ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಯ ಜ್ಞಾನದೀಪ

Last Updated 28 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಮ ನದಲ್ಲಿ ಮೂಡುವ ಮುಖಭಾವವೊಂದಕ್ಕೆ ಮಣ್ಣಿನಲ್ಲಿ ರೂಪ ಕೊಟ್ಟು ಅದರಲ್ಲೊಂದು ಜ್ಯೋತಿ ಬೆಳಗುವಂತೆ ಮಾಡಲು ಸಾಧ್ಯವೇ?  ಸಾಧ್ಯವಿದೆ. ಹಾಗೆಂದು ನೊಂದ ಜೀವಗಳಾದ  ಹುಬ್ಬಳ್ಳಿಯ ಸರ್ಕಾರಿ ಮಹಿಳಾ ನಿಲಯದ ಅನಾಥ ಹೆಣ್ಣುಮಕ್ಕಳು ತೋರಿಸಿಕೊಟ್ಟಿದ್ದಾರೆ. ಕನಸುಗಳನ್ನು ಕಟ್ಟಿಕೊಂಡು ಮನೆ ಬೆಳಗಬೇಕಾದ ಕೈಗಳಲ್ಲಿ ಅರಳಿದ ಹಣತೆಗಳು ಇವು. ಅವರು ತಯಾರಿಸಿದ  ನಾನಾ ವಿದಧ ವಿಶಿಷ್ಟ ಹಣತೆಗಳು ನೂರಾರು ಮನೆಗಳನ್ನು ಬೆಳಗುತ್ತವೆ.

ಧ್ಯಾನನಿರತ ಶಿವ, ಯಕ್ಷಗಾನದ ಪಾತ್ರಧಾರಿ, ಗಣೇಶ, ಮತ್ಸ್ಯಕನ್ಯೆ, ಬುದ್ಧ, ಒಂದೇ ..ಎರಡೇ ನೋಡುತ್ತಾ ಹೋದಂತೆ ದೇವಾನುದೇವತೆಗಳು, ಪುರಾಣ ಪುರುಷರ ಮುಖಗಳು, ಶಂಖ, ಚಕ್ರ, ಕಮಲ, ಬಾತುಕೋಳಿ , ಎಲೆಯ ಮೇಲಿನ ಹಣತೆ .... ಮುಂತಾದ  ರೂಪಗಳಲ್ಲಿ ಮಣ್ಣಿನ ಹಣತೆಗಳು. ಕನಸಿನ ಬಣ್ಣವನ್ನು ಹಣತೆಗಳ ಮೇಲೆ ರಂಗುರಂಗಿನಿಂದ ಚೆಲ್ಲಾಡಿ  ಮೂಡಿದ ಬಣ್ಣದ ಹಣತೆಗಳ ಸಾಲು ಸಾಲು. ವಾರೆವ್ಹಾ..! ಎಂಥವರ ಮನಸ್ಸೂ ಕೆಲಕ್ಷಣ ಮೌನ. ಈ ಹೆಣ್ಣು ಮಕ್ಕಳಲ್ಲಿ ಇರುವ ಪ್ರತಿಭೆ ನಿಜಕ್ಕೂ ಮೆಚ್ಚಬೇಕಾದುದೆ.

ಕೆರೆ ಕಟ್ಟೆಗಳಲ್ಲಿ ದೊರೆಯುವ ಸಾಧಾರಣ ಜೇಡಿ ಮಣ್ಣಿನಿಂದ ಹಣತೆ ತಯಾರಿಸುವುದು ಅತ್ಯಂತ ಸುಲಭ. ‘ಮನೆಯಲ್ಲಿ ಮಹಿಳೆಯರು ಟಿವಿ ನೋಡುತ್ತ ಕಾಲಹರಣ ಮಾಡುವ ಬದಲು ಇಂತಹ ಕಲಾಕೃತಿಗಳಲ್ಲಿ ಆಸಕ್ತಿವಹಿಸಿದರೆ ಕ್ರಿಯಾಶೀಲರಾಗಬಹುದು. ಮನೆಗೆ ಬೆಳಕು ನೀಡುವುದರ ಜೊತೆಗೆ ನಮ್ಮ ಸೃಜನಶೀಲತೆಯೂ ಹೆಚ್ಚಾಗುತ್ತದೆ. ಮನಸ್ಸಿಗೂ ಆನಂದ ಸಿಗುತ್ತದೆ’ ಎನ್ನುತ್ತಾರೆ  ಈ ಹೆಣ್ಣು ಮಕ್ಕಳು. ಮಣ್ಣಿನಲ್ಲಿ ಹಣತೆ ತಯಾರಿಸುವ ಕಲೆಗೆ ಮನಸೋಲುವಂತೆ ಮಾಡಿದವರು ಕಲಾವಿದರಾದ ಪಿ. ರಾಜಶೇಖರ ಮಾಣಿಕ್ಯಂ ಎಂದು ನೆನೆಯುತ್ತಾರೆ ಮಹಿಳಾ ನಿಲಯದ ಸೂಪರಿಂಟೆಂಡೆಂಟ್ ದೇಸಾಯಿ.

ಕಾರ್ತಿಕ ಮಾಸ ಒಂದು ಪವಿತ್ರಮಾಸ. ಮನುಷ್ಯ ಪಾಪ ಮಾಡುವುದನ್ನು  ತಾನೇ ಅನಿವಾರ್ಯ ಮಾಡಿಕೊಂಡಿದ್ದಾನೆ. ಮನೋದೌರ್ಬಲ್ಯ, ಅಜ್ಞಾನ, ಅವಿವೇಕ, ಅಹಂಕಾರ, ಸ್ವಾರ್ಥ, ದುರಾಸೆ... ಮುಂತಾದವುಗಳಿಗೆ  ಶರಣಾಗಿದ್ದಾನೆ, ಈ ಎಲ್ಲ ಪಾಪದ ಕರ್ಮವನ್ನು ಕಳೆದುಕೊಳ್ಳುವ ಪಾವನ ಮಾಸವೇ ಕಾರ್ತಿಕ. ಅಂತಲೇ ಇದನ್ನು ಬೆಳಕಿನ ಮಾಸವೆಂದು ಕರೆಯುತ್ತೇವೆ. 

ಈ ಮಾಸದಲ್ಲಿ ಹಣತೆಯ ದೀಪವನ್ನು  ಶ್ರದ್ಧಾಭಕ್ತಿಗಳಿಂದ ಬೆಳಗಿದರೆ, ನಮ್ಮ ಜೀವನವೂ ಬೆಳಕಾಗುತ್ತದೆ ಎಂಬುದು ನಂಬಿಕೆ.  ಈ ಅನಾಥ ಹೆಣ್ಣು ಮಕ್ಕಳ ಕೈಗಳಿಂದ ಅರಳಿದ ಮಣ್ಣಿನ ಹಣತೆಯಿಂದ ಬೆಳಗಿಸುವ ದೀಪ ಪ್ರತಿಯೊಬ್ಬರ ಬಾಳನ್ನು ನಂದಾದೀಪವಾಗಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT