ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

Last Updated 31 ಜುಲೈ 2012, 4:35 IST
ಅಕ್ಷರ ಗಾತ್ರ

ದಾವಣಗೆರೆ: ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಿಂದೂಪರ ಸಂಘಟನೆಗಳು ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲ್ಲೆಕೋರರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಯಿತು.

ಜಿಲ್ಲಾ ಕಾಂಗ್ರೆಸ್‌ನಿಂದ ಕಾಲೇಜು ಬಂದ್
ಪಾಲಿಕೆ ಆವರಣದಿಂದ ಘೋಷಣೆ ಕೂಗುತ್ತಾ ಹೊರಟ ಕಾಂಗ್ರೆಸ್ ಮುಖಂಡರು ನಗರದ ವಿವಿಧ ಕಾಲೇಜುಗಳಿಗೆ ತೆರಳಿ ತರಗತಿ ಬಹಿಷ್ಕರಿಸುವಂತೆ ವಿದ್ಯಾರ್ಥಿಗಳನ್ನು ಕೋರಿದರು. ರಾಜನಹಳ್ಳಿ ಸೀತಮ್ಮ ಕಾಲೇಜು, ಸರ್ಕಾರಿ ಬಾಲಕರ ಪ್ರೌಢಶಾಲೆ, ಎವಿಕೆ ಕಾಲೇಜು ಹಾಗೂ ಬಾಪೂಜಿ ಪ್ರೌಢಶಾಲೆಗಳನ್ನು ಬಂದ್ ಮಾಡಿಸಿದರು.

 ಕೆಪಿಸಿಸಿ ಸದಸ್ಯ ಡಿ. ಬಸವರಾಜ್ ಮಾತನಾಡಿ, ಬಿಜೆಪಿಯ ಅಂಗಸಂಸ್ಥೆಗಳಾದ ಹಿಂದೂಪರ ಸಂಘಟನೆಗಳು ವಿದ್ಯಾರ್ಥಿಗಳ ಮೇಲೆ ಗೂಂಡಾ ವರ್ತನೆ ತೋರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಕಾನೂನು-ಸುವ್ಯವಸ್ಥೆ  ಹದಗೆಟ್ಟಿದೆ. ಹಿಂದೂ ಜಾಗರಣಾ ವೇದಿಕೆಯಂಥ ಸಂಘಟನೆಗಳು ಮಹಿಳೆಯರು ಮತ್ತು ಸಂಸ್ಕೃತಿ ರಕ್ಷಣೆಯನ್ನು ಗುತ್ತಿಗೆಗೆ ಪಡೆದಂತೆ ವರ್ತಿಸುತ್ತಿವೆ. ಘಟನೆಯ ಹೊಣೆ ಹೊತ್ತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ಮಾತನಾಡಿ, ಅಫ್ಘಾನಿಸ್ತಾನದ ತಾಲಿಬಾನಿಗಳೂ ನಾಚುವಂತೆ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

2009ರಂದು ಪಬ್ ಮೇಲೆ ದಾಳಿ ನಡೆದಾಗಲೇ ಅಂಥ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ್ದರೆ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಹೇಳಿದರು.

ಕೆ.ಜಿ. ಶಿವಕುಮಾರ್, ಎಸ್. ಮಲ್ಲಿಕಾರ್ಜುನ, ಎ. ನಾಗರಾಜ್, ನಲ್ಕುಂದ ಹಾಲೇಶ್, ಕೋಳಿ ಇಬ್ರಾಹಿಂ, ಡಿ.ಎನ್. ಜಗದೀಶ್, ಪದ್ಮಾ ವೆಂಕಟೇಶ್, ಕೆ. ಕಾಳಾಚಾರ್, ಎಂ. ಮಂಜುನಾಥ್ ನೇತೃತ್ವ ವಹಿಸಿದ್ದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ
ಘಟನೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ, ಪ್ರಜಾಸತ್ತಾತ್ಮಕ ಯುವ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಂಥ ಅಮಾನುಷ ದಾಳಿಗಳಿಗೆ ಸ್ಥಳವಿಲ್ಲ. ಜಾಹೀರಾತು, ಸಿನಿಮಾ, ಇನ್ನಿತರ ಕಾರ್ಯಕ್ರಮಗಳಲ್ಲಿ ರಾರಾಜಿಸುತ್ತಿರುವ ಅಶ್ಲೀಲತೆ ವಿರುದ್ಧ ಧ್ವನಿ ಎತ್ತದ ದಾಳಿಕೋರರು ಸಂಸ್ಕೃತಿಯ ವಕ್ತಾರರಂತೆ ಇಂಥ ಹಲ್ಲೆಗೆ ಮುಂದಾಗುತ್ತಿರುವುದು ವಿಷಾದನೀಯ.

ಅಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ದೀಪಾ, ಡಾ.ವಸುಧೇಂದ್ರ, ಮಂಜುನಾಥ್ ಕೈದಾಳ್, ಸುನಿಲ್, ಪರಶುರಾಮ್, ಭಾರತಿ, ಮೋಹನ್ ಭಾಗವಹಿಸಿದ್ದರು.

ಮಹಿಳಾ ವಕೀಲರು, ಜೆಡಿಎಸ್, ಸುವರ್ಣ ಲೇಡಿಸ್ ಕ್ಲಬ್

ನಗರದ ಮಹಿಳಾ ವಕೀಲರು, ಜೆಡಿಎಸ್ ಮಹಿಳಾ ಘಟಕ ಹಾಗೂ ಸುವರ್ಣ ಲೇಡಿಸ್ ಕ್ಲಬ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಅವರಿಗೆ  ಮನವಿ ಸಲ್ಲಿಸಲಾಯಿತು.

ವಕೀಲರಾದ ಅಮೀರಾಬಾನು ಮಾತನಾಡಿ, ಹಲ್ಲೆ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಮಹಿಳೆಯರು ತಲೆಎತ್ತಿ ನಡೆಯದಂತಾಗಿದೆ. ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಕೆ. ಮಂಜುಳಾ, ವಿಜಯಾ ಅಕ್ಕಿ, ಮಮ್ತಾಜ್ ಬೇಗಂ, ಜಮ್ರುದಾ ಬೇಗಂ, ಮಾಲಾ, ಶಶಿಪ್ರಕಾಶ್, ಚಂದ್ರಿಕಾ ಜಗನ್ನಾಥ್, ಶಶಿ ಶಿವಲಿಂಗಪ್ಪ, ಶಶಿ ಶಿವಯ್ಯ, ಬಿ. ಮಾಧವಿ ಭಾಗವಹಿಸಿದ್ದರು.

 ಭಾರತ ಕಮ್ಯುನಿಸ್ಟ್ ಪಕ್ಷ
ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ (ಎಂ) ಕಾರ್ಯಕರ್ತರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಗೂಂಡಾ ಸಂಸ್ಕೃತಿಗೆ ಕಡಿವಾಣ ಹಾಕಬೇಕು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಸರ್ಕಾರವು ಈ ಘಟನೆಯ ಸಂಚನ್ನು ಬಯಲಿಗೆ ತರಬೇಕು. ಮಹಿಳೆಯರು ಹಾಗೂ ಯುವಕರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಇ. ಶ್ರೀನಿವಾಸ್, ಕೆ.ಎಲ್. ಭಟ್, ಎಚ್. ವೆಂಕಟೇಶ್, ಬಸವರಾಜ್, ಉಬೇದುಲ್ಲಾ, ಶ್ರೀನಿವಾಸಮೂರ್ತಿ, ಮಹಾಲಿಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT