ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾ ಅಪರೂಪ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಸಿನಿಮಾ ನನಗೆ ಎಲ್ಲಿಯವರೆಗೆ ಖುಷಿ ಕೊಡುವುದೋ ಅಲ್ಲಿಯವರೆಗೆ ನಾನು ನಟಿಸುತ್ತಿರುವೆ~ ಎನ್ನುವ ಚೆಲುವೆ ದೀಪಾ ಸನ್ನಿಧಿ. ಮೊದಲ ಚಿತ್ರದಲ್ಲೇ ಸ್ಟಾರ್ ನಟನೊಂದಿಗೆ ನಟಿಸುವ ಅವಕಾಶ ಪಡೆದು ಅದು ಬಿಡುಗಡೆಯಾಗುವುದಕ್ಕೆ ಮೊದಲೇ ಮತ್ತೊಬ್ಬ ಸ್ಟಾರ್‌ಗೆ ಜೋಡಿಯಾದ ಇವರು ಚಿಕ್ಕಮಗಳೂರಿನವರು. ದರ್ಶನ್ ಅಭಿನಯದ `ಸಾರಥಿ~ ಮೊದಲ ಚಿತ್ರ. ಎರಡನೇ ಸಿನಿಮಾ ಪುನೀತ್ ಅಭಿನಯದ `ಪರಮಾತ್ಮ~. ದೀಪಾ ತಮ್ಮ ಮೊದಮೊದಲ ಅನುಭವಗಳನ್ನು `ಸಿನಿಮಾ ರಂಜನೆ~ ಜೊತೆ ಹಂಚಿಕೊಂಡಿದ್ದಾರೆ.

`ಸಾರಥಿ~ ಸಿನಿಮಾಗೆ ಹೇಗೆ ಆಯ್ಕೆಯಾದಿರಿ?
ನಿರ್ದೇಶಕ ದಿನಕರ್ ತೂಗುದೀಪ ನನ್ನ ಪೋಟೋಗಳನ್ನು ನೋಡಿ ಆಡಿಶನ್‌ಗೆ ಕರೆದರು. ಆಡಿಶನ್‌ನಲ್ಲಿ ಆಯ್ಕೆಯಾದೆ. ನಂತರ ಒಂದು ವಾರ ಅಭಿನಯ ತರಂಗದಲ್ಲಿ ನಟನೆ ಕಲಿತೆ. ನೃತ್ಯವನ್ನೂ ರೂಢಿಸಿಕೊಂಡೆ. ಸೆಟ್‌ನಲ್ಲಿ ದಿನಕರ್ ಮತ್ತು ದರ್ಶನ್ ತಾಳ್ಮೆಯಿಂದ ನನ್ನನ್ನು ತಿದ್ದಿ ತೀಡಿದರು. 

`ಸಾರಥಿ~ಯಲ್ಲಿ ನಿಮ್ಮದು ಎಂಥ ಪಾತ್ರ?
ಜಗಳಗಂಟಿ ಪಾತ್ರ. ಚಿತ್ರವಿಡೀ ದರ್ಶನ್ ಜೊತೆ ಜಗಳ ಕಾಯುತ್ತಿರುತ್ತೇನೆ. ಹಿಂದೆ ಮಂಜುಳಾ ಮಾಡುತ್ತಿದ್ದ ಬಜಾರಿ ಪಾತ್ರದ ತರಹದ್ದು. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ.

`ಪರಮಾತ್ಮ~ನ ಜೊತೆಯಾದ ಬಗೆ ಹೇಗೆ? ಪಾತ್ರ ಏನು?
`ಪರಮಾತ್ಮ~ಕ್ಕೂ ಆಡಿಶನ್ ಮೂಲಕವೇ ಆಯ್ಕೆಯಾದೆ. ಈಗ ಚಿತ್ರೀಕರಣ ಮುಗಿದಿದೆ. ಒಂದು ಹಾಡು ಬಾಕಿ ಇದೆ. ಚಿತ್ರದಲ್ಲಿ ನನ್ನದು `ಇಂಟೀರಿಯರ್ ಡಿಸೈನ್~ ಮಾಡುವ ಯುವತಿಯ ಪಾತ್ರ. ಅಂದರೆ ಅದು ಚಿತ್ರದಲ್ಲಿ ನನ್ನ ವೃತ್ತಿ ಅಷ್ಟೇ. ಆದರೆ ಪಾತ್ರವನ್ನು ಇಂಥದ್ದೇ ಎಂದು ಹೇಳುವುದು ಕಷ್ಟ. 

 ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ಏನನ್ನಿಸಿತ್ತು?
ತುಂಬಾ ಹೆದರಿದ್ದೆ. ನಾನು ಮಾಡೆಲ್ ಆಗಿದ್ದರೂ, ಅಲ್ಲಿ ಪೋಸ್ ಕೊಡುವುದಷ್ಟೇ ನನ್ನ ಕೆಲಸವಾಗಿತ್ತು. ಇಲ್ಲಿ ನಟಿಸಬೇಕಿತ್ತು. ಅದಕ್ಕೂ ಇದಕ್ಕೂ ಸಾಕಷ್ಟು ವ್ಯತ್ಯಾಸ ಇದೆ.

ಏನು ಓದಿರುವಿರಿ?
ಸಾರಥಿಗೆ ಆಯ್ಕೆಯಾದಾಗ ನಾನು ಆರ್ಕಿಟೆಕ್ಟ್ ಎಂಜಿನಿಯರಿಂಗ್ ಓದುತ್ತಿದ್ದೆ. ಜೊತೆಜೊತೆಗೆ ಮಾಡೆಲಿಂಗ್ ಮಾಡುತ್ತಿದ್ದೆ. ಜ್ಯುವೆಲರಿ ಡಿಸೈನ್ ಕೋರ್ಸ್ ಅದಕ್ಕಿಂತ ಮೊದಲೇ ಮಾಡಿದ್ದೆ. ಮಧ್ಯೆ ಸಿನಿಮಾದಲ್ಲಿ ಮಾಡುವಾಸೆಯಾಯಿತು. ಈಗ ಎಂಜಿನಿಯರಿಂಗ್ ಅರ್ಧಕ್ಕೆ ನಿಂತಿದೆ. ಅದನ್ನು ಮುಗಿಸುವಾಸೆ ಇದೆ.

ಹಾಗಾದರೆ ನಿಮ್ಮ ಆಸಕ್ತಿ ಯಾವ ಕಡೆಗಿದೆ?
ಬದುಕಿನ ಕಡೆಗೆ. ನಾನು ಇದನ್ನೇ ಮಾಡಬೇಕು ಎಂದು ಹೊರಟವಳಲ್ಲ.  ನಾನು ಎಲ್ಲಿಯವರೆಗೆ ಖುಷಿಯಿಂದ ಸಿನಿಮಾ ಮಾಡುತ್ತಿರುವೆನೋ ಅಥವಾ ಸಿನಿಮಾ ಎಲ್ಲಿಯವರೆಗೆ ನನಗೆ ಖುಷಿ ಕೊಡುವುದೋ ಅಲ್ಲಿಯವರೆಗೆ ನಾನು ನಟಿಯಾಗಿರುವೆ.

ನಿಮ್ಮೆಲ್ಲಾ ಆಸಕ್ತಿಗಳಿಗೆ ಮನೆಯಲ್ಲಿ ಏನಂತಾರೆ?
ಅಪ್ಪ ಅಮ್ಮ ನನಗೆ ಯಾವುದಕ್ಕೂ ನಿರ್ಬಂಧ ಹಾಕಿಲ್ಲ. ಏನೇ ಮಾಡಿದರೂ ಒಳ್ಳೆಯ ಹಾದಿಯಲ್ಲಿ ಮಾಡು ಎನ್ನುತ್ತಾರೆ.

ಮೊಟ್ಟಮೊದಲಿಗೆ ಸ್ಟಾರ್‌ಗಳ ನಾಯಕಿಯಾಗಿದ್ದು ನಿಮಗೆ ಅದೃಷ್ಟ ಅನಿಸಿದೆಯಾ?
ಇರಬಹುದು. ಅದರಿಂದ ನನ್ನ ಹೊಣೆ ಜಾಸ್ತಿಯಾಗಿದೆ. ಜೊತೆಗೆ ಭಯವೂ ಇದೆ.

ನಿಮ್ಮ ಸಿನಿಮಾಗಳಿಗೂ ಡಬ್ಬಿಂಗ್ ಮಾಡಿರುವಿರಾ?
`ಸಾರಥಿ~ಗೆ ಮಾಡಲಿಲ್ಲ. ಅದಕ್ಕೆ ಡೇಟ್ ಸಮಸ್ಯೆ ಕಾರಣ. `ಪರಮಾತ್ಮ~ಕ್ಕೆ ಇನ್ನೂ ಡಬ್ಬಿಂಗ್ ಆರಂಭವಾಗಿಲ್ಲ. ನನ್ನ ಮಾತೃಭಾಷೆ ಕನ್ನಡವಾದ ಕಾರಣ ಡಬ್ಬಿಂಗ್ ಮಾಡುವ ಆತ್ಮವಿಶ್ವಾಸ ಇದೆ. ಆದರೆ ಯೋಗರಾಜ್ ಭಟ್ ಏನು ನಿರ್ಧರಿಸುವರೋ ತಿಳಿಯದು. ಅವರು ಡಬ್ಬಿಂಗ್ ಮಾಡಿಸಿದರೆ ತುಂಬಾ ಖುಷಿಯಿಂದ ಮಾಡುತ್ತೇನೆ.

`ಪರಮಾತ್ಮ~ದಲ್ಲಿ ಮತ್ತೊಬ್ಬ ನಟಿ ಐಂದ್ರಿತಾ ಇದ್ದಾರೆ. ಹೇಗಿತ್ತು ಅವರೊಂದಿಗಿನ ಒಡನಾಟ?
ನಾನು ಐಂದ್ರಿತಾ ಜೊತೆ ತುಂಬಾ ಬೇಗ ಹೊಂದಿಕೊಂಡೆ.  ಚಿತ್ರದಲ್ಲಿ ಅವರಿಗೂ ತುಂಬಾ ಪ್ರಮುಖವಾದ ಪಾತ್ರವಿದೆ.  ಅವರೊಂದಿಗೆ ಒಂದು ಹಾಡಿನಲ್ಲಿ ನಟಿಸಬೇಕಾದಾಗ ನಾನು ತುಂಬಾ ಆತಂಕಕ್ಕೆ ಒಳಗಾಗಿದ್ದೆ. ಆಗ ಅವರೇ ನನ್ನಲ್ಲಿ ಧೈರ್ಯ ತುಂಬಿದರು.

ದರ್ಶನ್ ಮತ್ತು ಪುನೀತ್ ಜೊತೆ ನಟಿಸಿದ ಅನುಭವ ಹೇಳಿ?
`ಸಾರಥಿ~ ಚಿತ್ರದ ಹಾಡಿನ ಸನ್ನಿವೇಶದಲ್ಲಿ ನಾನು ತುಂಬಾ ಭಯಪಟ್ಟಿದ್ದೆ. ಯಾಕೆಂದರೆ ನನಗೆ ಡಾನ್ಸ್ ಬರುತ್ತಿರಲಿಲ್ಲ. ಆದರೂ ದರ್ಶನ್ ತಾಳ್ಮೆಗೆಡದೆ ನನಗೆ ಪ್ರಾಕ್ಟೀಸ್ ಮಾಡಲು ಅವಕಾಶ ನೀಡಿದರು. ಅವರ ಬೆಂಬಲದಿಂದಲೇ ನಾನು ಸಾರಥಿಯನ್ನು ಯಶಸ್ವಿಯಾಗಿ ಮುಗಿಸಿದೆ. ಇನ್ನು `ಪರಮಾತ್ಮ~ ಸಿನಿಮಾದಲ್ಲಿ ನಾನು ಚೆನ್ನಾಗಿ ಅಭಿನಯಿಸಿದ್ದೇನೆ ಎಂದರೆ ಅದಕ್ಕೆ ಕಾರಣ ಪುನೀತ್. 

ಯೋಗರಾಜ್ ಭಟ್ ಅವರಿಂದ ಕಲಿತಿದ್ದೇನು?
ಯೋಗರಾಜ್ ಭಟ್ ನಮ್ಮನ್ನು ಗಮನಿಸಿ ನಮ್ಮಂತೆ ಪಾತ್ರವನ್ನು ತಿದ್ದಿ ತೀಡುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಮ್ಮಲ್ಲಿರುವ ಪಾಸಿಟಿವ್ ಅಂಶವನ್ನು ಗುರುತಿಸಿ ಅದರಂತೆ ಪಾತ್ರ ಮಾಡಿಸುತ್ತಾರೆ.

ನೀವು ಎಲ್ಲವನ್ನು ಪಾಸಿಟಿವ್ ಆಗಿಯೇ ಯೋಚಿಸುವಿರಾ?
ಹೌದು. ನನ್ನ ಸ್ವಭಾವವೇ ಹಾಗೆ. ಒಂದು ವಿಚಾರವನ್ನು ಎಲ್ಲಾ ದೃಷ್ಟಿಕೋನಗಳಿಂದಲೂ ಯೋಚಿಸುತ್ತೇನೆ. ಯಾವುದು ಸತ್ಯವೋ ಅದನ್ನು ಒಪ್ಪುತ್ತೇನೆ.

ಕನಸಿನ ಪಾತ್ರ ಯಾವುದು?
ಸದ್ಯಕ್ಕೆ ಇಂಥದೇ ಪಾತ್ರ ಮಾಡಬೇಕು ಎಂದೇನು ಅಂದುಕೊಂಡಿಲ್ಲ. ಆದರೆ ಭಾವಾವೇಶದ ಪಾತ್ರಗಳಿಷ್ಟ.

ಗ್ಲಾಮರಸ್ಸಾಗಿ ಕಾಣಿಸಿಕೊಳ್ಳುವಲ್ಲಿ ನಿಮ್ಮ ಅಭಿಪ್ರಾಯ?
ಗ್ಲಾಮರ್ ಎಂಬುದು ಒಬ್ಬೊಬ್ಬರಿಗೆ ಒಂದೊಂದು ರೀತಿ ಅನಿಸುತ್ತದೆ. ನನಗೆ ಸ್ಕರ್ಟ್ ಕಂಫರ್ಟಬಲ್ ಎನಿಸಿದರೆ ಕೆಲವರಿಗೆ ಅನಿಸದೇ ಇರಬಹುದು.

ಸಿನಿಮಾಗೆ ಬಂದ ಮೇಲೆ ಹವ್ಯಾಸಗಳು ಬದಲಾಗಿವೆಯೇ?
ಖಂಡಿತ. ಈ ಮೊದಲು ಸಮಯ ಸಿಕ್ಕಾಗ ಪುಸ್ತಕ ಓದುತ್ತಿದ್ದೆ. ಇದೀಗ ಫಿಟ್‌ನೆಸ್ ಕಾಯ್ದುಕೊಳ್ಳಲು ಜಿಮ್ ಮತ್ತು ನೃತ್ಯದ ತರಗತಿಗಳಿಗೆ ಹೋಗುತ್ತಿದ್ದೇನೆ. ಜೊತೆಗೆ ಸಿನಿಮಾ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT