ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲದ ಬೀಗ ಮುರಿದು ಪ್ರವೇಶ

Last Updated 2 ಫೆಬ್ರುವರಿ 2011, 10:10 IST
ಅಕ್ಷರ ಗಾತ್ರ

ಹಾಸನ: ಮುಜರಾಯಿ ಇಲಾಖೆ ಸ್ವಾಧೀನಕ್ಕೆ ಒಳಪಟ್ಟಿದ್ದ ದೇವಸ್ಥಾನವೊಂದರ ಅರ್ಚಕರು ಸರ್ಕಾರ ನೇಮಿಸಿದ ಹೊಸ ಅರ್ಚಕರಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದರಿಂದ ಸತಶೀಲ್ದಾರರ ಸಮ್ಮುಖದಲ್ಲಿ ಬೀಗ ಒಡೆದು ಅಧಿಕಾರವನ್ನು ಹಸ್ತಾಂತರಿಸಿರುವ ಘಟನೆ ಮಂಗಳ ವಾರ ಇಲ್ಲಿನ ಬೂವನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಚನ್ನಕೇಶವ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಕೇಶವ ಅಯ್ಯಂಗಾರ್ ಎಂಬುವವರು ಪೂಜೆ ಸಲ್ಲಿಸುತ್ತ ಬಂದಿದ್ದರು.
 
ಆದರೆ ಈಚೆಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಧಾರ್ಮಿಕ ದತ್ತಿ ಆಯುಕ್ತರಿಗೆ ಪತ್ರ ಬರೆದು ಇವರು ಸರಿಯಾಗಿ ಪೂಜೆ ಸಲ್ಲಿಸುತ್ತಿಲ್ಲ, ಕೂಡಲೇ ಈ ದೇವಸ್ಥಾನದ ಅರ್ಚಕರನ್ನು ಬದಲಿಸಬೇಕು ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಆಯಕ್ತರು ಅರ್ಚಕರನ್ನು ಬಿಡಿಸಿ ದಿವಾಕರ ಎಂಬ ಹೊಸ ಅರ್ಚಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಜ.31ರಂದು ಹೊಸ ಅರ್ಚಕರಿಗೆ ಅಧಿಕಾರ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.

ಆದರೆ ಹಳೆಯ ಅರ್ಚಕ ಕೇಶವ ಅಯ್ಯಂಗಾರ್ ಅಧಿಕಾರ ಹಸ್ತಾಂತರಿಸಲು ವಿರೋಧಿಸಿ, ದೇವಸ್ಥಾನ ಹಾಗೂ ಪ್ರವೇಶದ್ವಾರದ ಗೇಟ್‌ಗೆ ಬೀಗ ಹಾಕಿದ್ದರು. ಮಂಗಳವಾರ ಪೂಜೆಯನ್ನೂ ಮಾಡಿರಲಿಲ್ಲ. ಇದನ್ನು ಅರಿತ ಸ್ಥಳೀಯರು ತಹಶೀಲ್ದಾರರಿಗೆ ದೂರು ನೀಡಿದರು. ತಹಶೀಲ್ದಾರ ಮಥಾಯಿ ಅವರು ಸ್ಥಳಕ್ಕೆ ತೆರಳಿದರೆ ಅವರಿಗೂ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಬೀಗದ ಕೀ ಕೊಡಲು ನಿರಾಕರಿಸಿದ ಅರ್ಚಕರು, ‘ಇದನ್ನು ನ್ಯಾಯಾಲಯದಲ್ಲೇ ಕೊಡುತ್ತೇನೆ’ ಎಂದು ಹಟ ಹಿಡಿದರು. ತಹಶೀಲ್ದಾರರು ಎಷ್ಟೇ ಮನವಿ ಮಾಡಿದರೂ ಅರ್ಚಕರು ಹಟ ಬಿಡದ ಕಾರಣ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಅವರ ಆದೇಶದಂತೆ ಬೀಗ ಒಡೆದು ಒಳಗೆ ಪ್ರವೇಶಿಸಲಾಯಿತು. ಜತೆಗೆ ದಿವಾಕರ ಅವರಿಗೆ ಅಧಿಕಾರ ಹಸ್ತಾಂತರಿಸಿ ಪೂಜೆಗೆ ಅನುವುಮಾಡಿ ಕೊಡಲಾಯಿತು.

ಭೂ ಮಾಫಿಯಾ ಕೈವಾಡ: ‘ನನ್ನನ್ನು ಅರ್ಚಕ ಹುದ್ದೆಯಿಂದ ತೆಗೆದುಹಾಕುವಲ್ಲಿ ಈ ಭಾಗದ ಭೂಮಾಫಿಯಾದ ಕೈವಾಡವಿದೆ’ ಎಂದು ಪದಚ್ಯುತ ಅರ್ಚಕ ಕೇಶವ ಅಯ್ಯಂಗಾರ್  ನುಡಿದಿದ್ದಾರೆ. ‘ನನ್ನ ತಂದೆಯ ಕಾಲದಿಂದಲೇ ನಾವಿಲ್ಲಿ ಪೂಜೆ ಸಲ್ಲಿಸುತ್ತ ಬಂದಿದ್ದೇವೆ. ದೇವಸ್ಥಾನಕ್ಕೆ ಸಂಬಂಧಿಸಿದ ಸ್ವಲ್ಪ ಜಾಗವನ್ನು ನಮಗೆ ಖಾತೆ ಮಾಡಿ ಕೊಡಲಾಗಿದೆ. ಸಮೀಪದಲ್ಲಿ ವಿಮಾನ ನಿಲ್ದಾಣ ಬರುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಜಮೀನಿನ ಬೆಲೆ ಗಗನಕ್ಕೇರಿದೆ. ಕೆಲವು ತಿಂಗಳ ಹಿಂದೆ ನನ್ನನ್ನು ಭೇಟಿಮಾಡಿದ ವ್ಯಕ್ತಿ ಯೊಬ್ಬರು ಈ ಜಮೀನು ನೀಡುವಂತೆ ಒತ್ತಾಯಿಸಿದ್ದರು. ಆದರೆ ನಮಗೆ ಇರುವ ಏಕೈಕ ಆಧಾರವನ್ನು ಬಿಟ್ಟು ಕೊಡುವುದಿಲ್ಲ ಎಂದಿದ್ದಕ್ಕೆ ಈ ರೀತಿ ಕುತಂತ್ರ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT