ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಮ್ಮ, ಕಾಳಮ್ಮ ಜಾತ್ರೆಗೆ ಊರೇ ಸಜ್ಜು

Last Updated 15 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಯಲ್ಲಾಪುರ: ರಾಜ್ಯದಲ್ಲಿಯೇ ಅತ್ಯಂತ ವಿಶೇಷವಾದ ದುರ್ಗಮ್ಮ ಮತ್ತು ಕಾಳಮ್ಮ ಜಾತ್ರೆಗೆ ಪಟ್ಟಣ ಸಜ್ಜಾಗಿದೆ. ಮೂರು ವರ್ಷಗಳಿಗೊಮ್ಮೆ ಈ ಜಾತ್ರೆ ನಡೆಯುವುದು ವಿಶೇಷವಾಗಿದೆ.

ಅನೇಕ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳನ್ನೊಳಗೊಂಡ ಹಸಿರು ಹಾಸಿನ ಈ ತಾಲ್ಲೂಕಿನ ಶಕ್ತಿ ಪೀಠವಾಗಿ, ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಗ್ರಾಮದ ರಕ್ಷಕಿಯರಾಗಿ ಕಾಪಾಡುತ್ತಿರುವ ಜಾಗೃತ ಕೇಂದ್ರವಾಗಿ ಯಲ್ಲಾಪುರದ ಗ್ರಾಮ ದೇವಿಗಳಾದ ಕಾಳಮ್ಮ ದುರ್ಗಮ್ಮ ಅಕ್ಕ ತಂಗಿ ದೇವಿಯರು ಆರು ಶತಮಾನಗಳ ಕಾಲ ದಿಂದ ತನ್ನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಈ ಬಾರಿ ಇದೇ 15 ರಿಂದ 23 ರವರೆಗೆ  ಸಡಗರ, ಸಂಭ್ರಮದಿಂದ ನಡೆಯಲಿದೆ.

ಹಿನ್ನೆಲೆ: ಸುಮಾರು 600 ವರ್ಷಗಳ ಹಿಂದೆ ಪಟ್ಟಣದ ವಾಯುವ್ಯ ದಿಕ್ಕಿನ ಕುಗ್ರಾಮವಾದ  ನಾರಾಯಣಗೆರೆಯ ಹೊಲದಲ್ಲಿ ಶೂದ್ರ ರೈತನೊಬ್ಬನು ಹೊಲ ಉಳುಮೆ ಮಾಡುತ್ತಿರುವ ಸಂದರ್ಭದಲ್ಲಿ ಎರಡು ಸವಕಲು ಮೂರ್ತಿಗಳು ಲಭಿಸಿದವು. ಆ ಮೂರ್ತಿ ಗಳನ್ನು ಅಂದಿನ ಗ್ರಾಮಾಧಿಕಾರಿಗಳಿಗೆ ಒಪ್ಪಿಸಲಾಯಿತು. ತಮ್ಮ ಗ್ರಾಮ ದೇವತೆ ಯಾಗಿ ಈ ಅಕ್ಕ ತಂಗಿಯರು ನೆಲೆಸಲಿ ಎಂದು ಪಟ್ಟಣದ ಗ್ರಾಮಸ್ಥರು ನೂತನ ವಾಗಿ ಶಿವಣಿ ಕಟ್ಟಿಗೆಯಲ್ಲಿ ಮೂರ್ತಿ ನಿರ್ಮಿಸಿ, ಪ್ರತಿಷ್ಠಾಪಿಸಿ ಅನ್ನ ನೈವೇದ್ಯ ದೊಂದಿಗೆ ಪೂಜೆಗೈದರು ಎಂಬುದು ಜನಜನಿತವಾದ ಕಥೆಯಾಗಿದೆ.

ವಿಶಿಷ್ಟ ಜಾತ್ರಾ ಉತ್ಸವ:
ಕರ್ನಾ ಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಯಲ್ಲಾ ಪುರ ಗ್ರಾಮ ದೇವಿಯರ ಜಾತ್ರಾ ಉತ್ಸವ ಅನೇಕ ವಿಶಿಷ್ಟ ಆಚರಣೆಗಳನ್ನು ಒಳಗೊಂಡಿದೆ.

ಜಾತ್ರೆ ನಡೆಯುವ ಮೊದಲ ಮೂರು ಮಂಗಳವಾರ `ಹೊರ ಮಂಗಳವಾರ~ ವೆಂಬ ಆಚರಣೆ ವಿಶಿಷ್ಠವಾಗಿದ್ದು ಈ ಸಂದರ್ಭದಲ್ಲಿ ಭಕ್ತರ ಮನೆಗೆ ದೇವಿ ಭೇಟಿ ನೀಡುತ್ತಾಳೆ ಎಂಬ  ಸಂಪ್ರದಾಯ ದಂತೆ ಮನೆಯನ್ನು ಸಾರಿಸಿ ರಂಗವಲ್ಲಿ ಇಟ್ಟು, ದೀಪ ಹಚ್ಚಿ ನೈವೇದ್ಯ, ನೀರ ನ್ನಿಟ್ಟು, ಮನೆಗೆ ಬೀಗ ಹಾಕಿ ಸಂಜೆಯ ವರೆಗೆ ಹೊರಗೇ ಉಳಿಯುತ್ತಾರೆ.

ಜಾತ್ರೆಯಂದು ಎರಡೂ ದೇವಿಯರು ಒಟ್ಟಾಗಿ ಮೇಲು-ಕೀಳೆಂಬ ಭೇದ ಭಾವವಿಲ್ಲದೇ ಭಕ್ತರ ತಲೆಯ ಮೇಲೆ  ಜಾತ್ರಾ ಗದ್ದುಗೆಯಾದ ದೇವಿ ಮೈದಾನಕ್ಕೆ ತೆರಳುವುದು, 9 ದಿನಗಳ ಭಕ್ತರ ಸೇವೆ ಸ್ವೀಕರಿಸಿ ಮುಂಡಗೋಡ ರಸ್ತೆಯಲ್ಲಿರುವ ವಿಸರ್ಜನಾ ಮಂಟಪಕ್ಕೆ ಕೂಡ ಭಕ್ತರ ತಲೆಯ ಮೇಲೆ ಹೊತ್ತು ಊರಿನ ಪ್ರದಕ್ಷಿಣೆ ಹಾಕುತ್ತ, ಅತ್ತಿಂದಿತ್ತ ತಿರುಗುತ್ತ ಅಕ್ಕ ತಂಗಿಯರು ಸಂಚರಿ ಸುವ ದೃಶ್ಯ ಭಕ್ತರನ್ನು ಭಾವನಾ ಲೋಕಕ್ಕೆ ಕರೆದೊಯ್ಯತ್ತದೆ. ಯಾವುದೇ ಭೇದ ಭಾವವಿಲ್ಲದೇ ಎಲ್ಲ ಭಕ್ತರಿಗೆ ದೇವಿಯರನ್ನು ತಲೆಯ ಮೇಲೆ ಹೊರುವ ಭಾಗ್ಯ ಲಭಿಸುವುದು ಯಲ್ಲಾಪುರ ಜಾತ್ರೆಯಲ್ಲಿ ಮಾತ್ರ.

ಜಾತ್ರೆಯ ವಿಧಿ ವಿಧಾನಗಳು:
ಕೊನೆಯ ಹೊರ ಮಂಗಳವಾರ ಸಂಪನ್ನಗೊಂಡ ದಿನ ರಾತ್ರಿ ದೇವಿಯರಿಗೆ ಅಂಕೆ ಹಾಕುವ ಮೂಲಕ ಅಧಿಕೃತವಾಗಿ ಜಾತ್ರಾ ವಿಧಾನಗಳು ಆರಂಭವಾಗು ತ್ತವೆ. ದೇವಿಯರನ್ನು ಈ ಸಂದರ್ಭದಲ್ಲಿ ಕಳಸದಲ್ಲಿ ಶಕ್ತಿಯನ್ನು ತುಂಬಿ ದೇವಿ ಮೂರ್ತಿಗಳನ್ನು ಶುಚಿಗೊಳಿಸಿ , ಹೊಸದಾಗಿ ಬಣ್ಣ ಬಳಿಯಲಾಗುತ್ತದೆ.

ಜಾತ್ರೆಯ ಮೊದಲ ದಿನ ಮಂಗಳವಾರ ದಂದು ಪುನರ್ ಪ್ರತಿಷ್ಠಾಪಿಸಿ ದೇವಿ ಯರಿಗೆ ವಿವಾಹದೊಂದಿಗೆ ಜಾತ್ರೆ ಆರಂಭವಾಗುತ್ತದೆ. ಬುಧವಾರದಂದು ಮಧ್ಯಾಹ್ನ ಭಕ್ತರ ತಲೆ ಹೊರೆಯ ಮೇಲೆ ಹಸಿರು ಬಣ್ಣದ ಕಾಳಮ್ಮ, ಕೆಂಪು ಬಣ್ಣದ ದುರ್ಗಮ್ಮ ದೇವಿಯರು ಜಾತ್ರಾ ಗದ್ದುಗೆಗೆ ತೆರಳುತ್ತಾರೆ.

ಸೂರ್ಯ ಮುಳುಗುವ ಹೊತ್ತಿಗೆ ದೇವಿಯರ ಎದುರಿಗೆ ಅಕ್ಕಿ ರಾಶಿಯ ನ್ನಿಟ್ಟು, ಐದು ದೀಪಗಳನ್ನು ಬೆಳಗು ತ್ತಾರೆ. ಈ ದೀಪ 9 ದಿನಗಳ ಕಾಲ ಉರಿಯುತ್ತಿರುತ್ತದೆ. ಇದನ್ನು ಹುಲುಸು ಎಂದು ಕರೆಯು ತ್ತಾರೆ. ಯಾವ ಅನಾ ಹುತಗಳೂ ಸಂಭವಿಸದಿರಲಿ ಎಂದು ಊರಿನ ನಾಲ್ಕು ದಿಕ್ಕಿನಲ್ಲಿ ಅನ್ನ ಬಲಿಯ ಬೇಲಿಯನ್ನು ಹಾಕಲಾಗುತ್ತದೆ.

9 ದಿನಗಳ ಕಾಲ ಸೇವೆ ಸ್ವೀಕರಿದ ನಂತರದಲ್ಲಿ ಜಾತ್ರಾ ಪಂಟಪದ ಎದುರಿಗೆ ನಿರ್ಮಿಸಿದ ಹುಲ್ಲಿನ ಗುಡಿಸ ಲಿಗೆ ಬೆಂಕಿಯನ್ನಿಟ್ಟು ಅದಕ್ಕೆ ಪ್ರದಕ್ಷಿಣೆ ಹಾಕಿ ಮುಂಡಗೋಡು ರಸ್ತೆಯ ವಿಸರ್ಜನಾ ಗದ್ದುಗೆಗೆ ತೆರಳುವ ಮೂಲಕ ಜಾತ್ರೆ ಸಂಪನ್ನಗೊಳ್ಳುತ್ತದೆ. ಅಂದು ಕಾಳ ರಾತ್ರಿಯಲ್ಲಿ ದೇವಿಯರ ಮೂರ್ತಿಯನ್ನು ಬೇರ್ಪಡಿಸಿ, ಬಿದಿರಿನ ಪೆಟ್ಟಿಗೆಯಲ್ಲಿಟ್ಟು ಮಧ್ಯರಾತ್ರಿಯಲ್ಲಿ ದೇವಸ್ಥಾನಕ್ಕೆ ಒಯ್ಯುತ್ತಾರೆ.
 
ಈ ಸಂಧರ್ಭದಲ್ಲಿ ಯಾರೂ ಅದನ್ನು ನೊಡ ಬಾರದೆಂಬ ಸಂಪ್ರದಾಯವಿದ್ದು, ಈ ಸಮಯದಲ್ಲಿ ವಿದ್ಯುತ್ ಸಂಪರ್ಕವನ್ನು ನಿಲುಗಡೆ ಮಾಡಲಾಗುತ್ತದೆ.   10 ದಿನಗಳ ನಂತರ ದೇವಿಯರನ್ನು ಪುನರ್ ಪ್ರತಿಷ್ಠಾಪಿಸಲಾಗುತ್ತದೆ.

ಶಳ ದೇವರ ಕಟ್ಟೆಯ ಮಹತ್ವ: ಪಟ್ಟಣದ ರಾಮಾಪುರದಲ್ಲಿರುವ ಶಳ ದೇವರು ದೇವಿಯರ ಅಣ್ಣನೆಂಬ ಪ್ರತೀತಿ ಇದೆ. ಜಾತ್ರೆ ನಡೆಯುವ ಸಂದರ್ಭದಲ್ಲಿ ಅಣ್ಣನಿಗೆ ರಣ (ಒಪ್ಪಿಗೆ) ಪಡೆದೇ ಜಾತ್ರಾ ಗದ್ದುಗೆಗೆ ದೇವಿಯರು ತೆರಳುವ ಸಂಪ್ರದಾಯವಿದೆ.

ಶಳ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಡೋಲು, ಪತಾಕೆಗಳು ಗ್ರಾಮ ದೇವಿ ದೇವಸ್ಥಾನಕ್ಕೆ ಬಂದ ನಂತರದಲ್ಲಿ ದೇವಿ ಯರು ಜಾತ್ರಾ ಗದ್ದುಗೆಗೆ ತೆರಳುತ್ತಾರೆ. ಇದೇ 15 ರಿಂದ 23ರವರೆಗೆ 9 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ಹಾಗೂ ಪರ ರಾಜ್ಯದ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT