ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಮೆಗೆ ಕೂಲಿ ಕೇಳುತ್ತಿರುವ ಖರ್ಗೆ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ‘ಲುಂಬಿನಿ’–ಇದು ಕೇಂದ್ರ ರೈಲ್ವೆ ಸಚಿವ ಹಾಗೂ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿ­ಕಾರ್ಜುನ ಖರ್ಗೆ ಅವರ ಮನೆ ಹೆಸರು. ಇದರ ಮುಂದೆ ಮುಂಜಾನೆಯೇ ನೂರಾರು ಸಂಖ್ಯೆಯಲ್ಲಿ ಕಾರ್ಯ­ಕರ್ತರು, ಮುಖಂಡರು, ಅಭಿಮಾನಿ­ಗಳು ಸೇರಿದ್ದರು.

ನಾನು ಕುಳಿತಿದ್ದ ಕೊಠಡಿಗೆ ಖರ್ಗೆಯವರ ಪುತ್ರ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಬಂದರು. ಅವರ ಹಿಂದೆ ಮಲ್ಲಿಕಾರ್ಜುನ ಖರ್ಗೆ ಬಂದರು.

‘ನಮ್ಮ ತಂದೆಯವರು ಕ್ಷೇತ್ರಕ್ಕೆ ಮಾಡಿರುವ ಕೆಲಸಕ್ಕೆ ಕೂಲಿ (ಮತ) ಕೊಡಿ ಎಂದು ಮಾತ್ರ ನಾವು  ಸಭೆಗಳಲ್ಲಿ ಜನರನ್ನು ಕೇಳುತ್ತಿದ್ದೇವೆ’ ಎಂದು ಮುಗುಳ್ನಗೆಯೊಂದಿಗೆ ಪ್ರಿಯಾಂಕ್‌ ಖರ್ಗೆ ನಮ್ಮ ಮಾತುಕತೆಗೆ ಮುನ್ನುಡಿ ಬರೆದರು.  ‘ನಿಮ್ಮ ಕ್ಷೇತ್ರದಲ್ಲಿ ನೀವು ಮಾಡಿರುವ ಕೆಲಸಗಳಲ್ಲಿ ತುಂಬಾ ಹೆಮ್ಮೆ ಎನಿಸು­ವಂತಹದ್ದು ಯಾವುದು?’ ಎಂದು ಕೇಳಿದೆ.

‘ಓ, ಅದೊಂದು ದೊಡ್ಡ ಪಟ್ಟಿಯೇ ಆಗುತ್ತೆ. ಹೈದರಾ­ಬಾದ್‌ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನ­ಮಾನ ನೀಡಬೇಕು ಎಂಬ ಹೋರಾಟ 40 ವರ್ಷ­ಗಳಿಂದ ನಡೆಯುತ್ತಿತ್ತು. ಆದರೂ ಫಲ ಸಿಕ್ಕಿರಲಿಲ್ಲ. ನಾನು ಸಚಿವನಾದ ಬಳಿಕ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಸಚಿವ ಸಂಪುಟದ ಸಹೋ­ದ್ಯೋಗಿಗಳ ಮೇಲೆ ಒತ್ತಡ ತಂದು 371 (ಜೆ) ತಿದ್ದುಪಡಿಗೆ ಪೂರಕವಾಗಿ ಕೆಲಸ ಮಾಡಿದೆ. ಇದ­ರಿಂದ ಆರು ಜಿಲ್ಲೆಗಳ 1.30 ಕೋಟಿ ಜನರಿಗೆ ಶಿಕ್ಷಣ, ಉದ್ಯೋಗ, ಅಭಿವೃದ್ಧಿಯಲ್ಲಿ ಲಾಭವಾ­ಗು­ತ್ತದೆ. ಇದೊಂದು ನಿಮಗೆ ಸಾಧಾರಣ ಸಾಧನೆ ರೀತಿ ಕಾಣಿ­ಸು­­ತ್ತದೆಯೇ?’ ಎಂದು ಪ್ರಶ್ನಿಸಿದವರು ಮತ್ತೆ ಒಂದೊಂದೇ ಬೆರಳು­ಗಳನ್ನು ಮಡ­ಚುತ್ತಾ ಸಾಧನೆ­ಗಳ ಪಟ್ಟಿ ಮಾಡಿದ್ದು ಹೀಗೆ:

ಗುಲ್ಬರ್ಗ ಜಿಲ್ಲೆಯಲ್ಲಿ ಕೇಂದ್ರೀಯ ವಿಶ್ವ­ವಿದ್ಯಾಲಯ ಸ್ಥಾಪನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಜವಳಿ ಪಾರ್ಕ್, ಕೌಶಲ ಅಭಿವೃದ್ಧಿ ಕೇಂದ್ರ, ಹೈ.ಕ. ಭಾಗವನ್ನು ರಾಜಧಾನಿಗೆ ಬೆಸೆಯಲು ರಾಷ್ಟ್ರೀಯ ಹೆದ್ದಾರಿ 150 ಅನುಷ್ಠಾನ ಕಾರ್ಯಕ್ಕೆ ಚಾಲನೆ, ಕೇಂದ್ರದ ಎಕ್ಸಲೇಟರ್ ಇರಿಗೇಶನ್ ಬೆನಿಫಿಟ್‌ ಪ್ರೋಗ್ರಾಂನಿಂದ  (ಎಐಬಿಪಿ) ಕೃಷ್ಣಾ ಮೇಲ್ದಂಡೆಯ ನಾರಾಯಣ ಪುರ ಎಡದಂಡೆ ಕಾಲುವೆಯ ಪುನರು­ಜ್ಜೀವನಕ್ಕಾಗಿ ₨ 3,600 ಕೋಟಿ ಮಂಜೂರು, ಗುಲ್ಬರ್ಗ ಹೈಕೋರ್ಟ್‌ ಸಂಚಾರಿ ಪೀಠ ಕಾಯಂ, ಗುಲ್ಬರ್ಗ ರೈಲ್ವೆ ವಿಭಾಗ ಆರಂಭಿ­ಸಲು ಕ್ರಮ, ಯಾದಗಿರಿ ಬಳಿ ಬೋಗಿ ತಯಾರಿಕಾ ಘಟಕ ಸ್ಥಾಪನೆಗೆ ಚಾಲನೆ, ಹೊಸ ರೈಲುಗಳ ಸಂಚಾರ, ನನೆಗುದಿಗೆ ಬಿದ್ದಿದ್ದ ರೈಲು ಮಾರ್ಗಗಳಿಗೆ ಚಾಲನೆ, ಅಂಗವಿಲಕರಿಗೆ ಒಂದೇ ತಿಂಗಳಲ್ಲಿ ₨ 49 ಕೋಟಿಗಳ ಸವಲತ್ತು ವಿತರಣೆ... ಹೀಗೆ ಪಟ್ಟಿ ಮಾಡುತ್ತಲೇ ಇದ್ದವರು, ರಾಜ್ಯಕ್ಕೆ ಮಾಡಿದ ಕೆಲಸಗಳನ್ನು ಹೇಳಲು ಹೊರಟವರು. ಏನೋ ನೆನಪಾದವರಂತೆ ಕೈ ಗಡಿಯಾರವನ್ನು ನೋಡಿದವರು ಎದ್ದು ನಿಂತು ಕೈ ಕುಲುಕಿದರು.

ನಾನು ಕೇಳಬೇಕು ಎಂದುಕೊಂಡಿದ್ದ ಬಹಳಷ್ಟು ಪ್ರಶ್ನೆಗಳು ಹಾಗೇ ಉಳಿದಿದ್ದವು. ಆದರೆ, ಖರ್ಗೆಯವರು ತಾವು ಐದು ವರ್ಷದಲ್ಲಿ ಮಾಡಿದ ಕೆಲಸಗಳ ಪಟ್ಟಿಯನ್ನು ಕೊಡುವಷ್ಟ­ರಲ್ಲೇ 75 ನಿಮಿಷಗಳು ಕಳೆದು ಹೋಗಿದ್ದವು!

ನಮ್ಮ ಮಾತಿನ ನಡುವೆಯೇ ಅಫಜಲಪುರದ ಶಾಸಕ ಮಾಲೀಕಯ್ಯ ಗುತ್ತೇದಾರ್‌ ಬಂದು ಹೋದರು. ಇವರಾದ ಮೇಲೆ ಮಾಜಿ ಸಚಿವ ವೈಜನಾಥ ಪಾಟೀಲರು ಬಂದು ಚುನಾವಣಾ ಪ್ರಚಾರ ದಿನಾಂಕವನ್ನು ಗೊತ್ತು ಮಾಡಿಕೊಂಡು ತೆರಳಿದರು. ‘ಲುಂಬಿನಿ’ಯ ಒಳ, ಹೊರಗೆ ಇದ್ದವರ ಕುಶಲ­ವನ್ನು ನಗುಮುಖದೊಂದಿಗೆ ಪ್ರಿಯಾಂಕ್‌ ವಿಚಾರಿ­ಸುತ್ತಿದ್ದರು.

ಖರ್ಗೆಯವರ ಸವಾರಿ ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯತ್ತ ಹೊರಟಿತು. ಅಲ್ಲಿ ಬಿಜೆಪಿ, ಜೆಡಿಎಸ್‌ ತೊರೆದ ನೂರಾರು ಮಂದಿ ಕಾಂಗ್ರೆಸ್‌ ಸೇರ್ಪಡೆಗೊಂಡರು. ಇವರಲ್ಲಿ ಹೆಚ್ಚಿನವರು ಯುವಕರೇ ಇದ್ದರು!

‘ಚುನಾವಣೆ ಸಂದರ್ಭದಲ್ಲಿ ಪದೇ ಪದೇ ಪಕ್ಷಾಂತರ ಮಾಡಬಾರದು. ಒಂದು ಪಕ್ಷಕ್ಕೆ ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಯುವಕರಿಗೆ ಹಿತವಚನ ಹೇಳಿದರು.

‘ಕಳೆದ ಬಾರಿ ಜನರಿಂದ ಈಗಿನಷ್ಟು ಸ್ಪಂದನೆ ಇರಲಿಲ್ಲ. ಈಗ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಪಕ್ಷಾತೀತವಾಗಿ ಮಾತ­ನಾಡುತ್ತಿದ್ದಾರೆ. ಕಾರ್ಯಕರ್ತರು ನನ್ನ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು’ ಎಂದು ಖರ್ಗೆ ಸಲಹೆ ನೀಡಿದರು.

ಅದು ಯಾದಗಿರಿ ತಾಲ್ಲೂಕು ಗುರುಮಠಕಲ್‌ ಕ್ಷೇತ್ರ ವ್ಯಾಪ್ತಿಯ ಯರಗೋಳ. ಈ ಗ್ರಾಮ­ದಲ್ಲಿ ಸುತ್ತಾಡುತ್ತಾ ಸಿಕ್ಕವರನ್ನು ಮಾತಿಗೆ ಎಳೆಯುತ್ತಲೇ ಹೋದೆ. ನಿಂಗಣ್ಣ ಚಿಕ್ಕಬಾರ್ನ್ ಪದವೀ­ಧರ. ಉದ್ಯೋಗವಿಲ್ಲದ ಕಾರಣ ವಿಡಿಯೋ­­ಗ್ರಾಫರ್‌ ಆಗಿದ್ದಾರೆ.  ‘371 (ಜೆ) ತಿದ್ದುಪಡಿ ಮಾಡಿಸಿದ್ದೇ ಖರ್ಗೆ ಸಾಹೇಬ್ರು. ಅವರಿಂದಾಗಿ ನನ್ನಂತಹ ಸಾವಿರಾರು ನಿರುದ್ಯೋಗಿಗಳ ಕಣ್ಣಲ್ಲಿ ಉದ್ಯೋಗದ ಕನಸುಗಳು ಬೀಳುತ್ತಿವೆ’ ಎಂದ ಅವರ ಕಣ್ಣಲ್ಲಿ ಭರವಸೆ ಕಾಣಿಸುತ್ತಿತ್ತು.

ಬಿ.ಎಸ್ಸಿ ಪದವೀಧರ ವಿಜಯ­ಕುಮಾರ್‌ ‘ಹೌದು’ ಎನ್ನು­ವಂತೆ ತಲೆ ಅಲ್ಲಾಡಿಸಿದರು. ‘ಯುವಕರೆಲ್ಲ ಮೋದಿ ಪರವಾಗಿ­ದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರಲ್ಲ?’ ಎಂಬ ನನ್ನ ಪ್ರಶ್ನೆಗೆ ಸೂರ್ಯಕಾಂತ್‌ ಚತ್ನಳ್ಳಿ ‘ಯಾವ್‌ ಮೋದಿ ಸರ್ರ.., ಇವರನ್ನು ಬಿಟ್ಟು ನಾವು ಇನ್ಯಾವ ಮೋದಿಗೂ ವೋಟ್‌ ಹಾಕುದಿಲ್ಲ. ಖರ್ಗೆ ಸಾಹೇಬ್ರು ಕೆಲ್ಸ ಯಾವ್‌ ಮೋದಿಗೂ ಕಮ್ಮಿ ಇಲ್ರಿ’ ಎಂದು ಅಭಿಮಾನದಿಂದಲೇ ಹೇಳಿದರು.

ಖರ್ಗೆಯವರು ಭಾಷಣ ಮಾಡುತ್ತಿರುವುದು ದೂರ­ದಿಂದಲೇ ಧ್ವನಿವರ್ಧಕದಿಂದ ಕೇಳಿಸಿತು. ಅದೇ ಜಾಡನ್ನು ಹಿಡಿದು ಅಲ್ಲಿಗೆ ಹೋದಾಗ ‘ಗುರುಮಠಕಲ್‌ ಕ್ಷೇತ್ರ ನನ್ನ ಹಣೆ ಬರಹ ಬರೆದ ಕ್ಷೇತ್ರ. 8 ಬಾರಿ ಸತತವಾಗಿ ಗೆಲ್ಲಿಸಿದ್ದೀರಿ. ಜೀವನ­ದಲ್ಲಿ ನಾನು ಯಾವುದೇ ಹುದ್ದೆಗೆ ಹೋದರೂ ನಿಮ್ಮನ್ನು ಮರೆಯುವುದಿಲ್ಲ. ನಿಮ್ಮ ಗೌರವಕ್ಕೆ ಕಪ್ಪುಚುಕ್ಕೆ ಬರದಂತೆ ಕೆಲಸ ಮಾಡಿ ನಿಮಗೂ, ಕ್ಷೇತ್ರಕ್ಕೂ ಗೌರವ ತಂದಿದ್ದೇನೆ’ ಎಂದು ಭಾವುಕ­ರಾಗಿ ಮಾತನಾಡುತ್ತಿದ್ದರು. ಅರಳಿಕಟ್ಟೆ ಮುಂದೆ ನೆರೆದಿದ್ದ ನೂರಾರು ಜನರು ಕೆಂಡದಂತಹ ಬಿಸಿಲಿ­ನಲ್ಲೂ ಉತ್ಸಾಹದಿಂದ ಕೇಕೆ ಹಾಕಿ ಚಪ್ಪಾಳೆ ತಟ್ಟಿದರು.

ದಾರಿಯಲ್ಲಿ ಸಿಕ್ಕ ವೆಂಕಟೇಶನಗರ ತಾಂಡಾದ ಶಂಕರ್ ಬಾಶು ಅವರನ್ನು ಮಾತನಾಡಿಸಿದೆ. ಅವರಿಗೆ ತಮ್ಮದೇ ಜನಾಂಗದ ರೇವೂ ನಾಯಕ ಬೆಳಮಗಿಯ ಪರಿಚಯವೇ ಇರಲಿಲ್ಲ. ‘ನಮಗೆ ಬೆಳಮಗಿ ಯಾರು ಎಂಬುವುದೇ ಗೊತ್ತಿಲ್ಲ. ಖರ್ಗೆ ಸಾಹೇಬ್ರು ನೋಡ್ರಿ, ಮೊದಲಿಂದಲೂ ಗೊತ್ತುರ್ರೀ’ ಎಂದು ತಮ್ಮ ದಾರಿ ಹಿಡಿದರು.

ಹತ್ತಿಕುಣಿ ಗ್ರಾಮದ ಸಭೆಯಲ್ಲಿ ಖರ್ಗೆಯವರು ಮೋದಿ ಹೆಸರನ್ನು ಪ್ರಸ್ತಾಪಿಸಿ, ‘ಮೋದಿ ದೇಶದ 28 ಮುಖ್ಯಮಂತ್ರಿ­ಗಳಲ್ಲಿ ಒಬ್ಬರು. ಇಲ್ಲಿ ಬಿಜೆಪಿಯವರು ಮೋದಿ ಹೆಸರು ಹೇಳಿಕೊಂಡು ಮತ ಕೇಳಲು ಬರುತ್ತಾರೆ. ಹತ್ತಿಕುಣಿಗೆ ಬಂದು ಮೋದಿ ಕೆಲಸ ಮಾಡ್ತಾರಾ? ನಾನು ತಾನೆ ಕೆಲಸ ಮಾಡ­ಬೇಕಾಗಿದ್ದು. 371 (ಜೆ) ಜಾರಿಯಾಗಿದ್ದು ನನ್ನ ಪ್ರಯತ್ನದಿಂದ ತಾನೆ’ ಎಂದು ಮತದಾರರಿಗೆ ಮನದಟ್ಟು ಮಾಡುತ್ತಿದ್ದರು.
ಸಭೆಯಿಂದ ಸ್ವಲ್ಪ ದೂರವೇ ನಿಂತಿದ್ದ ಖಾಸಗಿ ಶಾಲೆಯ ಶಿಕ್ಷಕರೊಬ್ಬರಿಗೆ ಈ ಮಾತು ಯಾಕೋ ಸರಿ ಕಾಣಿಸಲಿಲ್ಲ. ‘371 (ಜೆ) ಇವರೊಬ್ಬರಿಂದಲೇ ಆಗಿಬಿಡುತ್ತಾ? 40 ವರ್ಷ ಹೋರಾಟ ಮಾಡಿದವರು ಎಲ್ಲಿಗೆ ಹೋಗಬೇಕು? ಎಲ್ಲ ತಮ್ಮಿಂದಲೇ ಎಂದು ಹೇಳಿಕೊಳ್ಳು­ವುದು ಎಷ್ಟು ಸರಿ?’ ಎಂದು ಗೊಣಗಿದ್ದು ಸ್ವಲ್ಪ ಜೋರಾಗಿಯೇ ಕೇಳಿಸಿತು.

ಗುರುಮಠಕಲ್‌ ಕ್ಷೇತ್ರದ ಕೊಂಕಲ್‌­ನಲ್ಲಿ ಪ್ರಚಾರ ಸಭೆ ಮುಗಿದಾಗ ಸಂಜೆ 5.30 ಆಗಿತ್ತು. ಆದರೂ ಮಧ್ಯಾಹ್ನದ ಊಟವನ್ನು ಖರ್ಗೆಯವರು ಮಾಡಿರ­ಲಿಲ್ಲ. ಒಂದಾದ ಮೇಲೆ ಒಂದರಂತೆ ಸಭೆಯನ್ನು ಮಾಡುತ್ತಲೇ ಇದ್ದರು. ಇವರೊಂದಿಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹಾಗೂ ಸ್ಥಳೀಯ ಮುಖಂಡರು ಇದ್ದರು.

ಇದು ಎಲ್ಲ ಊರುಗಳಲ್ಲಿನ ಚಿತ್ರಣ. ಖರ್ಗೆಯವರ ಕಾರು ಕಾಣಿಸು­ತ್ತಿದ್ದಂತೆಯೇ ಡೊಳ್ಳು, ತಮಟೆ ಸದ್ದು ಜೋರಾಗು­ತ್ತಿತ್ತು. ಇದನ್ನೂ ಮೀರಿಸುವಂತೆ ಪಟಾಕಿ ಸದ್ದು, ಹೊಗೆ ಆವರಿಸಿಕೊಳ್ಳುತ್ತಿದ್ದವು. ಬಳಿಕ ಮೆರವಣಿಗೆಯಲ್ಲಿ ಖರ್ಗೆ ಪರ ಜೈಕಾರಗಳು ಮೊಳಗುತ್ತಿದ್ದವು.
ಸಭೆ ಆರಂಭದಲ್ಲಿ ಸ್ಥಳೀಯ ಮುಖಂಡರೊಬ್ಬರು ಪ್ರಾಸ್ತಾವಿಕ­ವಾಗಿ ಮಾತನಾಡಿದ ಮೇಲೆ ಸಚಿವ ಬಾಬುರಾವ ಚಿಂಚನಸೂರ ಹಾಸ್ಯಮ­ಯವಾಗಿ ಮಾತನಾಡಿ ಜನರನ್ನು ರಂಜಿಸುತ್ತಿದ್ದರು. ನಂತರ ಖರ್ಗೆಯವರು ಸಂಸತ್‌ ಮತ್ತು ಚುನಾವಣೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟ ನಂತರ 15 ನಿಮಿಷ ತಮ್ಮ ಸಾಧನೆಗಳ ಪಟ್ಟಿ ಮಾಡುತ್ತಿದ್ದರು. ಕೊನೆಯಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ತಾವು ಮಾಡಿರುವ ಕೆಲಸ ಹಾಗೂ ಎದುರಾಳಿಗಳ ಕೆಲಸವನ್ನು ತೂಕ ಮಾಡಿ ಕೂಲಿ (ಮತ) ಕೊಡಿ ಎಂದು ಮನವಿ ಮಾಡುವುದ­ರೊಂದಿಗೆ ಸಭೆ ಮುಗಿಯುತ್ತಿತ್ತು.

ಮಾರ್ಚ್ 29 ರ ಶನಿವಾರ 41 ಡಿಗ್ರಿ ಸೆಲ್ಸಿಯಸ್‌ ಇತ್ತು. ಆದರೂ 73 ವರ್ಷದ ಖರ್ಗೆ ಅವರು ನಿರಂತರವಾಗಿ ಸಭೆಗಳನ್ನು ನಡೆಸುತ್ತಲೇ ಇದ್ದರು. ಇದು ಖರ್ಗೆಯವರಿಗೆ 11 ನೇ ಚುನಾವಣೆ.

ಖರ್ಗೆಯವರನ್ನು ಹಿಂಬಾಲಿಸಿ ಹೋಗುತ್ತಿದ್ದಾಗ ಗುಲ್ಬರ್ಗದ ಸೇಡಂ ರಸ್ತೆಯಲ್ಲಿ ತಲೆ ಎತ್ತಿರುವ ₨ 1,500 ಕೋಟಿಗಳ ವೆಚ್ಚದ ಬೃಹತ್‌ ಇಎಸ್‌ಐ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಸಂಕೀರ್ಣ ಕಾಣಿಸಿತು. ದೇಶದಲ್ಲಿ ಅಪರೂಪ ಎನಿಸುವ ಇಂತಹ ಆಸ್ಪತ್ರೆಯನ್ನು ಗುಲ್ಬರ್ಗಕ್ಕೆ ತಂದ ಬಗ್ಗೆ ಮಾತುಕತೆಯಲ್ಲಿ ಪ್ರಸ್ತಾಪಿಸಿದಾಗ ಈ ಬಗ್ಗೆ ಅವರಿಗೆ ಅಪಾರ ಹೆಮ್ಮೆ ಇರುವುದು ಅವರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT