ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯಕಲೆಗೂ ಸಮಾನ ಅನುದಾನ: ಮನವಿ

Last Updated 4 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಕೋಲಾರ: ಕನ್ನಡ- ಸಂಸ್ಕೃತಿ ಇಲಾಖೆಸಂಗೀತ, ನೃತ್ಯ, ಜಾನಪದ ಮತ್ತು ನಾಟಕಗಳಿಗೆ ನೀಡುವಷ್ಟೆ ಅನುದಾನವನ್ನು ದೃಶ್ಯಕಲೆಗೂ ನೀಡಬೇಕು ಎಂದು ಕೋರಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಕೃತಿಯ ಪೋಷಣೆಗಾಗಿ ರಾಜ್ಯ ಸರ್ಕಾರವು ಮೀಸಲಿಟ್ಟಿರುವ ರೂ 269 ಕೋಟಿಯಲ್ಲಿ ಶೇ 1ರಷ್ಟು ಅನುದಾನವೂ ಅಕಾಡೆಮಿಗೆ ದೊರಕುತ್ತಿಲ್ಲ. ಆದರೂ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ನಡೆಸಲು ಅಕಾಡೆಮಿ ಸಿದ್ಧತೆ ನಡೆಸಿದೆ ಎಂದರು.

ಸಂಸ್ಕೃತಿ ಇಲಾಖೆಯು ನಡೆಸುವ ಜಿಲ್ಲಾ ಉತ್ಸವಗಳಿಗೆ ಕನಿಷ್ಠ 50 ಲಕ್ಷದಿಂದ 1 ಕೋಟಿ ರೂಪಾಯಿ ಖರ್ಚಾಗುತ್ತದೆ. ಆದರೆ ಅಕಾಡೆಮಿಗೆ ದೊರಕುವ ವಾರ್ಷಿಕ ಅನುದಾನ ಕೇವಲ ರೂ 50 ಲಕ್ಷ ಮಾತ್ರ ಎಂದು ವಿಷಾದಿಸಿದರು.

ರಾಜ್ಯದಲ್ಲಿ 70 ಕಲಾಶಾಲೆಗಳಿವೆ. ಪ್ರತಿ ವರ್ಷವೂ ಆ ಶಾಲೆಗಳಿಂದ ನೂರಾರು ಪದವೀಧರರು ಹೊರಬರುತ್ತಾರೆ. ಅವರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿಕೊಡುವ ಕೆಲಸ ನಡೆಯಲಿದೆ ಎಂದರು.

ಪತ್ರ: ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ದೃಶ್ಯಕಲೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಅಗತ್ಯ. ಹೀಗಾಗಿ ಎಲ್ಲ ಕಾಲೇಜುಗಳಲ್ಲೂ ಪ್ರದರ್ಶನ ಕಲೆಗಳ ಘಟಕಗಳಿಗೆ ಮತ್ತೆ ಚಾಲನೆ ನೀಡಬೇಕು ಎಂದು ಕೋರಿ ಉನ್ನತ ಶಿಕ್ಷಣ ಸಚಿವರಿಗೂ ಅಕಾಡೆಮಿಯಿಂದ ಪತ್ರ ಬರೆಯಲಾಗಿದೆ ಎಂದರು.

ಅಕಾಡೆಮಿಯು ಆರಂಭವಾದಾಗ ಲಲಿತಕಲೆಯ ವಿವಿಧ ಕ್ಷೇತ್ರಗಳು ಇದರೊಟ್ಟಿಗೆ ಇದ್ದವು. ಆದರೆ ಈಗ ಶಿಲ್ಪವೂ ಸೇರಿದಂತೆ ಅಕಾಡೆಮಿಗಳು ಬೇರೆಯಾಗಿರುವ ಕಾರಣ ಬದಲಾದ ಸಂದರ್ಭದಲ್ಲಿ ಇದನ್ನು ಕರ್ನಾಟಕ ದೃಶ್ಯಕಲಾ ಅಕಾಡೆಮಿ ಎಂದು ಬದಲಿಸಬೇಕು ಎಂದು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. 2014ರಲ್ಲಿ ಅಕಾಡೆಮಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕಲಾವಿದರ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದರು.

ಮೂರು ವರ್ಷದ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ವಿಷನ್ ಡಾಕ್ಯುಮೆಂಟ್ ತಯಾರಿಸಲಾಗಿದೆ. ಸಲಹಾ ಸಮಿತಿ ರಚಿಸಲಾಗಿದೆ.

ಮಂಗಳೂರು, ಬೆಳಗಾವಿ, ಗುಲ್ಬರ್ಗಾ ಮತ್ತು ಶಿವಮೊಗ್ಗದಲ್ಲಿ ಕಲಾ ರಸಗ್ರಹಣ ನಡೆಸಲಾಗುವುದು. ಶಾಲಾ-ಕಾಲೇಜು ಹಂತದಲ್ಲಿ ವಿಮರ್ಶಾ ಲೇಖನ ಸ್ಪರ್ಧೆಗಳನ್ನುಆಯೋಜಿಸಲಾಗುವುದು ಎಂದರು.

ಲಿಯನಾರ್ಡ್ ಡಾ ವಿಂಚಿಯ ಜನ್ಮದಿನವಾದ ಏ.15ರಂದು ದೃಶ್ಯಕಲಾ ದಿನವನ್ನಾಗಿ ಆಚರಿಸಲಾಗುವುದು. ಪ್ರತಿ ಜಿಲ್ಲೆಯ ಕಲಾ ಇತಿಹಾಸದ ಕುರಿತು ಕೃತಿಗಳನ್ನು ಪ್ರಕಟಿಸಲಾಗುವುದು. ಕಲಾವಿದರ ಗೌರವ ಪ್ರಶಸ್ತಿಯ ಮೊತ್ತವನ್ನು ರೂ 10 ಸಾವಿರದಿಂದ 50 ಸಾವಿರಕ್ಕೆ ಮತ್ತು ವಾರ್ಷಿಕ ಕಲಾಪ್ರದರ್ಶನದ ಬಹುಮಾನ ಮೊತ್ತವನ್ನು ರೂ 5 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕೋಲಾರದಲ್ಲಿ ವೇದಮೂರ್ತಿ ಅವರು ಅಕಾಡೆಮಿಯ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT