ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಎಎಪಿ ಸರ್ಕಾರ

ಇಂದು ಅಂತಿಮ ನಿರ್ಧಾರ: ಅರವಿಂದ ಕೇಜ್ರಿವಾಲ್‌ ಹೇಳಿಕೆ
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್ಎಸ್‌):  ದೆಹಲಿಯಲ್ಲಿ ಕಾಂಗ್ರೆಸ್‌ ಬಾಹ್ಯ ಬೆಂಬ­ಲ­ದೊಂದಿಗೆ ಸರ್ಕಾರ ರಚಿಸುವ ಸ್ಪಷ್ಟ ಸುಳಿವನ್ನು ನೀಡಿರುವ ಆಮ್‌ ಆದ್ಮಿ ಪಕ್ಷವು (ಎಎಪಿ), ಈ ಬಗ್ಗೆ ಸೋಮ­ವಾರ (ಡಿ.23) ಬೆಳಿಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಈ ಮಧ್ಯೆ, ಸರ್ಕಾರ ರಚನೆಗೆ ಸಂಬಂಧಿಸಿದಂತೆ ಪಕ್ಷದ ಅಂತಿಮ ನಿರ್ಧಾರ ತಿಳಿಸಲು ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರನ್ನು ಸೋಮವಾರ ಮಧ್ಯಾಹ್ನ 12.30ಕ್ಕೆ ಭೇಟಿ ಮಾಡುವುದಾಗಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.  ಪಕ್ಷದ ಕೆಲವು ಮುಖಂಡರು ಮಾತ್ರ ಕಾಂಗ್ರೆಸ್‌ನೊಂದಿಗೆ ಮೈತ್ರಿ ಅಸಾಧ್ಯ ಎಂದೂ ಹೇಳಿದ್ದಾರೆ. 

ಸರ್ಕಾರ ರಚನೆಗೆ ಶೇ 80 ಜನರ ಒಲವು: ‘ಸರ್ಕಾರ ರಚನೆಗೆ ಸಂಬಂಧಿಸಿ­ದಂತೆ ಕಳೆದ ಒಂದು ವಾರದಿಂದ ನಡೆ­ಯುತ್ತಿ­ರುವ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಜನರು ಸಕಾರಾತ್ಮವಾ­ಗಿಯೇ ಅಭಿಪ್ರಾಯ­ವ್ಯಕ್ತಪಡಿಸಿದ್ದಾರೆ. ಶೇ 80ರಷ್ಟು ಜನರು ಸರ್ಕಾರ ರಚಿಸ­ಬೇಕು ಎಂದಿದ್ದಾರೆ. ಆದರೂ ಜನರ ಪ್ರತಿಕ್ರಿಯೆಯನ್ನು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ವಿಶ್ಲೇಷಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾ­ಗು­ವುದು’ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸು­ವಿರಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್‌, ‘ಪಕ್ಷದ ಪ್ರಣಾಳಿಕೆ ಬಲಿಷ್ಠ­ವಾಗಿದೆ. ಇದಕ್ಕೆ ನಾವು ಬದ್ಧರಾ­ಗಿದ್ದೇವೆ. ಅದನ್ನು ತಜ್ಞರ ಜೊತೆಗೆ ಚರ್ಚಿಸಿಯೇ ಸಿದ್ಧಪಡಿಸಿದ್ದೇವೆ. ಪ್ರಣಾಳಿ­ಕೆಯ ಕೆಲವೊಂದು ಅಂಶಗಳನ್ನು ಸರ್ಕಾರ ರಚಿಸಿದ ಕೆಲವೇ ಗಂಟೆಗಳಲ್ಲಿ ಜಾರಿಗೆ ತರಬಹುದು’ ಎಂದಿದ್ದಾರೆ.

‘280 ಜನಸಂಪರ್ಕ ಸಭೆಗಳನ್ನು ಈ ವರೆಗೂ ನಡೆಸಲಾಗಿದೆ. ಬಹುತೇಕ ಸಭೆ­ಗಳಲ್ಲಿ ಕಾಂಗ್ರೆಸ್‌ ನೆರವಿನಿಂದ ಸರ್ಕಾರ ರಚಿಸುವಂತೆ ಅಭಿಪ್ರಾಯ ವ್ಯಕ್ತವಾಗಿದೆ.  ಜೊತೆಗೆ, ಎಸ್‌ಎಂಎಸ್‌, ಸಾಮಾಜಿಕ ತಾಣ­ಗಳ ಮೂಲಕವೂ ವ್ಯಾಪಕ ಪ್ರತಿ­ಕ್ರಿ­ಯೆಗಳು ಬಂದಿದ್ದು, ಸರ್ಕಾರ ರಚಿ­ಸು­ವಂತೆ ಜನರು ಆಶಯ ವ್ಯಕ್ತಪಡಿ­ಸಿದ್ದಾರೆ. ಇದನ್ನು ಪರಾಮರ್ಶಿ­ಸಲಾಗುವುದು’ ಎಂದು ತಿಳಿಸಿದ್ದಾರೆ.

‘ವೈಯಕ್ತಿಕವಾಗಿ ಕಾಂಗ್ರೆಸ್‌ ಜೊತೆಗೆ ಹೋಗಲು ಇಷ್ಟವಿಲ್ಲ. ನಾವು ಚುನಾವ­ಣೆ­ಯಲ್ಲಿ ಕಾಂಗ್ರೆಸ್‌ ವಿರುದ್ಧವೇ ಹೋರಾ­ಡಿದ್ದು. ಆದರೆ, ಜನಾ­ಭಿ­ಪ್ರಾಯ ವಿಭಿನ್ನವಾಗಿದೆ’ ಎಂದಿದ್ದಾರೆ.

‘ಕಾಂಗ್ರೆಸ್‌ ಬೆಂಬಲ ಮುಂದುವರಿ­ಸುವ ಇಲ್ಲವೆ ಹಿಂದೆ ಪಡೆಯುವ  ಅಂಜಿಕೆಯೇನೂ ನನಗಿಲ್ಲ. ಅವರು (ಕಾಂಗ್ರೆಸ್) ಏನು ಬೇಕಾದರೂ ಮಾಡಲಿ. ಮತ್ತೆ ಚುನಾವಣೆ ಬೇಕಾ­ದರೂ ಎದುರಾಗಲಿ. ಆಗ ಜನರು  ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಕೇಜ್ರಿವಾಲ್‌ ಅವರು ಹೇಳಿದ್ದಾರೆ.

ಇದೇ ನಿಜವಾದ ಪ್ರಜಾಪ್ರಭುತ್ವ: ಇದಕ್ಕೂ ಮೊದಲು ಭಾನುವಾರ ನಾಲ್ಕು ಕಡೆ ನಡೆದ ಜನಸಂಪರ್ಕ ಸಭೆಯಲ್ಲಿ ಕೇಜ್ರಿವಾಲ್‌ ಭಾಗವಹಿ­ಸಿದ್ದರು. ಎಲ್ಲಾ ಸಭೆಗಳಲ್ಲೂ ಸರ್ಕಾರ ರಚಿಸುವಂತೆ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ದೆಹಲಿಯ ಸರೋಜಿನಿ ನಗರದಲ್ಲಿ ನಡೆದ ಸಭೆಯಲ್ಲಿ  ಮಾತ­ನಾಡಿದ ಕೇಜ್ರಿವಾಲ್‌, ‘ಸರ್ಕಾರ ರಚಿಸಿ­ದರೂ ಜನರನ್ನು ಮರೆಯು­ವುದಿಲ್ಲ. ಪ್ರಮುಖ ಸಮಸ್ಯೆಗಳ ಕುರಿತಂತೆ ಪಕ್ಷ ನಡೆಸುತ್ತಿರುವ ಹೋರಾಟ ಮುಂದುವರಿಯಲಿದೆ’ ಎಂದಿದ್ದಾರೆ.

ಸರ್ಕಾರ ರಚಿಸಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಪಕ್ಷ ನಡೆಸು­ತ್ತಿರುವ ಜನಾಭಿಪ್ರಾಯ ಸಂಗ್ರಹಕ್ಕೆ ವ್ಯಕ್ತ­ವಾಗಿರುವ ‘ನಾಟಕ’ ಎಂಬ ಟೀಕೆ­ಯನ್ನು ತಳ್ಳಿಹಾಕಿರುವ ಕೇಜ್ರಿವಾಲ್‌, ‘ಇದು (ಜನಾಭಿಪ್ರಾಯ ಸಂಗ್ರಹ) ಪ್ರಜಾ­ಪ್ರಭುತ್ವ– ಇದೇ ನಿಜವಾದ ಪ್ರಜಾಪ್ರ­ಭುತ್ವ. ಹಾಗಂತ ಎಲ್ಲಾ ವಿಷಯ­ಗ­ಳಿಗೂ ಜನಾಭಿಪ್ರಾಯ ಸಂಗ್ರಹ ಮಾಡಲು ಸಾಧ್ಯವಿಲ್ಲ.  ಇದೇ ಸಮಯ­ದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ರೂಢಿಸಿಕೊಂಡಿರುವ ತೆರೆ­ಮರೆಯ
ಚಟು­ವಟಿಕೆಗಳನ್ನು ನಾನು ಒಪ್ಪುವು­ದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT