ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಕರ್ಮಿಗಳಿಗೆ ಉಗ್ರ ಶಿಕ್ಷೆ

ಮುಜಾಫರ್‌ನಗರದಲ್ಲಿ ಪ್ರಧಾನಿ ಭರವಸೆ
Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಜಾಫರ್‌ನಗರ(ಪಿಟಿಐ): ಕೋಮು ಗಲಭೆಯಿಂದ ತತ್ತರಿಸಿರುವ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಗೆ ಸೋಮವಾರ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಭೇಟಿ ಕೊಟ್ಟರು. ‘ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಮುಜಾಫರ್‌ನಗರದಿಂದ 30 ಕಿಲೋಮೀಟರ್ ದೂರದಲ್ಲಿರುವ ಬಸ್ಸಿ ಕಲನ್‌ ಗ್ರಾಮದ ಶಿಬಿರದಲ್ಲಿ ಆಶ್ರಯ ಪಡೆದಿರುವ ಮುಸ್ಲಿಂ ಸಮುದಾಯದ ವರನ್ನು ಕಂಡು ಸಾಂತ್ವನ ಹೇಳಿದ ಸಿಂಗ್, ‘ನಿಮ್ಮ ನೋವನ್ನು ಹಂಚಿಕೊಳ್ಳಲು ನಾವಿಲ್ಲಿಗೆ ಬಂದಿದ್ದು, ಗಲಭೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಲಾಗುವುದು’ ಎಂದು ಅಭಯ ನೀಡಿದರು.

ಸಂತ್ರಸ್ತ ಕುಟುಂಬಗಳಿಗೆ ಆಶ್ರಯ ನೀಡಲಾದ ತವಳಿ ಗ್ರಾಮದಲ್ಲಿ ಪ್ರಧಾನಿ, ಸೋನಿಯಾ ಹಾಗೂ ರಾಹುಲ್‌ ಅವರು ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಸಿಂಗ್‌, ‘ತೊಂದರೆಗೆ ಒಳಗಾದ ಕುಟುಂಬಗಳು ಮತ್ತೆ ತಮ್ಮ ಮನೆಗಳಿಗೆ ಮರಳುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ’ ಎಂದರು.

ಪ್ರಾಣ ಬೆದರಿಕೆ ಇರುವುದರಿಂದ ಶಿಬಿರದಲ್ಲಿ ಆಶ್ರಯ ಪಡೆದವರು ಮತ್ತೆ ಮನೆಗೆ ತೆರಳಲು ಸಿದ್ಧರಿಲ್ಲ ಎಂದು ಕುತ್ಬಿ ಗ್ರಾಮದ 42 ವರ್ಷದ ಜಮೀಲ್‌ ಬಸ್ಸಿ  ಪ್ರಧಾನಿಗೆ ಅಳುತ್ತಲೇ ವಿವರಿಸಿದರು.
ಬಸ್ಸಿ ಕಲನ್‌ ಗ್ರಾಮದ ಶಿಬಿರದಲ್ಲಿ ಸುಮಾರು 2000 ಜನರಿಗೆ ಆಶ್ರಯ ನೀಡಲಾಗಿದೆ.

44 ಸಾವು, 2462 ಬಂಧನ
ನವದೆಹಲಿ (ಪಿಟಿಐ):
ಮುಜಾಫರ್‌ ನಗರ ಹಿಂಸಾಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು,  ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸ ಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಗಲಭೆಪೀಡಿತ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶಸ್ತ್ರಸಜ್ಜಿತ 78 ತುಕಡಿಗಳನ್ನು ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಸಹ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ಪೀಠಕ್ಕೆ ತಿಳಿಸಿದೆ.

ಗಲಭೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪ್ರಧಾನಿ ಪರಿಹಾರ ನಿಧಿಯಿಂದ ರೂ.  2 ಲಕ್ಷದ ಜತೆಗೆ ರಾಜ್ಯ ಸರ್ಕಾರದ ವತಿಯಿಂದ ರೂ.  10 ಲಕ್ಷ ನೀಡಲಾಗುವುದು. ರಾಜ್ಯ ಸರ್ಕಾರ ನೀಡಿದ ಮಾಹಿತಿ ಅನ್ವಯ ಗಲಭೆಯಲ್ಲಿ ಈತನಕ 44 ಜನ  ಮೃತಪಟ್ಟಿದ್ದು, 97 ಜನ ಗಾಯಗೊಂಡಿದ್ದಾರೆ. ಒಟ್ಟು 2,462 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

ಗಲಭೆಗೆ ಸಂಬಂಧಿಸಿದಂತೆ ಮಾಹಿತಿ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ವಿವರಣೆ ನೀಡಿದೆ.

ಗಲಭೆಯಲ್ಲಿ 20,000 ಮನೆಗಳನ್ನು ಸುಟ್ಟುಹಾಕಲಾಗಿದ್ದು ಈ ಎಲ್ಲರಿಗೆ ತಾತ್ಕಾಲಿಕ ನೆಲೆ ಒದಗಿಸುವುದರ ಜತೆಗೆ ಆಹಾರ, ಔಷಧಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT