ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯ ಕಲೆಯ ಜಾತಿ ಮೀಮಾಂಸೆ

Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ಜಾತಿವಾದ ಕೆಟ್ಟದ್ದು, ಅದು ಬ್ರಾಹ್ಮಣ ಮತ್ತು ಶೂದ್ರರ ನಡುವಣ ಇರಬೇಕಾದ ಒಂದು `ಯುದ್ಧ', ಕೆಳವರ್ಗದವರು ತಮಗೆ ಸಾಮಾಜಿಕ ನ್ಯಾಯವನ್ನು ಪಡೆದುಕೊಳ್ಳಲು ಇರುವ ಒಂದು ಅಸ್ತ್ರ ಎಂಬ ಮೂರು ಪೂರ್ವಗ್ರಹಗಳಿಂದಾಗಿ ದೃಶ್ಯ ಸಂಸ್ಕೃತಿಯಲ್ಲಿ ಜಾತಿವಾದದ ಕುರಿತ ಚರ್ಚೆಯನ್ನು ಈತನಕ ಮೌನಗೊಳಿಸಲಾಗಿದೆ.

ದೃಶ್ಯ ಸಂಸ್ಕೃತಿಯ ಮುಖ್ಯ ಅಂಗವಾದ ದೃಶ್ಯ ಕಲೆಯೊಳಗಿನ ಜಾತಿ ಭಿನ್ನತೆಯ ಕುರಿತು ಸಂವಾದವನ್ನು ಹುಟ್ಟುಹಾಕುವುದು ಕಲೆಯ ಗ್ರಹಿಕೆಯ ಪೂರ್ಣತೆಗೆ ಅವಶ್ಯ. ಏಕೆಂದರೆ ಜಾತೀಯತೆಯು (ಒಳ್ಳೆಯ ಮತ್ತು ಕೆಟ್ಟ ಎಂಬ ಎರಡೂ ಆಯಾಮಗಳಲ್ಲಿ) ಹಲವು ಅವತಾರಗಳಲ್ಲಿ ಅದು ಈಗಾಗಲೆ  ಆಚರಣೆಯಲ್ಲಿದ್ದು, ಅದನ್ನು ಕುರಿತ ಚರ್ಚೆಯನ್ನು ಮಾತ್ರ ಮೌನಗೊಳಿಸಲಾಗಿದೆ.

ಇಲ್ಲದಿದ್ದಲ್ಲಿ ವೆಂಕಟಪ್ಪ ಕಲಾಶಾಲೆ ಎಂಬ ಸಂಗ್ರಹಾಲಯದಲ್ಲಿ ಕೆ.ವೆಂಕಟಪ್ಪ ಮತ್ತು ಕೆ.ಕೆ.ಹೆಬ್ಬಾರ್ ಎಂಬ ಇಬ್ಬರು  ಮೇಲ್ವರ್ಗದ  ಕಲಾವಿದರು ಮಾತ್ರ ಹೇಗೆ ಮಾನ್ಯತೆಯ ಸ್ಥಾನ ಗಿಟ್ಟಿಸಿಕೊಂಡರು ಎಂಬುದು ಕೇವಲ ಆಕಸ್ಮಿಕ ರಾಜಕಾರಣದ ಫಲವೆನ್ನಿಸಿಕೊಳ್ಳುತ್ತದೆ. ಇಬ್ಬರಿಗಿಂತಲೂ ಇನ್ನೂರು ಮಂದಿ ಕರ್ನಾಟಕದ ಕಲಾವಿದರಿಗೆ ಅಲ್ಲಿ ಸ್ಥಾನ ದೊರಕಬಹುದಲ್ಲ ಎಂಬ ಉಪಾಯವು ಇದೇ ಜಾತಿ ರಾಜಕಾರಣವನ್ನು ಮೇಲುಸ್ತರಕ್ಕೆ ಒಯ್ಯಬಹುದಲ್ಲ ಎನ್ನಿಸಿಬಿಡುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಫ್ಯೂಡಲ್ ಆಡಳಿತದ ಕಾಲದಲ್ಲಿ ಕರ್ನಾಟಕದಲ್ಲಿದ್ದ ದೃಶ್ಯ ಕಲಾವಿದರಲ್ಲಿ ಹೆಚ್ಚಿನವರು ನಿರ್ದಿಷ್ಟ ಜಾತಿಗೆ ಸೇರಿದವರಾಗಿದ್ದರು. ಅವರನ್ನು ಮತ್ತು ಸೃಜನಶೀಲ ಸೃಷ್ಟಿಗಳ ವಸ್ತು ವಿಷಯಗಳನ್ನು ಕುಲಕಸುಬಿನ ಹೆಸರಿನಲ್ಲಿ ಆಸ್ಥಾನದ ವತಿಯಿಂದ ಪೋಷಿಸಲಾಗುತ್ತಿತ್ತು (ಇದನ್ನು ನಿಯಂತ್ರಿಸಲಾಗುತ್ತಿತ್ತು ಎಂದೂ ಗ್ರಹಿಸಬಹುದು. ಏಕೆಂದರೆ ಆಸ್ಥಾನದ ಪೋಷಣೆ ಎಂದರೆ ಆಸ್ಥಾನಕ್ಕೆ ಬೇಕಿರುವ ಕೃತಿಗಳನ್ನು ಸೃಷ್ಟಿಸಬೇಕೆಂದೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ). ಇದನ್ನು ಒಡೆದು, ಇಚ್ಛಿಸಿದವರೆಲ್ಲರೂ ಕಲೆಯನ್ನು ಸೃಷ್ಟಿಸಬಲ್ಲರು ಎಂಬುದು ಚಾಲ್ತಿಗೆ ಬಂದದ್ದು 20ನೇ ಶತಮಾನದಲ್ಲಿ.  ಅಚ್ಚರಿ ಎಂಬಂತೆ ಈ ಪಲ್ಲಟಕ್ಕೆ ಬ್ರಿಟಿಷ್ ಸಾಮ್ರೋಜ್ಯವು ಪರೋಕ್ಷವಾಗಿ ಕಾರಣವಾಯಿತು.

ಜಾತಿ ಮತ್ತು ಧರ್ಮಕ್ಕೆ ಬದ್ಧವಾಗಿದ್ದ ದೃಶ್ಯಕಲೆಯನ್ನು ವೃತ್ತಿಬದ್ಧವಾಗಿ ಬದಲಿಸಿದ್ದು ಬ್ರಿಟಿಷ್ ಕಲಾಶಾಲೆಗಳು. ಆಗ ಜಾತೀಯ ವಸಾಹತೀಕರಣದಿಂದ ಕಲೆ ವರ್ಣೀಯ ವಸಾಹತೀಕರಣಕ್ಕೆ ಸ್ಥಳಾಂತರಗೊಂಡಂತಾಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ಕಾರದ ಲಲಿತಕಲಾ ಅಕಾಡೆಮಿಗಳು ದೃಶ್ಯ ಸೃಷ್ಟಿಯನ್ನು, ಅದರ ನಿಯಮಾವಳಿಗಳನ್ನು ರೂಪಿಸುವವರನ್ನು ಸೃಷ್ಟಿಸಿದ್ದಿದೆ. ಅದೇ ಕಾರಣಕ್ಕೆ ಒಂದೊಮ್ಮೆ ಬಾಟೆಲ್-ನೆಕ್ ಆಗಿದ್ದ ಅದು ಇಂದು ತನ್ನ ಪ್ರಸ್ತುತಿಯನ್ನು ಹೆಚ್ಚೂ ಕಡಿಮೆ ಕಳೆದುಕೊಂಡಿದೆ. ಫ್ಯೂಡಲ್, ವಸಾಹತು ಹಾಗೂ ಸರ್ಕಾರಿ ಸಾಂಸ್ಥೀಕರಣದ ಈ ಮೂರೂ ಹಂತಗಳನ್ನು ಒಡೆದು  ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಅಧಿಕಾರವನ್ನು ಕಲಾಸೃಷ್ಟಿ ಸಂಪಾದಿಸಿಕೊಂಡಿದ್ದರ ಹಿಂದೆ ಮೊದಲೇ ಹೇಳಿದ ಮೂರು ಬಗೆಯ ದೃಶ್ಯ ಜಾತಿಗಳ ಸೃಷ್ಟಿ ಮತ್ತು ಅವುಗಳ ನಿರ್ವಚನ ಕೆಲಸ ಮಾಡಿದೆ.

ಇಷ್ಟಾದರೂ ಜಾತಿವಾದ ದೃಶ್ಯಕಲೆಗೆ ಅನವಶ್ಯಕ ಎಂದಲ್ಲಿ ಅದೂ ಒಂದು ಹಿಪೊಕ್ರಿಟಿಕಲ್ ರಾಜಕಾರಣವೇ ಹೌದು. ಪತ್ರಿಕೆಯೊಂದಕ್ಕೆ ದಶಕವೊಂದರ ಕಾಲ ನಾನು ಕಲಾವಿಮರ್ಶೆಯನ್ನು ಬರೆಯುತ್ತಿದ್ದಾಗ, ಅದರ ಸಂಪಾದಕರು ನನ್ನ ಹೆಸರಿನಲ್ಲಿನ ಇನಿಶಿಯಲ್ಸ್‌ಗಳನ್ನು ವಿಸ್ತರಿಸಲು ಹೇಳುತ್ತಿದ್ದರು. ಅದು ನನ್ನ ಜಾತಿ, ವರ್ಗವನ್ನು ಪತ್ತೆಹಚ್ಚುವ ಸಹಜ ಉಪಾಯವಾಗಿತ್ತೆ? ಈ ಪ್ರಶ್ನೆಗೆ ನನಗೀಗಲೂ ಉತ್ತರ ಗೊತ್ತಿಲ್ಲ.

ಇಂದಿಗೂ ಸರ್ಕಾರವು ಕಲಾಶಾಲೆಗಳಲ್ಲಿ ಕಲಾವಿದರ ಶಿಬಿರ ನಡೆಸಲು ಸಹಾಯಧನ ನೀಡಿದಾಗ, ಇಂತಿಷ್ಟು ಶೇಕಡ ನಿರ್ದಿಷ್ಟ ಜಾತಿ/ವರ್ಗದ ಕಲಾವಿದರು ಆ ಶಿಬಿರದಲ್ಲಿರಬೇಕು ಎಂಬ ನಿಯಮವನ್ನು ಅನುಸರಿಸಬೇಕೆಂದಾಗ ಅಂತಹ ಶಿಬಿರದಲ್ಲಿ ಸೃಷ್ಟಿಗೊಂಡ ಕೃತಿಗಳು ಹೇಗೆ ಜಾತ್ಯತೀತವಾಗಿರಬಲ್ಲವು? ಮತ್ತು ಜಾತ್ಯತೀತವಾಗಿರುವ ಅವಶ್ಯಕತೆ ಏನು?  ಸ್ವತಃ ಕಲೆಯೇ ಒಂದು ಜಾತಿ, ಕಲಾವಿದರದ್ದು ಒಂದೇ ಜಾತಿ  ಎಂಬುವವರ ಆದರ್ಶೀಕೃತ, ರೂಪಕಾತ್ಮಕ ಮಾತಿನ ಹಿಂದಿನ ಆಶಯವೇ ಪ್ರಸ್ತುತ ಜಾತಿ-ವರ್ಗವು ದೃಶ್ಯಸಷ್ಟಿಯಲ್ಲಿ ಅಡಕವಾಗಿರುವುದನ್ನು ಕುರಿತಾದ ಚರ್ಚೆಗೆ ಮೂಲ ಪ್ರೇರಣೆಯಾಗುವುದಿಲ್ಲವೇ?

ಸಮಕಾಲೀನ ಜಗತ್ತಿನಲ್ಲಿ ಸೃಷ್ಟಿಗೊಂಡು ಚಾಲ್ತಿಯಲ್ಲಿರುವ ಸಾಂಪ್ರದಾಯಿಕ, ಜಾನಪದ, ಆಧುನಿಕ ಹಾಗೂ ಸಮಕಾಲೀನ ದೃಶ್ಯಕಲೆಗಳು  ನಗರೀಕರಣವೆಂಬ ಜಾತಿಗೆ ಮತಾಂತರ ಹೊಂದಿದರೆ ಮಾತ್ರ ಅಸ್ತಿತ್ವದಲ್ಲಿರುತ್ತವೆ. ಇಂದಿಗೂ ಕರ್ನಾಟಕದಾದ್ಯಂತ ದೃಶ್ಯಕಲೆಗೆ ವಿಮರ್ಶೆಯ ಅಧಿಕೃತತೆಯನ್ನು ದೊರಕಿಸಿಕೊಡಲು ಬೆಂಗಳೂರಿನ ಕಲಾ ಬರಹಗಾರರೇ ಬೇಕೆಂಬ ಅಲಿಖಿತ ನಿಯಮವಿದೆ. ನಾರ್ಮನ್ ಬ್ರೈಸನ್ ದೃಶ್ಯಕಲೆಯಲ್ಲಿನ ಇಂತಹ ಅಂಚಿನಲ್ಲೇ ಉಳಿದುಕೊಂಡುಬಿಡುವ ಸುಖವನ್ನು, ಹುನ್ನಾರವನ್ನು  `ಅನೊರೆಕ್ಸಿಕ್'  ಎಂದು ವರ್ಗೀಕರಿಸುತ್ತಾನೆ.

ಲಂಡನ್ನಿನ ಟೇಟ್ ಮಾಡರ್ನ್ ಗ್ಯಾಲರಿಯಲ್ಲಿ ಮೌಲ್ಯವಂತ ಕಲಾಕೃತಿಗಳ ಕಾವಲು ಕಾಯಲು ಬಿಳಿಯರು ಬೇಕು, ಅದೇ ಕಟ್ಟಡದ ಕೆಳಗಿನ ಕೆಫೆಯಲ್ಲಿ ತಿಂಡಿ ತೀರ್ಥ ಮಾರಲು ಕರಿಯರು ಸಾಕು ಎಂಬ ಸಂಗ್ರಹಾಲಯದ  `ವೈಟ್ ವಾಷ್' ಕ್ರಿಯೆಯನ್ನು ಸಾಕ್ಷಿ ಸಮೇತ ಎಡ್ಡಿ ಛೇಂಬರ್ಸ್ ಎಂಬ ಕರಿಯ ವಿಮರ್ಶಕ ಅನಾವರಣಗೊಳಿಸಿದ್ದಾನೆ.

ಕರ್ನಾಟಕದ ಕಲಾವಿದರು ನಮ್ಮ ಪುರಾಣಗಳನ್ನು ದಶಕಗಳ ಕಾಲ ಅನವರತವಾಗಿ, ನಿರ್ದಿಷ್ಟ ಜಾತಿಧರ್ಮಗಳಿಗೆ ಬದ್ಧರಾಗಿ ಚಿತ್ರೀಕರಿಸುತ್ತಿರುವಾಗ ಆರ್ಯ ಕುಲವೆಂಬ ಕಲ್ಪನೆಯ ಶ್ರೇಷ್ಠತೆಯ ವಸಾಹತೀಕರಣಕ್ಕೆ/ವರ್ಗೀಕರಣಕ್ಕೆ ಒಪ್ಪಿಗೆ ಸೂಚಿಸಿದ್ದರೆ? (ಬೆಳ್ಳಗೆ, ಅಜಾನುಬಾಹು, ಚೂಪು ಮೂಗು ಇತ್ಯಾದಿಗಳಿರುವ-ನಮ್ಮ ಸುತ್ತಮುತ್ತಲೂ ಕಾಣದಂತಹವರ ಆಕಾರಗಳಿವು; ಈ ದೃಷ್ಟಿಯಲ್ಲಿ ಎಸ್.ಎಂ.ಪಂಡಿತ್, ಎಂ.ಟಿ.ವಿ.ಆಚಾರ್ಯರಿಂದ ಆರಂಭಗೊಂಡು ಇತ್ತೀಚಿನ ಇಲಸ್ಟ್ರೇಟರ್‌ಗಳವರೆಗಿನ ಕಲಾವಿದರ ಕೃತಿಗಳ, ಮುಖಪುಟ ಚಿತ್ರಗಳನ್ನು ಪರಿಶೀಲಿಸಬಹುದು).

ಸರ್ಕಾರಿ ಕಲಾಸಂಸ್ಥೆಯೊಂದರಲ್ಲಿ ಖಾಲಿ ಇರುವ ಕಲಾ ಇತಿಹಾಸದ ಖಾಯಂ ಹುದ್ದೆಗೆ ನಿರ್ದಿಷ್ಟ ವರ್ಗ ಹಾಗೂ ಲಿಂಗದವರ ಅವಶ್ಯಕತೆ ಇರುವುದರಿಂದ, ಅಂತಹವರು ಎರಡು ದಶಕದಿಂದಲೂ ಲಭ್ಯವಾಗದಿರುವುದರ ಹಿಂದೆ ಜಾತಿ, ವರ್ಗ, ಲಿಂಗ, ರೋಸ್ಟರ್ ಪದ್ಧತಿ ಮತ್ತು ನಗರೀಕರಣಗಳೆಂಬ ರಾಜಕಾರಣವು ಕೆಲಸಮಾಡಿಲ್ಲವೆಂದು ಖಡಾಖಂಡಿತವಾಗಿ ಹೇಳಲು ಸಾಧ್ಯವೇ? ಮತ್ತು ಹಾಗೆ ಹೇಳುವ ಅವಶ್ಯಕತೆ ಇಂದಿನ ಸಂಕೀರ್ಣ ವಿಮರ್ಶಾನುಭವದ ಯುಗದಲ್ಲಿ ಅವಶ್ಯಕವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT