ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ರಂಗು ತುಂಬಿದ ಪಟಾಕಿ

Last Updated 28 ಅಕ್ಟೋಬರ್ 2011, 9:20 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಗುರುವಾರ `ಬೆಳಕಿನ ಹಬ್ಬ~ ದೀಪಾವಳಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಬೆಲೆ ಏರಿಕೆ ಬಿಸಿಯ ನಡುವೆಯೂ ಪೂಜಾ ಸಾಮಗ್ರಿಗಳು, ಅಗತ್ಯ ವಸ್ತುಗಳು, ಪಟಾಕಿಗಳ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು. ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿಗಳ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ನಲವತ್ತಕ್ಕೂ ಹೆಚ್ಚು ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ನಡೆಯಿತು. ಹಬ್ಬದ ದಿನವಾದ ಗುರುವಾರವೂ ಪಟಾಕಿಗಳನ್ನು ಖರೀದಿಸಲು ಮುಗಿಬೀಳುತ್ತಿದ್ದುದು ಕಂಡು ಬಂದಿತು.

ನಗರದ ಪಿ.ಬಿ. ರಸ್ತೆ, ಹದಡಿ ರಸ್ತೆ ಸೇರಿದಂತೆ ಅಲ್ಲಲ್ಲಿ ಹೂವು, ಬಾಳೆ ಕಂದು, ಮಾವಿನ ಸೊಪ್ಪು ಮತ್ತಿತರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅವುಗಳನ್ನು ಕೊಳ್ಳುವುದಕ್ಕೆ ಗ್ರಾಹಕರು ಮುಗಿಬೀಳುತ್ತಿದ್ದುದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು.

ದಾವಣಗೆರೆಯಲ್ಲಿ ಹಿಂದಿನಿಂದಲೂ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ವರ್ಷವೂ ಸಂಭ್ರಮ ಕಂಡುಬಂದಿತು. ನಗರದ ಬಹುತೇಕ ಅಂಗಡಿಗಳನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಿ ಪೂಜಾ ಕಾರ್ಯ ಕೈಗೊಳ್ಳಲಾಯಿತು.

ಅಂಗಡಿಗಳ ಎದುರು ಮಾಲೀಕರು ಮತ್ತು ಕುಟುಂಬದವರು ಪಟಾಕಿಗಳನ್ನು ಸಿಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಮನೆಗಳಲ್ಲಿ ಬೆಳಗ್ಗೆಯೇ ಸಾರ್ವಜನಿಕರು  ತಮ್ಮ ವಾಹನಗಳನ್ನು ತೊಳೆದು ಪೂಜಿಸಿದರು. ಕೆಲ ಖಾಸಗಿ ಬಸ್‌ಗಳು ಬಾಳೆ ಕಂದು, ಮಾವಿನ ಸೊಪ್ಪು, ಹೂಗಳಿಂದ ಸಿಂಗಾರಗೊಂಡಿದ್ದು ಅಲ್ಲದೆ, ಧ್ವನಿವರ್ಧಕದಲ್ಲಿ ಕನ್ನಡ, ಹಿಂದಿ ಚಿತ್ರಗೀತೆಗಳನ್ನು ಹಾಕಿಕೊಂಡು ಹೋಗುತ್ತಿದ್ದುದು ಗಮನ ಸೆಳೆಯಿತು.

ಬಹುತೇಕ ಬಡಾವಣೆಗಳಲ್ಲಿ ಹಗಲಿನಲ್ಲಿಯೂ ಭಾರಿ ಶಬ್ದ ಬರುವ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಿದ್ದರು. ಸಂಜೆಯಾಗುತ್ತಿದ್ದಂತೆಯೇ ನಗರದಾದ್ಯಂತ ಪಟಾಕಿಗಳ ಸದ್ದು ಜೋರಾಗಿಯೇ ಕೇಳಿ ಬಂದಿತು. ಆಕರ್ಷಕ ಬಾಣಬಿರುಸುಗಳು ಬಾನಿನಲ್ಲಿ ಚಿತ್ತಾರ ಮೂಡಿಸಿದವು.

ಇನ್ನು ಮನೆಗಳಲ್ಲಿ, ಮಹಿಳೆಯರು ಹೊಸ ಬಟ್ಟೆ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು. ಮನೆಗಳಲ್ಲಿ ಸಿಹಿಯೂಟ ಸಿದ್ಧಪಡಿಸಲಾಗಿತ್ತು. ಕತ್ತಲಾಗುತ್ತಿದ್ದಂತೆಯೇ ಹಣತೆಗಳು ನಗರಕ್ಕೆ ಹೊಸ ಮೆರುಗು ನೀಡಿದವು. ಮಹಿಳೆಯರು ಮನೆಗಳಲ್ಲಿ ಕಿಟಕಿ, ಕಾಂಪೌಂಡ್, ಹೊಸ್ತಿಲು ಮೊದಲಾದ ಕಡೆಗಳಲ್ಲಿ ವಿವಿಧೆಡೆ ಹಣತೆಗಳನ್ನು ಬೆಳಗಿಸಿ ಬಾಳಿನಲ್ಲಿನ ಅಂಧಕಾರ ತೊಲಗಿಸಿ ಸುಖ ಸಮೃದ್ಧಿಯ ಬೆಳಕನ್ನು ಕರುಣಿಸು ಎಂದು ಪ್ರಾರ್ಥಿಸಿದರು.

ದೇವಾಲಯಗಳಲ್ಲಿಯೂ ಭಕ್ತಾಧಿಗಳ ದಂಡು ಕಂಡು ಬಂದಿತು. ಹಬ್ಬದ ಅಂಗವಾಗಿ ದೇವರ ಮೂರ್ತಿಗಳನ್ನು ಆಕರ್ಷಕವಾಗಿ ಅಲಂಕರಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು  ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT