ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಬಾಂಬ್ ಸ್ಫೋಟ: ಸಿಗದ ಸೂಕ್ತ ಚಿಕಿತ್ಸೆ, ಕಾಂಗ್ರೆಸ್ - ಬಿಜೆಪಿ ವಾಕ್ಸಮರ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ಹೈಕೋರ್ಟ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಇರುವವರು ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂದು ಪ್ರತಿಭಟಿಸಿದ್ದು ಸರ್ಕಾರದ ವಿಶ್ವಾಸಾರ್ಹತೆ ಅಧೋಗತಿಗೆ ಇಳಿದಿರುವುದನ್ನು ತೋರಿಸುತ್ತದೆ. ಯೋಜಿತ ದಾಳಿ ತಡೆಯಲು ಸರ್ಕಾರ ವಿಫಲವಾಗಿರುವುದು ದೆಹಲಿ ಸ್ಫೋಟದಿಂದ ಬಹಿರಂಗಗೊಂಡಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ಮುಂಬೈ ಮೇಲೆ ನಡೆದ 26/11ರ ದಾಳಿಯ ನಂತರ ಹೊಸ ಸಾಧನ, ಸಲಕರಣೆಗಳನ್ನು ಅಳವಡಿಸಿ ಭದ್ರತೆ ಹೆಚ್ಚಿಸಿರುವುದಾಗಿ ಸರ್ಕಾರ ಪದೇಪದೇ ಹೇಳಿಕೊಂಡಿತ್ತು. ಆದರೆ ದೊಡ್ಡಮಟ್ಟದ ದಾಳಿ ತಡೆಯುವಲ್ಲಿ ಸರ್ಕಾರ ಸಫಲವಾಗಿಲ್ಲ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಸರ್ಕಾರದ ಬಗ್ಗೆ ಜನರಿಗೆ ಜಿಗುಪ್ಸೆ ಮೂಡಲು ಶುರುವಾಗಿದೆ. ಅಧಿವೇಶನಕ್ಕೆ ಆರಂಭಕ್ಕೆ ಕೆಲ ದಿನಗಳ ಮುನ್ನ ಮುಂಬೈನಲ್ಲಿ ಸರಣಿ ಸ್ಫೋಟವಾದರೆ, ಅಧಿವೇಶನದ ಕೊನೆ ವೇಳೆಗೆ ದೆಹಲಿಯಲ್ಲಿ ಸ್ಫೋಟವಾಗಿದೆ. ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಸರ್ಕಾರ ಹೇಳಿಕೆ ನೀಡಿದರೆ ಸಾಲದು. ಪಿಡುಗನ್ನು ಬೇರು ಮಟ್ಟದಿಂದ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಅದೇ ರೀತಿ, ಹಜಾರೆ ಮುಂದಾಳತ್ವದಲ್ಲಿ ಚಳವಳಿ ನಡೆಯುತ್ತಿದ್ದಾಗ ರಾಮಲೀಲಾ ಮೈದಾನಕ್ಕೆ ತೆರಳಿದ ಸಚಿವರೆಡೆಗೆ ಜನ ತೋರಿದ ತಿರಸ್ಕಾರ ಸರ್ಕಾರದ ವರ್ಚಸ್ಸು ಪಾತಾಳಕ್ಕಿಳಿದಿರುವುದನ್ನು ಬಿಂಬಿಸುತ್ತದೆ ಎಂದರು.

ಯುಪಿಎ ನೇತೃತ್ವ ವಹಿಸಿರುವ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿ ಭಾಗಿಯಾಗಿರುವ ಇತರ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಮುಂಗಾರು ಅಧಿವೇಶನದ ವೇಳೆ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಪ್ರಕಟವಾಗಿದೆ. ಅಧಿವೇಶನ ಆರಂಭವಾದ ಸಂದರ್ಭದಲ್ಲಿ ಸರ್ಕಾರ ದುರಹಂಕಾರದಲ್ಲಿ ಮುಳುಗಿತ್ತು. ಕೆಲವು ಸಚಿವರ ಸೊಕ್ಕನ್ನು ನೋಡಿ ಜನರಿಗೆ ಆಗಲೇ ಆಕ್ರೋಶ ಮಡುಗಟ್ಟಿತ್ತು. ಆದರೆ, ಅಧಿವೇಶನ ಮುಗಿಯುವ ಹೊತ್ತಿಗೆ ಯುಪಿಎ ಕೂಟದ ಹಿರಿಯ ನಾಯಕರಲ್ಲೇ ಸರ್ಕಾರದ ಬಗ್ಗೆ ಕಹಿ ಭಾವನೆ ಮೂಡಿತು ಎಂದು ಜೇಟ್ಲಿ ಟೀಕಾಸ್ತ್ರ ಪ್ರಯೋಗಿಸಿದರು.

ಒಂದೇ ಒಂದು ಅಧಿವೇಶನದ ಅವಧಿಯೊಳಗೆ ಸರ್ಕಾರದ ವಿಶ್ವಾಸಾರ್ಹತೆ ಭಾರಿ ಕುಗ್ಗಿದೆ. ಇಷ್ಟು ಕ್ಷಿಪ್ರ ಅವಧಿಯಲ್ಲಿ ಈ ಹಿಂದೆ ಯಾವ ಸರ್ಕಾರವೂ ಈ ಪ್ರಮಾಣದಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡಿರಲಿಲ್ಲ. ಸರ್ಕಾರ ಈಗ ತನ್ನೊಂದಿಗೆ ತಾನೇ ಸಂಘರ್ಷದಲ್ಲಿದೆ ಎಂದು ವ್ಯಂಗ್ಯವಾಡಿದರು.

ಹಜಾರೆ ಪ್ರತಿಭಟನೆಯನ್ನು ನಿಭಾಯಿಸಿದ ರೀತಿ ಸರ್ಕಾರದಲ್ಲಿರುವ ಪಕ್ಷಗಳ ನಡುವೆ ಒಮ್ಮತ ಇಲ್ಲವೆಂಬುದನ್ನು ಸಾಬೀತು ಮಾಡಿದೆ. ಈ ಸಂದರ್ಭದಲ್ಲಿ, ಯುಪಿಎ ಪಕ್ಷಗಳಲ್ಲಿ ಭಿನ್ನಮತ ಎದ್ದುಕಂಡರೆ, ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದವು ಎಂದು ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಪ್ರಹಾರ ಮಾಡಿದರು.

ಹಜಾರೆ ಅವರ ಹೋರಾಟವನ್ನು ಬಲಪ್ರಯೋಗಿಸಿ ಹತ್ತಿಕ್ಕಲು ಸರ್ಕಾರದ ಒಂದು ಗುಂಪು ಯೋಚಿಸಿತು. ಆದರೆ ಮತ್ತೊಂದು ಗುಂಪು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿತು. ಕಾಂಗ್ರೆಸ್‌ನೊಳಗೆ ಕೂಡ ಇದೇ ರೀತಿ ಒಡಕು ಕಂಡುಬಂತು ಎಂದರು.

 ಪ್ರತಿಪಕ್ಷಗಳು ತಮ್ಮ ಕಲಾಪಪಟ್ಟಿಯಲ್ಲಿದ್ದ ಎಲ್ಲ ವಿಷಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿವೆ. ಭ್ರಷ್ಟಾಚಾರ, ಭಯೋತ್ಪಾದನೆ, ಲೋಕಪಾಲ ಮಸೂದೆ, ಆಂತರಿಕ ಭದ್ರತೆ, ಪ್ರತ್ಯೇಕ ತೆಲಂಗಾಣ ರಚನೆ, ಶ್ರೀಲಂಕಾದಲ್ಲಿರುವ ತಮಿಳರ ಸಂಕಷ್ಟ- ಇತ್ಯಾದಿ ಎಲ್ಲ ಮುಖ್ಯ ವಿಷಯಗಳ ಬಗ್ಗೆ ಪ್ರಸ್ತಾಪಿಸಿವೆ. ಕಲಾಪ ಸಮಯ ವ್ಯರ್ಥವಾಗಲು ಸರ್ಕಾರ ಕಾರಣವೇ ಹೊರತು ಪ್ರತಿಪಕ್ಷಗಳಲ್ಲ ಎಂದರು.

ಅಣ್ಣಾ ಚಳವಳಿ ಕುರಿತು ಹಾಗೂ ಲೋಕಾಯುಕ್ತರಿಗೆ ಶಾಸನಬದ್ಧ ಅಧಿಕಾರ ನೀಡುವ ಬಗ್ಗೆ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ನೀಡಿದ ಹೇಳಿಕೆ ಸರ್ಕಾರದಲ್ಲಿರುವ ಭಿನ್ನಾಭಿಪ್ರಾಯವನ್ನು ಬಯಲು ಮಾಡಿತು ಎಂದು ಸುಷ್ಮಾ ಗೇಲಿ ಮಾಡಿದರು.

ಕಾಂಗ್ರೆಸ್ ತಿರುಗೇಟು
ದೆಹಲಿ ಸ್ಫೋಟದ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ರಕ್ತದಲ್ಲಿ ನಿಷ್ಪಕ್ಷಪಾತ ಧೋರಣೆ ಎಂಬುದೇ ಇಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಜೇಟ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಂತೆಯೇ ಕೇಂದ್ರ ಸಚಿವರಾದ ಪಿ.ಚಿದಂಬರಂ ಮತ್ತು ಪಿ.ಕೆ.ಬನ್ಸಲ್ ಪತ್ರಿಕಾಗೋಷ್ಠಿಯಲ್ಲಿ ಪ್ರತಿದಾಳಿ ಮಾಡಿದರು.

ದೆಹಲಿ ಸ್ಫೋಟ ನಡೆದ ದಿನ ಸದನದಲ್ಲಿ ಸರ್ಕಾರದೊಟ್ಟಿಗೆ ಘಟನೆ ಖಂಡಿಸಿದ್ದ ಬಿಜೆಪಿ ಇದೀಗ ಘಟನೆಗೆ ಸರ್ಕಾರವೇ ಹೊಣೆ ಎಂದು ಟೀಕಿಸುತ್ತಿದೆ. ಭಾರತ ಮತ್ತು ನೆರೆಯ ರಾಷ್ಟ್ರಗಳು ಭಯೋತ್ಪಾದನೆಯ ತೀವ್ರ ಸಮಸ್ಯೆ ಎದುರಿಸುತ್ತಿವೆ ಎಂದು ಪರಿಗಣಿಸಿ ಸುಷ್ಮಾ ಮತ್ತು ಜೇಟ್ಲಿ ದೆಹಲಿ ಹೈಕೋರ್ಟ್ ಸ್ಫೋಟ ನಡೆದ ಎರಡೇ ದಿನಗಳ ಬಳಿಕ ಪತ್ರಿಕಾಗೋಷ್ಠಿ ನಡೆಸಿರುವುದು `ದುರದೃಷ್ಟಕರ~ ಎಂದು ಚಿದು ಹೇಳಿದರು.
 
`ದೆಹಲಿ ಸ್ಫೋಟದ ಗಾಯಾಳುಗಳ ಆರೋಗ್ಯ ಸ್ಥಿತಿ ಪರಿಶೀಲಿಸಲು ಆರ್‌ಎಂಎಲ್ ಆಸ್ಪತ್ರೆಗೆ ತೆರಳಿದಾಗ ನನ್ನನ್ನು ಹಾಗೂ ರಾಹುಲ್ ಗಾಂಧಿ ಅವರನ್ನು ಬಂಧುಗಳು ಸುತ್ತುವರಿದಿದ್ದು ನಿಜ. ಆದರೆ ಅವರು ನಮ್ಮಿಂದ ಕೆಲವು ಮಾಹಿತಿ ಕೇಳಿದರೇ ಹೊರತು ಪ್ರತಿಭಟಿಸಲಿಲ್ಲ~ ಎಂದು ಸಮರ್ಥಿಸಿಕೊಂಡರು.

`ದೆಹಲಿ ಹೈಕೋರ್ಟ್ ಸ್ಫೋಟ ನಡೆದಾಗ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಉಗ್ರರ ದಾಳಿ ನಡೆದಿದೆ. ವಿಶ್ವದಾದ್ಯಂತ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಡೆದಿರುವ ಉಗ್ರರ ದಾಳಿಯ ಪಟ್ಟಿ ಉದ್ದವಾಗಿದೆ. ಭಾರತವು ಭಯೋತ್ಪಾದನೆಯ ನೆರಳಿನಲ್ಲಿದೆ. ಭಯೋತ್ಪಾದನೆಯ ಕೇಂದ್ರ ಸ್ಥಾನ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ~ ಎಂದರು.

`ಗಲಭೆ ಪೀಡಿತ ನೆರೆ ರಾಷ್ಟ್ರದೊಂದಿಗೆ ನಾವು ಬದುಕುತ್ತಿದ್ದೇವೆ. ಉಗ್ರರ ದಾಳಿ ತಡೆಯಲು ಕ್ರಮ ಕೈಗೊಳ್ಳುವುದಲ್ಲದೆ ನಾವು ಮತ್ತೇನು ಮಾಡಲು ಸಾಧ್ಯ~ ಎಂದು ಗೃಹ ಸಚಿವರು ಕೇಳಿದರು.

ಉಗ್ರರ ದಾಳಿಯ ಆರು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ ಎಂದು ಜೇಟ್ಲಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಪ್ರಕರಣಗಳನ್ನು ನಿರ್ವಹಿಸಲು ರಾಷ್ಟ್ರದಲ್ಲಿ `ರಾಜ್ಯ ಸರ್ಕಾರಗಳು ಇವೆ ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದಾರೆ~ ಎಂದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ಸ್ಫೋಟದ ಬಗ್ಗೆ ಪ್ರಸ್ತಾಪಿಸಿದ ಅವರು, ಇದರ ತನಿಖೆಯನ್ನು ಬಿಜೆಪಿ ಸರ್ಕಾರ (ಯಡಿಯೂರಪ್ಪ ನೇತೃತ್ವದ) ಕೈಗೊಂಡಿತ್ತು. ಕೆಲವರು ಗಾಯಗೊಂಡಿದ್ದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿಲ್ಲ ಎಂದರು.
ಎನ್‌ಡಿಎ ಅಧಿಕಾರಾವಧಿಯಲ್ಲಿ 2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದಾಗ ಪ್ರತಿಪಕ್ಷದಲ್ಲಿದ್ದ ನಾವು ಹೀಗೆ ನಡೆದುಕೊಂಡಿರಲಿಲ್ಲ; ಸುದ್ದಿಗೋಷ್ಠಿ ನಡೆಸಿ ಸರ್ಕಾರವನ್ನೇ ಟೀಕಿಸಿರಲಿಲ್ಲ. ಇಂತಹ ನಿಷ್ಪಕ್ಷಪಾತ ಧೋರಣೆ ಬಿಜೆಪಿ ರಕ್ತದಲ್ಲೇ ಇಲ್ಲ ಎಂದು ಬನ್ಸಲ್ ದೂಷಿಸಿದರು.

ಮುಂಗಾರು ಅಧಿವೇಶನಕ್ಕೆ ಮೀಸಲಿರಿಸಿದ್ದ 140 ಗಂಟೆಗಳ ಕಲಾಪ ಅವಧಿಯಲ್ಲಿ 66 ಗಂಟೆಗಳ ಕಲಾಪವನ್ನು ಬಿಜೆಪಿ ಕೋಲಾಹಲವೆಬ್ಬಿಸಿ ನುಂಗಿಹಾಕಿದೆ. ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಸಿದ್ಧ ಎಂದು ಸರ್ಕಾರ ಭರವಸೆ ನೀಡಿದ್ದರ ಹೊರತಾಗಿಯೂ ಬಿಜೆಪಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ದೂರಿದರು.

ಅಧಿವೇಶನದ ಚರ್ಚೆಯಲ್ಲಿ ಮೇಲುಗೈ ಸಾಧಿಸಿರುವುದಾಗಿ ಬಿಜೆಪಿ ಬೀಗುತ್ತಿದೆ. ಇದು ದುರದೃಷ್ಟಕರ. ಇದರಿಂದ ಆ ಪಕ್ಷದ ನಿಜವಾದ ಮುಖ ಬಯಲಾಗಿದೆ. ಸಂಸತ್ತಿನ ಘನತೆಯನ್ನು ಬಿಜೆಪಿ ಕುಗ್ಗಿಸಿದೆ ಎಂದರು.


ಸ್ಫೋಟದ ಹೊಣೆ ಹೊತ್ತ 3ನೇ ಇ-ಮೇಲ್
ನವದೆಹಲಿ (ಐಎಎನ್‌ಎಸ್):
ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟದ ಹೊಣೆ ಹೊತ್ತು ಶುಕ್ರವಾರವೂ ಒಂದು ಇ-ಮೇಲ್ ಬಂದಿದ್ದು, ಇದು ಮಾಸ್ಕೊ ವಿಳಾಸದಿಂದ ಬಂದಿದೆ. ಹೊಣೆ ಹೊತ್ತು ಮೂರು ದಿನಗಳಲ್ಲಿ ಬಂದಿರುವ ಮೂರನೇ ಮೇಲ್ ಇದಾಗಿದೆ.

ಆದರೆ ರಾಷ್ಟ್ರೀಯ ತನಿಖಾಧಿಕಾರಿಗಳಿಗೆ ಇದರ ನಿಜವಾದ ಮೂಲ ಮಾಸ್ಕೊ ಇರುವ ಬಗ್ಗೆ ಅನುಮಾನವಿದೆ. ಇದು ನಿಜವಾಗಿಯೂ ಮಾಸ್ಕೊದಿಂದ ಬಂದಿದೆಯೇ ಅಥವಾ ವಾಸ್ತವ ವಿಳಾಸ ಮುಚ್ಚಿಡುವ `ಮರೆಮಾಚುವ ಸರ್ವರ್~ನಿಂದ (ಪ್ರಾಕ್ಸಿ ಸರ್ವರ್) ಇದನ್ನು ಕಳಿಸಲಾಗಿದೆಯೇ ಎಂಬ ಸಂದೇಹ ಕಾಡುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT