ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗ: ಅಲೆಮಾರಿಗಳಿಗೆ ದೊರಕದ ನೆಲೆ

Last Updated 25 ಜನವರಿ 2013, 8:28 IST
ಅಕ್ಷರ ಗಾತ್ರ

ದೇವದುರ್ಗ: ಪಟ್ಟಣದ ಹೃದಯ ಭಾಗದಲ್ಲಿ ಬರುವ ಸರ್ಕಾರಿ ಜಮೀನು (ಮಾಳೇಗಡ್ಡೆ)ನಲ್ಲಿ ಕಳೆದ 20 ವರ್ಷಗಳಿಗಿಂತ ಹೆಚ್ಚು ಕಾಲ ವಾಸ ಮಾಡುತ್ತಿರುವ ಅಲೆಮಾರಿ ಜನಾಂಗಕ್ಕೆ ಸೇರಿದ ಸುಮಾರು ಆರು ಉಪ ಜಾತಿಗಳ ನೂರಾರು ಕುಟುಂಬಗಳಿಗೆ ವಾಸಿಸಲು ಸರ್ಕಾರ ಜಮೀನು ಮಂಜೂರು ಮಾಡಿದರೂ ಇಂದಿಗೂ ನೆಲೆ ದೊರಕದಂತಾಗಿದ್ದು, ಅದೇ ಹರಕು ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದಾರೆ.

ಅಲೆಮಾರಿ ಕುಟುಂಬಗಳು ಸಹ ನಮ್ಮಂತೆ ಮನುಷ್ಯರು. ಅವರಿಗೂ ಮನೆ, ರಸ್ತೆ, ನೀರು, ದೀಪ, ಶಾಲೆ ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ನೀಡುವುದು ಪುರಸಭೆ ಮತ್ತು ತಾಲ್ಲೂಕು ಆಡಳಿತದ ಜವಾಬ್ದಾರಿಯಾಗಿದೆ. ಆದರೆ ಇದುವರಿಗೂ ಮಾಳೇಗಡ್ಡೆಯಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಯಾರೊಬ್ಬರೂ ಗಮನ ಹರಿಸುತ್ತಿಲ್ಲ ಎಂಬುವುದು ಸದರಿ ಕುಟುಂಬಗಳ ಆರೋಪವಾಗಿದೆ.

ಸರ್ಕಾರಿ ಜಮೀನು ಸರ್ವೆನಂ, 3/5 ಮಾಳೇಗಡ್ಡೆಯ 8ಎಕರೆ 31ಗುಂಟೆ ಜಮೀನನ್ನು ಅಲೆಮಾರಿ ಜನಾಂಗದದ ಕುಟುಂಬಗಳಿಗೆ ವಾಸಿಸಲು ಮಂಜೂರು ಮಾಡಬೇಕು ಮತ್ತು ನಿವೇಶನ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಹೋರಾಟ ಮಾತ್ರ ಇಂದಿಗೂ ಮುಂದುವರಿದಿದೆ.

ಜಿಲ್ಲಾಧಿಕಾರಿ ಸೇರಿದಂತೆ ವಿಭಾಗೀಯ ಆಯುಕ್ತರು, ಜಿಲ್ಲಾ ನ್ಯಾಯಾಲಯ ಮತ್ತು ರಾಜ್ಯ ಹೈಕೋರ್ಟ್‌ವರೆಗೂ ಅಲೆಮಾರಿ ಜನಾಂಗದವರು ಹೋಗಿ ಜಮೀನು ನೀಡಬೇಕೆಂಬ ಹೋರಾಟಕ್ಕೆ ಜಯ ಸಹ ಸಿಕ್ಕಿದೆ. ಕೊನೆಗೆ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ಎಲ್‌ಎನ್‌ಡಿ/2008-09 ತಾರೀಖು 5-1-2009ರಂದು ಆದೇಶಿಸಿದ ನಂತರ ಸದರಿ 8 ಎಕರೆ 31 ಗುಂಟೆ ಪೈಕಿ 16 ಗುಂಟೆ ಸ್ಥಳವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಿರ್ಮಾಣಕ್ಕಾಗಿ ಕಾಯ್ದಿರಿಸಿ ಮಂಜೂರಾತಿ ಮತ್ತು ಉಳಿದ 8 ಎಕರೆ 15 ಗುಂಟೆ ಅಲೆಮಾರಿ ಜನಾಂಗದವರು ವಾಸಿಸು ಉದ್ದೇಶಕ್ಕಾಗಿ ಜಮೀನನ್ನು ಪುರಸಭೆ ಮುಖ್ಯಾಧಿಕಾರಿಗಳ ಹೆಸರಿನಲ್ಲಿ ಜಿಲ್ಲಾಧಿಕಾರಿಗಳು ವರ್ಗಾವಣೆ ಮಾಡಿ ನಾಲ್ಕು ವರ್ಷ ಕಳೆದಿರುವ ಬಗ್ಗೆ ದಾಖಲಾತಿಗಳು ಹೇಳುತ್ತಿದ್ದರೂ ಸದರಿ ಕುಟುಂಬಗಳಿಗೆ ನಿವೇಶ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರ ಹಿಂದೆ ರಾಜಕೀಯ ನಡೆದಿದೆ ಎನ್ನಲಾಗಿದೆ.

ಕಳೆದ 1995ರಲ್ಲಿ ಪಟ್ಟಣದ ಹೊರವಲಯದಲ್ಲಿ ಬರುವ ಯಲ್ಲಾಲಿಂಗ ಕಾಲೋನಿಯಲ್ಲಿ ಸರ್ಕಾರದಿಂದ ಸುಮಾರು 35 ಆಶ್ರಯ ಮನೆಗಳನ್ನು ಇದೇ ಅಲೇಮಾರಿ ಜನಾಂಗದವರಿಗೆ ನೀಡಿದ ನಂತರ ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಮತ್ತು 2012-13ನೇ ಸಾಲಿನಲ್ಲಿ ದೇವದುರ್ಗದ ಪಕ್ಕದಲ್ಲಿಯೇ ಬರುವ ರಾಜೀವಗಾಂಧಿ ನಗರದಲ್ಲಿ ವಾಸಿಸುತ್ತಿರುವ ಅಲೇಮಾರಿ ಜನಾಂಗಕ್ಕೆ ಪುರಸಭೆ ವತಿಯಿಂದ 20 ವಾಜಪೇಯಿ ಆಶ್ರಯ ಮನೆಗಳನ್ನು ನೀಡಿದೆ.

ಪ್ರತಿಭಟನೆ:   ಹಕ್ಕು ಪತ್ರ ವಿತರಣೆಗೆ ಅಧಿಕಾರಿಗಳ ವಿಳಂಬ ದೋರಣೆಯನ್ನು ಖಂಡಿಸಿ ಅಲೇಮಾರಿ ಜನಾಂಗಕ್ಕೆ ಸೇರಿದ ಐದು ಉಪ ಜಾತಿಗಳ ನೂರಾರು ಜನರು ಈಚೆಗೆ ಮಿನಿ ವಿಧಾನಸೌಧದ ಮುಂದೆ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದಂತೆ ಸಹಾಯಕ ಆಯುಕ್ತರು ಸರ್ಕಾರಿ ಜಮೀನು ಮಾಳೇಗಡ್ಡೆಯ 8ಎಕರೆ 15ಗುಂಟೆಯಲ್ಲಿ ಈ ಮೊದಲು ವಾಸಿಸುತ್ತಿರುವ ಕುಟುಂಬಗಳ ಹೆಸರನ್ನು ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ತಹಸೀಲ್ದಾರರಿಗೆ ಮತ್ತು ಮುಖ್ಯಾಧಿಕಾರಿಗಳಿಗೆ ಆದೇಶಿಸಿದ ನಂತರ ಪುರಸಭೆ ಸಮೀಕ್ಷೆ ನಡೆಸಿ ಸುಮಾರು 290 ಕುಟುಂಬಗಳು ವಾಸಿಸುತ್ತಿರುವ ಬಗ್ಗೆ ವರದಿ ಸಲ್ಲಿಸಿದೆ. ಆದರೆ ಈ ಮೊದಲು ಸಲ್ಲಿಸಿದ ವರದಿ ಪ್ರಕಾರ ಸಾಕಷ್ಟು ಕುಟುಂಬಗಳ ಹೆಸರು ಸೇರ್ಪಡೆಯಾಗಿರುವದರಿಂದ ಇದಕ್ಕೆ ಆಕ್ರೋಶಗೊಂಡ ಸಹಾಯಕ ಆಯುಕ್ತರು ಮಾಳೇಗಡ್ಡೆಯಲ್ಲಿಯೇ ಅಧಿಕೃತವಾಗಿ ವಾಸಿಸುತ್ತಿರುವ ಬಗ್ಗೆ ವಾಸಸ್ಥಳ ಪತ್ರ, ಪಡಿತರ ಚೀಟಿ, ಚುನಾವಣಾ ಗುರುತಿನ ಪತ್ರದ ಮೂಲಕ ಫಲಾನುಭವಿಗಳ ಆಯ್ಕೆಗೆ ಮತ್ತೊಮ್ಮೆ ಆದೇಶಿಸಿರುವುದು ತಿಳಿದು ಬಂದಿದೆ.

ಬಿರುಕು: ಅಲೇಮಾರಿ ಜನಾಂಗದ ಐದು ಉಪ ಜಾತಿಗಳಲ್ಲಿಯೇ ಈ ಮೊದಲಿನಿಂದಲೂ ಬಿರುಕು ಇದೆ. 1995ರಲ್ಲಿ ಪಟ್ಟಣದ ಯಲ್ಲಾಲಿಂಗ ಕಾಲೋನಿಗೆ ಅಲೇಮಾರಿ ಜನಾಂಗದ ಸುಡ್ಡುಗಾಡುಸಿದ್ಧರಿಗಾಗಿ 35 ಆಶ್ರಯ ಮನೆಗಳನ್ನು ನೀಡಿದ ನಂತರ ಅಲ್ಲಿ ವಾಸಿಸುತ್ತಿರುವ ಕುಟುಂಬಗಳ ಹೆಸರುಗಳನ್ನು ಈಗ ಮಾಳೇಗಡ್ಡೆಯ ಫಲಾನುಭವಿಗಳ ಪಟ್ಟಿಯಲ್ಲಿ ಮತ್ತೆ ಸೇರ್ಪಡೆಯಾಗಿವೆ.

ರಾಜೀಗಾಂಧಿ ನಗರದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರಿಗೆ 2012-13ನೇ ಸಾಲಿನ ವಾಜಪೇಯಿ ಆಶ್ರಯ ಯೋಜನೆ ಅಡಿಯಲ್ಲಿ 20 ಮನೆಗಳನ್ನು ನೀಡಿದ ನಂತರ ಅದೇ ಕಾಲೋನಿಯ ಬಹುತೇಕ ಜನರ ಹೆಸರುಗಳು ಮಾಳೇಗಡ್ಡೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಕಂಡು ಬಂದಿದೆ. ಇದರ ಸತ್ಯತೆ ಅಧಿಕಾರಿಗಳಿಗೆ ಗೊತ್ತಿದೆ. ಆದರೆ ಇದನ್ನು ವಿರೋಧಿಸಲು ಮುಂದಾದರೆ ಅದೇ ಅಧಿಕಾರಿಗಳ ವಿರುದ್ಧ ಅಲೆಮಾರಿ ಜನಾಂಗದ ಮುಖಂಡರು ರಾಜಕೀಯ ಎಚ್ಚರಿಕೆ ತೋರಿಸಿ ಬಾಯಿ ಮುಚ್ಚಿಸುವ ತಂತ್ರ ನಡೆಸಿದ್ದಾರೆ ಎನ್ನಲಾಗಿದೆ.

ಕಳೆದ 2009ರಲ್ಲಿ ಮಾಳೇಗಡ್ಡೆಯ ಮಕ್ಕಳಿಗೆ ಶಾಲೆ ನಿರ್ಮಿಸಲು ಜಿಲ್ಲಾಧಿಕಾರಿಗಳು 16ಗುಂಟೆ ಸ್ಥಳವನ್ನು ಕಾಯ್ದಿರಿಸಿ ಆದೇಶಿಸಿದ್ದಾರೆ. ಆದರೂ ಇಂದಿಗೂ ಹರಕು ತಟ್ಟೆಯ ಟಿನ್‌ಶೆಡ್‌ನಲ್ಲ 1ರಿಂದ 5ನೇ ತರಗತಿಗಳನ್ನು ನಡೆಸಲಾಗುತ್ತಿದೆ. ಸಣ್ಣದಾದ ಒಂದು ಟಿನ್‌ಶೆಡ್‌ನಲ್ಲಿ 1ರಿಂದ 5ತರಗತಿ ನಡೆಯುವುದು ದುಸ್ಥರವಾಗಿದೆ ಅನಿವಾರ್ಯ ಕಳೆದ 5-6ವರ್ಷಗಳಿಂದ ನಡೆಸಲಾಗುತ್ತಿದೆ.

ಅಕ್ರಮ: ಜಿಲ್ಲಾಧಿಕಾರಿಯಾಗಿದ್ದ ಆದೋನಿ ಸೈಯದ್ ಸಲೀಮ್ ಕಳೆದ ನಾಲ್ಕು ವರ್ಷದ ಹಿಂದೆ ಪಟ್ಟಣದ ಹೊರವಲಯದಲ್ಲಿ ಬರುವ ಯಲ್ಲಾಲಿಂಗ ಕಾಲೋನಿಯ ಪಕ್ಕದ ಸರ್ಕಾರಿ ಜಮೀನಿನಲ್ಲಿ ಈಗಿನ ಮಾಳೇಗಡ್ಡೆಯ ಅಲೆಮಾರಿ ಕುಟುಂಬಗಳನ್ನು ಸದರಿ ಸ್ಥಳಕ್ಕೆ ಶಾಶ್ವತ ಸ್ಥಳಾಂತರಿಸುವ ಕಾರಣಕ್ಕಾಗಿ ಅಂದು ಪುರಸಭೆ ವತಿಯಿಂದ ಸಾವಿರಾರೂ ರೂಪಾಯಿ ಖರ್ಚು ಮಾಡಿ ಸ್ವಚ್ಚಗೊಳಿಸಿದ್ದರು.

ವಿದ್ಯುತ್ ಸೌಕರ್ಯ ನೀಡಿದ ನಂತರ ಮಾಳೇಗಡ್ಡೆಯ ನಿವಾಸಿಗಳನ್ನು ಸದರಿ ಸ್ಥಳಕ್ಕೆ ಸ್ಥಳಾಂತರಗೊಳಿಸಲು ಪುರಸಭೆ ಮುಂದಾಗಲಿಲ್ಲ. ಇದಕ್ಕೆಲ್ಲ ರಾಜಕೀಯ ಕಾರಣ ಎಂಬ ಆರೋಪ ಇದೆ. ಈಗ ರಾಜಕೀಯ ಕೆಲವು ಮುಖಂಡರು ಸ್ವಚ್ಚಗೊಳಿಸಿದ ಪುರಸಭೆ ಸ್ಥಳದಲ್ಲಿ ಕೆಲವರಿಂದ ಹಣ ಪಡೆದು ಮನೆ ನಿರ್ಮಾಣಕ್ಕೆ ಸೂಚಿಸಿದ ಕಾರಣ ಅಕ್ರಮವಾಗಿ ಮನೆಗಳು ತಲೆ ಎತ್ತಿವೆ ಎಂದು ಅಲೆಮರಿಗಳು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT