ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯರೂಪಕದಲ್ಲಿ ವಿವೇಕಾನಂದ

Last Updated 28 ಜನವರಿ 2013, 19:59 IST
ಅಕ್ಷರ ಗಾತ್ರ

ಕನ್ಯಾಕುಮಾರಿಯ ಅಬ್ಬರದ ಅಲೆಗಳ ಮಧ್ಯೆ ದೊಡ್ಡ ಬಂಡೆ. ಅದರ ಮೇಲೆ ಧ್ಯಾನಾಸಕ್ತರಾಗಿ ಕುಳಿತ ವಿವೇಕಾನಂದರು. ಅವರ ಮುಖದಲ್ಲಿನ ಹಸನ್ಮುಖದ ಭಾವ, ಸಂತೃಪ್ತವಾದ ಮುಚ್ಚಿದ ಕಣ್ಣುಗಳು... ಸ್ವಾಮಿ ವಿವೇಕಾನಂದರೇ ಸಾಕ್ಷಾತ್ ದರ್ಶನ ನೀಡಿದ ಅನುಭವವದು. ಹೀಗೆ ಅಲ್ಲಿದ್ದವರ ಮನದಲ್ಲಿ ಪಡಿಮೂಡಿಸಿ, ಮೈನವಿರೇಳಿಸುವಂತಿತ್ತು.

ಇದು ಯಾವುದೋ ಚಲನಚಿತ್ರದ ದೃಶ್ಯವಲ್ಲ, ವಿವೇಕಾನಂದ ಕಲಾ ಕೇಂದ್ರವು ಜಯನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ `ವಿಶ್ವ ವಂದ್ಯ ವಿವೇಕಾನಂದ' ದೃಶ್ಯರೂಪಕದ ಇಣುಕು ನೋಟ.ಈ ಪ್ರಯೋಗದಲ್ಲಿ ವಿವೇಕಾನಂದರ ಬಾಲ್ಯ, ರಾಮಕೃಷ್ಣರ ಭೇಟಿ, ಶಿಕಾಗೋ ಉಪನ್ಯಾಸ, ಭಾರತಕ್ಕೆ ಮರಳಿ ದೇಶದಾದ್ಯಂತ ಸಂಚರಿಸಿದ ದೃಶ್ಯಗಳು, ಅಜ್ಞಾನ ಮತ್ತು ಮೌಢ್ಯದಲ್ಲಿ ಮುಳುಗಿದ್ದ ಭಾರತೀಯ ಜನತೆಯನ್ನು ತಮ್ಮ ಸಿಂಹವಾಣಿಯ ಸಂದೇಶದಿಂದ ಜಾಗೃತಗೊಳಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧಗೊಳಿಸಿ, ಸ್ವತಂತ್ರ ಭಾರತದ ಬದುಕು ಹಾಗೂ ಅದಕ್ಕೆ ಅವರು ನೀಡಿದ ಸಂದೇಶವನ್ನು ದೃಶ್ಯ ರೂಪಕದಲ್ಲಿ ನೀಡಲಾಗಿದೆ.

`ಏಳಿ, ಎದ್ದೇಳಿ ಜಾಗೃತರಾಗಿ' ಎಂಬ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದೆ. ಇದರಲ್ಲಿ ಒಟ್ಟು 50 ಚಿತ್ರಗಳಿವೆ. ವಿವೇಕಾನಂದರ ಅನೇಕ ಅಪರೂಪದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಸ್ವಾಮಿ ವಿವೇಕಾನಂದರು ನೀಡಿದ ಸಂದೇಶವನ್ನು ಯುವಜನತೆಯಲ್ಲಿ ಬಿತ್ತುವ ಕಾರ್ಯವನ್ನು ವಿವೇಕಾನಂದ ಕಲಾಕೇಂದ್ರವು ಸುಮಾರು 40 ವರ್ಷಗಳಿಂದ ನಡೆಸುತ್ತ ಬಂದಿದೆ.

ಚಿಕ್ಕಂದಿನಿಂದಲೂ ವಿವೇಕಾನಂದರ ಆದರ್ಶಗಳಿಂದ ಪ್ರಭಾವಿತರಾದ ವಿ. ನಾಗರಾಜ್, ಡಾ. ಸುಬ್ಬರಾವ್ ಅವರ ಅಧ್ಯಕ್ಷತೆಯಲ್ಲಿ ಸಮಾನಮನಸ್ಕರೊಡನೆ ಈ ಕಲಾಕೇಂದ್ರವನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಸಾವಿರಾರು ವೇದಿಕೆಗಳಲ್ಲಿ ವಿವೇಕಾನಂದರ ಮೌಲ್ಯಾಧಾರಿತ ಸಂದೇಶಗಳನ್ನು ತಮ್ಮದೇ ಸಾಂಸ್ಕೃತಿಕ ಶೈಲಿಯಲ್ಲಿ ಸಾರುತ್ತಾ ಬಂದಿದ್ದಾರೆ.ದೃಶ್ಯ ರೂಪಕದಲ್ಲಿ ಸುಮಾರು 50 ಯುವ ಕಲಾವಿದರು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ಮತ್ತು ಸ್ವಾಮಿ ವಿವೇಕಾನಂದರ ಬಗೆಗಿನ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದರು.

“ಸ್ವಾಮಿ ವಿವೇಕಾನಂದರ ವೀರವಾಣಿಯ ನುಡಿಮುತ್ತುಗಳಲ್ಲಿ ಅಪಾರ ಶಕ್ತಿಯಿದೆ. ಅಮೃತ ಸಂದೇಶವಿದೆ ಎಂದು ನಂಬಿದವನು ನಾನು. ಆದ್ದರಿಂದ ಮೊದಲಿನಿಂದಲೂ ಸ್ವಾಮಿ ವಿವೇಕಾನಂದರ ಕುರಿತು ಏನಾದರೂ ಮಾಡಬೇಕೆಂಬ ಹಂಬಲವಿತ್ತು. ಆ ಹಂಬಲದ ರೂಪದಲ್ಲಿ `ವಿವೇಕಾನಂದ ಕಲಾಕೇಂದ್ರ' ಜನ್ಮ ತಾಳಿತು. ಅಂದಿನಿಂದ ಇಂದಿನವರೆಗೂ ಸಾಹಿತ್ಯ, ಸಂಗೀತ, ನೃತ್ಯ, ಯೋಗ, ಸಮಾಜಸೇವೆ, ಚಿತ್ರಕಲೆ, ಚಿತ್ರಪ್ರದರ್ಶನ, ಸತ್ಸಂಗ, ಸದ್ವಿಚಾರ ಚಿಂತನೆ, ಸದ್ಗಂತ ಪಠಣೆ ಮುಂತಾದ ಹದಿನಾರು ವಿಭಾಗಗಳನ್ನು ಒಂದೇ ಸೂರಿನಡಿ ಸಂಘಟಿಸಿ ಸ್ವಾಮಿ ವಿವೇಕಾನಂದರ ಆದರ್ಶವನ್ನು ಪ್ರಸ್ತುತಪಡಿಸಲು ಕಾರ್ಯಪ್ರವೃತ್ತವಾಗಿದೆ” ಎಂದು ಕಲಾಕೇಂದ್ರದ ಸ್ಥಾಪಕರಾದ ವಿ. ನಾಗರಾಜ್ ಹೇಳುತ್ತಾರೆ.

`ನಾಡಿನಾದ್ಯಂತ ಮಾತ್ರವಲ್ಲದೆ ದೇಶದಾದ್ಯಂತ ಸಂಚರಿಸಿ ವಿವೇಕಾನಂದರ ಸಂದೇಶವನ್ನು ಪಸರಿಸಬೇಕೆಂಬ ಹಂಬಲವಿದೆ. ಇದಕ್ಕಾಗಿ ಶಾಲಾ, ಕಾಲೇಜುಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೇವೆ, ಈ ವರ್ಷ ವಿಶೇಷವಾಗಿದೆ. ಸ್ವಾಮಿ ವಿವೇಕಾನಂದರ 150 ನೇ ಜಯಂತ್ಯುತ್ಸವವಾಗಿದೆ. ಅದರ ಅಂಗವಾಗಿ `ವಿಶ್ವ ವಂದ್ಯ ವಿವೇಕಾನಂದ' ಎಂಬ ದೃಶ್ಯ ನೃತ್ಯ ರೂಪಕದ150 ಪ್ರದರ್ಶನಗಳನ್ನು ಏರ್ಪಡಿಸುವ ಉದ್ದೇಶವಿದೆ' ಎಂದರು.
ಶಾಲಾ ಕಾಲೇಜುಗಳು ಮತ್ತು ವಿದ್ಯಾಸಂಸ್ಥೆಗಳು ಸ್ವಾಮಿ ವಿವೇಕಾನಂದರ ದೃಶ್ಯ ರೂಪಕವನ್ನು ತಮ್ಮ ಕಾಲೇಜಿನಲ್ಲಿ ಏರ್ಪಡಿಸಲು ಸಂಪರ್ಕಿಸಿ: ವಿ.ನಾಗರಾಜ್, ವಿವೇಕಾನಂದ ಕಲಾಕೇಂದ್ರ, ನಂ.147/8, 2 ನೇ ಬ್ಲಾಕ್, ಶ್ರೀರಾಮ ರಸ್ತೆ, ತ್ಯಾಗರಾಜನಗರ. ಮೊಬೈಲ್ ಸಂಖ್ಯೆ- 93412 54165.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT