ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಿಕಾ ಕುಮಾರಿಗೆ ಸೋಲು

Last Updated 1 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವಿಶ್ವದ ಅಗ್ರ ಕ್ರಮಾಂಕದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸೋಲು ಅನುಭವಿಸುವುದರೊಂದಿಗೆ ಒಲಿಂಪಿಕ್ಸ್‌ನ ಆರ್ಚರಿಯಲ್ಲಿ ಭಾರತದ ಸವಾಲು ನೀರಸವಾಗಿ ಕೊನೆಗೊಂಡಿದೆ. ಪದಕ ಗೆಲ್ಲುವ `ಫೇವರಿಟ್~ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ದೀಪಿಕಾ ಬುಧವಾರ ನಡೆದ ಮಹಿಳೆಯರ ವೈಯಕ್ತಿಕ ವಿಭಾಗದ ಮೊದಲ ಸುತ್ತಿನಲ್ಲೇ `ಗುರಿ~ ತಪ್ಪಿದರು.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಆತಿಥೇಯ ಇಂಗ್ಲೆಂಡ್‌ನ ಆಮಿ ಒಲಿವರ್ 6-2 ರಲ್ಲಿ ದೀಪಿಕಾ ವಿರುದ್ಧ ಅಚ್ಚರಿಯ ಗೆಲುವು ಪಡೆದರು. ಭಾರತದ ಇತರ ಎಲ್ಲ ಸ್ಪರ್ಧಿಗಳು ಮಂಗಳವಾರವೇ ಕಣದಿಂದ ಹೊರಬಿದ್ದಿದ್ದರು. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಕಣದಲ್ಲಿದ್ದ ಆರು ಸ್ಪರ್ಧಿಗಳಲ್ಲಿ ಯಾರೂ ಕ್ವಾರ್ಟರ್ ಫೈನಲ್ ಕೂಡಾ ಪ್ರವೇಶಿಸಲಿಲ್ಲ.

ದೀಪಿಕಾ ಕುಮಾರಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಕಾರಣ ಭಾರತ ಈ ಬಾರಿ ಬಿಲ್ಲುಗಾರಿಕೆಯಲ್ಲಿ ಪದಕದ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಏಕೈಕ ಭರವಸೆಯಾಗಿ ಕಣದಲ್ಲಿದ್ದ ದೀಪಿಕಾ ಸೋಲು ಅನುಭವಿಸುವುದರೊಂದಿಗೆ ಭಾರತದ ಪದಕದ ಕನಸು ಅಸ್ತಮಿಸಿತು.

ತಂಡ ವಿಭಾಗದ ಸ್ಪರ್ಧೆಯಲ್ಲಿ ನೀರಸ ಪ್ರದರ್ಶನ ನೀಡಿದ್ದ ದೀಪಿಕಾ ಬುಧವಾರ ಕೂಡಾ ನಿಖರ ಗುರಿ ಸಾಧಿಸುವಲ್ಲಿ ವಿಫಲರಾದರು. ಎದುರಾಳಿ ಒಲಿವರ್ ಆಮಿ ಅಸಾಮಾನ್ಯ ಪ್ರದರ್ಶನವನ್ನೇನೂ ನೀಡಲಿಲ್ಲ. `ರ‌್ಯಾಂಕಿಂಗ್ ರೌಂಡ್~ನಲ್ಲಿ ಆಮಿ 64 ಸ್ಪರ್ಧಿಗಳಲ್ಲಿ 57ನೇ ಸ್ಥಾನ ಪಡೆದಿದ್ದರೆ, ದೀಪಿಕಾ ಎಂಟನೇ ಸ್ಥಾನ ಗಳಿಸಿದ್ದರು.

`ಬೆಸ್ಟ್ ಆಫ್ ಫೈವ್~ ಸೆಟ್‌ಗಳ ಸ್ಪರ್ಧೆಯಲ್ಲಿ ಮೂರು ಸೆಟ್‌ಗಳನ್ನು ಆಮಿ ಗೆದ್ದುಕೊಂಡರೆ, ದೀಪಿಕಾ ಒಂದು ಸೆಟ್ ಗೆಲ್ಲಲು ಯಶಸ್ವಿಯಾದರು. ಪ್ರತಿ ಸೆಟ್ ಗೆಲ್ಲುವ ಸ್ಪರ್ಧಿಗೆ ಎರಡು ಪಾಯಿಂಟ್ ಲಭಿಸುತ್ತದೆ. ಅಂತಿಮವಾಗಿ ಇಂಗ್ಲೆಂಡ್‌ನ ಬಿಲ್ಲುಗಾರ್ತಿ 6-2ರ ಗೆಲುವು ಪಡೆದರು. ಇಬ್ಬರೂ ಒಟ್ಟಾರೆ 104 ಪಾಯಿಂಟ್ ಗಿಟ್ಟಿಸಿದರು. ಆದರೆ ಮೂರು ಸೆಟ್ ಗೆಲ್ಲುವಲ್ಲಿ ಯಶಸ್ವಿಯಾದ ಕಾರಣ ಇಂಗ್ಲೆಂಡ್ ಸ್ಪರ್ಧಿಗೆ ಜಯ ದೊರೆಯಿತು.

ಮೊದಲ ಸೆಟ್‌ನ್ನುಆಮಿ 27-26 ರಲ್ಲಿ ತಮ್ಮದಾಗಿಸಿದರು. ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ದೀಪಿಕಾ 26-22 ರಲ್ಲಿ ಜಯ ಪಡೆದರು. ಇದರಿಂದ ಇಬ್ಬರೂ 2-2 ರಲ್ಲಿ ಸಮಬಲ ಸಾಧಿಸಿದರು. ಆದರೆ ಮುಂದಿನ ಎರಡೂ ಸೆಟ್‌ಗಳನ್ನು 27-26, 28-26 ರಲ್ಲಿ ತಮ್ಮದಾಗಿಸಿಕೊಂಡ ಆಮಿ ಭಾರತದ ಸ್ಪರ್ಧಿಯ ಗೆಲುವಿನ ಆಸೆಗೆ ಅಡ್ಡಿಯಾದರು.

ಈ ಸ್ಪರ್ಧೆ ಮೋಡ ಕವಿದ ವಾತಾವರಣದಲ್ಲಿ ನಡೆಯಿತು. ಬಲವಾಗಿ ಗಾಳಿಯೂ ಬೀಸುತ್ತಿತ್ತು. ಇದು ಕೂಡಾ ದೀಪಿಕಾ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. `ನನಗೆ ನಿರಾಸೆಯಾಗಿದೆ. ಇದು ನನ್ನ ಮೊದಲ ಒಲಿಂಪಿಕ್ಸ್. ಮುಂದಿನ ಹಂತ ಪ್ರವೇಶಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಆದರೆ ಅದು ಸಾಧ್ಯವಾಗಿಲ್ಲ. ಇನ್ನಷ್ಟು ಒಲಿಂಪಿಕ್ಸ್ ನನ್ನ ಮುಂದಿವೆ. ಅದಕ್ಕಾಗಿ ಕಠಿಣ ಆಭ್ಯಾಸ ನಡೆಸುವೆ~ ಎಂದು 18ರ ಹರೆಯದ ದೀಪಿಕಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT