ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡುಕಿ ರಾಜೀನಾಮೆ ನೀಡಬೇಡಿ

ಆಶಾ ಕಾರ್ಯಕರ್ತೆಯರಿಗೆ ಸಚಿವ ಯು.ಟಿ. ಖಾದರ್ ಕಿವಿಮಾತು
Last Updated 4 ಸೆಪ್ಟೆಂಬರ್ 2013, 19:49 IST
ಅಕ್ಷರ ಗಾತ್ರ

ಬೆಂಗಳೂರು: `ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಿದೆ. ಹೀಗಾಗಿ ಸೇವೆಗೆ ರಾಜೀನಾಮೆ ನೀಡುವಂಥ ದುಡುಕಿನ ನಿರ್ಧಾರಕ್ಕೆ ಆಶಾ ಕಾರ್ಯಕರ್ತೆಯರು ಮುಂದಾಗಬಾರದು' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
`ಹಿಂದೆ ತಮಗೆ ಸರಿಯಾದ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಸೇವೆಗೆ ರಾಜೀನಾಮೆ ನೀಡಿದ್ದರು. ಇಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಹಿಂದೆ ರಾಜೀನಾಮೆ ನೀಡಿದವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಹೀಗಾಗಿ ಆಶಾ ಕಾರ್ಯಕರ್ತೆಯರು ಸೌಲಭ್ಯ ಬರುವವರೆಗೂ ಕಾಯಬೇಕು. ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲಿದೆ' ಎಂದರು.

`ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಸೇವೆಗೆ ಪ್ರೋತ್ಸಾಹಧನ ನೀಡುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರವೂ ಪ್ರೋತ್ಸಾಹಧನ ನೀಡುವ ವಿಚಾರವನ್ನು ಈಗಾಗಲೇ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಕಾರ್ಯಕರ್ತೆಯರಿಗೆ ತಲುಪಲಿದೆ' ಎಂದು ಹೇಳಿದರು.

`ಆಶಾ ಕಾರ್ಯಕರ್ತೆಯರು ಸರ್ಕಾರಿ ಆಸ್ಪತ್ರೆಗಳಿಗೆ ಗರ್ಭಿಣಿಯರು ಹಾಗೂ ರೋಗಿಗಳನ್ನು ಕರೆದುಕೊಂಡು ಹೋದಾಗ ಆಸ್ಪತ್ರೆಯ ಸಿಬ್ಬಂದಿ ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದಿಲ್ಲ ಮತ್ತು ಪ್ರೋತ್ಸಾಹಧನದ ಹಣ ಬಿಡುಗಡೆಯಾಗುವುದು ವಿಳಂಬವಾಗುತ್ತಿದೆ ಎಂಬ ದೂರು ಹೆಚ್ಚಾಗಿವೆ. ತಮ್ಮ ಯಾವುದೇ ಸಮಸ್ಯೆಗಳಿದ್ದರೂ ಆಶಾ ಕಾರ್ಯಕರ್ತೆಯರು 104 ಸಹಾಯವಾಣಿಗೆ ಕರೆ ಮಾಡಿ ತಮ್ಮ ದೂರು ದಾಖಲಿಸಬಹುದು. ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು' ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, `ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಮುಷ್ಕರ ಮಾಡಬಾರದು. ಬದಲಿಗೆ ಇನ್ನೂ ಹೆಚ್ಚು ಕೆಲಸ ಮಾಡಿ ಸರ್ಕಾರದ ಗಮನ ಸೆಳೆಯಬೇಕು. ಜಪಾನ್‌ನಲ್ಲಿ ನೌಕರರು ಬೇಡಿಕೆ ಈಡೇರಿಕೆಗಾಗಿ 2 ಗಂಟೆ ಹೆಚ್ಚು ಕೆಲಸ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುತ್ತಾರೆ. ಈ ಪರಿಪಾಠವನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು' ಎಂದರು.

`ಆರೋಗ್ಯ ಯೋಜನೆಗಳಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋಟಿ ಕೋಟಿ ಹಣ ಬಿಡುಗಡೆಯಾಗುತ್ತದೆ. ಆದರೆ ಈ ಹಣ ಯಾವ ಯಾವ ಕೆಲಸಗಳಿಗೆ ವಿನಿಯೋಗವಾಗುತ್ತಿದೆ ಎಂಬ ಲೆಕ್ಕವಿಲ್ಲ. ಸರ್ಕಾರ ಈ ಲೆಕ್ಕವನ್ನು ಬಹಿರಂಗ ಪಡಿಸಬೇಕು. ಇತ್ತೀಚೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಗಿಗಳು ಹೋಗುವುದು ಕಡಿಮೆಯಾಗಿದೆ. ಭ್ರಷ್ಟಾಚಾರ ಹಾಗೂ ಸಮರ್ಪಕ ಸೇವೆಯ ಕೊರತೆಯೇ ಇದಕ್ಕೆ ಕಾರಣ' ಎಂದು ವಿಷಾದಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, `ನಮಗೆ ಸರ್ಕಾರದಿಂದ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಮಾಸಿಕ ರೂ 3 ಸಾವಿರ ವೇತನ ನಿಗಧಿ ಪಡಿಸಬೇಕು. ಜನಶ್ರೀ ಬಿಮಾ ಯೋಜನೆಯನ್ನು ನಮಗೂ ವಿಸ್ತರಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವಂಥ ವಾತಾವರಣ ನಿರ್ಮಿಸಬೇಕು' ಎಂದು ಒತ್ತಾಯಿಸಿದರು.

ಆಂಬುಲೆನ್ಸ್ ಸಂಖ್ಯೆ ಹೆಚ್ಚಳ
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಖಾದರ್, `ರಾಜ್ಯದಲ್ಲಿ ಮುಂದಿನ ಕೆಲ ದಿನಗಳಲ್ಲಿ ಆಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಾಗಲಿದೆ. 217 ಹೊಸ ಆಂಬುಲೆನ್ಸ್‌ಗಳನ್ನು ಒದಗಿಸಲು ಕೇಂದ್ರ ಆರೋಗ್ಯ ಸಚಿವರು ಒಪ್ಪಿಗೆ ನೀಡಿದ್ದಾರೆ. ಇದರ ಜತೆಗೆ ರಾಜ್ಯ ಸರ್ಕಾರದಿಂದ 94 ಹೊಸ ಆಂಬುಲೆನ್ಸ್‌ಗಳು ಸೇವೆಗೆ ದೊರೆಯಲಿವೆ' ಎಂದರು.

`ಗೆಜೆಟೆಡ್ ಅಧಿಕಾರಿಗಿಂತ ಕೆಳಮಟ್ಟದ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಜಾರಿಗೊಳಿಸುವ ಸಂಬಂಧ ಮಾತುಕತೆ ನಡೆಯುತ್ತಿದೆ. ಯೋಜನೆಯಡಿ ರೂ 2 ಲಕ್ಷದವರೆಗೆ ಚಿಕಿತ್ಸಾ ಸೌಲಭ್ಯ ನೀಡಲು ಚಿಂತನೆ ನಡೆಸಲಾಗುತ್ತಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ರಾಜ್ಯಕ್ಕೆ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ರೂ 130 ಕೋಟಿ ಅಂದಾಜು ವೆಚ್ಚದ ಪ್ರಸ್ತಾವವನ್ನು ಕೇಂದ್ರ ಆರೋಗ್ಯ ಇಲಾಖೆಗೆ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಉಲ್ಲಾಳ ಮತ್ತು ಬಾಗಲಕೋಟೆಯಲ್ಲಿ ಯೋಜನೆ ಜಾರಿಗೆ ಬರಲಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT