ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಾಡಳಿತ ದರ್ಶನ: ಜೆಡಿಎಸ್

Last Updated 10 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ರಾಯಚೂರು: ನಗರಸಭೆ ಈಗಿನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು 14 ತಿಂಗಳಾಗಿದೆ. ಕೇವಲ ಮೂರು ಸಭೆ ಮಾತ್ರ ನಡೆಸಲಾಗಿದೆ. ನಗರಸಭೆ ಕಾಯ್ದೆ ಕಲಂ 47(1)ರ ಪ್ರಕಾರ ನಗರಸಭೆ ಆಡಳಿತ ಸುಲಭವಾಗಿ ನಡೆಯಲು ಪ್ರತಿ ತಿಂಗಳು ಕನಿಷ್ಠ ಒಂದು ಸಾಮಾನ್ಯ ಸಭೆ ನಡೆಸಬೇಕು.
 
ಹಿರಿಯ ಸದಸ್ಯ ಜಯಣ್ಣ ಅವರು ನಾಲ್ಕು ತಿಂಗಳಿಗೆ ಒಂದು ಸಭೆ ಕರೆದಿರುವುದನ್ನು ಯಾವ ಖಾಸಗಿ ಕಂಪೆನಿ ಕಾನೂನಿನಲ್ಲಿ ಇದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ನಗರಸಭೆ ಸದಸ್ಯ ಬಿ ತಿಮ್ಮಾರೆಡ್ಡಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರು ನಡೆಸಿದ ಮೂರು ಸಾಮಾನ್ಯ ಮಹಾಸಭೆಗಳಲ್ಲಿ ಅಜೆಂಡಾ ವಿಷಯಗಳಿಗಿಂತ ಅಧ್ಯಕ್ಷರ ನಿರೀಕ್ಷಣೆಯ ಮೇರೆಗೆ ತೆಗೆದುಕೊಂಡ ವಿಷಯಗಳನ್ನು ಸಭೆಯಲ್ಲಿ ಮಂಡಿಸದೇ ಹಾಗೆಯೇ ಅನುಮೋದನೆಗೊಂಡಿವೆ. ತಾವು ಜವಾಬ್ದಾರಿಯುತ ಸದಸ್ಯರಾಗಿ ಇಂಥ ನಿರ್ಣಯಗಳನ್ನು ಸಾಮಾನ್ಯ ಸಭೆಯಲ್ಲಿ ವಿರೋಧಿಸಿದ್ದರೂ ಬಹುಮತ ಇದೆ ಎಂಬ ಕಾರಣಕ್ಕೆ ಅನುಮೋದನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ನಗರಸಭೆ ಕಾಯ್ದೆ 43(2)ರ ಪ್ರಕಾರ ಯಾವುದೇ ತುರ್ತು ಸಂದರ್ಭದಲ್ಲಿ ತೆಗೆದುಕೊಂಡ ಕಾಮಗಾರಿಗಳನು ಮಾತ್ರ ಮುಂದಿನ ಸಭೆಯಲ್ಲಿ ಅನುಮೋದನೆ ಪಡೆಯುವ ಹಿನ್ನೆಲೆಯುಳ್ಳ ವಿಷಯಗಳನ್ನು ಮಾತ್ರ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಸಭೆಯಲ್ಲಿ ಮಂಡಿಸಬೇಕು ಎಂದು ಹೇಳುತ್ತದೆ. ಆದರೆ, ಇಲ್ಲಿ ನಗರಸಭೆ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ ಎಂದು ದೂರಿದರು.

ನಗರಸಭೆ ಸ್ಥಿರ ಆಸ್ತಿಗಳನ್ನು ಟೆಂಡರ್ ಮೂಲಕ ವಿಲೇವಾರಿ ಮಾಡಬೇಕು. ಆದರೆ ನಗರಸಭೆ ವ್ಯಾಪ್ತಿುಲ್ಲಿ ಬರುವ 60 ಹೊಸ ವಾಣಿಜ್ಯ ಮಳಿಗೆಗಳನ್ನು ಟೆಂಡರ್ ಅಥವಾ ಬಹಿರಂಗ ಹರಾಉ ಮಾಡದೇ ಜನವರಿ 27ರಂದು ನಡೆದ ಸಭೆಯ ನಿರ್ಣಯ ಸಂಖ್ಯೆ 107ರ ಅಡಿಯಲ್ಲಿ ಸಭೆಯಲ್ಲಿ ಗಮನಕ್ಕೆ ಬಾರದೇ ಪುರಸಭೆ ಅಧಿನಿಯಮ ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ವಿಲೇವಾರಿ ಮಾಡಲಾಗಿದೆ. ನಗರಸಭೆ ಪೌರಾಯುಕ್ತರು ಶಾಮೀಲಾಗಿದ್ದಾರೆ ಆರೋಪಿಸಿದರು.

ನಗರದ ಸ್ವಚ್ಛತೆ ಕಾರ್ಯವನ್ನು ಮೂವರು ಗುತ್ತಿಗೆದಾರರಿಗೆ ನೀಡಿರುವುದಾಗಿ ನಗರಸಭೆ ಸದಸ್ಯ ಜಯಣ್ಣ ಅವರು ಹೇಳಿದ್ದಾರೆ. ಆದರೆ ನಗರದಲ್ಲಿ ನಗಸಭೆಯಿಂದ ಸ್ವಚ್ಛತೆ ಕಾರ್ಯ ನಡೆದಿದೆಯೇ ಎಂಬುದನ್ನು ನಗರದ ಸ್ಥಿತಿಯೇ ಹೇಳುತ್ತದೆ. ಈ ಎಲ್ಲ ವಿಷಯಗಳು ನಗರಸಭೆ ಯಾವ ಖಾಸಗಿ ಕಂಪೆನಿ ನಿಯಮದಡಿ ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆ. ನಗರಸಭೆ ಆಡಳಿತ ಜನರ ಹಿತದೃಷ್ಟಿಯಿಂದ ನೆಲಕಚ್ಚಿದ್ದರಿಂದ ಬೇಸತ್ತು ತಾವು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದರು.

ಜೆಡಿಎಸ್ ವಿರುಪಾಕ್ಷಿ ಆರೋಪ: ಹೆಚ್ಚಿನ ಸದಸ್ಯ ಬಲ, ಬಹುಮತದ ಕಾರಣದಿಂದ ನಗರಸಭೆ ಆಡಳಿತವನ್ನು ಕಾಂಗ್ರೆಸ್ ವಹಿಸಿಕೊಂಡಿದೆ. ನಗರ ಅಭಿವೃದ್ಧಿ ಮತ್ತು ಜನತೆಯ ಹಿತಾಸಕ್ತಿಗೆ ಜೆಡಿಎಸ್ ಪಕ್ಷವು ತನ್ನ ಸದಸ್ಯರ ಬೆಂಬಲ ಕೊಡಿಸಿತ್ತು. ಆ ಎಲ್ಲ ನಿರೀಕ್ಷೆ ಹುಸಿಯಾಗಿದೆ ಎಂದು ಜೆಡಿಎಸ್ ವಕ್ತಾರ ವಿರುಪಾಕ್ಷಿ ಹೇಳಿದರು.

ಸೋಮವಾರವೇ ಜೆಡಿಎಸ್ ತನ್ನ ಎಲ್ಲ ಸದಸ್ಯರಿಂದ ಜಿಲ್ಲಾಧಿಕಾರಿಗೆ ರಾಜೀನಾಮೆ ಕೊಡಿಸಲಿದೆ. ಈಗಾಗಲೇ ಎಲ್ಲ ಸದಸ್ಯರಿಗೆ ರಾಜೀನಾಮೆ ಸಲ್ಲಿಸಲು ಪಕ್ಷ ಸೂಚಿಸಿದೆ. ಪಕ್ಷದ ಸೂಚನೆಗೆ ವಿರುದ್ಧವಾಗಿ ನಡೆದರೆ ಸಂಬಂಧಪಟ್ಟವರು ಪಕ್ಷದ ಕೈಗೊಳ್ಳುವ ಶಿಸ್ತಿನ ಕ್ರಮಕ್ಕೆ ಗುರಿಯಾಗುವರು ಎಂದರು.

ನಗರಸಭೆಯ ಸದಸ್ಯರಾಗಿ ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಅನುಭವ ಹೊಂದಿರುವ ಹಿರಿಯ ಸದಸ್ಯ ಜಯಣ್ಣ ಅವರು ನಗರಸಭೆ ಮೂಲಕ ನಡೆಸಿದ ಅಕ್ರಮಗಳನ್ನು ಜೆಡಿಎಸ್ ಬಯಲು ಮಾಡಲಿದೆ. ಯಾವ ಬಡಾವಣೆಯಲ್ಲಿ ಎಷ್ಟು ಮನೆಗೆ ಓಎಲ್ ನಂಬರ್ ನೀಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಜೆಡಿಎಸ್ ಹಂತ ಹಂತವಾಗಿ ಬಹಿರಂಗ ಪಡಿಸಲಿದೆ ಎಂದರು.

ಪೆಟ್ಲಾಬುರ್ಜ್ ಬಡಾವಣೆಯಲ್ಲಿ ನಗರಸಭೆಗೆ ಸೇರಿದ 6 ಮಳಿಗೆಗಳಿವೆ. ಈ ಬಗ್ಗೆ ನಗರಸಭೆಯಲ್ಲಿ ದಾಖಲೆ ವಾಣಿಜ್ಯ ಸಂಕೀರ್ಣ ಪಟ್ಟಿಯಲ್ಲಿ ಇಲ್ಲ. ಈ ಮಳಿಗೆಗಳಲ್ಲಿ ಹಿರಿಯ ಸದಸ್ಯ ಜಯಣ್ಣ ಅವರು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅಲ್ಲದೇ ನಗರಸಭೆ 60 ವಾಣಿಜ್ಯ ಮಳಿಗೆಗಳಿಗೆ ಬಹಿರಂಗ ಟೆಂಡರ್ ಕರೆಯದೇ ಹಂಚಿಕೆ ಮಾಡಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಶೇ 22;75 ಯೋಜನೆ ಅನುದಾನವನ್ನು ಕಳೆದ ಮೂರು ವರ್ಷದಲ್ಲಿ ಬಳಕೆ ಮಾಡಿಲ್ಲ.  ಕಾಂಗ್ರೆಸ್ ಆಡಳಿತಕ್ಕೆ ಬಂದು 14 ತಿಂಗಳಾಗಿದೆ ಈ ಅನುದಾನ ಬಳಕೆ ಮಾಡುವ ಆಸಕ್ತಿ ಅದೇ ಸಮುದಾಯದ ಹಿರಿಯ ಸದಸ್ಯ ಜಯಣ್ಣ ಹಾಗೂ ನಗರಸಭೆ ಕಾಂಗ್ರೆಸ್ ಆಡಳಿತಕ್ಕೆ ಸಲಹೆ ಸೂಚನೆ ನೀಡುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ ಅವರಿಗೆ ಯಾಕೆ ಬರಲಿಲ್ಲ. ತಮ್ಮ ಸಮುದಾಯದ ಬಗ್ಗೆ ಇರುವ ಕಾಳಜಿ ಎಷ್ಟು ಎಂಬುದನ್ನು ಇದು ತೋರಿಸುತ್ತದೆ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಶಿವಶಂಕರ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಯಕುಂಪಿ ಕೃಷ್ಣಮೂರ್ತಿ, ಚಂದ್ರಶೇಖರರೆಡ್ಡಿ, ನರಸಿಂಹಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT