ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಪ್ಪಟ್ಟು ಪರಿಹಾರ ಪಡೆದು ಸಹಕರಿಸಿ

Last Updated 8 ಜೂನ್ 2011, 10:35 IST
ಅಕ್ಷರ ಗಾತ್ರ

ಮಂಗಳೂರು: ಯೋಜನೆಯಿಂದ ಭೂಮಿ ಕಳೆದುಕೊಂಡವರಿಗೆ ನೀಡಲು ಒಪ್ಪಿರುವ ಪರಿಷ್ಕೃತ ಪರಿಹಾರ ಪಡೆದು ಪ್ರತಿಭಟನೆ ಕೊನೆಗೊಳಿಸಬೇಕು ಎಂದು ಎಂಎಸ್‌ಇಜೆಡ್ ಯೋಜನೆ ಸಂತ್ರಸ್ತರು ಮತ್ತು ಉದ್ಯೋಗಾಕಾಂಕ್ಷಿಗಳಲ್ಲಿ ಎಂಆರ್‌ಪಿಎಲ್ ಸಹಿತ ಪ್ರಮುಖ ಕಂಪೆನಿಗಳು ಮನವಿ ಮಾಡಿವೆ.

ಉದ್ಯೋಗಾಕಾಂಕ್ಷಿಗಳು 9 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿಗಳು ಮನವಿ ಮಾಡಿವೆ.

ಎಂಆರ್‌ಪಿಎಲ್ ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ್ದು, 1ನೇ ಹಂತದ ಪಿಡಿಎಫ್‌ನವರ(ಕೆಐಎಡಿಬಿ ಅಧಿಸೂಚನೆ ಹೊರಡಿಸುವುದಕ್ಕೆ 1 ವರ್ಷಕ್ಕಿಂತ ಮೊದಲು ನೆಲೆಸಿದ್ದವರಿಗೆ) ಪರಿಹಾರ ಮೊತ್ತ ರೂ. 3.5 ಲಕ್ಷದಿಂದ 7 ಲಕ್ಷಕ್ಕೆ (ಪದವೀಧರರಿಗೆ) ಹೆಚ್ಚಿಸುವುದು ಮತ್ತು ಇತರರಿಗೆ 6 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾಪ ಮುಂದಿಟ್ಟಿದೆ. 2ನೇ ಹಂತದವರಿಗೆ ಪದವೀಧರರಾದಲ್ಲಿ 3 ಲಕ್ಷ ಹಾಗೂ ಇತರರಿಗೆ 1.5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.
 
3ನೇ ಹಂತದ ಪಿಡಿಎಫ್- ಪದವೀಧರರಿಗೆ ರೂ. 2 ಲಕ್ಷ ಮತ್ತು ಇತರರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಉದ್ಯೋಗಾಕಾಂಕ್ಷಿ- ತರಬೇತಿ ಪಡೆಯಲು ಒಪ್ಪಿದವರಿಗೆ ಅರ್ಹತೆಗೆ ತಕ್ಕಂತೆ ಮಾಸಿಕ 3 ಸಾವಿರದಿಂದ 8 ಸಾವಿರ ರೂಪಾಯಿವರೆಗೆ ಗೌರವಧನ ನೀಡಲಾಗುತ್ತದೆ ಎಂಬುದನ್ನು ಪತ್ರಿಕಾ ಹೇಳಿಕೆಯಲ್ಲಿ ಪುನರುಚ್ಚರಿಸಿದೆ.

9 ದಿನಗಳ ಪ್ರತಿಭಟನೆ ಎಂಆರ್‌ಪಿಎಲ್ 3ನೇ ಹಂತದ ವಿಸ್ತರಣಾ ಕಾರ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಕಾಮಗಾರಿ ತಿಂಗಳಷ್ಟು ವಿಳಂಬವಾಗಿದ್ದು, ತಿಂಗಳಿಗೆ 80 ಕೋಟಿ ರೂಪಾಯಿ ನಷ್ಟವಾಗಿದೆ.

ಪ್ರತಿಭಟನೆಯಿಂದ 17 ಸಾವಿರದಷ್ಟು ಗುತ್ತಿಗೆ ಕಾರ್ಮಿಕರು ಹೆಚ್ಚು ತೊಂದರೆಗೆ ಒಳಗಾಗಿದ್ದು, ಹಲವರು ಭಯದಿಂದ ಊರು ಬಿಟ್ಟಿದ್ದಾರೆ. ದೊಡ್ಡ ಯಾಂತ್ರೋಪಕರಣ ಮತ್ತು ಇತರ ಸಾಧನಗಳನ್ನು ತರಿಸಿಕೊಂಡ ಗುತ್ತಿಗೆದಾರರೂ ಭಾರಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪರಿಷ್ಕೃತ ಪರಿಹಾರ, ವೇತನ ನೀಡಲು ಮೇ 31ರಂದು ಸ್ವತಃ ಮುಖ್ಯಮಂತ್ರಿ ಅವರೇ ಒಪ್ಪಿಕೊಂಡಿದ್ದಾರೆ.

ಸಂತ್ರಸ್ತರಿಗೆ ಸಮಗ್ರ ಪರಿಹಾರ ಒದಗಿಸುವುದಕ್ಕೆ ಎಂಆರ್‌ಪಿಎಲ್ ಕಂಪೆನಿ ಸಹ ಬದ್ಧವಾಗಿದೆ. ಯೋಜನಾ ಪ್ರದೇಶದಲ್ಲಿ ಇನ್ನಷ್ಟು ನಷ್ಟವಾಗುವುದನ್ನು ತಪ್ಪಿಸುವ ಸಲುವಾಗಿ ಪ್ರತಿಭಟನಾಕಾರರು ಸರ್ಕಾರ ಮುಂದಿಟ್ಟ ಕೊಡುಗೆಯನ್ನು ಒಪ್ಪಿಕೊಂಡು ಪ್ರತಿಭಟನೆ ಕೈಬಿಡಬೇಕು ಎಂದು ಕಂಪೆನಿ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT