ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ ಆಗಲಿದ್ದ ಬಾಲಕಿಗೆ ಹೊಸ ಬಾಳು

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೊಪ್ಪಳ: ಐದನೇ ತರಗತಿಯಲ್ಲಿ ಓದುತ್ತಿರುವ ಆ ಬಾಲಕಿಗೆ ಏನು ನಡೆಯುತ್ತಿದೆ ಎಂಬುದೇ ಗೊತ್ತಿರಲಿಲ್ಲ. ಫೆ. 7ರಂದು ಹುಣ್ಣಿಮೆ ದಿನ. ತಾಲ್ಲೂಕಿನ ಹುಲಿಗಿ ಗ್ರಾಮದ ಬಳಿ ಹರಿವ ತುಂಗಭದ್ರಾ ನದಿಯಲ್ಲಿ ಆ ಬಾಲಕಿಗೆ ಸ್ವತಃ ಅಜ್ಜಿ ಮತ್ತು ಬಂಧುಗಳು ಸ್ನಾನ ಮಾಡಿಸಿ, ಪೂಜಾವಿಧಿಗಳನ್ನು ನೆರವೇರಿಸಿದ್ದಾರೆ.

 ಇನ್ನೇನು `ಮುತ್ತು ಕಟ್ಟುವ~ ವಿಧಿಯನ್ನು ಪೂರ್ಣಗೊಳಿಸಿ ಬಾಲಕಿಯನ್ನು ದೇವದಾಸಿ ಎಂಬ ಅನಿಷ್ಟ ಪದ್ಧತಿಯ ಕೂಪಕ್ಕೆ ತಳ್ಳಬೇಕೆಂಬ ಧಾವಂತ ಎಲ್ಲರಲ್ಲಿ. ಬಾಲಕಿಯ ಅದೃಷ್ಟ ಚೆನ್ನಾಗಿತ್ತು. ಯೂನಿಸೆಫ್ ಮತ್ತು ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ `ಮುತ್ತು ಕಟ್ಟುವ~ ಕಾರ್ಯ ನಿಲ್ಲಿಸಿದ್ದಾರೆ. ದೇವದಾಸಿ ಪದ್ಧತಿ ಕೂಪಕ್ಕೆ ಬಿದ್ದು ಕಮರಿ ಹೋಗಲಿದ್ದ ಬಾಲಕಿಯ ಬದುಕಿಗೆ ಹೊಸ ದಿಕ್ಕು ತೋರಿಸಿದ್ದಾರೆ.

  ಇದು ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಬಿಡನಾಳ ಗ್ರಾಮದ ರೇಣುಕಾ ಮ್ಯಾಗಳಮನಿ ಎಂಬ ಬಾಲಕಿಯ ಕಥೆ-ವ್ಯಥೆ. ಸದ್ಯ ಬಾಲಕಿಗೆ ನಗರದ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯವಿತ್ತು ಶಿಕ್ಷಣ ವ್ಯವಸ್ಥೆಯನ್ನೂ ಮಾಡಲಾಗಿದೆ.

ಘಟನೆ ವಿವರ: ರೇಣುಕಾಳ ತಾಯಿ ಹನುಮವ್ವ ದೇವದಾಸಿ. ತಾಯಿ ಕಳಕವ್ವಳ ದುರಾಸೆಯಿಂದಾಗಿ ಬಲವಂತದಿಂದ ಈ ಪದ್ಧತಿಗೆ ಬಲಿಯಾಗಿದ್ದ ಹನುಮವ್ವ ವಾಸಿಯಾಗದ ಕಾಯಿಲೆಯಿಂದ ತೀರಿಕೊಂಡು ಆರು ವರ್ಷಗಳೇ ಗತಿಸಿವೆ. ಕೊನೆಗಾಲದಲ್ಲಿ ದೇವದಾಸಿ ಪುನರ್ವಸತಿ ಯೋಜನೆಯಲ್ಲಿ ಸ್ವಯಂಸೇವಕಿಯಾಗಿದ್ದ ಹನುಮವ್ವಗೆ  ಮಗಳು ರೇಣುಕಾ ದೇವದಾಸಿಯಾಗಬಾರದು ಎಂಬ ಆಸೆ ಇತ್ತು. ಸಾಯುವ ಕೆಲ ದಿನಗಳ ಮುಂಚೆ ತಮ್ಮ ಸಿಬ್ಬಂದಿ ಮುಂದೆ ಹನುಮವ್ವ ಈ ಆಸೆವ್ಯಕ್ತಪಡಿಸಿದ್ದಳೆಂದು ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ದೇವರಾಜ್ `ಪ್ರಜಾವಾಣಿ~ಗೆ ವಿವರಿಸಿದರು.

  ಅಜ್ಜಿ ಕಳಕವ್ವಗೆ ರೇಣುಕಾಳನ್ನು ದೇವದಾಸಿ ಪದ್ಧತಿಗೆ ನೂಕುವ ದುರಾಲೋಚನೆ ಇತ್ತು. ಮೂವರು ಬಂಧುಗಳ ಸಹಾಯದಿಂದ ಹುಣ್ಣಿಮೆ ದಿನ ರೇಣುಕಾಳಿಗೆ `ಮುತ್ತು ಕಟ್ಟುವ~ ಮೂಲಕ ಆಸೆ ಈಡೇರಿಸಲು ಮುಂದಾಗಿದ್ದಳು.
 ಈ ಮಾಹಿತಿ ಪಡೆದಿದ್ದ ಯೂನಿಸೆಫ್‌ನ ಮಕ್ಕಳ ರಕ್ಷಣಾ ಯೋಜನೆಯ ಅಧಿಕಾರಿ ಹರೀಶ್ ಜೋಗಿ, ಸೋಮಶೇಖರ್, ಉಸ್ಮಾನ್ ಹಾಗೂ ದೇವರಾಜ್ ತಂಡ, ಫೆ.6ರಿಂದ ಕಳಕವ್ವ ಮತ್ತು ರೇಣುಕಾಳನ್ನು ಹುಡುಕುತ್ತಿತ್ತು.ಈ ಸುಳಿವು ಸಿಕ್ಕಿದ ಕಾರಣ ಕಳಕವ್ವ ಹಾಗೂ ಬಂಧುಗಳು ರೇಣುಕಾಳನ್ನು ಬಚ್ಚಿಡಲೆತ್ನಿಸಿದ್ದರು.

ಬಾಲಕಿ ಅದೃಷ್ಟ ಚೆನ್ನಾಗಿತ್ತು. `ಮುತ್ತು ಕಟ್ಟುವ~ ಶೂಲಕ್ಕೆ ರೇಣುಕಾ ಕೊರಳು ನೀಡಲು ಬಿಡಲಿಲ್ಲವೆಂದು ಹರೀಶ್ ನೆಮ್ಮದಿ ನಿಟ್ಟಿಸಿರುಬಿಟ್ಟರು.ರೇಣುಕಾಳಿಗೆ ಓದಲು ಆಸಕ್ತಿ ಇದ್ದು ಶಿಕ್ಷಣಕ್ಕೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎನ್ನಲು ಮರೆಯಲಿಲ್ಲ.

ತುಂಗಭದ್ರಾ ನದಿ ದಂಡೆಯಲ್ಲಿ...

ಕೊಪ್ಪಳ: ತಾಲ್ಲೂಕಿನ ಹುಲಿಗಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಹುಲಿಗೆಮ್ಮ ದೇವಿ ಇಲ್ಲಿನ ಆರಾಧ್ಯ ದೈವ. ಪ್ರತಿ ಹುಣ್ಣಿಮೆಯಂದು ಇಲ್ಲಿ `ಮುತ್ತು ಕಟ್ಟುವ~ ವಿಧಿ ನೆರವೇರುತ್ತದೆ. ಭಾರತ ಹುಣ್ಣಿಮೆಯಂದು ಮುತ್ತು ಕಟ್ಟಿಸಿಕೊಳ್ಳುವವರ ಸಂಖ್ಯೆ ಅಧಿಕ.
 
ಬಿಳಿ ಮತ್ತು ಕೆಂಪು ಮುತ್ತುಗಳಿರುವ ಸರ ದೇವದಾಸಿ ಪದ್ಧತಿ ಸ್ವೀಕರಿಸಿದ್ದರ ಸಂಕೇತ. ಮುತ್ತು ಕಟ್ಟಿದ ಬಾಲಕಿ/ಯುವತಿಗೆ ಅಂದಿನಿಂದ ದೇವದಾಸಿ ಪಟ್ಟ. ಆದರೆ, ಸರ್ಕಾರ ಈ ಅನಿಷ್ಟ ಸಂಪ್ರದಾಯಕ್ಕೆ ಕಡಿವಾಣ ಹಾಕಲು ಮುಂದಾಗಿದ್ದೇ ತಡ ದೇವಸ್ಥಾನದಲ್ಲಿ ಮುತ್ತು ಕಟ್ಟುವ ವಿಧಿ ಕಡಿಮೆಯಾಗುತ್ತಿದೆ. ಪಕ್ಕದಲ್ಲಿಯೇ ಹರಿವ ತುಂಗಭದ್ರಾ ನದಿ ದಂಡೆಯಲ್ಲಿ ಮುತ್ತು ಕಟ್ಟಿ ಈ ಅನಿಷ್ಟ ಪದ್ಧತಿಯನ್ನು ಜೀವಂತವಾಗಿಡುವ ಪ್ರಯತ್ನ ನಡೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT