ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಾಮಾತಾ ದೌಡ್ಗೆ ಚಾಲನೆ

Last Updated 16 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಶಿವ ಪ್ರತಿಷ್ಠಾನ ಸಂಘಟನೆಯು ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ `ದುರ್ಗಾಮಾತಾ ದೌಡ್~ನಲ್ಲಿ ಸಾವಿರಾರು ಜನರು ಪಾಲ್ಗೊಂಡು ಭಕ್ತಿಯನ್ನು ಮೆರೆದರು.

ಸೋಮವಾರ ಬೆಳಿಗ್ಗೆ 5.45ಕ್ಕೆ ನಗರದ ಶಿವಾಜಿ ಉದ್ಯಾನದಲ್ಲಿ ವಾಸುದೇವ ಛತ್ರೆ ಅವರು ಧ್ವಜಾರೋಹಣ ನೆರವೇರಿಸಿ ಪೂಜೆ ಸಲ್ಲಿಸಿದರು. ಬಳಿಕ ಅವರು ಕೇಸರಿ ಧ್ವಜವನ್ನು ಹಿಡಿದು ಓಡುವ ಮೂಲಕ ದುರ್ಗಾಮಾತಾ ಓಟಕ್ಕೆ ಚಾಲನೆ ನೀಡಿದರು.

ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ದುರ್ಗಾಮಾತಾ ಓಟದಲ್ಲಿ ಪಾಲ್ಗೊಳ್ಳಲು ನಗರದ ವಿವಿಧ ಗಲ್ಲಿಯ ಜನರು ಸೋಮವಾರ ನಸುಕಿನಲ್ಲೇ ಎದ್ದು ಬಂದಿದ್ದರು. ಶುಭ್ರ ಬಟ್ಟೆ ಧರಿಸಿಕೊಂಡು ಸಾವಿರಾರು ಜನರು ಶಿವಾಜಿ ಉದ್ಯಾನದತ್ತ ಬಂದಿದ್ದರು. ಜನರು ಬಿಳಿ ಬಟ್ಟೆ ತೊಟ್ಟು, ಬಿಳಿ ಟೊಪ್ಪಿ ಧರಿಸಿಕೊಂಡು, ಸೊಂಟಕ್ಕೆ ಕೇಸರಿ ಶಾಲ್ ಸುತ್ತಿಕೊಂಡು ಓಟದಲ್ಲಿ ಪಾಲ್ಗೊಳ್ಳುತ್ತಿದ್ದರು.

ಶಿವಾಜಿ ಉದ್ಯಾನದಿಂದ ಆರಂಭಗೊಂಡ `ದುರ್ಗಾಮಾತಾ ಓಟ~ವು ಹುಲಬತ್ತೆ ಕಾಲೋನಿ, ಶಹಾಪುರದ ನಾರ್ವೇಕರ ಗಲ್ಲಿ, ಬಸವಣ್ಣ ಗಲ್ಲಿ, ಹೊಸೂರ, ಕಪಿಲೇಶ್ವರ ಕಾಲೋನಿ, ಮಹಾದ್ವಾರ ರಸ್ತೆಯ ವಿವಿಧ ಗಲ್ಲಿಗಳಲ್ಲಿ ನಡೆಯಿತು. ದುರ್ಗಾಮಾತಾ ಓಟವು ಕಪಿಲೇಶ್ವರ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಸಮಾಪ್ತಿಗೊಳಿಸಲಾಯಿತು.

ದುರ್ಗಾಮಾತಾ ದೌಡ್ ನಡೆಯಲಿದ್ದ ಗಲ್ಲಿಗಳಲ್ಲಿನ ಜನರು ತಮ್ಮ ಮನೆಗಳ ಮುಂದೆ ರಸ್ತೆಯನ್ನು ತೊಳೆದು ರಂಗೋಲಿ ಹಾಕಿ ಸಿಂಗರಿಸಿದ್ದರು. ಭಕ್ತರು ಬರುತ್ತಿದ್ದ ರಸ್ತೆಯಲ್ಲಿ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

ಯುವಕ- ಯುವತಿಯರು ಕೇಸರಿ ಧ್ವಜವನ್ನು ಹಿಡಿದು ಓಡಿದರೆ, ಹಲವು ಜನರು ನಿಧಾನವಾಗಿ ಹೆಜ್ಜೆ ಹಾಕಿದರು. ಓಟದಲ್ಲಿ ಪಾಲ್ಗೊಂಡಿದ್ದ ಭಕ್ತರು ಭಕ್ತಿ ಗೀತೆ ಹಾಗೂ ದೇಶ ಭಕ್ತಿ ಗೀತೆಗಳನ್ನು ಹಾಡುತ್ತ ಹೋಗುತ್ತಿದ್ದರು. 

ಕಪಿಲೇಶ್ವರ ಮಂದಿರಕ್ಕೆ ದುರ್ಗಾಮಾತಾ ದೌಡ್ ಆಗಮಿಸಿದ ಬಳಿಕ ಮುಖಂಡ ಶರದ್ ಮರಾಠೆ ಉಪನ್ಯಾಸ ನೀಡಿದರು. ಯುವಕರಲ್ಲಿ ರಾಷ್ಟ್ರ ಪ್ರೇಮ ಭಾವನೆ ಬೆಳೆಸುವ ಉದ್ದೇಶದಿಂದ ಹಾಗೂ ಹಿಂದೂ ಸಂಸ್ಕೃತಿ ರಕ್ಷಣೆಗಾಗಿ ದುರ್ಗಾಮಾತಾ ಓಟ ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಇಂದು- ನಾಳೆ
ಇದೇ 16ರಂದು ಬೆಳಿಗ್ಗೆ 6 ಗಂಟೆಗೆ ನೆಹರು ನಗರದಿಂದ ಸದಾಶಿವ ನಗರದವರೆಗೆ ಹಾಗೂ ಅ. 17ರಂದು ಬೆಳಿಗ್ಗೆ 6 ಗಂಟೆಗೆ ಟಿಳಕವಾಡಿಯ ಶಿವಾಜಿ ಕಾಲೋನಿಯಿಂದ ಅನಗೋಳವರೆಗೆ `ದುರ್ಗಾಮಾತಾ ಓಟ~ ನಡೆಯಲಿದೆ.

ನಾಡಹಬ್ಬ ಇಂದಿನಿಂದ

ಕರ್ನಾಟಕ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಇದೇ 16 ರಿಂದ 18ರ ವರೆಗೆ ಶೆಟ್ಟಿಗಲ್ಲಿಯಲ್ಲಿರುವ ಹಸಿರು ಕ್ರಾಂತಿ ಪತ್ರಿಕೆಯ ಕಾರ್ಯಾಲಯದ ಸಭಾಂಗಣದಲ್ಲಿ ಸಂಯುಕ್ತ ಜನತಾ ಆಂದೋಲನದ ಸಹಯೋಗದಲ್ಲಿ ನಾಡಹಬ್ಬ ಉತ್ಸವ ಹಮ್ಮಿಕೊಂಡಿದೆ.

16 ರಂದು ಸಂಜೆ 5ಕ್ಕೆ ಮಾಜಿ ಸಚಿವ ಎ.ಬಿ. ಪಾಟೀಲ ಉದ್ಘಾಟಿಸುವರು. ಜಲತ್ಕುಮಾರ್ ಪುಣಜಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಎಸ್. ಎಲ್. ಕುಲಕರ್ಣಿ, ಕಲ್ಯಾಣರಾವ್ ಮುಚಳಂಬಿ ಆಗಮಿಸುವರು. ಕೆ.ವೈ. ಅವಳೇಕುಮಾರ ಹಾಗೂ ಲತೀಫ್ ಕುನ್ನಿಭಾವಿ ಅವರನ್ನು ಸನ್ಮಾನಿಸಲಾಗುವುದು. ಶಿ.ಗು. ಕುಸುಗಲ್ಲ ಅಭಿನಂದನ ಭಾಷಣ ಮಾಡುವರು.

17 ರಂದು ಸಂಜೆ 5ಕ್ಕೆ ಕವಿಗೋಷ್ಠಿ ನಡೆಯಲಿದೆ. ಮಾಜಿ ಸಂಸದ ಎಸ್. ಬಿ. ಸಿದ್ನಾಳ ಉದ್ಘಾಟಿಸುವರು. ಬಿ. ಎನ್. ಅಸ್ಕಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ಜಿ. ದುಮಾಳೆ, ಎಲ್. ಎಸ್. ಶಾಸ್ತ್ರಿ, ಕೆ. ಎನ್. ದೊಡಮನಿ ಆಗಮಿಸುವರು. 18 ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಸಕಾಲ ಯೋಜನೆ ಕುರಿತು ಅಶೋಕ ಹಲಗಲಿ, ಆರ್. ಆರ್. ಸೌದತ್ತಿ ಉಪನ್ಯಾಸ ನೀಡುವರು. ಬಿ.ವಿ. ಕಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಶಶಿಕಾಂತ ನಾಯಿಕ, ಎಸ್. ಎಸ್. ಪಾವಟೆ, ಅಶೋಕ ಚಂದರಗಿ ಆಗಮಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT