ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಹೂಡಿಕೆಗೆ ಉತ್ತೇಜನ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಷೇರುಪೇಟೆಯಲ್ಲಿ ನೇರವಾಗಿ ಹಣ ಹೂಡಿಕೆ ಮಾಡಲು `ಅರ್ಹ ವಿದೇಶಿ ಹೂಡಿಕೆದಾರರಿಗೆ~ (ಕ್ಯುಎಫ್‌ಐ)  ನೀಡಿರುವ ಅನುಮತಿಯಿಂದ ದೀರ್ಘಾವಧಿ ಹೂಡಿಕೆಗೆ ಉತ್ತೇಜನ ದೊರೆಯುವ ನಿರೀಕ್ಷೆ ಇದೆ.

 ಈ ನಿರ್ಧಾರದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ `ಹಾಟ್ ಮನಿ~ ಮೇಲಿನ ಅವಲಂಬನೆ ತಪ್ಪಿಸಲೂ ಸಾಧ್ಯವಾಗಲಿದೆ  ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇದೊಂದು ಮಹತ್ವದ ನಿರ್ಧಾರವಾಗಿದೆ. ಹೂಡಿಕೆದಾರರ ಸಂಖ್ಯೆ ಹೆಚ್ಚಿಸಲು, ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸಲು ಮತ್ತು ಮಾರುಕಟ್ಟೆ ಏರಿಳಿತ ತಡೆಯಲು   ಸಾಧ್ಯವಾಗಲಿದೆ. ಜನವರಿ 15ರಿಂದ ಈ ನಿರ್ಣಯ ಜಾರಿಗೆ ಬರಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್. ಗೋಪಾಲನ್ ತಿಳಿಸಿದ್ದಾರೆ.
ವ್ಯಕ್ತಿಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ಕಾರ್ಯಪಡೆಯ  ನಿಯಮಾವಳಿ ಪಾಲಿಸುವ ಹೂಡಿಕೆದಾರರ ಗುಂಪನ್ನು ಅರ್ಹ ವಿದೇಶಿ ಹೂಡಿಕೆದಾರರು ಎಂದು ಗುರುತಿಸಲಾಗಿದೆ.

 ಈ ಅರ್ಹ ವಿದೇಶಿ ಹೂಡಿಕೆದಾರರಿಗೆ ದೇಶಿ ಬಂಡವಾಳ ಮಾರುಕಟ್ಟೆಯಲ್ಲಿ ಹಣ ತೊಡಗಿಸಲು ಅನುಮತಿ ಕೊಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ದೇಶಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಕಳೆದ ವರ್ಷ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರುಗಳ ಮಾರಾಟಕ್ಕೆ ಹೆಚ್ಚು ಆದ್ಯತೆ ನೀಡಿದ್ದರಿಂದ  ಷೇರುಪೇಟೆ ಸಂವೇದಿ ಸೂಚ್ಯಂಕವು ಶೇ 24.20ರಷ್ಟು ಕುಸಿತ ದಾಖಲಿಸಿತ್ತು. `ಎಫ್‌ಐಐ~ ಹೂಡಿಕೆಯಲ್ಲಿ ಶೇ 10ರಷ್ಟು ಏರಿಳಿತದಿಂದಾಗಿ, ಷೇರು ಬೆಲೆಗಳೂ ಶೇ 35ರಷ್ಟು ಏರಿಳಿತ ಕಂಡಿವೆ.
ಸದ್ಯಕ್ಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ), ಅನಿವಾಸಿ ಭಾರತೀಯರು (ಎನ್‌ಆರ್‌ಐ) ಮಾತ್ರ ಷೇರುಪೇಟೆಯಲ್ಲಿ ನೇರವಾಗಿ ಬಂಡವಾಳ ತೊಡಗಿಸಲು ಅವಕಾಶ ಇದೆ.
 

`ಹಾಟ್ ಮನಿ~

ಅಲ್ಪಾವಧಿಯಲ್ಲಿ ಗರಿಷ್ಠ ಬಡ್ಡಿ ದರದ ಲಾಭ ಬಾಚಿಕೊಳ್ಳುವ ಉದ್ದೇಶದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಷೇರುಪೇಟೆಗಳಲ್ಲಿ ತೊಡಗಿಸುವ ಹಣಕ್ಕೆ `ಹಾಟ್ ಮನಿ~ ಎನ್ನುತ್ತಾರೆ.

  ಗರಿಷ್ಠ ಲಾಭದ ಏಕೈಕ ಉದ್ದೇಶದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತ್ವರಿತವಾಗಿ ಬಂಡವಾಳ ಹೂಡಿಕೆ ಮಾಡುತ್ತಾರೆ. ಕಡಿಮೆ ಲಾಭದ ಸಾಧ್ಯತೆ ಕಂಡು ಬಂದ ಕೂಡಲೇ ಅಷ್ಟೇ ವೇಗವಾಗಿ ಬಂಡವಾಳ ವಾಪಸ್ ತೆಗೆದುಕೊಂಡು ಹೋಗುತ್ತಾರೆ. ಇಂತಹ ಹೂಡಿಕೆ ಸಂಪೂರ್ಣವಾಗಿ ಊಹಾತ್ಮಕವಾಗಿರುತ್ತದೆ. ಇಂತಹ ಚಂಚಲತೆಯ ಕಾರಣಕ್ಕೆ  ಷೇರುಪೇಟೆಯಲ್ಲಿ ಅಸ್ಥಿರತೆ ಉಂಟಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT