ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲ ವರ್ಗಕ್ಕೆ ಸಾಲ ನೀಡಲು ತಾಕೀತು

Last Updated 13 ಸೆಪ್ಟೆಂಬರ್ 2013, 5:57 IST
ಅಕ್ಷರ ಗಾತ್ರ

ದಾವಣಗೆರೆ: ‘ಜಿಲ್ಲೆಯಲ್ಲಿನ ಬ್ಯಾಂಕುಗಳು ಸಾಲ ವಿತರಣೆಯಲ್ಲಿ ಆದ್ಯತಾವಲಯಕ್ಕೆ ಕೊಟ್ಟಷ್ಟೇ ಆದ್ಯತೆಯನ್ನು ದುರ್ಬಲ ವರ್ಗಕ್ಕೂ ನೀಡಬೇಕು’ ಸಂಸತ್‌ ಸದಸ್ಯ ಜಿ.ಎಂ. ಸಿದ್ದೇಶ್ವರ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯ್ತಿಯ ಎಸ್‌.ಎಸ್‌. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಗುರುವಾರ ಲೀಡ್‌ಬ್ಯಾಂಕ್‌ ವತಿಯಿಂದ ಹಮ್ಮಿಕೊಂಡಿದ್ದ ಬ್ಯಾಂಕುಗಳ ಜಿಲ್ಲಾಮಟ್ಟದ ಪುನರಾವಲೋಕನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಆದ್ಯತಾವಲಯ ಹಾಗೂ ದುರ್ಬಲ ವರ್ಗಕ್ಕೆ ಒಟ್ಟು`  4638.74 ಕೋಟಿ ಗುರಿ ಹೊಂದಲಾಗಿದೆ. ಇದರಲ್ಲಿ ಆದ್ಯತವಲಯಕ್ಕೆ ` 3334.40 ಕೋಟಿ ವಿತರಿಸಲಾಗಿದೆ. ಆದರೆ, ದರ್ಬಲ ವರ್ಗಕ್ಕೆ ಕೇವಲ ` 812.78 ಕೋಟಿ ಅಂದರೆ ಶೇ 17ರಷ್ಟು ಸಾಲ ವಿತರಿಸಲಾಗಿದೆ. ಹೀಗಾದರೆ ದುರ್ಬಲವರ್ಗ ಆರ್ಥಿಕವಾಗಿ ಸದೃಢತೆ ಸಾಧಿಸಲು ಹೇಗೆ ಸಾಧ್ಯ ಎಂದು ಬ್ಯಾಂಕ್‌ ಅಧಿಕಾರಿಗಳನ್ನು ಪ್ರಶ್ನಿಸಿದರು. ಶೇ 60ರಷ್ಟು ಸಾಲವನ್ನು ಬ್ಯಾಂಕುಗಳು ವಿತರಿಸುವಂತೆ ರಿಜರ್ವ್‌ ಬ್ಯಾಂಕ್‌ ನಿಮಯಗಳೇ ಹೇಳುತ್ತವೆ. ಆದರೆ, ಯಾವ ಬ್ಯಾಂಕುಗಳೂ ಅರ್‌ಬಿಐ ನಿಮಯಗಳನ್ನು ಅನುಸರಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ ಕಠಿಣಕ್ರಮಕ್ಕೆ ಕೇಂದ್ರಕ್ಕೆ ಪತ್ರ ಬರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಸಿ.ಡಿ. ಅನುಪಾತ ನಿಗದಿತ ಸಿ.ಡಿ. ಅನುಪಾತಕ್ಕಿಂತ ಕಡಿಮೆ ಇದೆ. ಬ್ಯಾಂಕುಗಳ ತಮ್ಮ ಸಿ.ಡಿ. ಅನುಪಾತವನ್ನು ಶೇ 60ರಷ್ಟು ಕಾಯ್ದುಕೊಳ್ಳಬೇಕು. ಸಿ.ಡಿ. ಅನುಪಾತ ಕಾಪಾಡಿಕೊಳ್ಳದ ಬ್ಯಾಂಕುಗಳಿಗೆ ಭವಿಷ್ಯವಿಲ್ಲ. ಶೈಕ್ಷಣಿಕ ಸಾಲ ಯೋಜನೆ ಅಡಿ ಬ್ಯಾಂಕ್‌ ಖಾತೆ ತೆರೆಯುಲು ಕೆಲ ಬ್ಯಾಂಕುಗಳು ಹಿಂದೇಟು ಹಾಕುತ್ತಿರುವುದಾಗಿ ದೂರುಗಳು ಕೇಳಿಬರುತ್ತಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು ಆಗುತ್ತಿಲ್ಲ. ಇಂತಹ ದೋಷಗಳನ್ನು ಬ್ಯಾಂಕುಗಳನ್ನು ನಿವಾರಿಸಿಕೊಂಡು ವಿದ್ಯಾಥಿರ್ಗಳಿಗೆ ಶೂನ್ಯ ಠೇವಣಿಯಲ್ಲಿ ಖಾತೆ ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಕೆಲವು ಬ್ಯಾಂಕುಗಳು ವ್ಯವಹಾರ ಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದ್ದರೂ, ಕಡೆಗಣಿಸಲಾಗಿದೆ. ಇದರಿಂದಾಗಿ 2 ಸಾವಿರ ಜನಸಂಖ್ಯೆಗಿಂತ ಕಡಿಮೆ ಇರುವ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್‌ ಸೇವೆ ಒದಗಿಸಲು ಹಿನ್ನಡೆಯಾಗುತ್ತಿದೆ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಜಿ.ಮಲ್ಲಿಕಾರ್ಜುನ್‌ ಬ್ಯಾಂಕ್‌ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಗ್ರಾಮೀಣ ಪ್ರಗತಿ ಬ್ಯಾಂಕ್‌ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿ, ‘ ಆರು ಕಡೆ ಬ್ಯಾಂಕ್‌ ಶಾಖೆ ತೆರೆಯಲಾಗಿದೆ. 44 ಅತಿಸಣ್ಣ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ. 2 ವ್ಯವಹಾರ ಪ್ರತಿನಿಧಿಗಳನ್ನೆ ನೇಮಕ ಮಾಡಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸತ್‌ ಸದಸ್ಯ ಜಿ.ಎಂ. ಸಿದ್ದೇಶ್ವರ, ‘ಒಂದು ಬ್ಯಾಂಕು ಕೆಲಸ ಮಾಡಿದರೆ ಸಾಲದು. ಎಲ್ಲ ಬ್ಯಾಂಕುಗಳು ಗ್ರಾಮೀಣ ಸೇವೆ ನೀಡಲು ಶ್ರಮಿಸಬೇಕು. ಈ ವಿಚಾರದಲ್ಲಿ ಬ್ಯಾಂಕುಗಳು ನಿರೀಕ್ಷಿತ ಗುರಿ ಸಾಧಿಸಬೇಕು’ಎಂದರು.

ಭಾರತೀಯ ರಿಸರ್ವ್‌ ಬ್ಯಾಂಕಿನ ಆದೇಶ ಅನ್ವಯ ರಾಷ್ಟ್ರೀಕೃತ ಬ್ಯಾಂಕುಗಳು ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲೆಯಲ್ಲಿನ ಆರು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಕೆನರಾ ಬ್ಯಾಂಕ್‌ ದಾವಣಗೆರೆಯಲ್ಲಿ ಹಾಗೂ ಪ್ರಗತಿ ಗ್ರಾಮೀಣ ಬ್ಯಾಂಕ್‌ ಹರಪನಹಳ್ಳಿಯಲ್ಲಿ ಕೇಂದ್ರ ತೆರೆದಿವೆ. ಉಳಿದ ಬ್ಯಾಂಕುಗಳು ನಿರ್ಲಕ್ಷಿಸಲು ಕಾರಣ ಕೊಡಿ... ಎಂದು ರಿಸರ್ವ್ ಬ್ಯಾಂಕ್‌ ಸಹಾಯಕ ಪ್ರಬಂಧ ಚಕ್ರವರ್ತಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಅವರ ಪ್ರಶ್ನೆಗೆ ಅಧಿಕಾರಿಗಳ ‘ನಿರುತ್ತರ’ ಉತ್ತರವಾಯಿತು.

ಉಳಿದಂತೆ ಎಸ್‌ಬಿಎಂ ಬ್ಯಾಂಕಿನಿಂದ ಆಗಮಿಸಿದ್ದ ಸಹಾಯಕ ವ್ಯವಸ್ಥಾಕರು ಯಾವುದೇ ಮಾಹಿತಿ ಇಲ್ಲದೇ  ಬಂದಿದ್ದರಿಂದ ಪ್ರಶ್ನೆಗಳಿಗೆ ಪೆಚ್ಚಮೋರೆ ಹಾಕುವ ಮೂಲಕ ಅಧಿಕಾರಿಗಳ ಆಕ್ರೋಶಕ್ಕೆ ಗುರಿಯಾದರು. ಮಾಹಿತಿ ಇಲ್ಲದೇ ಸಭೆಗೆ ಆಗಮಿಸಬೇಡಿ ಎಂದು ಸಿಇಒ ಆ ಅಧಿಕಾರಿಗೆ ಹೇಳುವಂತಹ ಪರಿಸ್ಥಿತಿಯನ್ನು ತಂದುಕೊಂಡು ಮುಜುಗರಕ್ಕೆ ಈಡಾಗಬೇಕಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿಸಿಇಒ ಎ.ಬಿ. ಹೇಮಚಂದ್ರ, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ಮಹೇಶ್ವರ ಗೌಡ. ಲೀಡ್‌ಬ್ಯಾಂಕ್‌ ಉಪ ವ್ಯವಸ್ಥಾಪಕ ಗುರುದತ್ತ ಜೋಯಿ, ಕೆನರಾ ಬ್ಯಾಂಕ್‌ ಹುಬ್ಬಳ್ಳಿ ವಲಯ ಕಚೇರಿಯ ಸಹಾಯಕ ಪ್ರಬಂಧ ದಾಸರ್‌, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಆನಂದ ಹಾಗೂ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಹಾಜರಿದ್ದರು.

ಸಭೆಯಲ್ಲಿ ಕೇಳಿಸಿದ್ದು
ಗ್ರಾಮಗಳು ಆರ್ಥಿಕವಾಗಿ ಬಲಿಷ್ಟವಾಗಬೇಕಾದರೆ ಪ್ರತಿ ಗ್ರಾಮ ಪಂಚಾಯ್ತಿಮಟ್ಟದಲ್ಲಿ ಒಂದು ಬ್ಯಾಂಕ್‌ ಸ್ಥಾಪನೆಯಾಗಬೇಕು. ಹಾಗಾದರೆ, ಗ್ರಾಮೀಣ ಜನರು ಬ್ಯಾಂಕಿನ ವ್ಯವಹಾರಕ್ಕೆ ಹತ್ತಿರವಾಗುತ್ತಾರೆ. ಇದರಿಂದ ಬ್ಯಾಂಕಿನ ನಿವ್ವಳ ಲಾಭವೂ ಹೆಚ್ಚುತ್ತದೆ. ಕೂಡಲೇ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಚಿಂತನೆ ನಡೆಸಿ
– ಜಿ.ಎಂ. ಸಿದ್ದೇಶ್ವರ, ಸಂಸತ್‌ ಸದಸ್ಯರು.

ನಾನು ಬಂದಾಗ ಜಿಲ್ಲೆಯಲ್ಲಿ 160 ಬ್ಯಾಂಕುಗಳಿದ್ದವು. ಈಗ ಅವುಗಳ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ ಈಗ 186 ಬ್ಯಾಂಕುಗಳು ಕಾಯರ್ನಿವರ್ಹಿಸುತ್ತಿವೆ. ಗ್ರಾಮೀಣ ಪ್ರದೇಶಲ್ಲಿ ಬ್ಯಾಂಕ್‌ ಸ್ಥಾಪನೆಗೆ ಯತ್ನಿಸಲಾಗುವುದು.
– ಜಿ. ಮಲ್ಲಿಕಾರ್ಜುನಪ್ಪ, ವ್ಯವಸ್ಥಾಪಕ, ಲೀಡ್‌ಬ್ಯಾಂಕ್.

ಗ್ರೂಪ್‌–1, ಗ್ರೂಪ್‌–2, ಗ್ರೂಪ್‌–3, ಗ್ರೂಪ್‌–4 ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಭಾರತ ಸರ್ಕಾರದಿಂದ 9ಮತ್ತು 10ನೇ ತರಗತಿಯ ವಿದ್ಯಾಥಿರ್ಗಳಿಗೆ ಪ್ರತಿ ಹಾಸ್ಟೆಲ್‌ ವಿದ್ಯಾರ್ಥಿಗೆ ` 350 ವಿದ್ಯಾರ್ಥಿ ವೇತನ ಬರುತ್ತಿದೆ. ಹಾಸ್ಟೆಲ್‌ಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ` 150 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
– ಮಹಾಂತೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ

ಉದ್ಯೋಗಿನಿ ಯೋಜನೆಯ ಅಡಿ 357 ಮಹಿಳೆಯರಿಗೆ ಸಾಲ ಮಂಜೂರಾತಿ ಮಾಡಲಾಗಿದೆ. ಶ್ರೀಶಕ್ತಿ ಯೋಜನೆಯಲ್ಲಿ 536 ಮಂದಿಗೆ ಸಾಲಸೌಲಭ್ಯ ಕಲ್ಪಿಸಲಾಗಿದೆ. ಶೇ 100 ಗುರಿ ಸಾಧನೆ ಮಾಡಲಾಗಿದೆ.
– ವಾಸುದೇವ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ.

ಬ್ಯಾಂಕ್‌ಗಳ ಅಸಹಕಾರ

ಮಹಾನಗರ ಪಾಲಿಕೆ ವತಿಯಿಂದ ನಗರದ ನಿವಾಸಿಗಳಿಗೆ ’ವಾಜಪೇಯಿ ವಸತಿ ಯೋಜನೆ’ ಅಡಿ ಮನೆ ನಿರ್ಮಾಣಕ್ಕೆ 476 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಬ್ಯಾಂಕುಗಳು ಕೇವಲ 47 ಮಂದಿ ಫಲಾನುಭವಿಗಳಿಗಷ್ಟೇ ಸಾಲ ಮಂಜೂರು ಮಾಡಿವೆ. ಶೇ. 10ರಷ್ಟು ಫಲಾನುಭವಿಗಳಿಗೆ ಬ್ಯಾಂಕುಗಳ ಸಹಕಾರ ದೊರೆತಿಲ್ಲ. ಹೀಗಾದರೆ ಸರ್ಕಾರದ ಯೋಜನೆಗಳು ಯಶಸ್ವಿಯಾಗು ವುದಾದರೂ ಹೇಗೆ? ವಿಜಯಬ್ಯಾಂಕ್‌ ಮತ್ತು ಕಾರ್ಪೋರೇಷನ್‌ ಬ್ಯಾಂಕ್‌ 19 ಫಲಾನುಭವಿಗಳಲ್ಲಿ ತಲಾ 10 ಜನರಿಗೆ ಸಾಲ ನೀಡಿದೆ. ಸಾಲಕ್ಕಾಗಿ ಜನರು ಸಂಕಷ್ಟ ಪಡುತ್ತಿದ್ದರೂ ಬ್ಯಾಂಕುಗಳು ಮಾನವೀಯತೆ ತೋರುತ್ತಿಲ್ಲ ಎಂದು ಪಾಲಿಕೆ ಉಪ ಆಯುಕ್ತ ರವೀಂದ್ರ ದೂರಿದರು.

ದೂರು ಆಲಿಸಿದ ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಮಾತನಾಡಿ, ‘ಅಂತಹ ಬ್ಯಾಂಕುಗಳ ವಿರುದ್ಧ ನೋಟಿಸ್‌ ನೀಡುವ ಮೂಲಕ ಸರ್ಕಾರಕ್ಕೆ  ಪತ್ರ ಬರೆಯುವಂತೆ ಲೀಡ್‌ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚಿಸಿದರು.

ಸಕಾಲಕ್ಕೆ ಕೃಷಿ ಸಾಲ ನೀಡಿ
ಎಲ್ಲಾ ಬ್ಯಾಂಕುಗಳು ಕೃಷಿ ಸಾಲವನ್ನು ರೈತರಿಗೆ ಸಕಾಲದಲ್ಲಿ ನೀಡುತ್ತಿಲ್ಲ. ಬಿತ್ತನೆ ಪೂರ್ವದಲ್ಲಿ ಬ್ಯಾಂಕುಗಳು ರೈತರ ಸಾಲ ಅರ್ಜಿಗಳಿಗೆ ಮೊದಲು ಆದ್ಯತೆ ನೀಡಬೇಕು. ಬಿತ್ತನೆಯ ನಂತರ ರೈತರಿಗೆ ಸಾಲ ಮಂಜೂರು ಮಾಡಿದರೆ ಪ್ರಯೋಜನವೇನು? ಹಾಗಾಗಿ, ಸಹಕಾರಿ ಬ್ಯಾಂಕುಗಳು ಕೃಷಿ ಸಾಲವನ್ನು ಸಕಾಲದಲ್ಲಿ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಸಂಸತ್‌ ಸದಸ್ಯ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕರು, ‘ಪ್ರಸಕ್ತ ಸಾಲಿನಲ್ಲಿ ` 77.33 ಕೋಟಿ ಕೃಷಿ ಸಾಲ ವಿತರಿಸಲಾಗಿದೆ. ಸರ್ಕಾರ ಈಚೆಗೆ 114 ಕೋಟಿ ಸಾಲಮನ್ನಾ ಮಾಡಿದೆ. ಮನ್ನಾ ಮಾಡಿದ ಸಾಲದ ಬಿಲ್ಲುಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ, ಇದುವರೆಗೂ ಸರ್ಕಾರದಿಂದ ಹಣ ಬಂದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT