ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ವೈದ್ಯಕೀಯ ಸೇವೆ

Last Updated 17 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ವೈದ್ಯಕೀಯ ಸೇವಾ ವಲಯಕ್ಕೆ ಸರ್ಕಾರ ಬಜೆಟ್ ಮೂಲಕ ನೀಡುವ ಅನುದಾನದ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಕರ್ನಾಟಕ ಜ್ಞಾನ ಆಯೋಗ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಒದಗಿಸಲು ತಗಲುವ ಒಟ್ಟಾರೆ ವೆಚ್ಚದಲ್ಲಿ ಶೇ 66.8ರಷ್ಟನ್ನು ಚಿಕಿತ್ಸೆ ಪಡೆದುಕೊಳ್ಳಲು ಬರುವ ಜನರೇ ಭರಿಸುತ್ತಿದ್ದಾರೆ ಎಂಬ ಅಂಶ ಸಮೀಕ್ಷೆಯಿಂದ ಗೊತ್ತಾಗಿದೆ.

ಆದರೆ, ಸರ್ಕಾರ ವಸ್ತುಸ್ಥಿತಿಯನ್ನು ಮರೆಮಾಚಿ ತನ್ನ ಆಸ್ಪತ್ರೆಗಳಲ್ಲಿ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳ ಜನರೂ ಈಗ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ ಎಂಬ ಸಂಗತಿಯನ್ನೂ ಸಮೀಕ್ಷೆ ಬೆಳಕಿಗೆ ತಂದಿದೆ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವವರು ಹಣ ಖರ್ಚು ಮಾಡುವುದು ಅನಿವಾರ್ಯ ಎನ್ನುವ ಸ್ಥಿತಿ. ಹೀಗಾಗಿ ಸರ್ಕಾರದ ಆಸ್ಪತ್ರೆಗಳೂ ಈಗ ಖಾಸಗಿ ಆಸ್ಪತ್ರೆಗಳಂತಾಗಿವೆ. ಶುಲ್ಕ ಭರಿಸುವ ಶಕ್ತಿ ಇಲ್ಲದ ಬಡವರು ವೈದ್ಯಕೀಯ ಸೇವೆಯಿಂದ ವಂಚಿತರಾಗಿದ್ದಾರೆ. ಇಂಥ ಸ್ಥಿತಿ ರಾಜ್ಯ ಸರ್ಕಾರದ ಕರ್ತವ್ಯ ನಿರ್ವಹಣೆಯ ಲೋಪ. ಉಚಿತ ವೈದ್ಯಕೀಯ ಸೇವಾ ಯೋಜನೆಗಳನ್ನು ರೂಪಿಸಿದ್ದರೂ ಆಸ್ಪತ್ರೆಗಳಲ್ಲಿ ಔಷಧ ಮತ್ತಿತರ ಸೌಲಭ್ಯಗಳಿಲ್ಲದಿದ್ದರೆ ಈ ಯೋಜನೆಗಳಿಂದ ಪ್ರಯೋಜನವೇನು ಎಂದು ಕೇಳುವಂತಾಗಿದೆ.

ಆರ್ಥಿಕ ಉದಾರೀಕರಣದ ನಂತರ ಖಾಸಗಿ ವೈದ್ಯಕೀಯ ಸೇವಾ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ವಲಯದಲ್ಲಿ ಬಂಡವಾಳಕ್ಕೆ ಕೊರತೆ ಇಲ್ಲ. ಹಣವಂತರು ಖಾಸಗಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರಿಗೆ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ವೈದ್ಯಕೀಯ ಚಿಕಿತ್ಸೆ ಪಡೆಯುವ ಶಕ್ತಿ ಅವರಿಗೆ ಎಲ್ಲಿಂದ ಬರಬೇಕು? ಸರ್ಕಾರಿ ಆಸ್ಪತ್ರೆಗಳ ಆಧುನೀಕರಣಕ್ಕೆ  ಸರ್ಕಾರ ವಿಶ್ವಬ್ಯಾಂಕಿನಿಂದ ನೆರವು ಪಡೆದಿದೆ. ಅನೇಕ ಆಸ್ಪತ್ರೆಗಳು ದೊಡ್ಡ ಕಟ್ಟಡಗಳಲ್ಲಿದ್ದರೂ ಅಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ, ಆಧುನಿಕ ರೋಗಪತ್ತೆ ಉಪಕರಣಗಳು, ಔಷಧ ಇತ್ಯಾದಿಗಳಿಲ್ಲ.

ಇಪ್ಪತ್ತು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಶೇ.25ರಷ್ಟು ಮತ್ತು ನಗರ ಪ್ರದೇಶಗಳ ಶೇ.20 ಜನರಿಗೆ ವೈದ್ಯಕೀಯ ಸೇವೆಗಳ ವೆಚ್ಚ ಭರಿಸುವ ಶಕ್ತಿ ಇರಲಿಲ್ಲ. ಈಗ ಅಂಥವರ ಸಂಖ್ಯೆ ದುಪ್ಪಟ್ಟಾಗಿದೆ. ಈ ಪರಿಸ್ಥಿತಿಯಲ್ಲಿ ಅಗತ್ಯವಾದಷ್ಟು ಅನುದಾನ ಒದಗಿಸದಿದ್ದರೆ ಸರ್ಕಾರಿ ವೈದ್ಯಕೀಯ ಸೇವಾ ವಲಯ ಇನ್ನಷ್ಟು ದುರ್ಬಲವಾಗುತ್ತದೆ. ಕ್ಯಾನ್ಸರ್, ಕ್ಷಯ, ಹೆಪಟೈಟಿಸ್ ‘ಬಿ’ ನಂತಹ ರೋಗಗಳಿಗೆ ತುತ್ತಾಗುವ ಬಡವರಿಗೆ ಉಚಿತ ಚಿಕಿತ್ಸೆ ಸಿಗಲೇಬೇಕು. ಬಡ ವರ್ಗಗಳ ಬಾಣಂತಿಯರಿಗೆ ಪೌಷ್ಟಿಕ ಆಹಾರದ ಜತೆಗೆ ವೈದ್ಯಕೀಯ ಸೇವೆಯೂ ಅವಶ್ಯಕ. ಇಲ್ಲವಾದರೆ ಅಪೌಷ್ಟಿಕತೆಯಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚುತ್ತದೆ. ಆರೋಗ್ಯವಂತ ಮಗು ದೇಶದ ಆರೋಗ್ಯವಂತ ಪ್ರಜೆಯಾಗಲು ಸಾಧ್ಯ. ಎಲ್ಲರಿಗೂ ಆರೋಗ್ಯ ಸೇವೆ ನೀಡುವುದು ಸರ್ಕಾರದ ಕರ್ತವ್ಯ. ಈ ಹೊಣೆಯನ್ನು ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT