ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತ ಮೆಟ್ಟಿ ನಿಲ್ಲುವ ಜೀವನ ಪ್ರೀತಿ...

ರಾಜ್ಯ ವಾರ್ತಾಪತ್ರ ಉತ್ತರಾಖಂಡ
Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಡೆಹ್ರಾಡೂನ್ (ಐಎಎನ್‌ಎಸ್):   ಜೂನ್‌ನಲ್ಲಿ ಉತ್ತರಾಖಂಡದಲ್ಲಿ ಸುರಿದ ಮಹಾ ಮಳೆ ಮತ್ತು ಪ್ರವಾಹದಲ್ಲಿ ತನ್ನ ಎರಡು ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ 27 ವರ್ಷದ ಜಮುನಾ ದೇವಿ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಎರಡು ಮಕ್ಕಳಾದ ನಂತರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಈಗ ಮತ್ತೆ ಮಕ್ಕಳನ್ನು ಪಡೆಯಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಯಸಿದ್ದಾರೆ.

ಈ ರೀತಿ ವಿಚಾರ ಮಾಡುತ್ತಿರುವವರು ಜಮುನಾ ದೇವಿ ಒಬ್ಬರೇ ಅಲ್ಲ. ಕೇದಾರನಾಥ್ ಕಣಿವೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರವಾಹ ಮತ್ತು ಮಹಾಮಳೆಗೆ ಮಕ್ಕಳನ್ನು ಕಳೆದುಕೊಂಡಿರುವ ಅನೇಕ ಮಹಿಳೆಯರು ಸಹ ಇದೇ ರೀತಿ ಚಿಂತನೆ ನಡೆಸಿದ್ದು, ಮತ್ತೆ ಮಕ್ಕಳನ್ನು ಪಡೆಯುವ ಬಗ್ಗೆ ವೈದ್ಯರ ಸಲಹೆ ಪಡೆಯುತ್ತಿದ್ದಾರೆ.

`ನನಗೆ ಐದು ಮತ್ತು ಏಳು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು, ಅವರು ಸ್ನೇಹಿತರ ಜತೆ ಆಟವಾಡುತ್ತಿದ್ದಾಗ ಮಹಾಮಳೆಯ ದುರಂತದಲ್ಲಿ ನಾಪತ್ತೆಯಾಗಿ ಒಂದು ವಾರದ ನಂತರ ಕಟ್ಟಡಗಳ ಅವಶೇಷದ ಅಡಿಯಲ್ಲಿ ಶವಗಳು ದೊರೆತವು. ಶವಗಳನ್ನು ನೋಡಿದ ಕೂಡಲೇ ಪ್ರಜ್ಞಾಹೀನಳಾಗಿದ್ದ ನಾನು  ಆ ಅರೆಪ್ರಜ್ಞಾವಸ್ಥೆಯಲ್ಲಿಯೇ ಅನೇಕ ದಿನಗಳನ್ನು ದೂಡಿದೆ' ಎಂದು ಜಮುನಾ ದೇವಿ ದುಃಖ ತೋಡಿಕೊಳ್ಳುತ್ತಾರೆ.

ಮತ್ತೆ ಮೂಡಿದ ಆಶಾಕಿರಣ: ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದವರು ಮತ್ತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಗರ್ಭ ಧರಿಸಲು ಸಾಧ್ಯವೆ ಎಂಬ ಪ್ರಶ್ನೆ ಮಕ್ಕಳನ್ನು ಕಳೆದುಕೊಂಡ ಮಹಿಳೆಯರನ್ನು ಕಾಡುತ್ತಿತ್ತು. ಪ್ರಸೂತಿ ತಜ್ಞರು ಮತ್ತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ಮಕ್ಕಳಾಗುವ ಸಾಧ್ಯತೆಗಳು ಇವೆ ಎಂದು ಹೇಳಿರುವುದರಿಂದ ಮಹಿಳೆಯರಲ್ಲಿ ಆಶಾಕಿರಣ ಮೂಡಿಸಿದೆ.

`ಪುನಃ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಮಕ್ಕಳಾಗಬಹುದೆ ಎಂಬುದರ ಬಗ್ಗೆ ಮೂವರು ವೈದ್ಯರ ಸಲಹೆ ಪಡೆದಿದ್ದೇನೆ, ಮತ್ತೆ ಗರ್ಭ ಧರಿಸಲು ಸಾಧ್ಯವೆಂದು ಮೂವರೂ ವೈದ್ಯರು ಹೇಳಿದ್ದಾರೆ. ಸತ್ತುಹೋದ ನನ್ನ ಮಕ್ಕಳನ್ನು  ಮರೆಯಲು ಸಾಧ್ಯವೇ ಇಲ್ಲ, ಆದರೂ ಭವಿಷ್ಯದ ಭದ್ರತೆ ದೃಷ್ಟಿಯಿಂದ ಮತ್ತೆ ಮಕ್ಕಳನ್ನು ಪಡೆಯುವುದು ಅನಿವಾರ್ಯವಾಗಿದೆ' ಎಂದು ದುಃಖಿಸುತ್ತ ಹೇಳುತ್ತಾರೆ.

ತೀವ್ರ ನಿರಾಶೆ: ಆದರೆ ಮೂರು ಮಕ್ಕಳನ್ನು ಕಳೆದುಕೊಂಡಿರುವ 40 ವರ್ಷದ ಪ್ರೇಮಾದೇವಿಗೆ ಮತ್ತೆ ಮಕ್ಕಳನ್ನು ಪಡೆಯುವ ಅದೃಷ್ಟವಿಲ್ಲ. ಅವರನ್ನು ಪರೀಕ್ಷಿಸಿದ ವೈದ್ಯರು ಮತ್ತೆ ಗರ್ಭಧರಿಸುವ ಸಾಧ್ಯತೆ ಇಲ್ಲ  ಎಂದು ಹೇಳಿರುವುದರಿಂದ ತೀವ್ರ ನಿರಾಸೆ ಹೊಂದಿದ್ದಾರೆ. ಮಳೆ ಮತ್ತು ಪ್ರವಾಹದ ಅನಾಹುತಕ್ಕೆ ಒಳಗಾಗಿರುವ ಕೇದಾರನಥ್ ಕಣಿವೆಯಲ್ಲಿ ಪುನರ್ವಸತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರ ಸಲಹೆ ಪಡೆಯುತ್ತಿರುವ ಮಹಿಳೆಯರು, ತಜ್ಞ ವೈದ್ಯರನ್ನು ಭೇಟಿ ಮಾಡಲು ಡೆಹ್ರಾಡೂನ್‌ಗೂ ಹೋಗುತ್ತಿದ್ದಾರೆ.

ಮಕ್ಕಳನ್ನು ಕಳೆದುಕೊಂಡವರಿಗೆ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತೆ ಸ್ವಯಂಸೇವಾ ಸಂಘಗಳ ಕಾರ್ಯಕರ್ತರು ಮನವೊಲಿಸುತ್ತಿದ್ದಾರೆ. ಆದರೆ ಬಹುತೇಕ ಮಹಿಳೆಯರು ಈ ಬಗ್ಗೆ ಆಸಕ್ತಿ ತೋರಿಸುತ್ತ್ಲ್ಲಿಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT