ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿ ಒಂದೆ ಸೃಷ್ಟಿ ಬೇರೆ ಬೇರೆ

Last Updated 22 ಜನವರಿ 2011, 8:50 IST
ಅಕ್ಷರ ಗಾತ್ರ

ಕಲೆ ಎಲ್ಲದರಲ್ಲೂ ಇರುತ್ತದೆ. ಅದನ್ನು ನೋಡಲು ಕಣ್ಣುಗಳಿರಬೇಕು. ಆ ಕಣ್ಣಿಗೆ ಬುದ್ಧಿಯ ಬೆಂಬಲ ಇರಬೇಕು. ಕಣ್ಣು ಮತ್ತು ಬುದ್ಧಿಯು ಸೇರಿ ಆಂತರಿಕ ತುಮುಲ ಹೊರಗೆಡಹಬೇಕಾದರೆ ಕೈಗಳಿರಬೇಕು. ಈ ಮೂರರಲ್ಲಿ ಯಾವುದಾದರೊಂದು ನಿಷ್ಕ್ರಿಯವಾಗಿದ್ದರೆ ಇಲ್ಲವೆ ತೀಕ್ಷ್ಣತೆಯನ್ನು ಕಳೆದುಕಂಡಿದ್ದರೆ ಸೃಷ್ಟಿಕಾ ರ್ಯವು ಮಂದಗತಿಯಾಗುತ್ತದೆ. ಈ ಮೂರು ಚುರುಕುತನದಿಂದ ಕೂಡಿದ್ದರೆ ಅದು ಪ್ರಜ್ವಲಿಸುತ್ತದೆ. ಇವುಗಳೆಲ್ಲ ಮುಪ್ಪುರಿಗೊಂಡಾತ ತಾನು ರೂಢಿಸಿಕೊಂಡ ಕ್ಷೇತ್ರದಲ್ಲಿ ದೇದೀಪ್ಯಮಾನವಾಗಿ ಬೆಳಗುತ್ತಾನೆ ಎಂಬುದಕ್ಕೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಲೆಸ್ಲಿ ತ್ಯಾಗರಾಜನ್ ಹಾಗೂ ಅವರ ಆಪ್ತಮಿತ್ರ ವಿದೇಶಿ ಮೂಲ ಲೋವೆಲ್ ಡಗ್ಲಾಸ್ ಇಂಗ್ ಇವರಿಬ್ಬರು ರಚಿಸಿರುವ ಕಲಾಕೃತಿಗಳ ಸೃಷ್ಟಿ ಕಾರ್ಯದ ವಿವಿಧ ಮಜಲುಗಳು ಗಮನ ಸೆಳೆಯುತ್ತವೆ.

ಇವರಿಬ್ಬರ ಮನದಾಳದಲ್ಲಿ ರೂಪುಗೊಳ್ಳುವ ವಿಷಯಗಳು ಒಂದೇ ತೆರನಾದರೂ ಅದನ್ನು ಸೃಷ್ಟಿಸುವ ಕಾರ್ಯಮಾತ್ರ ಭಿನ್ನವಾದದ್ದು. ಲೆಸ್ಲಿ ತ್ಯಾಗರಾಜನ್ ಅವರ ಕೃತಿಗಳಲ್ಲಿ ನೋಟ ಒಂದಾದರೇ ಕೂಟ ಹಲವು. ಉದಾಹರಣೆಗೆ ಮರ ಕಡಿಯುತ್ತಿರುವುದು. ಇದೇನು ದೊಡ್ಡ ವಿಷಯವೇ..? ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಕಡಿಯುತ್ತಿರುವ ದೃಶ್ಯವನ್ನು ಹಾಗೂ ಅಲ್ಲಿನ ಜನ ಪ್ರತಿಭಟಿಸುತ್ತಿರುವುದನ್ನು ನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೆ ಅದೇ ವಿಷಯವನ್ನು ಚಿತ್ರವನ್ನಾಗಿಸಿ ಮನಸ್ಸಿಗೆ ನಾಟುವಂತೆ ಮಾಡಿದ್ದಾರೆ.
 
ಮರದಿಂದಾಗುವ ಪಾಠೋಪಕರಣ, ಪೀಠೋಪಕರಣ, ಕಾಗದ ತಯಾರಿಕೆ, ಇಡೀ ಆರ್ಥಿಕ ವ್ಯವಸ್ಥೆಯ ಭದ್ರ ಬುನಾದಿಯಾದ ಕರೆನ್ಸಿ ನೋಟುಗಳು, ಬದುಕಲು ಬೇಕಾದ ಗಾಳಿ, ಹಣ್ಣು ಹಂಪಲು, ಪಕ್ಷಿಗಳಿಗೇ ವಾಸ, ಇಂತಹವುಗಳನ್ನು ರೆಂಬೆ ಕೊಂಬೆಗಳಲ್ಲಿ ಚಿತ್ರಿಸಿ ಅರ್ಧ ಕಡಿದಾಗ ಬಾಗಿದ ಮರದ ಭಾಗದ ಮೇಲೆ ನಿಂತಿರುವ ಕಟುಕ, ಉಳಿದರ್ಧ ಭಾಗ ಮರವು ಕಣ್ಣೀರು ಸುರಿಸುತ್ತಾ ಆಕ್ರಂದನ ಮಾಡುವಂತೆ ಚಿತ್ರಿಸಿದ ರೀತಿ ಮನೋಜ್ಞ. ನೋಡುವುದಕ್ಕೆ ಸಹಜವಾದ ಮರ. ಆಳಕ್ಕೆ ಇಳಿದು ನೋಡಿದರೆ ವಿಶಾಲ. ಇಂತಹುದೇ ಕಾಡಿನ ರಾಜ ಸಿಂಹ. ನೋಟಕ್ಕೆ ಕಾಡು, ಕೂಟದಲ್ಲಿ ಸಿಂಹ ಮತ್ತೊಂದು ಅರಳಿಮರ, ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ 500ಕ್ಕಲೂ ಮಿಗಿಲಾದ ಚಿತ್ರಸಮೂಹ ಅಧ್ಯಾತ್ಮಿಕ, ಚಾರಿತ್ರಿಕ, ಪೌರಾಣಿಕ, ವಿಜ್ಞಾನ, ತಂತ್ರಜ್ಞಾನ, ಖಗೋಳ, ಭೂಗೋಳ,  ಇವೆಲ್ಲಾ ವಿಷಯ ಚಿತ್ರಗಳ ನಡುವೆ ಪ್ರಕೃತಿಯ ನೋಟ.

ಇನ್ನು ರಾಮಪ್ರೇಮ, ಮಿಲನಗಳ ವಿಷಯಕ್ಕೆ ಸಂಬಂಧಿಸಿದಂತೆ ಹೊರಗೆರೆಗಳನ್ನು ಡಾಳವಾಗಿಸಿ, ಒಳ ಆವರಣಕ್ಕೆ ಬಣ್ಣದ ಸ್ಪರ್ಶ ನೀಡಿ ನೋಟ ಒಂದು ಬಗೆಬಗೆಯಾದರೆ ಕೂಟವಂತೂ ಹಲವು ಬಗೆಯಾಗಿಸಿದ್ದಾರೆ. ನೋಡುಗನಿಗೆ ಅವರವರ ಶಕ್ತಿಗನುಸಾರವಾಗಿ ಅರ್ಥ ಮಾಡಿಕೊಳ್ಳಬಹುದು. ಹಸ್ತಗಳಿಂದಲೇ ಸೃಷ್ಟಿಸಿರುವ ಚಿತ್ರಗಳು ಪ್ರದರ್ಶದಲ್ಲಿ ಗಮನ ಸೆಳೆಯುತ್ತವೆ. ತ್ಯಾಗರಾಜನ್ ವಿದೇಶಿ ನೆಲೆಯಲ್ಲಿ ಅನೇಕ ಬಾರಿ ಸುತ್ತಾಡಿ ಅಲ್ಲೇ ವರ್ಷಗಳನ್ನು ಕಳೆದು ಗ್ಯಾಲರಿಗಳನ್ನು ಕಂಡುಂಡು ಅನುಭವ ಹೆಚ್ಚಿಸಿಕೊಂಡು ಜಾದೂಗಾರನಂತೆ ಚಿತ್ರಿಸಬಲ್ಲರು.

ಡಗ್ ಇಂಗ್ ಎಂದೇ ತಮ್ಮ ಹೆಸರನ್ನು ಚುಟುಕಾಗಿಸಿಕೊಂಡಿರುವ ಲೋವೆಲ್ ಡಗ್ಲಾಸ್ ಇಂಗ್ ಚಿತ್ರಗಳ ರಚನೆಯಲ್ಲಿ ಅಕಾಡೆಮಿಕ್ ನೆಲೆಯಿಂದ ದೂರ ಸಾಗಿ ಮನಸ್ಸಿನ ನಡೆಯನ್ನು ಕಂಡರಸಿದ್ದಾರೆ. ಉದಾಹರಣೆಗೆ ತಾಜ್‌ಮಹಲ್. ವಿವಿಧ ರೀತಿಯಲ್ಲಿ ಮಹಲ್ ಮುಂದೆ ನಿಂತು ಛಾಯಾಚಿತ್ರ ತೆಗೆಸಿಕೊಳ್ಳುವ ಜನರೇ ಅಧಿಕ. ಇವರ ಚಿತ್ರ ರಚನೆಯಲ್ಲಿ ತಾಜ್‌ಮಮಹಲ್ ಕಟ್ಟಡ ಮುಖ್ಯವಲ್ಲ. ಅದರೊಳಗಿನ ಪ್ರೀತಿಯೇ ಮುಖ್ಯ. ಹಾಗಾಗಿ ಅಲ್ಲಿ ಬಂದವರ ಮನಸ್ಸಿನಾಳದ ಮೋದ-ಪ್ರಮೋದಗಳು, ಆಲಿಂಗನಗಳು ಮುಖ್ಯವಾಗುತ್ತವೆ.ದೈನಂದಿನ ಚಟುವಟಿಕೆಯಲ್ಲಿ ನಡೆಯುವ ಸಂಭಾಷಣೆಗಳೆ ಚಿತ್ರ ರೂಪ ತಾಳಿವೆ, ಓದುವ ದೈನಂದಿನ ಪತ್ರಿಕೆಗಳ ಸುದ್ದಿಗಳೆ ಚಿತ್ರಗಳಾಗಿವೆ.ರಾಷ್ಟ್ರೀಯ ಅಂತರ ರಾಷ್ಟ್ರೀಯ ವ್ಯಕ್ತಿಗಳ ಮನೋದೌರ್ಬಲ್ಯಗಳ ಸಾಧನೆಗಳು ಚಿತ್ರ ರೂಪ ತಾಳಿವೆ.

ನ್ಯೂಯಾರ್ಕ್ ಸಿಟಿ ಕಾಲೇಜು, ವಾಷಿಂಗ್ಟನ್ ಯೂನಿವರ್ಸಿಟಿ, ನಾರ್ಥ್ ವೆಸ್ಟರ್ನ್ ಯೂನಿವರ್ಸಿಟಿಗಳಲ್ಲಿ  ಇವರ ಶಿಕ್ಷಣದ ವಿವಿಧ ಮಜಲುಗಳ ಪಟ್ಟಿ ದೊಡ್ಡದಿದೆ. ಸಮಾರು 80 ಕಿರುಚಿತ್ರಗಳ ಜನಕ, ಉತ್ತಮ ಡಾಕ್ಯುಮೆಂಟರಿ ಸಂಕಲನಕಾರ ಎಂಬ ಅಗ್ಗಳಿಕೆಗೆ ಪಾತ್ರರಾಗಿರುವ ಇವರು ವರ್ಷಕ್ಕೊಮ್ಮೆ ಮಿತ್ರ ತ್ಯಾಗರಾಜನ್ ನೋಡಲು ಮೈಸೂರಿಗೆ ಬಂದಾಗ ಏನಾದರೊಂದು ಚಿತ್ರಿಸಿ ಹೊಸತನ ಪ್ರದರ್ಶಿಸುತ್ತಾರೆ. ಇವರಿಬ್ಬರೂ ದೇಶ ಸುತ್ತು ಕೋಶ ಓದು ಎಂಬ ವರ್ಗಕ್ಕೆ ಸೇರಿದವರು. ನೋಟ ಒಂದಾಗಿ ಕೂಟ ಹಲವಾಗಿಸಿಕೊಂಡವರು. ಇವರಿಬ್ಬರ ಕಲಾಕೃತಿಗಳ ಪ್ರದರ್ಶನ ಕಲಾಮಂದಿರದ ಸುಚಿತ್ರ ಆರ್ಟ್‌ಗ್ಯಾಲರಿಯಲ್ಲಿ ಜ.22 ಮತ್ತು 23 ರಂದು ಎರಡು ದಿನ ಮಾತ್ರ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT