ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಕಾಣದ ರಸ್ತೆ: ತಪ್ಪದ ಪರದಾಟ

Last Updated 3 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಯಾದಗಿರಿ: ಮಳೆ ನಿಂತರೂ ಹನಿ ನಿಲ್ಲದು ಎನ್ನುವಂತೆ ಪ್ರವಾಹ ಬಂದು ಹೋಗಿ ಎರಡು ವರ್ಷ ಗತಿಸಿದರೂ, ಶಹಾಪುರ ತಾಲ್ಲೂಕಿನಲ್ಲಿರುವ ನದಿ ತೀರದ ಗ್ರಾಮಗಳು ಇನ್ನೂ ಚೇತರಿಕೆ ಆಗಿಲ್ಲ. ಕನಿಷ್ಠ ಸೌಲಭ್ಯಗಳೂ ಇಲ್ಲದೇ ಈ ಗ್ರಾಮಗಳ ಜನರು ಪರದಾಡುವಂತಾಗಿದೆ.

ಶಹಾಪುರ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ರಸ್ತೆ, ಚರಂಡಿಯಂತಹ ಮೂಲಸೌಲಭ್ಯಗಳೇ ಇಲ್ಲದಿರುವುದರಿಂದ ಗ್ರಾಮಸ್ಥರು, ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಐಕೂರು, ಅನಸುಗೂರು, ವಡಗೇರಾ, ಸೇರಿದಂತೆ ಬಹಳಷ್ಟು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇನ್ನೂ ದುರಸ್ತಿಯ ಭಾಗ್ಯ ಕಂಡಿಲ್ಲ. ತಾಲ್ಲೂಕು ಕೇಂದ್ರವಾದ ಶಹಾಪುರಕ್ಕಿಂತ, ಜಿಲ್ಲಾ ಕೇಂದ್ರವಾದ ಯಾದಗಿರಿಗೆ ಹತ್ತಿರದಲ್ಲಿಯೇ ಇರುವ ಈ ಗ್ರಾಮಗಳ ಜನರು, ಯಾದಗಿರಿಗೆ ಬರಬೇಕಾದರೆ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ.

ರಸ್ತೆಯಲ್ಲಿ ತೆಗ್ಗು, ಗುಂಡಿಗಳು ಬಿದ್ದಿರುವುದರಿಂದ ಈ ಭಾಗದಲ್ಲಿ ಓಡಾಡುವ ಬಹುತೇಕ ಬಸ್‌ಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಹೀಗಾಗಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ರಸ್ತೆಗಳಲ್ಲಿ ಬಸ್‌ಗಳ ಓಡಾಟವನ್ನೂ ಸ್ಥಗಿತಗೊಳಿಸುತ್ತದೆ. ಅನಿವಾರ್ಯವಾಗಿ ಜನರು ಟಂಟಂಗಳ ಆಸರೆ ಪಡೆಯಬೇಕಾಗಿದೆ. ಕಿರಿದಾಗಿರುವ, ತೆಗ್ಗು, ಗುಂಡಿಗಳಿಂದ ತುಂಬಿರುವ ಈ ರಸ್ತೆಯಲ್ಲಿ ಹೊಯ್ದಾಡುತ್ತ ಸಾಗುವ ಟಂಟಂಗಳು ಉರುಳಿ ಬಿದ್ದು ಅನಾಹುತ ಸಂಭವಿಸಿದ ಉದಾಹರಣೆಗಳೂ ಸಾಕಷ್ಟಿವೆ.

ಇನ್ನು ಆರೋಗ್ಯದ ಸಮಸ್ಯೆ ಎದುರಾದರಂತೂ ದೇವರೇ ಗತಿ. ತುರ್ತು ಹೆರಿಗೆ, ಮತ್ತಾವುದೇ ಕಾಯಿಲೆ ಉಲ್ಬಣಿಸಿದರೆ, ಇಲ್ಲಿನ ಜನರು ಟಂಟಂಗಳ ಮೂಲಕವೇ ಯಾದಗಿರಿಗೆ ಬರಬೇಕಾಗಿದೆ. ಹದಗೆಟ್ಟು ಹೋಗಿರುವ ರಸ್ತೆಯನ್ನು ದಾಟಿ ಬರುವಷ್ಟರಲ್ಲಿ ರೋಗಿಯ ಸ್ಥಿತಿ ಗಂಭೀರವಾಗುತ್ತದೆ ಎನ್ನುತ್ತಾರೆ ನೇತಾಜಿ ಯುವ ಸೇನೆ ಅಧ್ಯಕ್ಷ ನಿಂಗು ಜಡಿ.

ಬಸ್‌ನಿಲ್ದಾಣಗಳೂ ಇಲ್ಲ: ಇದೀಗ ಮಳೆಗಾಲ ಆರಂಭವಾಗಿದ್ದು, ಬಸ್‌ಗಾಗಿ ಕಾಯುತ್ತ ಕುಳಿತುಕೊಳ್ಳಬೇಕೆಂದರೆ ಒಳ್ಳೆಯ ಬಸ್‌ನಿಲ್ದಾಣಗಳೂ ಇಲ್ಲದಾಗಿದೆ. ಸೂರು ಇಲ್ಲದ, ಬಿದ್ದು ಹೋಗಿರುವ ಕಟ್ಟಡವೇ ಇಲ್ಲಿನ ಜನರಿಗೆ ಬಸ್‌ನಿಲ್ದಾಣವಾಗಿದೆ.

ಹೆಸರಿಗಷ್ಟೇ ಇದು ಬಸ್ ನಿಲ್ದಾಣ. ಆದರೆ ಇಲ್ಲಿಗೆ ಬರುವುದು ಕೇವಲ ಟಂಟಂ ಹಾಗೂ ಜೀಪುಗಳು ಮಾತ್ರ. ಬಿದ್ದು ಹೋದ ಕಟ್ಟಡದಲ್ಲಿ ಕಾದು ಕುಳಿತಾಗ ಅಪರೂಪಕ್ಕೊಮ್ಮೆ ಬಸ್‌ಗಳ ದರ್ಶನವಾದರೇ ಪುಣ್ಯ ಎಂದುಕೊಳ್ಳಬೇಕಷ್ಟೆ.

ಇನ್ನು ವಿದ್ಯಾರ್ಥಿಗಳು ಅಕ್ಕಪಕ್ಕದ ಊರಿನಲ್ಲಿರುವ ಶಾಲೆಗಳಿಗೆ ಹೋಗಬೇಕೆಂದರೂ ಸಾಕಷ್ಟು ತೊಂದರೆ ಅನುಭವಿಸಬೇಕಾಗಿದೆ. ಈ ಮಕ್ಕಳೂ ಟಂಟಂ ಹಾಗೂ ಜೀಪುಗಳಲ್ಲಿಯೇ ಸಂಚರಿಸಬೇಕಾಗಿದೆ. ಹೀಗಾಗಿ ಕೆಲವು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ಬಿಟ್ಟಿದ್ದಾರೆ ಎನ್ನುತ್ತಾರೆ ಇಲ್ಲಿನ ಜನರು.

ಹಳ್ಳ ಬಂದರೆ ರಸ್ತೆ ಬಂದ್:
ಐಕೂರಿನಿಂದ ಸುಮಾರು 30 ಹಳ್ಳಿಗಳ ಮೂಲಕ ಸಂಗಮ-ಹತ್ತಿಗುಡೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಇದಾಗಿದ್ದು, ಕುರಿಹಾಳದ ಬಳಿ ಹಳ್ಳ ಬಂದರಂತೂ ರಸ್ತೆ ಸಂಚಾರವೇ ಸ್ಥಗಿತಗೊಳ್ಳುತ್ತದೆ.

ಭೀಮಾ ನದಿಯಲ್ಲಿ ನೀರು ಹೆಚ್ಚಾದರೆ ಈ ಹಳ್ಳಕ್ಕೆ ನೀರು ಬರುತ್ತದೆ. ಹೀಗಾಗಿ ಹಳ್ಳ ತುಂಬಿ ಹರಿಯುವುದರಿಂದ ರಸ್ತೆಯ ತುಂಬೆಲ್ಲ ನೀರು ನಿಲ್ಲುತ್ತದೆ. ಇದರಿಂದಾಗಿ ಬಸ್, ಟಂಟಂ, ಜೀಪು, ದ್ವಿಚಕ್ರ ವಾಹನಗಳು ಸೇರಿದಂತೆ ಯಾವುದೇ ಸಂಚಾರ ವ್ಯವಸ್ಥೆಯೇ ಇಲ್ಲದಾಗುತ್ತದೆ.

ಕುರಿಹಾಳ ಬಳಿ ಈ ಹಳ್ಳಕ್ಕೆ ನಿರ್ಮಿಸಿರುವ ಸೇತುವೆಯನ್ನು ಎತ್ತರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಜನರ ಬವಣೆ ನೀಗಿಸುವಂತೆ ಅಧಿಕಾರಿಗಳನ್ನು ಕೇಳಿ ಸಾಕಾಗಿದೆ. ಅನಿವಾರ್ಯವಾಗಿ ಗ್ರಾಮಸ್ಥರ ಜೊತೆಗೂಡಿ ಪ್ರತಿಭಟನೆ ನಡೆಸುವುದೊಂದೇ ಉಳಿದ ದಾರಿ ಎಂದು ನೇತಾಜಿ ಯುವ ಸೇನೆಯ ಪದಾಧಿಕಾರಿಗಳಾದ ನಿಂಗು ಜಡಿ, ಗಂಗು ವಿಶ್ವಕರ್ಮ, ಬಸ್ಸುಗೌಡ ತೆಗ್ಗಿನಮನಿ, ದೇವು ಗೊರವರ, ಲಕ್ಷ್ಮಣ ಟೇಲರ್, ಗಿರಿಜಾ ಪಾಟೀಲ, ಸಂಗೀತಾ ಪಾಟೀಲ  ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT