಿಲ್ಲ. ಗಾಂಧೀಜಿ ಹತ್ಯೆ ಇದಕ್ಕೆ ನಿದರ್ಶನ. ನಾಥುರಾಮ ವಿನಾಯಕ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಇಬ್ಬರೂ ಗಲ್ಲಿಗೇರಿದರು. ಏಳು ಜನರಿಗೆ ಬಗೆಬಗೆಯ ಶಿಕ್ಷೆಗಳಾದುವು. ಸಾವರ್ಕರ್ ತಪ್ಪಿಸಿಕೊಂಡರು. ಆರೋಪಿಗಳಲ್ಲಿ ಪ್ರಮುಖರಾಗಿದ್ದ ಸಾವರ್ಕರ್ ಅವರು ಸಂಶಯಾತೀತ ಸಾಕ್ಷ್ಯಾಧಾರವಿಲ್ಲದ್ದರಿಂದ ಶಾಸನದ ತಾಂತ್ರಿಕ ದೋಷದ ಕಾರಣ ದೋಷಮುಕ್ತರಾದರು. ಶಿಕ್ಷೆ ಆಗದಿದ್ದ ಮಾತ್ರಕ್ಕೆ ಅವರು ನಿರ್ದೋಷಿ ಅಲ್ಲ. ನಮ್ಮ ಹಿರಿಯ ಸಾಹಿತಿಗಳಲ್ಲಿ ಪ್ರಮುಖರಾದ ಕೋ. ಚೆನ್ನಬಸಪ್ಪನವರು `ಗಾಂಧಿ ಕಗ್ಗೊಲೆ' ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಈ ಎಲ್ಲ ವಿವರಗಳೂ ಆ ಕೃತಿಯಲ್ಲಿವೆ. ಕೋಚೆ  ನ್ಯಾಯಮೂರ್ತಿಗಳಾಗಿದ್ದು ನಿವೃತ್ತರಾದವರು. ಜವಾಬ್ದಾರಿ ಸ್ಥಾನಗಳಲ್ಲಿ ಇದ್ದವರು.  ಇಂತಹ `ದೇಶಭಕ್ತ'ರ ಪರಂಪರೆಯಿಂದ ಬಂದ ಸಂಘ ಪರಿವಾರ ಈಗ ಸ್ವಾತಂತ್ರ್ಯ ಪ್ರೇಮಿಗಳ ಹಾಗೆ ನಾಟಕವಾಡುತ್ತಿದೆ.

ಸಂಘ ಸಂಸ್ಥೆಗಳು ಎನ್ನುವಾಗ ನನಗೆ `ಮಿಥಿಕ್ ಸೊಸೈಟಿ' ಮತ್ತು `ಗೋಖಲೆ ಸಾರ್ವಜನಿಕ ಸಂಸ್ಥೆ' ನೆನಪಾಗುತ್ತದೆ. ಇವೆರಡೂ ಈಗ ಆರ್‌ಎಸ್‌ಎಸ್ ಪಾಲಾಗಿವೆ. ಬೆಂಗಳೂರು ನಗರದಲ್ಲಿ ಇವು ಮುಖ್ಯವಾದ ಸಾಂಸ್ಕೃತಿಕ ಸಂಸ್ಥೆಗಳು. ಮಿಥಿಕ್ ಸೊಸೈಟಿಯಲ್ಲಿ ಅನೇಕ ಅಮೂಲ್ಯ ಗ್ರಂಥಗಳು ಇವೆ. ಸಂಶೋಧಕರಿಗೆ ಸಾಹಿತ್ಯಾಭಿಮಾನಿಗಳಿಗೆ ಪ್ರಶಸ್ತವಾದ ತಾಣ. ಈ ಸಂಸ್ಥೆಗಳಿಗೆ ಸಂಬಂಧಿಸಿದ ಇಬ್ಬರು ಹಿರಿಯರನ್ನು ನಾವು ಈಗ ನೆನಪಿಸಿಕೊಳ್ಳಲೇಬೇಕು. ಒಬ್ಬರು, ಡಿವಿಜಿ. ದಿವಾನರು ಕೊಟ್ಟ ಚೆಕ್ಕನ್ನೂ ಬ್ಯಾಂಕಿಗೆ ಕಟ್ಟದೆ ಪಕ್ಕದ ಅಂಗಡಿಯಿಂದ ಕಾಫಿ ಪುಡಿ ಸಾಲ ತರುತ್ತಿದ್ದವರು. ತಮಗೆ ಬಂದ್ದ್ದದೆಲ್ಲವನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಧಾರೆ ಎರೆದವರು. ರಾನಡೆ, ಗೋಖಲೆ, ತಿಲಕ್, ಗಾಂಧೀಜಿ ಮೊದಲಾದವರ ಬಗ್ಗೆ ಡಿವಿಜಿ ಅಪಾರ ಗೌರವ ಇಟ್ಟುಕೊಂಡವರು. ಹಾಗಾಗಿಯೇ ತಾವು ಸ್ಥಾಪಿಸಿದ ಸಂಸ್ಥೆಗೆ `ಗೋಖಲೆ ಸಾರ್ವಜನಿಕ ಸಂಸ್ಥೆ' ಎಂದು ಹೆಸರಿಟ್ಟಿದ್ದರು. ಮತ್ತೊಬ್ಬರು, ಡಾ. ಎಚ್. ನರಸಿಂಹಯ್ಯನವರು. ತಮಗೆ ಬಂದ್ದ್ದದೆಲ್ಲವನ್ನು ಈ ಮಹನೀಯರು ನ್ಯಾಷನಲ್ ಕಾಲೇಜಿಗೆ ಕೊಡುಗೆ ನೀಡಿದ್ದಾರೆ.

ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಾಗ ಆರ್‌ಎಸ್‌ಎಸ್‌ನ ಎಸ್.ಆರ್. ರಾಮಸ್ವಾಮಿ ಗುಂಪು ಹೇಗೆಲ್ಲ ಆಟವಾಡಿತು ಎನ್ನುವುದು ಈಗ ಇತಿಹಾಸ. ಈ ಗುಂಪು ಅಧ್ಯಕ್ಷತೆಗೆ ಸ್ಪರ್ಧಿಸಿದ್ದ ಪ್ರೊ. ಎಲ್.ಎಸ್. ಶೇಷಗಿರಿರಾಯರನ್ನೇ ಸೋಲಿಸಿತು. ಹಿಂದೆ `ಭಾರತ-ಭಾರತಿ ಪುಸ್ತಕ ಮಾಲೆ'ಗೆ ಎಲ್.ಎಸ್. ಶೇಷಗಿರಿರಾಯರೇ ಸಂಪಾದಕರಾಗಿದ್ದರು. ಕೇಶವಕೃಪಾದ ಚಿಂತಕರ ಚಾವಡಿಯ ಗುಂಪು ಅವರನ್ನು ವಿರೋಧಿಸಿತು. ಇದಕ್ಕೆ ಮುಖ್ಯ ಕಾರಣ ಎಲ್‌ಎಸ್‌ಎಸ್ ಯಾರ ಕೈಗೊಂಬೆ ಆಗುವವರಲ್ಲ, ಸ್ವತಂತ್ರವಾದ ಅಭಿಪ್ರಾಯ ಉಳ್ಳವರು. ಇದಕ್ಕಾಗಿಯೇ ಗೊಂಬೆಯಾಟಕ್ಕೆ ಅರ್ಹ ಅನಾಮಿಕ ವ್ಯಕ್ತಿಯೊಬ್ಬನನ್ನು ನಿಲ್ಲಿಸಿ, ಸಂಖ್ಯಾಬಲ ಉಪಯೋಗಿಸಿ, ಗೋಖಲೆ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ನಮ್ಮ ಮಹಾಪುರುಷರನ್ನು ಗಣ್ಯ ವ್ಯಕ್ತಿಗಳನ್ನು ಹೇಗೆ ಈ ಸಂಘ ಪರಿವಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎನ್ನುವಾಗ ಯಾರಿಗೂ ವಿಸ್ಮಯ ಆಗದೇ ಇರದು.

ಸ್ವಾಮಿ ವಿವೇಕಾನಂದರನ್ನು ಈ ಜನ ಹೇಗೆ ತಾವೇ ಗುತ್ತಿಗೆ ತೆಗೆದುಕೊಂಡಿರುವವರ ಹಾಗೆ ನಾಟಕ ಆಡುವುದನ್ನು ನೋಡಿದಾಗ ಅವರ ಚರಿತ್ರೆಯನ್ನು ಚೆನ್ನಾಗಿ ಓದಿ ತಿಳಿದುಕೊಂಡಿರುವವರಿಗೆ ಆಶ್ಚರ್ಯ ಆಗುತ್ತದೆ. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಇದೆ. ಇದನ್ನು ಸ್ಥಾಪಿಸಿದವರು ಜೆಮ್‌ಷೆಡ್‌ಜೀ ಟಾಟಾ.  ಅವರಿಗೆ “ಇಂಥ ಒಂದು ಸಂಸ್ಥೆಯನ್ನು ಸ್ಥಾಪಿಸು” ಎಂದು ಹೇಳಿದವರೇ ಸ್ವಾಮಿ ವಿವೇಕಾನಂದರು. `ತನ್ನ ಜಾತಿಯ ಅಭಿಮಾನ, ಅನ್ಯಮತವನ್ನು ದ್ವೇಷಿಸುವುದು ಇವುಗಳಿಂದ ಕೂಡಿದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುವಾಗಿ ಆಕ್ರಮಿಸಿಕೊಂಡಿದೆ'. ಇಂಥ ಮಾತುಗಳನ್ನು ಆಡುತ್ತಿದ್ದವರೂ ಸ್ವಾಮಿ ವಿವೇಕಾನಂದರೇ. ಇಂಥ ವಿಚಾರಗಳನ್ನು ಅಪ್ಪಿತಪ್ಪಿಯೂ ಸಂಘ ಪರಿವಾರ ಹೇಳುವುದಿಲ್ಲ.  ದೀನದಯಾಳರೂ ಇಂಥ ಗುಂಪಿಗೇ ಸೇರಿದವರು.

ದೀನದಯಾಳರ ಬಗ್ಗೆ ಪುಸ್ತಕ ಪ್ರಕಟಿಸಿದ ಸರ್ಕಾರವೇ ನಮ್ಮ ಸಂಸ್ಕೃತಿಯನ್ನು ಗುತ್ತಿಗೆಗೆ ಪಡೆದಂತೆ ವರ್ತಿಸುತ್ತಿರುವ ರಾಷ್ಟ್ರೋತ್ಥಾನ ಸಾಹಿತ್ಯದ ಹದಿನೇಳೂವರೆ ಕೋಟಿ ಬೆಲೆಯ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಖರೀದಿಸಿದೆ. ಹೀಗೆ ಒಂದು ಸಂಸ್ಥೆಯಿಂದಲೇ ಸರ್ಕಾರ ಹದಿನೇಳೂವರೆ ಕೋಟಿ ಬೆಲೆಯ ಪುಸ್ತಕಗಳನ್ನು ಕೊಳ್ಳಬಹುದೆ? ಇದಕ್ಕೇನಾದರೂ ನಿಯಮಗಳು ಇವೆಯೆ? ಹಾಗಾದರೆ ಉಳಿದ ಪ್ರಕಾಶಕರ ಗತಿ ಏನು? ಅಷ್ಟಲ್ಲದೆ ರಾಷ್ಟ್ರೋತ್ಥಾನ ಮಾಲೆಯಲ್ಲಿ ಪ್ರಕಟಿಸಿರುವಂಥವು ಮಾತ್ರ ಮೌಲ್ಯವುಳ್ಳ ಸಾಹಿತ್ಯವೆ? ಇದುವರೆಗೂ ಈ ಸಾಹಿತ್ಯ ಯಾಕೆ ಖರ್ಚಾಗಲಿಲ್ಲ? ರಾಷ್ಟ್ರೋತ್ಥಾನ ಗೋದಾಮಿನಲ್ಲಿ ಇದುವರೆಗೂ ಯಾಕೆ ದೂಳು ಹಿಡಿದು ಕೊಳೆಯುತ್ತ ಬಿದ್ದಿದ್ದವು? ದೀನದಯಾಳರ ಬಗ್ಗೆ ಸಾಹಿತ್ಯವೂ ಇದೇ ರೀತಿಯದ್ದೇ?

ಮಹಾವ್ಯಕ್ತಿಗಳ ಹೆಸರು ಹೇಳಿಕೊಂಡು ರಾಜಕೀಯ ಮಾಡುವುದು, ಸಾಹಿತ್ಯ ಸಂಸ್ಕೃತಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದು, ನಿಧಾನವಾಗಿ ಅಲ್ಲಿ ಕೇಸರಿಯನ್ನು ತುಂಬುವುದು, ಇದು ಉದ್ದಕ್ಕೂ ಸಂಘ ಪರಿವಾರ ಮಾಡಿಕೊಂಡು ಬಂದಿರುವ ಸಂಚು. ಈಗಲೂ ಹಾಗೆಯೇ ದೀನದಯಾಳರನ್ನು ಕುರಿತು ಸಂಪುಟಗಳನ್ನು ಹೊರತಂದಿದೆ. ಬೆಂಗಳೂರಿನಲ್ಲಿ ಮಿಥಿಕ್ ಸೊಸೈಟಿ ಮತ್ತು ಗೋಖಲೆ ಸಾರ್ವಜನಿಕ ಸಂಸ್ಥೆ ಇವೆರಡೇ ಅಲ್ಲ. ಇನ್ನೂ ಹತ್ತಾರು ಸಂಸ್ಥೆಗಳು ಇವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಗಾಂಧಿಭವನ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ. ರಾಜಕೀಯ ಅಧಿಕಾರ ಕೈಗೆ ಸಿಕ್ಕರೆ ಇವೆಲ್ಲದರಲ್ಲೂ ಒಂದಲ್ಲ ಒಂದು ದಿನ ಸಂಘ ಪರಿವಾರದವರು ಆಕ್ರಮಿಸಿಕೊಂಡು ಅಲ್ಲಿ ಭಗವಾ ಧ್ವಜ ಹಾರಿಸಿ ಬಿಡುತ್ತಾರೋ ಏನೋ? ಸಂಖ್ಯಾಬಲದಿಂದ ಏನನ್ನು ಮಾಡಲೂ ಸಾಧ್ಯವಿದೆ.

ಅಹರ್ನಿಶಿ ದುಡಿದು ಕಾಸಿಗೆ ಕಾಸು ಕೂಡಿಹಾಕಿ ಎಲ್ಲವನ್ನೂ ನಮ್ಮ ಡಿವಿಜಿ ಗೋಖಲೆ ಸಾರ್ವಜನಿಕ ಸಂಸ್ಥೆ ಕಟ್ಟಿದರು. ಮೂಢನಂಬಿಕೆಗಳನ್ನು ಬಲವಾಗಿ ಟೀಕಿಸುತ್ತಿದ್ದವರಲ್ಲಿ ಕುವೆಂಪು ಅವರೂ ಒಬ್ಬರು. ಅವರ ಹೆಸರಿನಲ್ಲಿಯೇ `ಕುವೆಂಪು ಭಾಷಾ ಭಾರತಿ' ಇದೆ. ಆ ಸಂಸ್ಥೆಯೇ ದೀನದಯಾಳರ ಬಗ್ಗೆ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಎಂತಹ ವಿಪರ್ಯಾಸ?  ಈ ರೀತಿ ನಮ್ಮ ಸಾಂಸ್ಕೃತಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವವರ ಬಗ್ಗೆ ಜನರೇ ದನಿ ಎತ್ತಬೇಕು. ಮುಂದೆ ಒಂದು ದಿನ, ಸರ್ಕಾರದ ಅವಧಿ ನಾಲ್ಕು ಐದು ತಿಂಗಳೇ ಇದೆ ಎನ್ನುವಾಗಲೇ `ಮಹಾವೀರ ನಾಥುರಾಮ ವಿನಾಯಕ ಗೋಡ್ಸೆಯ ಸಾಧನೆಗಳು' ಎನ್ನುವ ಹತ್ತು ಸಂಪುಟಗಳು ಹೊರಬಂದರೂ ಯಾರೂ ಆಶ್ಚರ್ಯಪಡಬೇಕಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT