ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅತ್ಯಾಚಾರ: ನಾಲ್ವರಿಗೂ ಗಲ್ಲು ಶಿಕ್ಷೆ - ಐತಿಹಾಸಿಕ ತೀರ್ಪು

Last Updated 13 ಸೆಪ್ಟೆಂಬರ್ 2013, 14:37 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್ಎಸ್): ನವದೆಹಲಿಯಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರೂ ಅಪರಾಧಿಗಳಿಗೆ ದೆಹಲಿ ಕೋರ್ಟ್ ಶುಕ್ರವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ನಾಲ್ವರು ಅಪರಾಧಿಗಳಾದ ಮುಕೇಶ್, ಪವನ್ ಗುಪ್ತಾ, ವಿನಯ್‌ಶರ್ಮ ಹಾಗೂ ಅಕ್ಷಯ್‌ಠಾಕೂರ್ ಈ ನಾಲ್ವರಿಗೂ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿ ಯೋಗೀಶ್‌ಖನ್ನಾ ಗಲ್ಲು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದರು. ಈ ಮೂಲಕ ರಾಷ್ಟ್ರದಲ್ಲಿ ಕಾಮುಕರಲ್ಲಿ ಕಾನೂನಿನ ಭಯ ಮನೆಮಾಡುವಂತೆ ಮಾಡಿದ್ದಾರೆ.

`ಇಂತಹ ಅಪರಾಧಗಳ ಬಗ್ಗೆ ಸಮಾಜದಲ್ಲಿ ಯಾವುದೇ ಸೈರಣೆ ಇಲ್ಲ. ಇಂತಹ ಘೋರ ಅಪರಾಧಗಳ ಕುರಿತು ನ್ಯಾಯಾಲಯ ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ' ಎಂದು ನ್ಯಾಯಾಧೀಶರು ಹೇಳಿದರು.

ತೀರ್ಪನ್ನು ಪ್ರಕಟಿಸುತ್ತಿದ್ದಂತೆ ಅಪರಾಧಿ ವಿನಯ್ ಶರ್ಮ ಕುಸಿದುಬಿದ್ದು, ನ್ಯಾಯಾಧೀಶರನ್ನು ಉದ್ದೇಶಿಸಿ 'ಸ್ವಾಮಿ, ಸ್ವಾಮಿ' ಎಂದು ಕೂಗಿದ. ಆದರೆ, ಪೊಲೀಸರು ಆತನನ್ನು ಅಲ್ಲಿಂದ ಕರೆದೊಯ್ದರು.

ಹಿನ್ನೆಲೆ: 2012ರ ಡಿ. 16ರಂದು ರಾತ್ರಿ ನವದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷ ವಯೋಮಾನದ ಫಿಜಿಯೊಥೆರಪಿ ವಿದ್ಯಾರ್ಥಿನಿಯನ್ನು ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅತ್ಯಾಚರವೆಸಗಿದ ಆರು ಮಂದಿಯಲ್ಲಿ ಒಬ್ಬ ಆರೋಪಿ ಜೈಲಿನಲ್ಲಿ­ದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲ ಆರೋಪಿಯಾಗಿದ್ದು, ಈಗಾಗಲೇ ಬಾಲ ನ್ಯಾಯಮಂಡಳಿ ಆತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅತ್ಯಾಚಾರಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡು ಜರ್ಜರಿತವಾಗಿದ್ದ ಯುವತಿ ಡಿ. 26ರಂದು ಸಿಂಗಪುರ್‌ನ ಮೌಂಟ್ ಎಲಿಜೆಬೆತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ವಿದ್ಯಾರ್ಥಿನಿಯ ಸಾವು ದೇಶದಾದ್ಯಂತ ಚರ್ಚೆಯಾಗಿತ್ತು. ಆರು ಮಂದಿ ಹೃದಯಹೀನ ಪುರುಷರ ಕೈಗೆ ಸಿಲುಕಿದ ಯುವತಿ ಊಹಿಸಲೂ ಸಾಧ್ಯವಾದ ರೀತಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ನಂತರವೂ ಜೀವನ್ಮರಣಗಳ ನಡುವೆ ಸೆಣಸಿ ದೇಹ ಜರ್ಜರಿತ ವಾದರೂ ಮನೋಸ್ಥೈರ್ಯ ಕಳೆದುಕೊಳ್ಳದೆ, ಹದಿನಾಲ್ಕು ದಿನಗಳ ಕಾಲ ಮೃತ್ಯುವನ್ನೇ ದಿಟ್ಟವಾಗಿ ಎದುರಿಸಿದ ಯುವತಿಯ ಪರವಾಗಿ ದೇಶ ಅಭಿಮಾನ ಪ್ರದರ್ಶಿಸಿತ್ತು.

ಹೋರಾಟ, ಪ್ರತಿಭಟನೆಗಳ ನಂತರ ನಿರಂತರವಾಗಿ ನಡೆಸಿದ ತನಿಖೆ, ವಿಚಾರಣೆಯಿಂದ ಬಂಧನಕ್ಕೊಳಗಾದ ಆರೋಪಿಗಳು ಶಿಕ್ಷೆಗೆ ಗುರಿಯಾಗುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT