ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದುಡಿಯುವ ಕೈಗೆ ಕೆಲಸವನ್ನೂ ಕೊಡಿ'

`ಅನ್ನಭಾಗ್ಯ' ಯೋಜನೆ ಉದ್ಘಾಟಿಸಿದ ಶಾಸಕ ಶಿವಶಂಕರ್
Last Updated 11 ಜುಲೈ 2013, 6:40 IST
ಅಕ್ಷರ ಗಾತ್ರ

ಹರಿಹರ:  ಸರ್ಕಾರ `ಅನ್ನಭಾಗ್ಯ' ಯೋಜನೆ ಜಾರಿಗೊಳಿಸಿ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದ ಶಾಸಕ ಎಚ್.ಎಸ್.ಶಿವಶಂಕರ್, ದುಡಿಯುವ ಕೈಗಳಿಗೆ ಕೆಲಸ ನೀಡುವ ಯೋಜನೆಗಳನ್ನೂ ಸಹ ರೂಪಿಸಬೇಕು ಎಂದು ಸಲಹೆ ನೀಡಿದರು.

ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್‌ನಲ್ಲಿ ಬುಧವಾರ `ಅನ್ನಭಾಗ್ಯ' ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿ, ಶಾಶ್ವತ ಅನ್ನಕ್ಕೆ ದಾರಿ ಮಾಡಿಕೊಡಬೇಕು. ಸಕ್ಕರೆ ಮತ್ತು ಗೋಧಿ ವಿತರಣೆಯನ್ನು 2 ತಿಂಗಳಿಂದ ನಿಲ್ಲಿಸಿ, ಈಗ ಅಕ್ಕಿ ವಿತರಣೆಗೆ ಚಾಲನೆ ನೀಡಿರುವ ಸರ್ಕಾರದ ಈ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಘೋಷಿಸಿದ ಯೋಜನೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದಿದ್ದು ಶ್ಲಾಘನಾರ್ಹ. ಆದರೆ, ಸರ್ಕಾರಕ್ಕೆ ರೂ4,600 ಕೋಟಿ ಹೊರೆ ಬೀಳಲಿದ್ದು, ಬಜೆಟ್‌ನಲ್ಲಿ ಹೇಗೆ ಸರಿದೂಗಿಸುತ್ತದೆ ಕಾದು ನೋಡಬೇಕು. `ಅನ್ನಭಾಗ್ಯ'ಕ್ಕೆ ಕೇಂದ್ರ ಸರ್ಕಾರದ ಅನುದಾನ ಅವಲಂಬಿಸಿರುವುದು, ಯೋಜನೆಯ ಯಶಸ್ಸಿನ ಬಗ್ಗೆ ಆತಂಕವಿದೆ. ಕೆಲ ತಿಂಗಳಲ್ಲೇ ಅಂತ್ಯಗೊಳ್ಳುವ ಯೋಜನೆ ಇದಾಗದಿರಲಿ ಎಂದು ಆಶಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಂ. ನಾಗೇಂದ್ರಪ್ಪ ಮಾತನಾಡಿ, ಬಹುತೇಕ ಬಿಪಿಎಲ್ ಕಾರ್ಡ್‌ದಾರರು ಪಡಿತರವನ್ನು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದಕ್ಕೆ ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಬೆಂಬಲ ನೀಡುತ್ತಿದ್ದಾರೆ ಎಂದು ಮಾಹಿತಿ ಇದೆ. ಪಡಿತರ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು ಎಂದರು.

ತಾ.ಪಂ. ಅಧ್ಯಕ್ಷೆ ವಿಜಯಲತಾ ಕೆ.ಜಿ. ರಾಜು, ಉಪಾಧ್ಯಕ್ಷ ಅಣ್ಣಪ್ಪ ಐರಣಿ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ಜಿ.ಕೆ. ಹನುಮಂತಪ್ಪ, ನಗರಸಭೆ ಸದಸ್ಯರಾದ ಅಲ್ತಫ್, ಹಬೀಬ್‌ಉಲ್ಲಾ, ನಗೀನಾ ಸುಬಾನ್, ಪ್ರತಿಭಾ ಕುಲಕರ್ಣಿ, ರತ್ನಮ್ಮ, ಗಂಗಮ್ಮ ಕೋಡಿಹಳ್ಳಿ, ಅಂಜಿನಮ್ಮ, ಅತಾವುಲ್ಲಾ, ತಹಶೀಲ್ದಾರ್ ಜಿ. ನಜ್ಮಾ, ತಾ.ಪಂ. ಇಒ ಡಾ.ಎಸ್.ರಂಗಸ್ವಾಮಿ, ಪೌರಾಯುಕ್ತ ಎಂ.ಕೆ.ನಲವಡಿ, ಆಹಾರ ಶಿರಸ್ತೇದಾರ್ ರಾಮಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT