ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಶ್ಚಟಮುಕ್ತ ರಾಷ್ಟ್ರಕ್ಕಾಗಿ ಸೈಕಲ್‌ ಯಾತ್ರೆ

Last Updated 2 ಡಿಸೆಂಬರ್ 2013, 8:41 IST
ಅಕ್ಷರ ಗಾತ್ರ

ಬೆಳಗಾವಿ: ವಯಸ್ಸು 50ರ ಗಡಿ ದಾಟಿದ್ದರೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಇಲ್ಲೊಬ್ಬ ವ್ಯಕ್ತಿ ದುಶ್ಚಟಮುಕ್ತ ರಾಷ್ಟ್ರ ನಿರ್ಮಾಣದ ಪಣ ತೊಟ್ಟು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೂ ಗುಜರಾತಿನಿಂದ ಪಶ್ಚಿಮ ಬಂಗಾಳದವರೆಗೆ ಸೈಕಲ್‌ ಯಾತ್ರೆ ಕೈಗೊಂಡಿದ್ದಾರೆ.

ಕೋಲಾರ ಜಿಲ್ಲೆಯ ಚಿಕ್ಕತಿರುಪತಿ ಗ್ರಾಮದ ಅಮನದೀಪ್‌ ಸಿಂಗ್‌ ಎಂಬುವರು ಈ ಸಾಧನೆ ಮಾಡಿದ ವ್ಯಕ್ತಿ. ಕಳೆದ 5 ವರ್ಷಗಳಿಂದ ನಿರಂತರವಾಗಿ ಸೈಕಲ್‌ ಯಾತ್ರೆ ಮಾಡುತ್ತಿರುವ ಅವರು ಈವರೆಗೆ 1,76,000 ಕಿ.ಮೀ. ದೂರ ಕ್ರಮಿಸಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಗಿನ್ನೆಸ್‌ ದಾಖಲೆಗೂ ಸೇರ್ಪಡೆಯಾಗಲಿದ್ದಾರೆ.

2008ರ ಜನೇವರಿ 1 ರಂದು ಆರಂಭಗೊಂಡ ಇವರ ಸೈಕಲ್‌ ಯಾತ್ರೆಗೆ ಈಗ 5ರ ಹರೆಯ. ಕರ್ನಾಟಕ, ಕೇರಳ, ತಮಿಳನಾಡು, ಪಾಂಡಿಚೇರಿ, ಗೋವಾ, ಮಹಾರಾಷ್ಟ್ರ, ಗುಜರಾತ, ರಾಜಸ್ಥಾನ, ನವದೆಹಲಿ, ಹರಿಯಾಣ, ಪಂಜಾಬ್‌, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಆಂಧ್ರ ಪ್ರದೇಶ, ಬಿಹಾರ್‌, ಜಾರ್ಖಂಡ್‌, ಓರಿಸ್ಸಾ ಸೇರಿದಂತೆ 25 ರಾಜ್ಯಗಳಲ್ಲಿ ಸೈಕಲ್‌ ಯಾತ್ರೆ ಕೈಗೊಂಡಿರುವ ಅವರು ದುಶ್ಚಟಮುಕ್ತ ರಾಷ್ಟ್ರ ನಿರ್ಮಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ನಿತ್ಯ 100 ಕಿ.ಮೀ. ಸೈಕಲ್‌ ತುಳಿಯುವ ಅಮನದೀಪ್‌ ಆ ಮಾರ್ಗದಲ್ಲಿ ಸಿಗುವ ಎಲ್ಲ ಶಾಲಾ, ಕಾಲೇಜುಗಳಿಗೂ ಭೇಟಿ ನೀಡಿ ಯುವಕರಿಗೆ ದುಶ್ಚಟಗಳಿಂದಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಭಿತ್ತಿಪತ್ರ ಪ್ರದರ್ಶಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಈವರೆಗೆ 35,000ಕ್ಕೂ ಹೆಚ್ಚು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಜನರು ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬರುತ್ತಿದೆ. ಇದರಿಂದ ಮನನೊಂದು ಜನರಿಗೆ ದುಶ್ಚಟಗಳ ಕುರಿತು ಜಾಗೃತಿ ಮೂಡಿಸಲು ಸೈಕಲ್‌ ಯಾತ್ರೆ ಆರಂಭಿಸಿದ್ದೇನೆ. ಈ ಕಾಯಕದಲ್ಲಿ ನೆಮ್ಮದಿ ಕಂಡುಕೊಂಡಿದ್ದೇನೆ’ ಎಂದು ಅಮನದೀಪ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

10 ಲಕ್ಷ ದೇಣಿಗೆ: ‘ನನ್ನ ಸಂಚಾರದ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಇಂಗ್ಲೆಂಡ್‌ನ ಶಿಖ್‌ ಸಂಗತ್‌ನವರು ₨ 10 ಲಕ್ಷ ದೇಣಿಗೆ ನೀಡಿದ್ದಾರೆ. ಕನ್ನಡ, ಪಂಜಾಬಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಪುಸ್ತಕ ಬರೆಯಲಿದ್ದೇನೆ. ಆ ಪುಸ್ತಕಕ್ಕೆ ‘ಅಮನ್‌ ಶಾಂತಿ ಸೈಕಲ್‌ ಯಾತ್ರೆ’ ಎಂದು ನಾಮಕರಣ ಮಾಡುತ್ತೇನೆ’ ಎನ್ನುತ್ತಾರೆ ಅಮನದೀಪ್‌ ಸಿಂಗ್‌.

ಮೂಲತಃ ಶಿಕ್ಷಕರಾಗಿರುವ ಅಮನದೀಪ್‌ ಅವರು, ಸೈಕಲ್‌ ಯಾತ್ರೆಗಾಗಿ ₨ 80 ಸಾವಿರ ಖರ್ಚು ಮಾಡಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ತಮ್ಮ ಕೊಡುಗೆ ನೀಡುತ್ತಿದ್ದಾರೆ.
_

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT