ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪದ ಕೆಳಗಿನ ಕತ್ತಲ ಬದುಕು...

Last Updated 2 ಡಿಸೆಂಬರ್ 2013, 6:10 IST
ಅಕ್ಷರ ಗಾತ್ರ

ಭದ್ರಾವತಿ: ರಾಜ್ಯದಲ್ಲಿ ಸರಿ ಸುಮಾರು 2.5 ಲಕ್ಷ ಜನ ಎಚ್‌ಐವಿ ಪೀಡಿತರಿದ್ದಾರೆ ಎಂಬ ಅಂದಾಜಿದೆ. ಅವರ ಸಬಲೀಕರಣ, ಪುನರ್ವಸತಿ ಹಾಗೂ ಉನ್ನತೀಕರಣಕ್ಕಾಗಿ ಹಲವು ಯೋಜನೆಗಳ ಮೂಲಕ ಸರ್ಕಾರ ಶ್ರಮಿಸುತ್ತಿದೆ.

ರಾಜ್ಯದಲ್ಲಿ ಇದಕ್ಕಾಗಿ ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಕೆಲಸ ಮಾಡುತ್ತಿದೆ. ಅದು ತನ್ನ ಸಿಬ್ಬಂದಿ ಮೂಲಕ ಎಚ್‌ಐವಿ ಪೀಡತರ ರಕ್ಷಣೆಗಾಗಿ ಜನಜಾಗೃತಿ ಮೂಡಿಸಲು ಟೊಂಕಕಟ್ಟಿ ನಿಂತಿದೆ. ಎನ್‌ಜಿಒ ಮೂಲಕ ಪೌಷ್ಟಿಕ ಆಹಾರ, ಎಆರ್ ಟಿ ಮಾತ್ರೆ, ಪ್ರಯಾಣ ವೆಚ್ಚ, ನಿವೇಶನ ಇದ್ದಲ್ಲಿ ಮನೆ ನಿರ್ಮಾಣ ಹೀಗೆ ಹತ್ತು ಹಲವು ಯೋಜನೆಗಳು ಪೀಡಿತರ ಬದುಕಿಗೆ ಬೆಳಕಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

  ಆದರೆ, ಇದೇ ಕಾಳಜಿಯನ್ನು ಪ್ರಿವೆನ್ಷನ್‌ ಸೊಸೈಟಿ ತನ್ನ ಸಿಬ್ಬಂದಿ ಪರವಾಗಿ ತೆಗೆದುಕೊಳ್ಳುವಲ್ಲಿ ಮಾತ್ರ ನಿರ್ಲಿಪ್ತವಾಗಿದೆ. ಸುಮಾರು 2,500 ಮಂದಿ ಸಿಬ್ಬಂದಿ ಎಚ್‌ಐವಿ ಪೀಡಿತರ ಪಾಲಿಗೆ ವರ ನೀಡುವ ರೀತಿಯಲ್ಲಿ ಆಪ್ತ ಸಮಾಲೋಚಕರಾಗಿ, ಪ್ರಯೋಗಶಾಲಾ ತಂತ್ರಜ್ಞರಾಗಿ, ದಾದಿಯರಾಗಿ, ಡಾಟಾ ಅಪರೇಟರ್ ಹೀಗೆ ಹಲವು ಸೇವೆ ಮಾಡುತ್ತಿದ್ದರು ಅವರಿಗೆ ಸಿಗುವ ವೇತನ ಮಾತ್ರ ನಾಲ್ಕಂಕಿ ದಾಟಿಲ್ಲ.

ಗುತ್ತಿಗೆ ಆಧಾರದಲ್ಲಿ ನೇಮಕವಾದ ಅವರಿಗೆ ಕೆಲಸ ಮಾಡಿದ ದಿನದ ಲೆಕ್ಕದ ಮೇಲೆ ದಿನಗೂಲಿ ಸಿಗುತ್ತದೆ. ಸೋಂಕಿತನ ನಡುವೆ ದಿನ ಕಳೆಯುವ ಅವರಿಗೆ ಯಾವುದೇ ರಿಸ್ಕ್ ಅಲೊಯೆನ್ಸ್ ಇಲ್ಲ. ಅಭದ್ರತೆಯ ನಡುವೆ ಕಾಯಕ ಮಾಡುವ ಸ್ಥಿತಿ ನಮ್ಮದಾಗಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಕಾಯಂ ನೌಕರರ ಮೂಲ ವೇತನಕ್ಕೆ ತಕ್ಕಷ್ಟು ಸಂಬಳವಿಲ್ಲದ ಇವರ ಕೆಲಸ ಕುರಿತು ಇಲ್ಲಿಯ ತನಕ ಯಾವುದೇ ಸರ್ಕಾರ ಚಿಂತನೆ ನಡೆಸಿಲ್ಲ. ‘ನಮ್ಮ ಸಮಸ್ಯೆಗಳ ಕುರಿತು ತಲೆ ಕೆಡಿಸಿಕೊಳ್ಳದ  ಅಧಿಕಾರಿಗಳು ಕೆಲಸದ ಗುಣಮಟ್ಟ ಕೇಳುತ್ತಾರೆಯೇ ಹೊರತು, ನಮ್ಮ ಜೀವನಮಟ್ಟ ಕುರಿತು ಯೋಚಿಸುತ್ತಿಲ್ಲ’ ಎಂದು ನೊಂದು ನುಡಿಯುತ್ತಾರೆ ಹೆಸರು ಹೇಳಲಿಚ್ಛಸದ ಸಿಬ್ಬಂದಿ.

ಎಚ್ಐವಿ ಪೀಡಿತರ ಹಿತಕಾಯವುದು ಮಾತ್ರ ತಮ್ಮ ಕೆಲಸ ಎಂದು ಭಾವಿಸಿರುವ ಏಡ್ಸ್ ಪ್ರಿವೆನ್ಷನ್‌ ಸೊಸೈಟಿ ಅಧಿಕಾರಿಗಳು  ಕಾರ್ಯ ಕ್ಷೇತ್ರವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಜತೆ ವಿಲೀನ ಮಾಡಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಎಚ್ಐವಿ ಸೊಂಕಿತರ ಮನಸ್ಸಿನಲ್ಲಿ ಮಾತ್ರ ಆತ್ಮವಿಶ್ವಾಸ ತುಂಬುವ ಕೆಲಸ ನಡೆದಿದ್ದು, ಇದನ್ನು ಸಾಧಿಸಲು ಪ್ರಯತ್ನ ಪಡುವ ಸಿಬ್ಬಂದಿ  ಕುರಿತಾಗಿ ಮಾತ್ರ ಎಲ್ಲರೂ ಮೌನಕ್ಕೆ ಶರಣಾಗಿರುವುದು ಎಷ್ಟು ಸರಿ ಎಂಬುದು ಸಿಬ್ಬಂದಿ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT