ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಸರ್ಪಗಾವಲು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ತೀವ್ರ ಪ್ರತಿಭಟನೆ
Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಗಳಿಗೆ ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ನಡೆದಿರುವ ಉಗ್ರ ಚಳವಳಿ ಈಗ `ರೈಸಿನಾ ಹಿಲ್'ನಿಂದ `ಜಂತರ್- ಮಂತರ್'ಗೆ ಸ್ಥಳಾಂತರಗೊಂಡಿದೆ. ಅಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ರಾಜಧಾನಿಯ ಪ್ರಮುಖ ಸ್ಥಳಗಳಲ್ಲೆಲ್ಲ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಚಳವಳಿಗಾರರು ಮತ್ತು ಪೊಲೀಸರ ನಡುವೆ ಭಾನುವಾರ ನಡೆದ ಘರ್ಷಣೆಗಳ ಹಿನ್ನೆಲೆಯಲ್ಲಿ ಸೋಮವಾರ `ರೈಸಿನಾ ಹಿಲ್' ಹಾಗೂ `ಇಂಡಿಯಾ ಗೇಟ್'ಗೆ ಬರುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ಬೇರೆ ರಸ್ತೆಗಳಿಗೆ ತಿರುಗಿಸಲಾಗಿದೆ. ರಾಜೀವ್ ಚೌಕ್ ಸೇರಿದಂತೆ ಒಂಬತ್ತು ಪ್ರಮುಖ ನಿಲ್ದಾಣಗಳಿಗೆ ಮೆಟ್ರೊ ಸೇವೆ ಸ್ಥಗಿತಗೊಳಿಸಲಾಗಿದೆ. ರೈಲ್ ಭವನ ಹಾಗೂ ಉದ್ಯೋಗ ಭವನದ ಉದ್ಯೋಗಿಗಳಿಗೆ, ಗುರುತು ಪತ್ರ ಪರಿಶೀಲಿಸಿ ಪ್ರವೇಶ ನೀಡಲಾಗುತ್ತಿದೆ. ಕೇಂದ್ರ ಸಚಿವಾಲಯದ ಸುತ್ತಮುತ್ತ ಸುಳಿಯಲು ಪತ್ರಕರ್ತರಿಗೂ ಪೊಲೀಸರು ಅವಕಾಶ ನೀಡಿಲ್ಲ.

ಇಷ್ಟೆಲ್ಲ ಬಿಗಿ ಭದ್ರತೆಗಳಿದ್ದರೂ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ಪ್ರತಿಭಟಿಸುತ್ತಿರುವ ಯುವಕ, ಯುವತಿಯರು ಜಂತರ್- ಮಂತರ್ ಬಳಿ ಜಮಾವಣೆಗೊಂಡರು. ಭಿತ್ತಿಪತ್ರ- ಬ್ಯಾನರ್ ಹಿಡಿದು ಘೋಷಣೆ ಕೂಗಿದರು. ಅತ್ಯಾಚಾರಿಗಳಿಗೆ ವಿಳಂಬ ಮಾಡದೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು. `ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರಿಯಲಿದೆ. ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ದೊರೆಯುವವರೆಗೂ ಹೋರಾಟ ನಿಲ್ಲುವುದಿಲ್ಲ. ಭಾನುವಾರ ಪ್ರತಿಭಟನಾಕಾರರು ಹಾಗೂ ಪೊಲೀಸರು ಗಾಯಗೊಂಡ ಹಿಂಸಾಚಾರ ಕುರಿತು ವಿಷಾದವಿದೆ. ಆ ಘಟನೆ ನಡೆಯಬಾರದಿತ್ತು' ಎಂದು ಚಳವಳಿನಿರತ ವಿದ್ಯಾರ್ಥಿಗಳು ತಿಳಿಸಿದರು.

ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು: ಯುವತಿಯ ಮೇಲೆ ಅತ್ಯಾಚಾರ ನಡೆಯುತ್ತಿದ್ದ ಬಸ್ ತಡೆಯದ ಕಾರಣಕ್ಕೆ ದೆಹಲಿಯ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೋಮವಾರ ಅಮಾನತುಗೊಳಿಸಲಾಗಿದೆ.`ಕರ್ತವ್ಯ ಲೋಪದ ಆರೋಪದ ಮೇಲೆ ಎಸಿಪಿ ಮೋಹನ್ ಸಿಂಗ್ ದಾಬಸ್ ಹಾಗೂ ಯದುರಾಂ ಅವರನ್ನು ಅಮಾನತು ಮಾಡಲಾಗಿದೆ' ಎಂದು ಲೆ.ಗವರ್ನರ್ ತೇಜಿಂದರ್ ಸಿಂಗ್ ತಿಳಿಸಿದ್ದಾರೆ.

ಯುವತಿ ಸ್ಥಿತಿ ಚಿಂತಾಜನಕ
ನವದೆಹಲಿ (ಪಿಟಿಐ): `ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಯ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ' ಎಂದು ಸಫ್ದರ್ ಜಂಗ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

`ಯುವತಿ ಇನ್ನೂ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಇದ್ದಾರೆ. ಶನಿವಾರದಿಂದ ಅವರ ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಏರುಪೇರಾಗುತ್ತಿದೆ.
ಸೋಂಕು ರಕ್ತ ಉಳಿದ ಅಂಗಾಂಗಗಳ ವೈಫಲ್ಯಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ' ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT