ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವ್ಯವಹಾರಕ್ಕೆ ಆಸ್ಪದ ನೀಡೆವು : ಸಿಬಲ್ ಸ್ಪಷ್ಟನೆ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ತನ್ನ ನೆಲದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸ ಬಯಸುವ ವಿದೇಶಿ ಸಂಸ್ಥೆಗಳನ್ನು ಭಾರತ ಸ್ವಾಗತಿಸುತ್ತದೆ. ಆದರೆ ರಾತ್ರೋರಾತ್ರಿ ಎತ್ತಂಗಡಿಯಾಗುವ ನಕಲಿ ಸಂಸ್ಥೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಗುರುವಾರ ದಿನಪೂರ್ತಿ ನಡೆದ ಭಾರತ-ಅವೆುರಿಕ ಶೈಕ್ಷಣಿಕ ಶೃಂಗಸಭೆಯ ನಂತರ ಭಾರತದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೀಗೆ ಹೇಳಿದರು.  ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಜತೆ ಸಿಬಲ್ ಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ್ದರು.

ಕ್ಯಾಲಿಫೋರ್ನಿಯಾದ ಟ್ರೈವ್ಯಾಲಿ ವಿ.ವಿ.ಯು ವರ್ಷಾರಂಭದಲ್ಲಿ ವೀಸಾ ಹಗರಣದಲ್ಲಿ ಸಿಲುಕಿ, ನೂರಾರು ಭಾರತೀಯ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳಿದರು.

ಭಾರತದಲ್ಲಿನ ಖಾಸಗಿ ಸಂಸ್ಥೆಗಳಿಗೆ ಯಾವ ನಿಯಮಾವಳಿ ಅನ್ವಯವಾಗುತ್ತದೋ ಅದೇ ನಿಯಮಾವಳಿ ವಿದೇಶಿ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಇದರಲ್ಲಿ ತಾರತಮ್ಯವಾಗಲೀ, ಪಕ್ಷಪಾತವಾಗಲೀ ಇರುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಯಾರೇ ಆಗಲಿ, ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಭಾರತಕ್ಕೆ ಬಂದು ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಿಲ್ಲ ಎಂಬುದು ನಮಗೆ ಗೊತ್ತು. ಇದನ್ನು ಗಮನದಲ್ಲಿ ಇರಿಸಿಕೊಂಡು ಸೂಕ್ತ ವಾತಾವರಣ ಸೃಷ್ಟಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಶೃಂಗಸಭೆಯ ನಂತರ ಎರಡೂ ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದವು.

ಎರಡೂ ರಾಷ್ಟ್ರಗಳ ನಡುವೆ ಶೈಕ್ಷಣಿಕ ಬಾಂಧವ್ಯ ಸದೃಢಗೊಳಿಸುವ ಉದ್ದೇಶದಿಂದ ಪ್ರತಿವರ್ಷ ಶೃಂಗಸಭೆ ನಡೆಸಲು ನಿರ್ಧರಿಸಲಾಯಿತು. ಈ ಸಭೆ, ಒಂದು ವರ್ಷ ಅಮೆರಿಕದಲ್ಲಿ ನಡೆದರೆ ಮರುವರ್ಷ ಭಾರತದಲ್ಲಿ ನಡೆಯಲಿದೆ.
 
ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ರಂಗ ಮತ್ತು ಸರ್ಕಾರಗಳ ನಡುವೆ ಅರ್ಥಪೂರ್ಣ ಸಹಭಾಗಿತ್ವ ರೂಪಿಸುವುದು ಈ ಸಭೆಯ ಉದ್ದೇಶ. ಕೇವಲ ಲಾಭವೊಂದನ್ನು ಉದ್ದೇಶವಾಗಿಟ್ಟುಕೊಳ್ಳುವ ಸಂಸ್ಥೆಗಳನ್ನು ಭಾರತದ ಜನತೆ ಒಪ್ಪುವುದಿಲ್ಲ ಎಂದೂ ಸಿಬಲ್ ಇದೇ ವೇಳೆ ತಿಳಿಸಿದರು.

ಆರಂಭದಲ್ಲಿ ಹಂತದಲ್ಲಿ ಎರಡೂ ರಾಷ್ಟ್ರಗಳು ಜಂಟಿ ಪದವಿ ನೀಡುವಿಕೆ, ಡಿಪ್ಲೊಮಾ ಕೋರ್ಸ್, ಕೌಶಲ ಅಭಿವೃದ್ಧಿ ಇತ್ಯಾದಿಗಳ ಬಗ್ಗೆ ಗಮನ ನೀಡುವುದು ಸೂಕ್ತ. ಹಾರ್ವರ್ಡ್, ಯೇಲ್ ಅಥವಾ ಪ್ರಿನ್ಸ್‌ಟನ್ ವಿ.ವಿ.ಗಳು ಈಗಲೇ ಭಾರತಕ್ಕೆ ಬಂದು ಕ್ಯಾಂಪಸ್‌ಗಳನ್ನು ಸ್ಥಾಪಿಸಲಿವೆ ಎಂದು ನಾವು ನಿರೀಕ್ಷಿಸುವುದಿಲ್ಲ. ಅದು ನಮ್ಮ ಉದ್ದೇಶವೂ ಆಗಿಲ್ಲ ಎಂದು ಸಿಬಲ್ ಒತ್ತಿ ಹೇಳಿದರು.

ಮೊದಲಿಗೆ ಅಮೆರಿಕದ ಶಿಕ್ಷಣ ಕ್ಷೇತ್ರದ ಪ್ರಮುಖರು ಭಾರತಕ್ಕೆ ಬಂದು ಅಲ್ಲಿನ ಭೌಗೋಳಿಕತೆ ಹಾಗೂ ಸಂಕೀರ್ಣತೆಗಳನ್ನು ಅರಿಯಬೇಕು. ನಂತರ ದೀರ್ಘಾವಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು  ಎಂದು ಸಲಹೆ ನೀಡಿದರು. ಎರಡೂ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ತಾಂತ್ರಿಕ ಅಭಿವೃದ್ಧಿ ಹಾಗೂ ಕೌಶಲಗಳ ವಿನಿಮಯ ಅತ್ಯಗತ್ಯ ಎಂದು ಸಿಬಲ್ ಮತ್ತು ಕ್ಲಿಂಟನ್ ಪ್ರತಿಪಾದಿಸಿದರು.

ಎರಡೂ ರಾಷ್ಟ್ರಗಳ ಸಹಯೋಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ ಸ್ಥಾಪಿಸುವ ಪ್ರಸ್ತಾವಕ್ಕೆ ನಾಯಕರು  ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT