ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರದೃಷ್ಟಿಯ ನಾಯಕ ಅರಸು

Last Updated 21 ಆಗಸ್ಟ್ 2012, 7:50 IST
ಅಕ್ಷರ ಗಾತ್ರ

ಬಾಗಲಕೋಟೆ: ಉಳುವವನೆ ಹೊಲದೊಡೆಯ, ಜೀತ ಪದ್ಧತಿ ನಿಷೇಧ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ, ಬಡ ಮಕ್ಕಳಿಗಾಗಿ ಶಿಷ್ಯವೇತನ, ಭಾಗ್ಯಜ್ಯೋತಿ, ಜನತಾ ಮನೆಗಳನ್ನು ನಿರ್ಮಿಸಿ ರಾಜ್ಯದಲ್ಲಿ ಕ್ರಾಂತಿಕಾರಕ ಸುಧಾರಣೆಯನ್ನು ತರುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ ಎಂದು ಜಮಖಂಡಿ ತಾಲ್ಲೂಕಿನ ಹುನ್ನೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ. ವೈ.ವೈ.ಕೊಕ್ಕನವರ ಹೇಳಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವತಿಯಿಂದ ನವನಗರದ ಡಿ.ದೇವರಾಜ ಅರಸು ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅರಸು ಅವರ 97ನೇ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಜಾರಿಗೊಳಿಸಿದ 20 ಅಂಶಗಳ ಕಾರ್ಯಕ್ರಮವನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ, ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗಗಳನ್ನು ಅರಸು ಮೇಲಕ್ಕೆತ್ತಿದ್ದರು ಎಂದು ಸ್ಮರಿಸಿದರು.

ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಹೊಂದಿದ್ದ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೂರದೃಷ್ಟಿಯಿಂದ ಜಾರಿಗೊಳಿಸಿದ್ದ ಕಾರ್ಯಕ್ರಮಗಳನ್ನೇ ಇಂದಿನ ರಾಜಕಾರಣಿಗಳು ಹೊಸ ಹೆಸರಿನಲ್ಲಿ ಜಾರಿಗೊಳಿಸುತ್ತಿದ್ದಾರೆ ಎಂದರು.

ಅಪರೂಪದ ರಾಜಕಾರಣಿ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ, ದೇವರಾಜ ಅರಸು ರಾಜ್ಯ ಕಂಡಂತ ಅಪರೂಪದ ರಾಜಕಾರಣಿ ಎಂದರು.

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರ ಪರವಾಗಿ ಚಿರಸ್ಮರಣೀಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅವರಷ್ಟು ಶ್ರಮಿಸಿದವರು ರಾಜ್ಯದಲ್ಲಿ ಬೇರೊಬ್ಬರಿಲ್ಲ ಎಂದರು.

ಅಧಿಕಾರ ಶಾಸ್ವತವಲ್ಲ, ಅಧಿಕಾರದಲ್ಲಿದ್ದಾಗ ಮಾಡುವ ಕಾರ್ಯಗಳು ಮಾತ್ರ ಶಾಸ್ವತ ಎಂಬುದಕ್ಕೆ ಅರಸು ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು.

ವಿತರಣೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಧನ, ಅರ್ಹ ಫಲಾನುಭವಿಗಳಿಗೆ ಸ್ವಉದ್ಯೋಗ ಆರಂಭಕ್ಕೆ ಸಹಾಯಧನ ಮತ್ತು ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಶಾಸಕರು ವಿತರಿಸಿದರು.

ಸನ್ಮಾನ: ಮುಧೋಳದ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ವಿ.ಎನ್.ನಾಯಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ಪದ್ಮಾ ಬಿ. ಸಜ್ಜನ, ಅರಸು ಬಗ್ಗೆ ಮಾತನಾಡಿದರು.

ಜಿ.ಪಂ.ಸದಸ್ಯ ಪಾಂಡು ಪೊಲೀಸ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ಅಧ್ಯಕ್ಷ ವೀರಣ್ಣಹಳೆಗೌಡರ, ಹೆಚ್ಚುವರಿ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎ.ಹುಲಗೆಜ್ಜಿ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಎಂ.ಗುಂಡಪ್ಪ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT