ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಮರು ಚುನಾವಣೆಗೆ ಬಿಜೆಪಿ, ಎಎಪಿ ಸಿದ್ಧ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಅನೈತಿಕ ರಾಜಕಾರಣಕ್ಕೆ ವಿರಾಮ ಹಾಕಿದ್ದು, ಅತೀ ಹೆಚ್ಚು ಶಾಸಕ ಬಲ ಹೊಂದಿರುವ ಬಿಜೆಪಿ ಮತ್ತು ಎರಡನೇ ದೊಡ್ಡ ಪಕ್ಷವಾಗಿರುವ ‘ಆಮ್‌ ಆದ್ಮಿ ಪಕ್ಷ’ (ಎಎಪಿ) ಸರ್ಕಾರ ರಚನೆಗೆ ಹಿಂದೇಟು ಹಾಕುತ್ತಿರುವುದರಿಂದ ರಾಜಕೀಯ ಗೊಂದಲ ಮುಂದುವರಿದಿದೆ.

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ದಿನ ಕಳೆದಿದ್ದರೂ ಬಿಜೆಪಿ ಮತ್ತು ಎಎಪಿ ಸರ್ಕಾರ ರಚನೆಗೆ ಉತ್ಸುಕವಾಗಿಲ್ಲ. ಪರಸ್ಪರರನ್ನು ಬೆಂಬಲಿಸುವ ವಿಷಯದಲ್ಲಿ ಎರಡೂ ಪಕ್ಷಗಳು ತಂತಮ್ಮ ನಿಲುವಿಗೆ ಅಂಟಿಕೊಂಡಿರುವುದರಿಂದ ಬಿಕ್ಕಟ್ಟು ಬಗೆಹರಿದಿಲ್ಲ.
‘ನಾವು ಸರ್ಕಾರ ರಚಿಸಲು ಬಿಜೆಪಿ ಬೆಂಬಲ ಕೇಳುವುದಿಲ್ಲ. ಯಾವುದೇ ಕಾರಣಕ್ಕೂ ಅವರಿಗೆ ಬೆಂಬಲವನ್ನೂ ಕೊಡುವುದಿಲ್ಲ’ ಎಂದು ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಗೆ ವಿಷಯಾಧಾರಿತ ಬೆಂಬಲ ಕೊಡುವ ವಿಷಯ ಪಕ್ಷದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ವಿಷಯಾಧಾರಿತ ಬೆಂಬಲ ಕೊಡುವ ಹೇಳಿಕೆ ವಿಡಂಬನಾತ್ಮಕವಾಗಿ ಹೇಳಿದ್ದು. ಎಎಪಿ ನಂಬಿದ ಮೌಲ್ಯ ಮತ್ತು ಸಿದ್ಧಾಂತಕ್ಕೆ ಬದ್ಧವಾಗುವುದಾದರೆ ವಿಷಯಾಧಾರಿತ ಬೆಂಬಲದ ಬಗ್ಗೆ ಆಲೋಚನೆ ಮಾಡಬಹುದು ಎಂದು ಹೇಳಿದ್ದೆ. ಆದರೆ, ಈ ಪಕ್ಷಗಳು ಎಎಪಿ ಆಗಲು ಸಾಧ್ಯವೇ ಎಂದು ಕೇಳಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಮಾಡುವುದು ಬಿಜೆಪಿ ಜವಾಬ್ದಾರಿ. ಕಾಂಗ್ರೆಸ್‌ ಬೆಂಬಲದಿಂದ ಆಡಳಿತ ನಡೆಸಲಿ. ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದಿರುವ ಪಕ್ಷ. ಜನಾಭಿಪ್ರಾಯ ಬಿಜೆಪಿ ಪರವಾಗಿದೆ ಎಂದು ಕೇಜ್ರಿವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ, ಬಿಜೆಪಿ ಕೂಡಾ ಸರ್ಕಾರ ರಚನೆಗೆ ಮುಂದಾಗುವುದಿಲ್ಲ ಎಂದು ಖಚಿತಪಡಿಸಿದೆ. ನಮಗೆ ಸರ್ಕಾರ ರಚಿಸಲು ಅಗತ್ಯವಾದ ಶಾಸಕರಿಲ್ಲ. ‘ಕುದುರೆ ವ್ಯಾಪಾರ’ ಮಾಡುವುದಿಲ್ಲ ಎಂದು ಬಿಜೆಪಿ ಮಾಜಿ ಅಧ್ಯಕ್ಷ  ನಿತಿನ್‌ ಗಡ್ಕರಿ ಹೇಳಿದ್ದಾರೆ.

ಅಗತ್ಯವಾದರೆ ಮತ್ತೊಂದು ಚುನಾವಣೆಗೆ ಸಿದ್ಧರಾಗಿ ಎಂದು ಬಿಜೆಪಿ ನಾಯಕರು ತಮ್ಮ ಶಾಸಕರಿಗೆ ಕರೆ ನೀಡಿದ್ದಾರೆ.
ದೆಹಲಿ ರಾಜಕೀಯ ಬಿಕ್ಕಟ್ಟಿನಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವುದಿಲ್ಲ. ಅಲ್ಲಿ ಸರ್ಕಾರ ರಚಿಸುವುದು ಬಿಜೆಪಿ ಮತ್ತು ಎಎಪಿಗೆ ಸಂಬಂಧಪಟ್ಟ ವಿಷಯ ಎಂದು ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ತಿಳಿಸಿದ್ದಾರೆ.

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಿಂದ ಯಾವುದೇ ವರದಿ ಬಂದಿಲ್ಲ. ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ರಾಜೀನಾಮೆ ಮಾತ್ರ ಬಂದಿದೆ ಎಂದು ಶಿಂಧೆ ಹೇಳಿದ್ದಾರೆ.

ಬಿಜೆಪಿ ಮತ್ತು ಎಎಪಿ ಒಗ್ಗೂಡಿ ಸರ್ಕಾರ ರಚಿಸುವಂತೆ ದಿಗ್ವಿಜಯ್‌ ಸಿಂಗ್‌ ಅವರೂ ಸಲಹೆ ನೀಡಿದ್ದಾರೆ. ಕಿರಣ್‌ ಬೇಡಿ ಈ ನಿಟ್ಟಿನಲ್ಲಿ ಉಪಯುಕ್ತ ಸಲಹೆ ಮಾಡಿದ್ದಾರೆಂದು ಹಿರಿಯ ಕಾಂಗ್ರೆಸ್‌ ನಾಯಕರು ಟ್ವೀಟ್‌ ಮಾಡಿದ್ದಾರೆ.

ದೆಹಲಿ ವಿಧಾನಸಭೆ ಒಟ್ಟು 70 ಸದಸ್ಯರ ಬಲ ಹೊಂದಿದೆ. ಬಿಜೆಪಿ 31, ಎಎಪಿ 28, ಕಾಂಗ್ರೆಸ್‌ 8 ಹಾಗೂ ಇತರ ಮೂವರು ಶಾಸಕರಿದ್ದಾರೆ. ಸರ್ಕಾರ ರಚಿಸಲು 36 ಶಾಸಕರ ಅಗತ್ಯವಿದೆ.

ಅರವಿಂದ್ ಕೇಜ್ರಿವಾಲ್‌ ಸ್ಪಷ್ಟನೆ
ನವದೆಹಲಿ (ಪಿಟಿಐ): ಯಾರಿಗೂ ಬಹುಮತ ಬಾರ­ದಂತೆ ಅತಂತ್ರ ಸ್ಥಿತಿ ನಿರ್ಮಾಣ­ವಾಗಿರುವ ದೆಹಲಿ ವಿಧಾನ­ಸಭೆಗೆ ಮರುಚುನಾವಣೆ ನಡೆ­ದಲ್ಲಿ ಅದಕ್ಕೆ ತಮ್ಮ ಪಕ್ಷವೂ ಸಿದ್ಧ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಸ್ಪಷ್ಟಪಡಿಸಿದ್ದಾರೆ.

ಸದ್ಯದ ಬಿಕ್ಕಟ್ಟಿನಿಂದ ಹೊರಬರಲು ಹೊಸದಾಗಿ ಚುನಾವಣೆ ನಡೆಸುವುದೇ ಉಳಿದಿರುವ ಮಾರ್ಗ  ಎಂದು ಅತ್ಯಧಿಕ ಸ್ಥಾನ ಗಳಿಸಿರುವ ಬಿಜೆಪಿ ಹೇಳಿರುವ ಬೆನ್ನಲ್ಲೇ ಅವರು ಹೀಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT