ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪೋಲ್ಲಾಸ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಂಧುಗಳ ಮಿಲನಕ್ಕೆ ನಾಂದಿಯಾಗುವ ಪರ್ವ
ಕಾರ‌್ಹುಣಕಿ ಹಬ್ಬಕ ಕರಿಲ್ಯಾಕ ಬರಬ್ಯಾಡ
ಕಾಲಬಾಡೀಗಿ ಕೊಡಬ್ಯಾಡ ನನ್ನಣ್ಣ
ಹೊನ್ನ ದೀವಳಿಗೀಗಿ ಮರಿಬ್ಯಾಡ

`ಸಾಲು ದೀಪಗಳ ಹಬ್ಬಕ್ಕೆ ನನ್ನನ್ನು ಕರೆಯಲು ಮರೆಯಬೇಡ ಅಣ್ಣಾ~ ಎಂದು ತಂಗಿಯೊಬ್ಬಳು ಅಣ್ಣನನ್ನು ಬೇಡುವ ಪರಿ ಇದು...

ನಿಜ. ಅದೇ ದೀಪಾವಳಿ, ಹೆಣ್ಣುಮಕ್ಕಳನ್ನು ತವರಿಗೆ ಕರೆದು ಉಡಿ ತುಂಬಿಸುವ ಕಾಲ.
ದೀವಳಿ, ಪಣತಿ, ದಿಪಾವಳಿ ಹಬ್ಬ.  ಹೆಸರು ಯಾವುದಾದರೇನು? ಹಬ್ಬದ ಹೂರಣ  ಮಾತ್ರ ಒಂದೇನೇ: ಅದು ಬೆಳಕಿನ ಸಂಭ್ರಮ. ಮುಂಗಾರು ಮಾಯವಾಗಿ ಹಿಂಗಾರು ಕಣ್ಣುಬಿಡುವ ಈ ಸಮಯ ಸಂಬಂಧಗಳನ್ನು ನೆನಪಿಸುವ ಹಬ್ಬ.

ದೀಪಾವಳಿ ಎಂದಕೂಡಲೇ ಪಟಾಕಿ, ಸಿಹಿತಿಂಡಿ ಹಾಗೂ ಉಡುಗೊರೆಗಳ ನೆನಪಾಗುತ್ತದೆ. ಆದರೆ ಹಬ್ಬದ ಸಂಭ್ರಮ ಇಷ್ಟಕ್ಕೇ ಸೀಮಿತವಾದುದಲ್ಲ. ಸಂಬಂಧಗಳ ಬಾಂಧವ್ಯವನ್ನು ಹೆಚ್ಚಿಸಿ, ಬಂಧುಗಳ ಮಿಲನಕ್ಕೆ ನಾಂದಿಯಾಗುವುದೇ ಈ ದಿನದ ವಿಶೇಷತೆ.
 
ದೂರದ ನಗರಿಯಲ್ಲಿ ಉದ್ಯೋಗ ಅರಸಿಯೋ, ವಿವಾಹವಾಗಿಯೋ ಹೋಗಿರುವ ತಮ್ಮವರನ್ನೆಲ್ಲ ಒಂದೆಡೆ ಕಲೆಹಾಕಿ ಹರ್ಷ ಪಡುವ ಪರ್ವ ಈ ಬೆಳಕಿನ ಹಬ್ಬ.

ಈ ಬಾರಿಯ ಬೆಳಕಿನ ಹಬ್ಬಕ್ಕೆ `ನಮ್ಮ ಮೆಟ್ರೊ~ ಮುನ್ನುಡಿಯನ್ನೂ ಬರೆದಿರುವ ಕಾರಣ, ಬೆಂಗಳೂರಿಗರು ಹೆಮ್ಮೆಯಿಂದ ಬೀಗುತ್ತಿದ್ದಾರೆ.

ಎಲ್ಲದರ ಸಮ್ಮಿಳನ: ಒಂದೊಂದು ಹಬ್ಬಕ್ಕೆ  ಒಂದೊಂದು ಕಥೆ. ಒಂದೊಂದು ರಾಜ್ಯಕ್ಕೆ  ಒಂದೊಂದು ಹಬ್ಬ. ಆದರೆ ದೀಪಾವಳಿಯ ವೈಶಿಷ್ಟ್ಯವೇ ಬೇರೆ. ದೇಶಾದ್ಯಂತ ಆಚರಿಸುವ ಈ ಹಬ್ಬ ಪುರಾಣ, ರಾಮಾಯಣ, ಮಹಾಭಾರತ ಎಲ್ಲವನ್ನೂ ತನ್ನ ತೆಕ್ಕೆಯಲ್ಲಿ ಹಾಕಿಕೊಂಡು ಮಿಂದು ಎ್ದ್ದದಿದೆ. ಹಿಂದುಗಳಿಗೆ ಸಂಭ್ರಮ, ಸಡಗರದ ಹಬ್ಬ ಎಂದೂ ಎನಿಸಿರುವ ದೀಪಾವಳಿಗಾಗಿ ಸಿಲಿಕಾನ್ ಸಿಟಿ ಸಜ್ಜಾಗಿ ನಿಂತಿದೆ.

ಯಾಂತ್ರಿಕ ಬದುಕಿನ ಧಾವಂತಕ್ಕೆ `ರಿಲ್ಯಾಕ್ಸ್~ ನೀಡಲೋ ಎಂಬಂತೆ ಎಲ್ಲೆಡೆ ರಂಗುರಂಗಿನ ವಾತಾವರಣ ನಿರ್ಮಾಣ ಆಗುತ್ತಿದೆ. ಈ ಐಟಿ-ಬಿಟಿ ನಗರಿಯಲ್ಲಿ ಧಾರ್ಮಿಕತೆ, ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದು ಸಾಬೀತು ಪಡಿಸಲು ಬೆಂಗಳೂರು ಸಕಲ ಸಿದ್ಧತೆ ನಡೆಸಿದೆ. ನಗರವು ವಿದ್ಯುದ್ದೀಪಗಳಿಂದ ಸಾಲಂಕೃತಗೊಂಡು ನವವಧುವಿನಂತೆ ಕಂಗೊಳಿಸಲು ಮತ್ತೊಮ್ಮೆ ಸಜ್ಜಾಗಿ ನಿಂತಿದೆ.

ವಿಶೇಷ ಕಳೆ: ವಿವಿಧ ಭಾಷೆಯ, ವಿವಿಧ ಧರ್ಮದವರಿಗೆ ಮಣೆ ಹಾಕಿರುವ ಬೆಂಗಳೂರಿನಲ್ಲಿ ಎಲ್ಲರೂ ತಮ್ಮ ಪದ್ಧತಿಗೆ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಈ ಸಿಲಿಕಾನ್ ನಗರಿಯಲ್ಲಿ ದೀಪಾವಳಿ ವಿಶೇಷ ಕಳೆ ಕಟ್ಟುತ್ತದೆ ಎಂದೇ ಹೇಳಬೇಕು.

ಭಾಷೆ, ರಾಜ್ಯ ಯಾವುದಾದರೇನು, ಹಬ್ಬ ಬಂದಾಗ ಎಲ್ಲರೂ ಒಂದೇ. ಇದು ದೀಪಾವಳಿ ತತ್ವ. ಬೆಲೆ ಏರಿಕೆ ಬಿಸಿಯ ನಡುವೆಯೂ ಬೆಂಗಳೂರಿನ ಬೀದಿಬೀದಿಗಳಲ್ಲಿ ಜನರು ಮುಗಿಬಿದ್ದು ಜಾತಿ, ಮತದ ಭೇದಭಾವವಿಲ್ಲದೇ ಹೂವು, ಹಣ್ಣುಗಳನ್ನು ಖರೀದಿ ಮಾಡುವುದೇ ಈ ಹಬ್ಬದ ಮಹತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಮೂರು ದಿನಗಳ ಆಚರಣೆ: ದೀಪಾವಳಿ ಮೂರು ದಿನಗಳ ಆಚರಣೆ. ನರಕ ಚತುರ್ದಶಿ, ಲಕ್ಷ್ಮಿಪೂಜೆ ಹಾಗೂ ಬಲಿಪಾಡ್ಯಮಿ.

ನರಕಾಸುರ ಎನ್ನುವ ದೈತ್ಯನನ್ನು ಶ್ರೀಕೃಷ್ಣ ಸಂಹರಿಸಿದ ದಿನಾಚರಣೆಯಾದ ನರಕ ಚತುರ್ದಶಿಯನ್ನು `ನೀರು ತುಂಬುವ ಹಬ್ಬ~ ಎಂದು ಆಚರಿಸಲಾಗುತ್ತದೆ. ಆ ದಿನ ಮನೆಮಂದಿ ನಸುಕಿಗೇ ಎದ್ದು, ಹಂಡೆ-ಕೊಳಗಗಳಿಗೆ ನೀರು ತುಂಬಿ, ಪೂಜಿಸಿದ ಒಲೆಯಲ್ಲಿ ಬೆಂಕಿ ಉರಿಸುತ್ತಾರೆ. ಎಣ್ಣೆ ಸ್ನಾನ ಅಂದಿನ ವಿಶೇಷ. ಮನೆ ಅಳಿಯನಿಗಂತೂ ವಿಶೇಷ ಅಭ್ಯಂಜನದ ಆತಿಥ್ಯ. ಸ್ನಾನದ ನಂತರ ಗಂಡುಮಕ್ಕಳಿಗೆ ಮನೆಯ ಹೆಣ್ಣುಮಕ್ಕಳು ಆರತಿ ಬೆಳಗಿ ಆಶೀರ್ವಾದ ಪಡೆಯುತ್ತಾರೆ.

ದೀಪಾವಳಿಯ ಎರಡನೇ ದಿನ ಲಕ್ಷ್ಮಿಪೂಜೆಯ ಸಂಭ್ರಮ. ಅಂದು ಲಕ್ಷ್ಮಿಯೊಂದಿಗೆ ಸರಸ್ವತಿ, ಗಣಪತಿಗೂ ಪೂಜೆ. ರೈತರ ಮನೆಗಳಲ್ಲಿ ತುಂಬಿದ ಕೊಡದ ಮೇಲೆ ಲಕ್ಷ್ಮಿಯನ್ನು ಕೂರಿಸಿ ಚಿನ್ನದಾಭರಣಗಳಿಂದ ಅಲಂಕರಿಸುತ್ತಾರೆ.
 
ಹೊಸ ವಹಿವಾಟಿನ ಆರಂಭಕ್ಕೆ ಈ ದಿನ ಶುಭ ಎಂದು ಭಾವಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ ತಮ್ಮ ವ್ಯವಹಾರಗಳಲ್ಲಿನ ಫಲಕಗಳ ಮೇಲೆ `ಶುಭ-ಲಾಭ~ ಎಂದು ಬರೆದು ಪೂಜಿಸಲಾಗುತ್ತದೆ.

 ಬಲಿ ಚಕ್ರವರ್ತಿಯನ್ನು ವಾಮನ ಪಾತಾಳಕ್ಕೆ ತುಳಿದ ಬಲಿಪಾಡ್ಯಮಿ ದೀವಳಿಗೆಯ ಕೊನೆಯ ದಿನ. ಈ ದಿನ ಜಾನುವಾರುಗಳಿಗೆ ಶೃಂಗರಿಸಿ  ಕೊಟ್ಟಿಗೆಯಿಂದ ಹೊರಕ್ಕೆ ಬಿಡಲಾಗುತ್ತದೆ. ದನಕರುಗಳನ್ನು ಬಲಿಪಾಡ್ಯಮಿಯಂದು ಮೆರವಣಿಗೆ ತೆಗೆಯುವ, ಕಿಚ್ಚು ಹಾಯಿಸುವ ಆಚರಣೆ ಕೆಲವೆಡೆಗಳಲ್ಲಿದೆ.
 
ಜಾನುವಾರುಗಳಿಗೆ ಗೌರವ ಸಲ್ಲಿಕೆ ಒಂದೆಡೆ, ಚರ್ಮವ್ಯಾಧಿಗೆ ಔಷಧೋಪಚಾರ ಇನ್ನೊಂದೆಡೆ- ಹೀಗೆ ಕಿಚ್ಚಿಗೆ ವಿಪರೀತ ಮಹತ್ವವಿದೆ.

ಒಟ್ಟಿನಲ್ಲಿ, ನಗರದ ತುಂಬೆಲ್ಲ ರಂಗೋಲಿಯ ಚಿತ್ತಾರ, ಮಾವಿನ ಎಲೆಗಳ ತೋರಣಗಳ ಶೃಂಗಾರ, ಜೊತೆಗೆ ನೀರೆಯರ ಅಲಂಕಾರ, ಇವೆಲ್ಲಕ್ಕೆ ಸಾಕ್ಷಿಯಾಗಲಿದೆ ನಾಡಹಬ್ಬ ದೀಪಾವಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT