ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ನಾತದಿಂದ ಮುಕ್ತಿ: ಗ್ರಾಮಸ್ಥರ ಆಗ್ರಹ

ತ್ಯಾಜ್ಯ ಲಾರಿ ತಡೆದ ಸ್ಥಳೀಯರು- ದೌಡಾಯಿಸಿದ ಪಾಲಿಕೆ ಆಯುಕ್ತ
Last Updated 19 ಜುಲೈ 2013, 11:24 IST
ಅಕ್ಷರ ಗಾತ್ರ

ಮಂಗಳೂರು: ಕೋಳಿ ಮತ್ತಿತರ ಮಾಂಸದ ತ್ಯಾಜ್ಯ ಸಹಿತ ದುರ್ನಾತ ಬೀರುವ ತ್ಯಾಜ್ಯಗಳನ್ನು ತಂದು ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಗುರುವಾರವೂ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.

ಪಚ್ಚನಾಡಿಯಲ್ಲಿ ಕೋಳಿಯ ತ್ಯಾಜ್ಯವನ್ನು ವಿಲೇವಾರಿ ಮಾಡುವುದರಿಂದ ಪರಿಸರವೆಲ್ಲಾ ದುರ್ನಾತ ಬೀರುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಸ್ಥಳೀಯರು ಪಾಲಿಕೆ ಜಂಟಿ ಆಯುಕ್ತ ಶ್ರೀಕಾಂತ ರಾವ್ ಅವರನ್ನು ಬುಧವಾರ ಕೋರಿದ್ದರು.  ಜಂಟಿ ಆಯುಕ್ತರು ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯರು, ದುರ್ನಾತ ಬೀರುವ ಕೋಳಿ ತ್ಯಾಜ್ಯಗಳನ್ನು ತುಂಬಿದ್ದ ಲಾರಿಯನ್ನು ಲಾಲ್‌ಬಾಗ್‌ನ ಪಾಲಿಕೆ ಕಚೇರಿ ಎದುರು ತಂದು ನಿಲ್ಲಿಸಿ ಬುಧವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದರು.

ಬಳಿಕ ಪಾಲಿಕೆ ಪರಿಸರ ಎಂಜಿನಿಯರ್, ಆರೋಗ್ಯಾಧಿಕಾರಿ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಗುರುವಾರ ಬೆಳಿಗ್ಗೆ 10 ಗಂಟೆಯಾದರೂ ಅಧಿಕಾರಿಗಳು ಪಚ್ಚನಾಡಿಗೆ ಭೇಟಿ ನೀಡಲಿಲ್ಲ, ದುರ್ನಾತ ಬೀರುವ ಕಸ ಹೊತ್ತು ತರುವ ಲಾರಿಗಳ ಸಂಚಾರವನ್ನೂ ನಿಲ್ಲಿಸಿರಲಿಲ್ಲ. ಇದರಿಂದ ಕೆರಳಿದ ಗ್ರಾಮಸ್ಥರು ಪಚ್ಚನಾಡಿಗೆ ಬಂದ ಕಸ ತುಂಬಿದ ಲಾರಿಗಳನ್ನು ತಡೆದು ನಿಲ್ಲಿಸಿದರು.

ದೌಡಾಯಿಸಿದ ಆಯುಕ್ತರು: ಪಚ್ಚನಾಡಿಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಪರಿಸರ ಎಂಜಿನಿಯರ್ ಮಧು ಹಾಗೂ ಮಂಜುನಾಥ್ ಶೆಟ್ಟಿ, ಆರೋಗ್ಯಾಧಿಕಾರಿ ಸುದರ್ಶನ್ ಅವರ ಜತೆ ದೌಡಾಯಿಸಿದರು.

ಕಸದ ಪರ್ವತ: ಕೋಳಿ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಿಸಿ ತಂದೆಸೆದಿದ್ದರಿಂದ ಉಂಟಾದ ಕಸದ ಪರ್ವತ ಕಂಡು ಆಯುಕ್ತರು ದಂಗಾದರು.

ಇಲ್ಲಿಗೆ ಪಾಲಿಕೆ ವ್ಯಾಪ್ತಿಯ ಕಸದ ಲಾರಿಗಳ ಜತೆ ಉಳ್ಳಾಲ, ಮೂಡುಬಿದಿರೆ ಪ್ರದೇಶದಿಂದಲೂ ಕೋಳಿ ತ್ಯಾಜ್ಯಗಳನ್ನು ತಂದು ರಸ್ತೆ ಬದಿಯೇ ಸುರಿಯಲಾಗುತ್ತಿದೆ ಎಂದು ಸ್ಥಳೀಯರು ದೂರಿದರು.

ಪಾಲಿಕೆಯಿಂದ ಅನುಮತಿ ಪತ್ರ ಪಡೆಯದೇ ಯಾವುದೇ ಲಾರಿಯೂ ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶ ನೀಡುವುದಿಲ್ಲ. ಇಲ್ಲಿ ಈಗಾಗಲೇ ಹಾಕಲಾದ ಕೋಳಿ ಕಸವನ್ನು ಹೊಂಡ ತೆಗೆದು ಹೂಳಲು ವ್ಯವಸ್ಥೆ ಮಾಡುತ್ತೇನೆ. ಈ ಬಗ್ಗೆ ಯಾವುದೇ ಸಮಸ್ಯೆ ಎದುರಾದರೂ ತಮ್ಮ ಮೊಬೈಲ್‌ಗೆ ಕರೆ ಮಾಡುವಂತೆ ಆಯುಕ್ತರು ತಿಳಿಸಿದರು.

`ನಾವು ಇನ್ನೆರಡು ದಿನ ಕಾಯುತ್ತೇವೆ. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ. ಇಲ್ಲಿಗೆ ಯಾವುದೇ ತ್ಯಾಜ್ಯವನ್ನು ತರಲು ಬಿಡುವುದಿಲ್ಲ' ಎಂದು ಪಾಲಿಕೆ ಸದಸ್ಯ ರಾಜೇಶ್ ಕೊಟ್ಟಾರಿ `ಪ್ರಜಾವಾಣಿ'ಗೆ ತಿಳಿಸಿದರು. ರಘು ಸಾಲ್ಯಾನ್, ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ, ವಿನೋದ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT