ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರುಪಯೋಗದ ಮೊತ್ತ 15.90 ಕೋಟಿಗೂ ಅಧಿಕ

Last Updated 20 ಜುಲೈ 2013, 8:28 IST
ಅಕ್ಷರ ಗಾತ್ರ

ರಾಮನಗರ: ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಆರ್‌ಸಿಯುಡಿಎ) ದುರುಪಯೋಗ ಆಗಿರುವುದು ರೂ ಕೇವಲ 9.90 ಕೋಟಿ ಮಾತ್ರವಲ್ಲ. ಬದಲಿಗೆ ಒಟ್ಟು ರೂ 15.90 ಕೋಟಿಗೂ ಹೆಚ್ಚು ದುರುಪಯೋಗ ಆಗಿದೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ರಾಮನಗರದ ವಿಜಯ ಬ್ಯಾಂಕಿನಲ್ಲಿ ಪ್ರಾಧಿಕಾರದ ಖಾತೆಯಲ್ಲಿ ಇದ್ದ 9.90 ಕೋಟಿ ರೂಪಾಯಿಗಳನ್ನು ಮಂಡ್ಯದ ಇಂಡಿಯನ್ ಬ್ಯಾಂಕ್ ಮೂಲಕ ಪಡೆದು ದುರುಪಯೋಗ ಪಡಿಸಿಕೊಂಡಿದ್ದ ಹಗರಣದ ವ್ಯಾಪ್ತಿ ಈಗ ಇನ್ನಷ್ಟು ವಿಸ್ತರಣೆಯಾದಂತಾಗಿದೆ. ಇಲ್ಲಿಯವರೆಗೆ ನಡೆದಿರುವ ತನಿಖೆಯ ಪ್ರಕಾರ ರೂ 15.90 ಕೋಟಿಯನ್ನು ವಂಚಕರು ವಿವಿಧ ಬ್ಯಾಂಕ್‌ಗಳ ಮೂಲಕ ದುರುಪಯೋಗ ಪಡಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ತನಿಖಾಧಿಕಾರಿಯೂ ಆದ ಡಿಎಸ್‌ಪಿ ಎನ್.ಎಂ.ರಾಮಲಿಂಗಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಆರು ಕೋಟಿ ದುರುಪಯೋಗ: ಮಂಡ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬ್ಯಾಂಕ್ ಆಫ್ ಬರೋಡ ಮತ್ತು ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್‌ಗಳ ಮೂಲಕ ಈ ವಂಚಕರ ಜಾಲ ವ್ಯವಸ್ಥಿತವಾಗಿ ಆರ್‌ಸಿಯುಡಿಎ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ. ಈ ಬ್ಯಾಂಕ್‌ಗಳ ಮೂಲಕ ಅಂದಾಜು ಆರು ಕೋಟಿ ರೂಪಾಯಿಯನ್ನು ಈ ವಂಚಕರು ದುರುಪಯೋಗ ಪಡಿಸಿಕೊಂಡಿರುವುದು ಈವರೆಗಿನ ತನಿಖೆಯಿಂದ ಗೊತ್ತಾಗಿದ್ದು, ಇದರ ಆಳ ಇನ್ನೂ ಎಷ್ಟಿದೆ ಎಂಬುದು ಸಮಗ್ರ ತನಿಖೆಯಿಂದ ಗೊತ್ತಾಗುತ್ತದೆ ಎಂದು ಹೇಳಿದರು.

`ಮುಡಾ' ಹಗರಣದಲ್ಲಿ ಬಂಧಿತರಾಗಿರುವ ನಾಗಲಿಂಗಸ್ವಾಮಿ, ಆನಂದ್ ಅವರೇ ಆರ್‌ಸಿಯುಡಿಎ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಇದರಲ್ಲಿ ನಾಗಲಿಂಗ ಸ್ವಾಮಿ ಪಾತ್ರ ಹೆಚ್ಚಿದೆ. ಆತ ಪ್ರಾಧಿಕಾರದ ಆಯುಕ್ತರನ್ನು ಸಂಪರ್ಕಿಸಿ ಹಣವನ್ನು ಮಂಡ್ಯದ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಪ್ರಚೋದಿಸಿದ್ದಾನೆ. ಈ ಪ್ರಕರಣದಲ್ಲಿ ಆಯುಕ್ತರು ಯಾವ ರೀತಿಯ ಲೋಪಗಳನ್ನು ಮಾಡಿದ್ದಾರೆ ? ಗೊತ್ತಿದ್ದು ತಪ್ಪು ಮಾಡಿದ್ದಾರೋ ? ಗೊತ್ತಿಲ್ಲದೆಯೇ ಮಾಡಿದ್ದಾರೋ ? ಹಣದ ಆಮಿಷಕ್ಕೆ ಬಲಿಯಾಗಿ ಇಂತಹ ಕೃತ್ಯ ಎಸಗಿದ್ದಾರೋ? ಎಂಬುದು ತನಿಖೆಯಿಂದಷ್ಟೇ ಗೊತ್ತಾಗುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.

ವಂಚನೆಯ ರೂವಾರಿಗಳು: ಮಂಡ್ಯದ ಇಂಡಿಯನ್ ಬ್ಯಾಂಕಿನಲ್ಲಿ ಪರಿಶೀಲನೆ ನಡೆಸಿದಾಗ, ಅಲ್ಲಿ ಆರ್‌ಸಿಯುಡಿಎಯ ಬ್ಯಾಂಕ್ ಖಾತೆಯೇ ಇಲ್ಲದಿರುವುದು ಗೊತ್ತಾಗಿದೆ ! ಆದರೆ ಪ್ರಾಧಿಕಾರದ ಹಣ ರಾಮನಗರ ವಿಜಯ ಬ್ಯಾಂಕ್ ಮೂಲಕ ಈ ಇಂಡಿಯನ್ ಬ್ಯಾಂಕಿನ ಮೂರು ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಣ ನಾಗಲಿಂಗಸ್ವಾಮಿ, ಆನಂದ್, ಶೇಖರ್ ಎಂಬುವರ ಖಾತೆಗಳಲ್ಲಿ ಜಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಾಧಿಕಾರದ ವಿಜಯ ಬ್ಯಾಂಕಿನ ಖಾತೆಯಿಂದ ಹಣವನ್ನು ಮಂಡ್ಯದ ಇಂಡಿಯನ್ ಬ್ಯಾಂಕ್‌ಗೆ ವರ್ಗಾಯಿಸಲು ನೀಡಲಾಗಿರುವ ಚೆಕ್‌ಗಳನ್ನು ಪರಿಶೀಲಿಸಿದಾಗ ಕೆಲವೊಂದು ಅಚ್ಚರಿಯ ಅಂಶಗಳು ಗೊತ್ತಾಗಿವೆ. ಚೆಕ್‌ನಲ್ಲಿ ಪ್ರಾರಂಭದಲ್ಲಿ ಕೇವಲ ಇಂಡಿಯನ್ ಬ್ಯಾಂಕ್‌ಗೆ ಎಂದು ನಮೂದಿಸಿ ಸ್ವಲ್ಪ ಜಾಗವನ್ನು ಖಾಲಿ ಬಿಡಲಾಗಿದೆ. ಆ ನಂತರ ಆ ಬಿಟ್ಟ ಸ್ಥಳ ಭರ್ತಿಯಾಗಿದೆ. ಹೀಗೆ ಭರ್ತಿಯಾಗಿರುವ ಜಾಗದಲ್ಲಿ ಇಂಡಿಯನ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಬೇನಾಮಿ ವ್ಯಕ್ತಿಗಳ ಖಾತೆ ಸಂಖ್ಯೆಯನ್ನು ನಮೂದಿಸಲಾಗಿದೆ. ಬ್ಯಾಂಕ್ ಅಕೌಂಟ್ ಪೇ ಆಗಿದ್ದರಿಂದ ಹಾಗೂ ಅದರಲ್ಲಿ ಖಾತೆಯ ಸಂಖ್ಯೆಯೂ ನಮೂದಾಗಿದ್ದರಿಂದ ಅದು ನೇರವಾಗಿ ಬೇನಾಮಿ ವ್ಯಕ್ತಿಯ ಖಾತೆಗೆ ಜಮೆ ಆಗಿದೆ ಎಂದು ಅವರು ವಿವರಿಸಿದರು.

ಇದೇ ರೀತಿ ಇನ್ನೂ ಎರಡು-ಮೂರು ಬ್ಯಾಂಕ್‌ಗಳ ಹೆಸರಿನಲ್ಲಿ ಪ್ರಾಧಿಕಾರದ ಹಣವನ್ನು ಈ ವಂಚಕರು ದುರುಪಯೋಗ ಪಡಿಸಿಕೊಂಡಿದ್ದಾರೆ.ಈಗಾಗಲೇ ರಾಮನಗರದ ವಿಜಯ ಬ್ಯಾಂಕ್, ಮಂಡ್ಯದ ಇಂಡಿಯನ್ ಬ್ಯಾಂಕ್‌ನಿಂದ ಕೆಲ ದಾಖಲೆಗಳನ್ನು ತರಿಸಿಕೊಳ್ಳಲಾಗಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ. ಮಂಡ್ಯದ ಇತರ ಮೂರು-ನಾಲ್ಕು ಬ್ಯಾಂಕ್‌ನಿಂದಲೂ ದಾಖಲೆಗಳನ್ನು ಪಡೆದು ಪರಿಶೀಲಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

`ಪ್ರಾಧಿಕಾರದ ಹಣ ದುರುಪಯೋಗ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸಲಾಗಿದೆ. ಈ ದೂರು ಕೇವಲ 9.90 ಕೋಟಿ ದುರುಪಯೋಗಕ್ಕೆ ಸೀಮಿತ ಆಗುವುದಿಲ್ಲ. ಪೊಲೀಸರು ತನಿಖೆ ವೇಳೆಯಲ್ಲಿ ದೊರೆಯುವ ಮಾಹಿತಿ ಆಧರಿಸಿ ಸಮಗ್ರ ತನಿಖೆ ನಡೆಸುತ್ತಾರೆ. ಇದಕ್ಕಾಗಿ ಮತ್ತೊಂದು ದೂರು ದಾಖಲಿಸುವ ಅಗತ್ಯ ಇಲ್ಲ' ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ವೈಶಾಲಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT