ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ಶಾಪಿಂಗ್ ಉತ್ಸವ ಪ್ರಾರಂಭ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ದುಬೈ ಶಾಪಿಂಗ್ ಫೆಸ್ಟಿವಲ್ ಎಂದರೆ ಕೊಳ್ಳುಬಾಕರಿಗೆ ಅಚ್ಚುಮೆಚ್ಚು. ಇದು ವಿಶ್ವದ ಅತ್ಯಂತ ಆಕರ್ಷಕ ಶಾಪಿಂಗ್ ಮೇಳ ಕೂಡ ಹೌದು. ಬರೋಬ್ಬರಿ 30 ದಿನ (ಫೆಬ್ರುವರಿ 5) ನಡೆಯುವ ಈ ಉತ್ಸವದಲ್ಲಿ ವೈವಿಧ್ಯಮಯ ಉತ್ಪನ್ನ ಹಾಗೂ ಸೇವೆಗಳು ಮನಸೂರೆಗೊಳ್ಳುತ್ತವೆ.

ನೆರೆಮನೆಯಂತಿರುವ ದುಬೈನಲ್ಲಿ ನಡೆಯುವ ಈ ಉತ್ಸವಕ್ಕೆ ಪ್ರಪಂಚದೆಲ್ಲೆಡೆಯಿಂದ ಜನ ಬರುತ್ತಾರೆ. ಉತ್ಸವದಲ್ಲಿ ಭಾರತೀಯ ಗ್ರಾಹಕರಿಗೆ ವಿಶೇಷ ಆತಿಥ್ಯ ನೀಡುವುದರಿಂದ ನಮ್ಮವರು ಸಹ ಈ ಉತ್ಸವದ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಇಲ್ಲಿ ಆರು ಸಾವಿರಕ್ಕೂ ಹೆಚ್ಚು ರೀಟೇಲ್ ಮಳಿಗೆಗಳು ಮತ್ತು 70ಕ್ಕೂ ಹೆಚ್ಚು ಶಾಪಿಂಗ್ ಮಾಲ್‌ಗಳು ಭಾಗವಹಿಸಲಿವೆ. ಗ್ರಾಹಕರಿಗೆ ಭರಪೂರ ಆಫರ್‌ಗಳ ಜತೆಗೆ ಪ್ರತಿ ವಸ್ತುವಿನ ಮೇಲೂ  ಶೇ 75ರವರೆಗೂ ರಿಯಾಯಿತಿ ದೊರೆಯಲಿದೆ.

`ದುಬೈ ಅಟ್ ಇಟ್ಸ್ ಬೆಸ್ಟ್~ ಎಂಬ ಕ್ಯಾಚಿ ಟ್ಯಾಗ್‌ಲೈನ್‌ನೊಂದಿಗೆ ಆರಂಭಗೊಂಡಿರುವ ಈ ಉತ್ಸವದಲ್ಲಿ 3.5ಮಿಲಿಯನ್ ಎಇಡಿ ನಗದು ಬಹುಮಾನಗಳು, 32 ಇನ್ಫಿನಿಟಿ ಕ್ಯೂಎಕ್ಸ್56 ಕಾರುಗಳು, 32 ನಿಸ್ಸಾನ್ ಕಾರ್‌ಗಳು ಮತ್ತು 19 ಕೆ.ಜಿ ಚಿನ್ನ ಗೆಲ್ಲುವ ಅವಕಾಶ ಇದೆ.

ಇದರೊಂದಿಗೆ ಡಿಎಸ್‌ಎಫ್ 2012ರ ಕೊನೆಯ ದಿನ ವಿಜೇತರು ಇನ್ಫಿನಿಟಿ ಕ್ಯೂಎಕ್ಸ್56 ಮತ್ತು ಒಂದು ಲಕ್ಷ ಎಇಡಿ ನಗದು ಪಡೆದು ಬರಬಹುದು. ಯುಎಇಯ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಡಿಎಸ್‌ಎಫ್ ಉತ್ಸವದ ಅಂಗವಾಗಿ ವಿಶೇಷ ಪ್ಯಾಕೇಜ್ ಕೂಡ ಪ್ರಕಟಿಸಿದೆ.

`ದುಬೈ ಶಾಪಿಂಗ್ ಫೆಸ್ಟಿವಲ್ ಎಂದರೇ ಬರೀ ಕೊಳ್ಳುವುದು, ಗೆಲ್ಲುವುದು ಮತ್ತು ಮನರಂಜನೆ ಮಾತ್ರವಲ್ಲ. ಉತ್ಸವದ ವೇಳೆ ಇಡೀ ನಗರದಾದ್ಯಂತ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.

ನೃತ್ಯ, ನಾಟಕ, ಜಾದೂ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಂಡ್ ಮತ್ತು ಕಲಾವಿದರು ನಡೆಸಿಕೊಡುತ್ತಾರೆ. ಜತೆಗೆ ದೇಸಿ ಕಲೆಗಳು ನಳನಳಿಸುತ್ತವೆ. ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಇಲ್ಲಿ ವಿಶ್ವ ದರ್ಜೆಯ ಶಾಪಿಂಗ್ ಅನುಭವದೊಂದಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು~ ಎನ್ನುತ್ತಾರೆ ಡಿಇಪಿಇನ ನಿರ್ದೇಶಕ ಫರ್ಹಾದ್ ಮೊಹಮ್ಮದ್ ಆಲಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT