ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯಮಾಧ್ಯಮ ಸಂಪೂರ್ಣ ಕಲುಷಿತ

Last Updated 22 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ಶಿವಮೊಗ್ಗ: ವ್ಯಾಪಾರ ಮತ್ತು ಕಲೆ ಎರಡನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗುವುದೇ ಕನ್ನಡ ಚಿತ್ರರಂಗದ ಈಗಿನ ಬಹುದೊಡ್ಡ ಸಮಸ್ಯೆ ಎಂದು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ವಿಶ್ಲೇಷಿಸಿದರು.
ನಗರದ ಕರ್ನಾಟಕ ಸಂಘದಲ್ಲಿ ಮಂಗಳವಾರ ಸಂಜೆ ಸಂಘದ ಗೌರವ ಸದಸ್ಯತ್ವ ಸ್ವೀಕರಿಸಿ ಅವರು ಮಾತನಾಡಿದರು.

ಯಾವ ದೇಶದಲ್ಲಿ ಸಿನಿಮಾ ಒಂದು ಉದ್ಯಮ ಅಲ್ಲ ಅಂತಹ ಕಡೆಗಳಲ್ಲಿ ಒಳ್ಳೆಯ ಸಿನಿಮಾಗಳಿಗೆ ಬೆಲೆ ಹಾಗೂ ಬೇಡಿಕೆ ಇದೆ. ಸಿನಿಮಾ ಎರಡು ಗಂಟೆ ಮನೋರಂಜನೆ ಒದಗಿಸಬೇಕು ಎಂಬ ಭಾವನೆ ಇಲ್ಲಿಯ ಜನರಲ್ಲಿ ಬೇರೂರಿಬಿಟ್ಟಿದೆ ಎಂದು ವಿಷಾದಿಸಿದರು.

ಬೇರೆ ಯಾವುದೇ ಕಲೆಗಿಲ್ಲದ ಸಮಸ್ಯೆ ಸಿನಿಮಾಕ್ಕಿದೆ. ಇಲ್ಲಿ ಕಲಾತ್ಮಕ ಮತ್ತು ವ್ಯಾವಹಾರಿಕ ಚಿತ್ರಗಳನ್ನು ಕಾಣಬಹುದು. ಇಂದು ಚರ್ಚೆಗಳನ್ನು ಹುಟ್ಟುಹಾಕುವುದು ಸಿನಿಮಾ ನೀಡಬಹುದಾದ ಬಹುದೊಡ್ಡ ಕೊಡುಗೆ. ಆದರೆ, ಎಲ್ಲರೂ ವ್ಯವಹಾರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಇದನ್ನೇ ಚಿತ್ರನಿರ್ಮಾಪಕರು ಚೆನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ. ಇದನ್ನು ಬದಲಿಸುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.

ಇಂದಿನ ಸಾಹಿತ್ಯ, ಸಂಗೀತ ಕಲುಷಿತಗೊಂಡಿಲ್ಲ. ಆದರೆ, ದೃಶ್ಯಮಾಧ್ಯಮ ಸಂಪೂರ್ಣ ಕಲುಷಿತಗೊಂಡಿದೆ. ಇಲ್ಲಿ ನಾವು ಪ್ರಚಾರವನ್ನೇ ನಿಜ ಎಂದು ಭಾವಿಸಿಕೊಳ್ಳುತ್ತಿದ್ದೇವೆ. ಆದರೆ, ಇದು ಒಳ್ಳೆಯ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಕಾಸರವಳ್ಳಿ ವಿಶ್ಲೇಷಿಸಿದರು.

ಅಭಿನಂದನಾ ಮಾಡಿದ ವಿಮರ್ಶಕ ಪ್ರೊ.ಟಿ.ಪಿ. ಅಶೋಕ, ಚಲನಚಿತ್ರಗಳನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿರುವುದು ಗಿರೀಶ್ ಕಾಸರವಳ್ಳಿ ಅವರ ದೊಡ್ಡ ಸಾಧನೆ. ಏಳು ಸ್ವರ್ಣ ಕಮಲ ಪ್ರಶಸ್ತಿಗಳು ಲಭಿಸಿದ ನಂತರವೂ ಸೃಜನಾತ್ಮಕ ಆತಂಕದಲ್ಲಿ ಅವರು ಮತ್ತೆ ಸಿನಿಮಾ ತಯಾರಿಗೆ ತೊಡಗಿಸಿಕೊಳ್ಳುತ್ತಾರೆ. ಹಾಗಾಗಿಯೇ ಅವರ ಚಿತ್ರಗಳು ವಿಭಿನ್ನ ನೆಲೆಯಲ್ಲಿ ನಿಲ್ಲುತ್ತವೆ ಎಂದರು.

ಚಲನಚಿತ್ರ ಮಾಧ್ಯಮ ಇಂದು ಸಂಪೂರ್ಣವಾಗಿ ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿದೆ. ಸತ್ಯಜಿತ್ ರಾಯ್‌ರಂತಹವರು ಹಿಂದಿಯಲ್ಲಿ `ಶತರಂಜ್ ಕೀ ಕಿಲಾಡಿ~ ಚಿತ್ರವನ್ನು ಬಾಲಿವುಡ್‌ಗೆ ಬಂದು ನಿರ್ಮಿಸುತ್ತಾರೆ. ಅದನ್ನು ನಿರ್ದೇಶಕ ಮತ್ತು ನಿರ್ಮಾಪಕರಿಗೆ ಲಾಭಂಶ ನೀಡಿ ಉದ್ದಿಮೆದಾರರು ಖರೀದಿಸುತ್ತಾರೆ.

ಆದರೆ ಚಿತ್ರವನ್ನು ಚಿತ್ರಮಂದಿರಗಳಿಗೆ ಬಿಡುಗಡೆಯನ್ನೇ ಮಾಡುವುದಿಲ್ಲ. ಹೀಗೆ ಸೃಜನಾತ್ಮಕ ಚಿತ್ರಗಳನ್ನು ಕೊಂದು ಹಾಕುವ ಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿಯೂ ಗಿರೀಶ್ ಕಾಸರವಳ್ಳಿ ಜವಾಬ್ದಾರಿಯಿಂದ ಉತ್ತಮ ಪ್ರಜ್ಞೆಯನ್ನು ರೂಪಿಸುವ ಸಿನಿಮಾ ಮಾಡುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ತೀ.ನಂ.ಶಂಕರನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ಗೌರವ ಕಾರ್ಯದರ್ಶಿ ಎಚ್.ಡಿ. ಉದಯಶಂಕರಶಾಸ್ತ್ರಿ, ಪದಾಧಿಕಾರಿಗಳಾದ ಕೆ.ಜಿ.ಸುಬ್ರಹ್ಮಣ್ಯ, ಎಚ್. ವಿಶಾಲಾಕ್ಷಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT