ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀನಬಂಧು ಮನೆಯಲ್ಲಿ ಧ್ಯಾನಕ್ಕೆ ಕುಳಿತ ಗಾಂಧಿ

Last Updated 1 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಚಾಮರಾಜನಗರ: `ಅಕ್ಕಪಕ್ಕದಲ್ಲಿ ಹಸಿರುಹೊತ್ತ ಗಿಡಮರಗಳು. ಮುಂಭಾಗ ಕಂಗೊಳಿಸುತ್ತಿರುವ ಚೆಂಡು ಹೂವಿನ ಗಿಡಗಳು. ಪ್ರತಿಮೆಗೆ ಅಂತಿಮ ರೂಪ ನೀಡುತ್ತಿರುವ ಕಲಾವಿದರು. ಮೆಲ್ಲನೆ ಧ್ಯಾನಾಸಕ್ತ ಗಾಂಧೀಜಿಯತ್ತ ದೃಷ್ಟಿಬೀರುವ ಚಿಣ್ಣರು...~

ನಗರದ ದೀನಬಂಧು ಸಂಸ್ಥೆಗೆ ಭೇಟಿ ನೀಡಿದವರಿಗೆ ರಾಷ್ಟ್ರಪಿತನ ಪ್ರತಿಮೆ ನೋಡಿ ಅಚ್ಚರಿಯಾಗುವುದು ಸಹಜ. ಜಿಲ್ಲಾ ಕೇಂದ್ರದಲ್ಲಿ ದಶಕದಿಂದಲೂ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಸ್ಥಾಪಿಸಬೇಕೆಂಬ ಗಾಂಧಿವಾದಿಗಳ ಕನಸು ದೀನಬಂಧು ಮನೆಯ ಆವರಣದಲ್ಲಿ ಸಾಕಾರಗೊಂಡಿದೆ. ಬಾಪುವಿನ ಹಾದಿಯಲ್ಲಿ ಹೆಜ್ಜೆಹಾಕಲು ಸಂಸ್ಥೆಯಲ್ಲಿರುವ ಪಾಪುಗಳು ಸಜ್ಜಾಗಿದ್ದಾರೆ.

ಗಡಿ ಜಿಲ್ಲೆಯು ರಚನೆಯಾಗಿ ಒಂದೂವರೆ ದಶಕ ಉರುಳಿದೆ. ಇಂದಿಗೂ ಜಿಲ್ಲಾ ಕೇಂದ್ರದಲ್ಲಿ ಗಾಂಧೀಜಿಯ ಪ್ರತಿಮೆ ಸ್ಥಾಪಿಸುವ ಪ್ರಯತ್ನವೇ ನಡೆದಿಲ್ಲ. ಜಿಲ್ಲಾಡಳಿತ ಭವನದ ಆವರಣ ವಿಶಾಲವಾಗಿದ್ದರೂ, ಸರ್ಕಾರದಮಟ್ಟದಲ್ಲೂ ರಾಷ್ಟ್ರಪಿತನ ಪ್ರತಿಮೆ ಸ್ಥಾಪಿಸುವ ಪ್ರಯತ್ನ ನಡೆದಿಲ್ಲ. ಜತೆಗೆ, ಒಂದು ರಸ್ತೆಗೂ ಗಾಂಧೀಜಿಯ ಹೆಸರನ್ನು ನಾಮಕರಣ ಮಾಡಿಲ್ಲ.

ಜಿಲ್ಲೆಯ ಕೊಳ್ಳೇಗಾಲ, ಯಳಂದೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕು ಕೇಂದ್ರಗಳು ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿ, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಗಾಂಧಿ ಪ್ರತಿಮೆ ಸ್ಥಾಪಿಸುತ್ತಿರುವುದು ದೀನಬಂಧು ಸಂಸ್ಥೆಯ ಹೆಗ್ಗಳಿಕೆ.

ಪ್ರಸ್ತುತ ಸಿಮೆಂಟ್ ಬಳಸಿಕೊಂಡು ಐದುವರೆ ಅಡಿ ಎತ್ತರದ ಧ್ಯಾನಾಸಕ್ತ ಗಾಂಧೀಜಿಯ ಪ್ರತಿಮೆ ಸ್ಥಾಪಿಸಲಾಗಿದೆ. ಕಲಾವಿದ ಸಲೀಂ ನೇತೃತ್ವದಡಿ ಗೌತಮ್, ದರ್ಶನ್‌ಕುಮಾರ್ ಅವರ ತಂಡ ಆಕರ್ಷಕವಾದ ಪ್ರತಿಮೆ ಸ್ಥಾಪಿಸಿದೆ.
ದೆಹಲಿಯ ಸುಪ್ರೀಂ ಕೋರ್ಟ್ ಮುಂಭಾಗ ಧ್ಯಾನಾಸಕ್ತ ಗಾಂಧೀಜಿಯ ಪ್ರತಿಮೆಯಿದೆ.
 
ಇದನ್ನೇ ಮಾದರಿಯಾಗಿಟ್ಟುಕೊಂಡು ಇಲ್ಲಿಯೂ ಪ್ರತಿಮೆ ಸ್ಥಾಪಿಸಿರುವುದು ವಿಶೇಷ. ಕಲಾವಿದರು ಕಳೆದ ಎರಡು- ಮೂರು ವಾರದಿಂದಲೂ ಸತತವಾಗಿ ಕೆಲಸ ನಿರ್ವಹಿಸಿದ ಪರಿಣಾಮ ಆಕರ್ಷಕ ಪ್ರತಿಮೆ ಅನಾವರಣಗೊಂಡಿದೆ.
ಅ. 2ರಂದು ನಡೆಯಲಿರುವ ಗಾಂಧೀಜಿ ಜಯಂತಿಯಂದು ಸರಳ ಸಮಾರಂಭ ಹಮ್ಮಿಕೊಂಡು ಪ್ರತಿಮೆ ಅನಾವರಣ ಮಾಡಲು ದೀನಬಂಧು ಸಂಸ್ಥೆಯೂ ಸಿದ್ಧತೆ ನಡೆಸಿದೆ.

`ಬಾಲ್ಯದಲ್ಲಿಯೇ ಮಕ್ಕಳಿಗೆ ಮಾನವೀಯ ಹಾಗೂ ನೈತಿಕ ಮೌಲ್ಯ ಬಿತ್ತಬೇಕಿದೆ. ಈ ನಿಟ್ಟಿನಲ್ಲಿ ಚಿಣ್ಣರಿಗೆ ಗಾಂಧೀಜಿ ಆದರ್ಶವಾಗಬೇಕಿದೆ. ಹೀಗಾಗಿ, ಧ್ಯಾನಾಸಕ್ತ ಗಾಂಧೀಜಿಯ ಪ್ರತಿಮೆ ಸ್ಥಾಪಿಸಲಾಗಿದೆ. ಅಲ್ಪ ಅವಧಿಯಲ್ಲಿಯೇ ಸ್ನೇಹಿತರ ಬಳಗದ ಶ್ರಮದಿಂದ ಸುಂದರವಾದ ಗಾಂಧಿ ಪ್ರತಿಮೆ ಅನಾವರಣಗೊಂಡಿದೆ~ ಎನ್ನುತ್ತಾರೆ ಕಲಾವಿದ ಸಲೀಂ.

`ಸಂಸ್ಥೆಯ ಆವರಣದಲ್ಲಿ ರಾಷ್ಟ್ರಪಿತನ ಪ್ರತಿಮೆ ಸ್ಥಾಪಿಸಬೇಕೆಂಬುದು ಹಲವು ವರ್ಷದ ಕಸನಾಗಿತ್ತು. ಪ್ರಸ್ತುತ ಸಂಸ್ಥೆಯೊಂದಿಗೆ ನಿರಂತರ ಒಡನಾಟವಿಟ್ಟುಕೊಂಡಿರುವ ಕಲಾವಿದರು ಈ ಕನಸನ್ನು ನನಸು ಮಾಡಿದ್ದಾರೆ. ಈಗಾಗಲೇ, ಶಾಲೆಯಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸಲಾಗಿದೆ. ಸ್ವಾಮಿವಿವೇಕಾನಂದ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಕೂಡ ಸ್ಥಾಪಿಸಲು ಚಿಂತನೆ ನಡೆದಿದೆ~ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT