ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಪ್ರತಿಪಕ್ಷ ಸ್ಥಾನದಲ್ಲಿ ಬಿಜೆಪಿ ?

Last Updated 8 ಡಿಸೆಂಬರ್ 2013, 20:01 IST
ಅಕ್ಷರ ಗಾತ್ರ

ನವದೆಹಲಿ: ಮತ ಎಣಿಕೆಯ ಹಾವು ಏಣಿಯಾಟದಲ್ಲಿ ಆಮ್‌ ಆದ್ಮಿ ಪಾರ್ಟಿ (ಎಎಪಿ)ಯಿಂದ ತೀವ್ರ ಸ್ಪರ್ಧೆ ಎದುರಿಸಿಯೂ ಸರಳ ಬಹುಮತ ಗಳಿಸುವಲ್ಲಿ ವಿಫಲವಾಗಿರುವ ಬಿಜೆಪಿ ಅಧಿಕಾರ ಹಿಡಿಯುವ ಕನಸು ನನಸಾಗುವ ಸಾಧ್ಯತೆಗಳು ಸದ್ಯಕ್ಕಂತೂ ಕಾಣುತ್ತಿಲ್ಲ.

ಬಹುಮತಕ್ಕೆ ಅಗತ್ಯವಾದ ಬೆಂಬಲ ಪಡೆಯಲು ಬಿಜೆಪಿ ನಾಯಕರು ಎಎಪಿಯನ್ನು ಸಂಪರ್ಕಿಸುವ ಸಾಧ್ಯತೆ ಕಾಣುತ್ತಿಲ್ಲವಾದ್ದರಿಂದ ಅತಂತ್ರ ವಿಧಾನಸಭೆ ಅನಿವಾರ್ಯ. ಹೀಗಾಗಿ  ಅತಿ ಹೆಚ್ಚು ಸ್ಥಾನಗಳನ್ನು (32) ಗೆದ್ದರೂ ವಿರೋಧ ಪಕ್ಷದಲ್ಲಿ ಕೂರಲು ಬಿಜೆಪಿ ಒಲವು ತೋರಿದೆ ಎನ್ನಲಾಗಿದೆ.

ಈಗಿರುವ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುಂದಾಗದೇ ಇದ್ದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಮೊದಲು ಮರುಚುನಾವಣೆ ನಡೆಯುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗಿದೆ.

ಅತಂತ್ರ ವಿಧಾನಸಭೆಯ ಚಿತ್ರಣವನ್ನು ಗಮನಿಸುತ್ತಿರುವ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌, ಸಂಪ್ರದಾಯದಂತೆ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವರು ಎಂದು ತಿಳಿಸಲಾಗಿದೆ.

ಸರ್ಕಾರ ರಚನೆಯ ವಿಷಯದಲ್ಲಿ ಬಿಜೆಪಿ ಇಲ್ಲವೇ ಎಎಪಿ ಪರಸ್ಪರ ಬೆಂಬಲ ನೀಡುವುದು ಈಗಿನ ಸ್ಥಿತಿಯಲ್ಲಿ ಅಸಾಧ್ಯ ಆಗಿರುವಾಗ ಹೊಸದಾಗಿ ಚುನಾವಣೆ ನಡೆಸುವುದೇ ಉಳಿದ ಮಾರ್ಗ ಎಂದು ಹೇಳಲಾಗುತ್ತಿದೆ.

ಬರಿ ಎಂಟು ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್‌ ಸರ್ಕಾರ ರಚನೆಯಲ್ಲಿ ಯಾವುದೇ ಪಾತ್ರವಹಿಸುವಂತಿಲ್ಲ.

ಸದ್ಯದ ಸರ್ಕಾರದ ಅವಧಿ ಡಿ.17ಕ್ಕೆ ಕೊನೆಗೊಳ್ಳುತ್ತಿದ್ದು ಹೊಸದಾಗಿ ಚುನಾವಣೆ ನಡೆಸುವುದಾದಲ್ಲಿ ಮುಂದಿನ ಆರು ತಿಂಗಳ ಒಳಗಾಗಿ ನಡೆಸಬೇಕು. ಮೇ 2014ರಲ್ಲಿ ಲೋಕಸಭಾ ಚುನಾವಣೆಗಳು ನಡೆಯಬೇಕಿದ್ದು ಇದೇ ಸಮಯದಲ್ಲಿ ದೆಹಲಿ ವಿಧಾನಸಭೆಗೂ ಮರು ಚುನಾವಣೆ ನಡೆಸಬೇಕಾಗುತ್ತದೆ.

ಅಗತ್ಯ ಬಹುಮತ ಸಿಗದೇ ಇರುವುದರಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ತಾವು ಸಿದ್ಧ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹರ್ಷವರ್ಧನ ಹೇಳಿಕೆ ನೀಡಿರುವುದರಿಂದ ಮರು ಚುನಾವಣೆ ಭೀತಿ ಎದುರಾಗಿದೆ.

ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಈ ಬಾರಿ ಶೇ 2ರಷ್ಟು ಮತಗಳನ್ನು ಹಾಗೂ  ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಶೇ 15ರಷ್ಟು ಮತಗಳನ್ನು ಕಳೆದು ಕೊಂಡಿವೆ. ಇದೇ ಮೊದಲ ಬಾರಿಗೆ ಕಣಕ್ಕೆ ಇಳಿದ ಎಎಪಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಅಗಾಧ ಸಾಧನೆ ತೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT