ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಾಸೆಯಿಂದ ಮಾನವ ಹಕ್ಕುಗಳ ಉಲ್ಲಂಘನೆ

Last Updated 11 ಡಿಸೆಂಬರ್ 2013, 9:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಾನವನ ಅತಿಯಾದ ದುರಾಸೆಯಿಂದಲೇ ಪ್ರಸ್ತುತ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಳವಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಶ್ರೀನಿವಾಸ್ ಹರೀಶ ಕುಮಾರ್ ವಿಷಾದಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಕ್ಷೇತ್ರಗಳಲ್ಲಿ ಇಂದು ಸೇವಾ ಮನೋಭಾವ ಕಣ್ಮರೆಯಾಗುತ್ತಿದೆ. ಕೆಲ ಸೂಪರ್ ಮತ್ತು ಮಲ್ಟಿ ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆ ನಡೆಸುವವರು ಸೇವಾ ಮನೋಭಾವದಿಂದ ದೂರವಿದ್ದು, ತಮ್ಮ ವೃತ್ತಿಯನ್ನು ವ್ಯವಹಾರ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಬಹುತೇಕ ವೈದ್ಯರು ತಮ್ಮ ಸೇವೆ ಮರೆತು ವ್ಯಾಪಾರದ ದೃಷ್ಠಿಯಿಂದ ಜನರನ್ನು ವಂಚಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾನವನ ಹುಟ್ಟಿನ ಆರಂಭದಿಂದಲೇ ಮಾನವ ಹಕ್ಕುಗಳು ಪ್ರಾರಂಭವಾಗಿವೆ. ಆದರೆ, ಮನುಷ್ಯನಿಗೆ ಸ್ವಾರ್ಥ ಹೆಚ್ಚುತ್ತಿವೆ. ಹಕ್ಕುಗಳನ್ನು ಕಿತ್ತುಕೊಂಡಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದರು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೂಲ ಹಾಗೂ ನೈಸರ್ಗಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಿಂದ ಇಂದು ಬಡ ಮಕ್ಕಳು ವಂಚಿತರಾಗುತ್ತಿದ್ದಾರೆ. ಸರ್ಕಾರ ಬಡಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ 25ರಷ್ಟು ಮೀಸಲಾತಿ ನೀಡಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ವಂಚಿತರ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ.ಆರ್.ಜಿ. ಚಿದಾನಂದ ಮಾತನಾಡಿ, ಜಾಗತೀಕರಣದಿಂದ ಮಾನವ ಹಕ್ಕುಗಳ ಕುರಿತಾಗಿ ಮರು ವ್ಯಾಖ್ಯಾನದ ಅವಶ್ಯಕತೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಕಾರ ಜೀವಂತವಾಗಿದೆ. ಆದರೆ, ವಿದ್ಯಾವಂತರಿಂದಲೇ ಇಂದು ನಗರ ಪ್ರದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ತಿಳಿಸಿದರು.

ಇಂದು ಶಿಶು ಮರಣ ಪ್ರಕರಣ ತಗ್ಗಿರಬಹುದು. ಆದರೆ, ಗರ್ಭಿಣಿಯರಿಗೆ  ಪೌಷ್ಠಿಕಾಂಶದ ಕೊರತೆಯಿಂದ ಮಕ್ಕಳು ಜೀವಂತ ಶವವಾಗಿ ಹುಟ್ಟುತ್ತಿವೆ ಎಂದು ಹೇಳಿದರು.

ವಿದ್ಯಾರ್ಥಿನಿ ಮೋನಿಕಾ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳು ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ ಡಾ.ಸವಿತಾ ಹಾಲಪ್ಪನವರ್‌ ಪ್ರಕರಣ ಅದಕ್ಕೆ ಉತ್ತಮ ಉದಾಹರಣೆ. ರಾಜಕೀಯ ರಂಗದಲ್ಲಿ ರಾಜಕೀಯ ವ್ಯಕ್ತಿಗಳು ಮತ್ತೊಬ್ಬರ ದೂರವಾಣಿ ಕರೆಗಳನ್ನು ಕದ್ದಾಲಿಸುವ ಮೂಲಕ ದೊಡ್ಡ ಸುದ್ದಿ ಮಾಡುತ್ತಿದ್ದಾರೆ ಎಂದರು.
ಹಿರಿಯ ವಕೀಲ ಎಚ್.ಎಂ.ನೇಮತ್‌ಉಲ್ಲಾ ಉಪನ್ಯಾಸ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್‌ಪುರಿ, ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಜಿ.ಕೃಷ್ಣಮೂರ್ತಿ, ಕಾರ್ಯದರ್ಶಿ ವಿ.ಅಶೋಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT