ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಟ್ಯಾಬ್ಲೆಟ್ ಐಪ್ಯಾಡ್-2

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಟ್ಯಾಬ್ಲೆಟ್ ಗಣಕಗಳನ್ನು ಮೊತ್ತಮೊದಲಿಗೆ ಜಗತ್ತಿಗೆ ಪರಿಚಯಿಸಿದ್ದು ಮೈಕ್ರೋಸಾಫ್ಟ್ ಕಂಪೆನಿ. ಆದರೆ ಅವರ ಉತ್ಪನ್ನ ಜನಪ್ರಿಯವಾಗಲಿಲ್ಲ. ಕೆಲವು ವರ್ಷಗಳ ನಂತರ ಆಪಲ್ ಕಂಪೆನಿ ಐಪ್ಯಾಡ್ ಹೆಸರಿನಲ್ಲಿ ತನ್ನದೇ ಆದ ಟ್ಯಾಬ್ಲೆಟ್ ಗಣಕಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬಿಸಿ ಮಸಾಲೆ ದೋಸೆಯಂತೆ ಮಾರಾಟವಾದ ಐಪ್ಯಾಡ್ ದಾಖಲೆಯನ್ನೇ ನಿರ್ಮಿಸಿತು. ಟ್ಯಾಬ್ಲೆಟ್ ಎಂದರೆ ಐಪ್ಯಾಡ್ ಎನ್ನುವಂತಾಯಿತು.

ಇದೆಲ್ಲ ನಡೆದುದು ಅಮೆರಿಕ ದೇಶದಲ್ಲಿ. ಆಪಲ್ ಕಂಪೆನಿಗೆ ಅಮೆರಿಕದಲ್ಲಿ ಕುರುಡು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಆಪಲ್ ಕಂಪೆನಿ ಏನೇ ನೀಡಿದರೂ ಅದು ಅದ್ಭುತವಾಗಿರುತ್ತದೆ ಎಂಬ ನಂಬಿಕೆಯಿಂದ ಅವರೆಲ್ಲರೂ ಐಪ್ಯಾಡ್ ಕೊಂಡುಕೊಂಡುದರಿಂದ ಐಪ್ಯಾಡ್ ಮಾರಾಟದಲ್ಲಿ ಹೊಸ ದಾಖಲೆಯನ್ನೇ ಬರೆಯಿತು.

ಹಾಗೆಂದು ಹೇಳಿ ಐಪ್ಯಾಡ್‌ನಲ್ಲಿ ಜನರಿಗೆ ಅಗತ್ಯವಿಲ್ಲದ ಅಥವಾ ಉಪಯೋಗಿಸಲು ಕ್ಲಿಷ್ಟಕರವಾದ ತಂತ್ರಾಂಶಗಳಿದ್ದವು ಎಂದಲ್ಲ. ಐಪ್ಯಾಡ್ ಅನ್ನು ಟ್ಯಾಬ್ಲೆಟ್‌ನ ಬಳಕೆದಾರನನ್ನು ಸರಿಯಾಗಿ ಅರ್ಥಮಾಡಿಕೊಡು ವಿನ್ಯಾಸಗೊಳಿಸಲಾಗಿತ್ತು. ಅದು ಪರಿಣತರಿಗಾಗಿ ತಯಾರಾಗಿದ್ದುದಲ್ಲ. ಜನಸಾಮಾನ್ಯರಿಗಾಗಿತ್ತು.

ಆದುದರಿಂದ ಪರಿಣತರು ಬಳಸುವ ಸವಲತ್ತುಗಳು ಯಾವುವೂ ಅದರಲ್ಲಿರಲಿಲ್ಲ. ಮೊದಲನೆಯ ಆವೃತ್ತಿ ಅಂತಹ ಅದ್ಭುತವಾಗೇನೂ ಇರಲಿಲ್ಲ. ನಂತರದ ಆವೃತ್ತಿಗಳು ಹಲವು ಹೆಚ್ಚಿನ ಸವಲತ್ತುಗಳನ್ನು ಒಳಗೊಂಡು ಹೆಚ್ಚು ಉಪಯುಕ್ತವಾಗಿದೆ. ಈ ಸಲ ಆಪಲ್ ಐಪ್ಯಾಡ್ ಆವೃತ್ತಿ 2 ಅನ್ನು ವಿಮರ್ಶಿಸೋಣ.

ಇಲ್ಲಿ ಚರ್ಚೆಗೆ ಎತ್ತಿಕೊಂಡಿರುವುದು ಐಪ್ಯಾಡ್ 2 ವೈಫೈ ಮಾದರಿ. ಇದರ ಗುಣವೈಶಿಷ್ಟ್ಯಗಳನ್ನು ಮೊದಲು ಪಟ್ಟಿ ಮಾಡೋಣ. ಡ್ಯುವಲ್ ಕೋರ್ (ಅಂದರೆ ಎರಡು ಹೃದಯ) ಅ5 ಸಿಪಿಯು, 241 x 286 x 8.8  ಮಿಮೀ ಗಾತ್ರ, 601 ಗ್ರಾಂ ತೂಕ, 16 ಗಿಗಾಬೈಟ್ ಸಂಗ್ರಹ ಸಾಮರ್ಥ್ಯ, ಹಿಂದುಗಡೆ ಬೆಳಕಿರುವ ಶುದ್ಧ ಬಿಳಿ ಬಣ್ಣದ ಮಲ್ಟಿಟಚ್ ಎಲ್‌ಇಡಿ ಪರದೆ, 1024 x 768 ಪಿಕ್ಸೆಲ್ ರೆಸೊಲೂಶನ್, ವೈಫೈ ಮತ್ತು ಬ್ಲೂಟೂತ್ ಸಂಪರ್ಕ, ಹೈಡೆಫಿನಿಶನ್ ಹಿಂದುಗಡೆಯ ಕ್ಯಾಮರ ಮತ್ತು ವಿಜಿಎ ರೆಸೊಲೂಶನ್‌ನ ಮುಂದುಗಡೆಯ ಕ್ಯಾಮರ,
 
ಸುಮಾರು ಹತ್ತು ಗಂಟೆಗಳ ಕಾಲ ಕೆಲಸ ಮಾಡುವ ರಿಚಾರ್ಜೆಬಲ್ ಬ್ಯಾಟರಿ, ಗಣಕಕ್ಕೆ ಸಂಪರ್ಕ ಮಾಡಲು ಮತ್ತು ಚಾರ್ಜ್ ಮಾಡಲು ಯುಎಸ್‌ಬಿ ಮೂಲಕ ಸಂಪರ್ಕ ಸಾಧಿಸುವ 30 ಪಿನ್‌ಗಳ ಕಿಂಡಿ, 3.5 ಮಿಮೀ ಆಡಿಯೋ ಸಂಪರ್ಕ ಕಿಂಡಿ (ಇದನ್ನು ಬಳಸಿ ಇಯರ್‌ಫೋನ್ ಅಥವಾ ಹೆಡ್‌ಫೋನ್ ಬಳಸಬಹುದು), ಇತ್ಯಾದಿ. ಇದರಲ್ಲಿ ಎರಡು ಮಾದರಿಗಳಿವೆ.

ಮೊದಲನೆಯದು ಕೇವಲ ವೈಫೈ ಮಾತ್ರ ಇರುವುದು. ಇದರ ಬೆಲೆ ಸುಮಾರು 24,500 ರೂ. ಎರಡನೆಯದರಲ್ಲಿ ವೈಫೈ ಜೊತೆ 3ಜಿ ಸಿಮ್ ಕಾರ್ಡ್ ಬಳಸುವ ಸವಲತ್ತೂ ಇದೆ. ಅದರ ಬೆಲೆ ಸುಮಾರು 31,000 ರೂ. ನನ್ನಲ್ಲಿರುವುದು ಮೊದಲನೆಯದು ಅಂದರೆ ಕೇವಲ ವೈಫೈ ಸವಲತ್ತಿರುವುದು.

ಆಪಲ್ ಕಂಪೆನಿಯ ಉತ್ಪನ್ನ ಎಂದೊಡನೆ ದುಬಾರಿ ಎಂದು ಅರ್ಥ ಮಾಡಿಕೊಳ್ಳಬೇಕು. ಐಪ್ಯಾಡ್ ಏನು ಈ ನಿಯಮಕ್ಕೆ ವ್ಯತಿರಿಕ್ತವಾಗಿಲ್ಲ. ಇದರ ಬೆಲೆಯ ಸುಮಾರು ಮೂರನೆಯ ಒಂದು ಬೆಲೆಗೆ ಇದರ ಎಲ್ಲ ಗುಣವೈಶಿಷ್ಟ್ಯಗಳನ್ನೂ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡುವ ಆಂಡ್ರಾಯಿಡ್ ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿವೆ.

ಆದರೂ ಐಪ್ಯಾಡ್ ಜಗತ್ತಿನ ಪ್ರಥಮ ಸ್ಥಾನದಲ್ಲೆೀಕೆ ಇದೆ? ಇದಕ್ಕೆ ಕಾರಣಗಳು ಎರಡು -ಮೊದಲನೆಯದಾಗಿ ಆಪಲ್ ಕಂಪೆನಿಯ ಕುರುಡು ಅಭಿಮಾನಿಗಳು ಮತ್ತು ಆಪಲ್ ಕಂಪೆನಿಯ ಉತ್ಪನ್ನಗಳ ಗುಣಮಟ್ಟ.
 
ಐಪ್ಯಾಡ್‌ನ ಬೆಲೆಯನ್ನು ಪಕ್ಕಕ್ಕಿಟ್ಟು ನೋಡಿದರೆ ಉತ್ತಮ ಗುಣಮಟ್ಟದ ಸಾಧನ ಎಂಬುದರಲ್ಲಿ ಅನುಮಾನವೇನಿಲ್ಲ. ಇದರ ಸ್ಪರ್ಶಸಂವೇದಿ ಪರದೆ ತುಂಬ ಚೆನ್ನಾಗಿದೆ. ಸ್ವಲ್ಪ ನಯವಾಗಿ ಬೆರಳಾಡಿಸಿದರೂ ಕೆಲಸ ಮಾಡುತ್ತದೆ.

ಕಡಿಮೆ ಬೆಲೆಯ ಆಂಡ್ರಾಯಿಡ್ ಟ್ಯಾಬ್ಲೆಟ್‌ಗಳಲ್ಲಿ ಸ್ಪರ್ಶಸಂವೇದಿ ಪರದೆ ತುಂಬ ಗಡುಸಾಗಿರುತ್ತದೆ. ಐಪ್ಯಾಡ್‌ನ ಪರದೆಯ ಬಣ್ಣ ಮತ್ತು ರೆಸೊಲೂಶನ್ ಚೆನ್ನಾಗಿದೆ. ಹೈಡೆಫಿನಿಶನ್ ವೀಡಿಯೋ ನೋಡಿ ಆನಂದಿಸಬಹುದು. ಧ್ವನಿಯೂ ಅತ್ಯುತ್ತಮವಾಗಿದೆ. ಅದರದೇ ಸ್ಪೀಕರ್ ಕೂಡ ಚೆನ್ನಾಗಿದೆ.
 
ಹೆಚ್ಚಿನ ಆನಂದ ಬೇಕಾದವರಿಗೆ 3.5 ಮಿಮೀ ಇಯರ್‌ಫೋನ್ ಜ್ಯಾಕ್ (ಕಿಂಡಿ) ಇದೆ. ಅದರ ಮೂಲಕ ನಿಮ್ಮಲ್ಲಿರುವ ಉತ್ತಮ ಇಯರ್‌ಫೋನ್ ಅಥವಾ ಹೆಡ್‌ಸೆಟ್ ಬಳಸಿ ಸಂಗೀತ ಕೇಳಬಹುದು, ಸಿನಿಮಾ ನೋಡಬಹುದು.  ಮುಂದೆ ಮತ್ತು ಹಿಂದೆ ಒಂದೊಂದು ಕ್ಯಾಮರಾಗಳಿವೆ.
 
ನಿಮ್ಮ ಫೋಟೋ ನೀವೇ ತೆಗೆದುಕೊಳ್ಳಬಹುದು. ಮುಂದಿನ ಕ್ಯಾಮರಾ 3ಜಿ ಇಲ್ಲದಿದ್ದಲ್ಲಿ ಅಂತಹ ಉಪಯೋಗವೇನೂ ಇಲ್ಲ. 3ಜಿ ಸೌಲಭ್ಯ ಇರುವ ಮಾದರಿಯಲ್ಲಿ ಈ ಕ್ಯಾಮರಾ ಬಳಸಿ ವೀಡಿಯೋ ಚಾಟ್ ಮಾಡಬಹುದು.

ಕ್ಯಾಮರಾದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತಹದ್ದೇನೂ ಅಲ್ಲ. ಹೋಲಿಕೆಗೆ ಆಪಲ್ ಕಂಪೆನಿಯವರದೇ ಆದ ಐಫೋನ್‌ನ ಕ್ಯಾಮರ ಇದಕ್ಕಿಂತ ಚೆನ್ನಾಗಿ ಫೋಟೋ ತೆಗೆಯುತ್ತದೆ.

ಆದರೆ ಪರದೆ ತುಂಬ ಚೆನ್ನಾಗಿದೆ. ಅಂದರೆ ನಿಮ್ಮ ಡಿಜಿಟಲ್ ಕ್ಯಾಮರಾದಲ್ಲಿ ತೆಗೆದ ಫೋಟೋಗಳನ್ನು ಐಪ್ಯಾಡ್‌ಗೆ ವರ್ಗಾಯಿಸಿ ಅದನ್ನು ಡಿಜಿಟಲ್ ಫೋಟೋಫ್ರೇಮ್ ರೀತಿಯಲ್ಲಿ ಬಳಸಬಹುದು.

ಇದು ಡ್ಯುವಲ್ ಕೋರ್ ಅಂದರೆ ಎರಡು ಹೃದಯಗಳ ಸಿಪಿಯು ಒಳಗೊಂಡಿದೆ. ಆದುದರಿಂದ ಇದು ವೇಗವಾಗಿ ಕೆಲಸ ಮಾಡುತ್ತದೆ. ನನ್ನಲ್ಲಿರುವ ಐಪ್ಯಾಡ್ ಇದು ತನಕ ಇದು ಒಮ್ಮೆಯೂ ತಟಸ್ಥವಾಗಿಲ್ಲ.

ವೈಫೈ ಸೌಲಭ್ಯ ಇದೆ. ಅದರ ಮೂಲಕ ಮನೆಯ ವೈಫೈ ಜಾಲಕ್ಕೆ ಇದನ್ನು ಸೇರಿಸಿ ಅಂತರಜಾಲ ಸಂಪರ್ಕ ಪಡೆಯಬಹುದು. ಬಹುಪಾಲು ಕೆಲಸಗಳಿಗೆ ಅಂತರಜಾಲ ಸಂಪರ್ಕ ಬೇಕೇ ಬೇಕು. ಇದನ್ನು ಪ್ರಪ್ರಥಮ ಬಾರಿಗೆ ಪ್ರಾರಂಭ ಮಾಡುವಾಗಂತೂ ಅಂತರಜಾಲ ಸಂಪರ್ಕ ಇರಲೇಬೇಕು.

ಆಗ ಅದು ನಿಮ್ಮ ಮಾಹಿತಿಯನ್ನು ಆಪಲ್ ಜಾಲತಾಣದಲ್ಲಿ ಸೇರಿಸಿ ನಿಮ್ಮನ್ನು ಒಬ್ಬ ಅಧಿಕೃತ ಗ್ರಾಹಕ ಎಂದು ನೋಂದಾಯಿಸಿ ಕೊಳ್ಳುತ್ತದೆ. ಈ ಖಾತೆ ಎಲ್ಲ ಆಪಲ್ ತಂತ್ರಾಂಶಗಳ ಬಳಕೆಗೆ ಅದರಲ್ಲೂ ಮುಖ್ಯವಾಗಿ ಅವರ ತಂತ್ರಾಂಶ ಅಂಗಡಿ ಬಳಸಲು ಬೇಕೇ ಬೇಕು. ಆಪಲ್ ಸ್ಟೋರ್‌ನಲ್ಲಿ ಸುಮಾರು 7 ಲಕ್ಷ ಕಿರುತಂತ್ರಾಂಶಗಳಿವೆ (ಆಪ್‌ಗಳು).

ಇದಕ್ಕೆ ಫೋಟೋ, ಸಂಗೀತ, ಪುಸ್ತಕ, ಸಿನಿಮಾ ಇತ್ಯಾದಿ ವರ್ಗಾಯಿಸಲು ಐಟ್ಯೂನ್ ಎಂಬ ಕಿರಿಕಿರಿ ತಂತ್ರಾಂಶವನ್ನು ಆಪಲ್ ಕಂಪೆನಿಯವರೇ ನೀಡಿದ್ದಾರೆ. ಅದು ಏನು ಮಾಡಬೇಕು ಎಂದುಕೊಂಡಿದೆಯೇ ಅಂತೆಯೇ ಮಾಡುತ್ತದೆ. ಅದರ ವಿಧಾನ ಬಿಟ್ಟು ನಿಮಗಿಷ್ಟ ಬಂದಂತೆ ಅದು ಕೆಲಸ ಮಾಡುವುದಿಲ್ಲ. ಸಾಧನದ ಮೇಲೆ ಪೂರ್ಣ ನಿಯಂತ್ರಣ ನಿಮ್ಮ ಕೈಯಲ್ಲಿರುವುದಿಲ್ಲ.

ಆಪಲ್ ಕಂಪೆನಿಯವರು ಗ್ರಾಹಕರು ಏನೇನೆಲ್ಲ ಮಾಡಬಹುದು ಎಂದು ತೀರ್ಮಾನಿಸಿರುತ್ತಾರೋ ಆ ಕೆಲಸಗಳನ್ನು ಮಾತ್ರ ನೀವು ಈ ಸಾಧನ ಬಳಸಿ ಮಾಡಬಹುದು. ಉದಾಹರಣೆಗೆ ಇದನ್ನು ಒಂದು ಸರಳ ಯುಎಸ್‌ಬಿ ಡ್ರೈವ್ ಆಗಿ ಫೈಲುಗಳನ್ನು ಸಂಗ್ರಹಿಡಲು ಬಳಸಲು ಸಾಧ್ಯವಿಲ್ಲ. ಐಟ್ಯೂನ್ ಬಳಸಿಯೂ ನಿಮಗೆ ಬೇಕಾದ ಎಲ್ಲ ಫೈಲುಗಳ ವರ್ಗಾವಣೆ ಅಸಾಧ್ಯ.
 
ಐಟ್ಯೂನ್ ಒಪ್ಪುವ ಫೈಲುಗಳ ವರ್ಗಾವಣೆ ಮಾತ್ರ ಸಾಧ್ಯ. 7 ಲಕ್ಷ ಕಿರುತಂತ್ರಾಂಶಗಳೇನೋ ಲಭ್ಯವಿವೆ. ತುಂಬ ಉಪಯುಕ್ತ ಕಿರುತಂತ್ರಾಂಶಗಳಿಗೆ ಹಣ ಕೊಟ್ಟು ಕೊಳ್ಳಬೇಕು. ಕೆಲವು ಉಚಿತ ತಂತ್ರಾಂಶಗಳೂ ಲಭ್ಯವಿವೆ. ಒಟ್ಟಿನಲ್ಲಿ ಹೇಳುವುದಾದರೆ ಇದು ಶ್ರೀಮಂತರ ಹಾಗೂ ಟೆಕ್ಕಿಗಳಲ್ಲದವರ ಸಾಧನ.  

ಗ್ಯಾಜೆಟ್ ಸಲಹೆ
ಪಿ. ಲಕ್ಷ್ಮಣ ಅವರ ಪ್ರಶ್ನೆ: 15,000 ರೂಗೆ ಉತ್ತಮ ಕ್ಯಾಮರ ಬೇಕು. ಅದರಲ್ಲಿ ಎಸ್‌ಎಲ್‌ಆರ್ ಕ್ಯಾಮರಾದಲ್ಲಿ ಇರುವ ಎಲ್ಲ ಸವಲತ್ತುಗಳು ಇರಬೇಕು. ಯಾವುದು?
ಉ: ಎಸ್‌ಎಲ್‌ಆರ್ ಕ್ಯಾಮರಾದ ಎಲ್ಲ ಸೌಲಭ್ಯಗಳು ಇರಬೇಕು ಅಂದರೆ ರೂ.25 ಸಾವಿರಕ್ಕಿಂತ ಜಾಸ್ತಿ ನೀಡಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT