ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆ ತಡೆಗೆ ತಾತ್ಕಾಲಿಕ ವ್ಯವಸ್ಥೆ

ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕ
Last Updated 20 ಜುಲೈ 2013, 11:15 IST
ಅಕ್ಷರ ಗಾತ್ರ

ಮಂಗಳೂರು: ಕೋಳಿ ಮತ್ತು ಇತರ ಪ್ರಾಣಿಗಳ ತ್ಯಾಜ್ಯವನ್ನು ತೆರೆದ ಸ್ಥಳದಲ್ಲಿ ಹಾಕುತ್ತಿರುವುದರ ವಿರುದ್ಧ ಪಚ್ಚನಾಡಿ ಸುತ್ತಮುತ್ತಲಿನ ನಾಗರಿಕರು ನಡೆಸಿದ ಪ್ರತಿಭಟನೆ ಮಂಗಳೂರು ಮಹಾನಗರ ಪಾಲಿಕೆಯನ್ನು ತಟ್ಟಿದ್ದು, ಕೋಳಿ ತ್ಯಾಜ್ಯವನ್ನು ಗುಂಡಿಯ್ಲ್ಲಲಿ ಹಾಕಿ ಮಣ್ಣು ಮುಚ್ಚುವ ಕಾರ್ಯ ಶುಕ್ರವಾರದಿಂದಲೇ ಆರಂಭವಾಗಿದೆ. ಸ್ಥಳೀಯ ಜನತೆ ಸಹ ಸ್ವಲ್ಪಮಟ್ಟಿನ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಬುಧವಾರ ಪಾಲಿಕೆಯ ಮುಂಭಾಗ ಮತ್ತು ಗುರುವಾರ ಪಚ್ಚನಾಡಿಯಲ್ಲಿ ಸ್ಥಳೀಯರು ನಡೆಸಿದ ಪ್ರತಿಭಟನೆ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಡೆಯುತ್ತಿದ್ದ ಹಲವು ಅಕ್ರಮಗಳಿಗೂ ತಡೆ ಒಡ್ಡುವ ಲಕ್ಷಣ ತೋರಿಸಿದೆ. ಅನಧಿಕೃತವಾಗಿ ಮಾಂಸದ ತ್ಯಾಜ್ಯಗಳನ್ನು ತಂದು ಹಾಕುವುದನ್ನು ಇದೀಗ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಂಜೆ 6 ಗಂಟೆಯ ಬಳಿಕ ಯಾವುದೇ ತ್ಯಾಜ್ಯ ಹೊತ್ತ ವಾಹನವೂ ಒಳಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಮೇಲಾಗಿ ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ವಾರದೊಳಗೆ ಬದಲಿಸಿ ತಿಂಗಳೊಳಗೆ ಅಲ್ಲಿನ  ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸುವ ಕ್ರಮಕ್ಕೆ ಪಾಲಿಕೆ ಮುಂದಾಗಿದೆ.

ಶುಕ್ರವಾರದಿಂದಲೇ ಕೋಳಿ ತ್ಯಾಜ್ಯವನ್ನು ಗುಂಡಿ ತೆಗೆದು ಮುಚ್ಚುವ ಕಾರ್ಯ ಆರಂಭವಾಗಿರುವುದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ'ಗೆ ಕಂಡುಬಂತು. ತ್ಯಾಜ್ಯ ವಿಲೇವಾರಿಯ ಗುತ್ತಿಗೆ ಪಡೆದಿರುವ ದೆಹಲಿ ಮೂಲದ ಯೂನಿಕ್ ವೇಸ್ಟ್ ಪ್ರೋಸೆಸಿಂಗ್ ಕಂಪೆನಿಯ ಜೆಸಿಬಿಗಳು ಸಂಜೆ ಹೊತ್ತಲ್ಲಿ ತ್ಯಾಜ್ಯ ಗುಂಡಿಗಳ ಮೇಲೆ ಮಣ್ಣು ಹಾಕುವ ಕೆಲಸ ಮಾಡುತ್ತವೆ. ಈ ರೀತಿಯ ಕ್ರಮ ಕೈಗೊಂಡಿದ್ದರಿಂದ ಪಚ್ಚನಾಡಿ ಭಾಗದಲ್ಲಿ ಜನರೂ ಸಮಾಧಾನಪಟ್ಟಿದ್ದಾರೆ.

`ಮಳೆಗಾಲ ಆರಂಭವಾದೊಡನೆಯೇ ದುರ್ವಾಸನೆ ಹೆಚ್ಚಾಗುತ್ತಿತ್ತು. ಕಳೆದ ಮೂರ್ನಾಲ್ಕು ದಿನಗಳಲ್ಲಿ ಈ ವಾಸನೆಯ ತೀವ್ರತೆ ಹೆಚ್ಚಿತ್ತು. ನಮಗೆ ಇಲ್ಲಿ ದಿನಾ ವಾಸನೆಯೇ ರೂಢಿಯಾಗಿರುವುದರಿಂದ ಯಾಕಾಗಿ ಈ ಹೆಚ್ಚುವರಿ ದುರ್ವಾಸನೆ ಎಂಬುದು ಗೊತ್ತಾಗಿರಲಿಲ್ಲ. ಜನ ಕೋಳಿ ತ್ಯಾಜ್ಯದ ಲಾರಿ ತಡೆ ಹಿಡಿದ ಬಳಿಕ ನಮಗೆ ಇದರ ಮೂಲ ಗೊತ್ತಾಯಿತು. ಇಂದಿನಿಂದ ಇದು ಕಡಿಮೆಯಾಗಿದೆ. ನಿಜಕ್ಕೂ ನಮಗೆ ಸಮಾಧಾನವಾಗಿದೆ' ಎಂದು ಅಂಗಡಿ ಇಟ್ಟುಕೊಂಡಿರುವ ಬಸಪ್ಪ  ಶೆಟ್ಟಿ ಹೇಳಿದರು.

ವಾಮಂಜೂರಿನ ಮಂಗಳಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ವಿ.ಗಣೇಶ್ ಭಟ್ ಅವರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಮಾಂಸ ತ್ಯಾಜ್ಯವನ್ನು ಹೊಂಡದಲ್ಲಿ ಹೂಳುವ ಕ್ರಮ ಅಗತ್ಯ ಎಂದರು.

`ಜನರ ಭಾವನೆ ಪಾಲಿಕೆಗೆ ಅರ್ಥವಾಗಿದೆ. ಕಸಾಯಿಖಾನೆಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪ್ರತ್ಯೇಕ ಘಟಕ ಪಚ್ಚನಾಡಿಯಲ್ಲಿ ಮುಂದಿನ ದಿನಗಳಲ್ಲಿ ತಲೆ ಎತ್ತಲಿದೆ. ಈಗಾಗಲೇ ಇದರ ವಿವರವಾದ ಯೋಜನಾ ವರದಿ ಸಿದ್ಧವಾಗಿದೆ. ಉದ್ದೇಶಿತ ಘಟಕ ಸ್ಥಾಪನೆಗೊಳ್ಳುವವರೆಗೆ ಈ ತಾತ್ಕಾಲಿಕ ವ್ಯವಸ್ಥೆ ಜಾರಿಯಲ್ಲಿರಲಿದೆ' ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಭಟನೆಗೆ ಕುಮ್ಮಕ್ಕು?: ಪಚ್ಚನಾಡಿ ಪ್ರದೇಶದಲ್ಲಿ ದುರ್ನಾತ ವಿಶೇಷವೇನಲ್ಲ, ಹಠಾತ್ತಾಗಿ ಪ್ರತಿಭಟನೆ ನಡೆಯುವುದಕ್ಕೆ ಕಾರಣವಾದರೂ ಏನು ಎಂಬ ಸಂಶಯ ಸ್ಥಳೀಯರನ್ನು ಮಾತನಾಡಿಸಿದಾಗ ಸುಳಿಯದೆ ಇರಲಿಲ್ಲ. ಮುಖ್ಯವಾಗಿ ಇದೇ 1ರಿಂದ ಪಾಲಿಕೆಯ ಕಸ ವಿಲೇವಾರಿ ಹೊಣೆ ದೆಹಲಿ ಮೂಲದ ಕಂಪೆನಿಗೆ ದೊರೆತಿದ್ದು, ಇದು ಕೆಲವು ಸ್ಥಳೀಯ ಗುತ್ತಿಗೆದಾರರಿಗೆ ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ.

ತ್ಯಾಜ್ಯದಿಂದ ಗೊಬ್ಬರ: ಹೊಸ ಪ್ರಯತ್ನ ಆರಂಭ
ಮಂಗಳೂರು ಮಹಾನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೊಳೆಯುವ ಮತ್ತು ಕೊಳೆಯದ ತ್ಯಾಜ್ಯವಾಗಿ ವಿಂಗಡಿಸುವ ಕಾರ್ಯ ಇನ್ನೂ ನಡೆಯದಿದ್ದರೂ, ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಕಾರ್ಯಕ್ಕೆ ದೆಹಲಿ ಮೂಲದ ಕಂಪೆನಿ ಭಾರಿ ಸಿದ್ಧತೆ ನಡೆಸಿದೆ. ಒಂದರೆಡು ವಾರದೊಳಗೆ ಅಗತ್ಯ ಯಂತ್ರಗಳು ಬರಲಿದ್ದು, ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಗೊಬ್ಬರ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ.

ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸದೆ ಇರುವುದರಿಂದ ಸಾವಯವ ಗೊಬ್ಬರ ಎಷ್ಟರ ಮಟ್ಟಿಗೆ ಉತ್ಪಾದನೆಯಾದೀತು ಎಂಬ ಸಂಶಯ ಇನ್ನೂ ಉಳಿದಿದ್ದರೂ, ಸದ್ಯಕ್ಕೆ ಪ್ಲಾಸ್ಟಿಕ್‌ಯುಕ್ತ ತ್ಯಾಜ್ಯದಿಂದಲೇ ಗೊಬ್ಬರ ಉತ್ಪಾದಿಸುವ ಕಾರ್ಯ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಮೊದಲಾಗಿ ಪ್ರತ್ಯೇಕಿಸಿ ಪರಿಪೂರ್ಣ ಸಾವಯವ ಗೊಬ್ಬರ ತಯಾರಿಸುವ ಯೋಜನೆಯನ್ನು ಕಂಪೆನಿ ರೂಪಿಸಿದೆ. ಸದ್ಯ ಪ್ರತಿದಿನ 225ರಿಂದ 250 ಟನ್ ತ್ಯಾಜ್ಯ ಇಲ್ಲಿಗೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT