ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಗ್ರಾಹಕರಿಗೆ ಗ್ಯಾಸ್ ಟ್ರಬಲ್...!

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕಿನಲ್ಲಿ ಅಡುಗೆ ಅನಿಲ ಹೊಂದಿರುವ 13,971 ಗ್ರಾಹಕರು ಫೆ. 1ರಿಂದ ಸಿಲಿಂಡರ್ ವಿತರಣೆಯಾಗದ ಪರಿಣಾಮ ಪರದಾಡುವಂತಾಗಿದೆ.



 ಸರ್ಕಾರದ ಅವೈಜ್ಞಾನಿಕ ನೀತಿ ಹಾಗೂ ಗ್ಯಾಸ್ ಕಂಪನಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕರು ಪರದಾಡುವುದು ಅನಿವಾರ್ಯವಾಗಿದೆ.

ಪ್ರಸಕ್ತ ಭಾರತ್ ಗ್ಯಾಸ್ ಮತ್ತು ಹಿಂದೂಸ್ತಾನ್ ಗ್ಯಾಸ್ (ಎಚ್.ಪಿ) ಕ್ರಮವಾಗಿ 17,869 ಮತ್ತು 15,821 ಸೇರಿ ಒಟ್ಟು 33,690 ಸಿಲಿಂಡರ್ ಗ್ಯಾಸ್ ಸಂಪರ್ಕ ಹೊಂದಿವೆ ಆದರೆ ಪೂರಕ ದಾಖಲೆ ನೆಪವೊಡ್ಡಿ ಇತರೆ ಕಂಪೆನಿಗಳ ಸಿಲಿಂಡರ್ ಹೊರತುಪಡಿಸಿ ಭಾರತ್ ಗ್ಯಾಸ್ (ಎಸ್‌ಎಲ್‌ಎನ್ ಕಂಪೆನಿ ಏಜೆನ್ಸಿ) 7,932 ಹಾಗೂ ವಿಜಯಪುರ ಪಟ್ಟಣದಲ್ಲಿ ಎಚ್.ಪಿ ಕಂಪೆನಿಯಲ್ಲಿ 6,039 ಸಂಪರ್ಕ ಸೇರಿದಂತೆ ಒಟ್ಟು 13,971ಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ಮತ್ತು ಆಹಾರ ಇಲಾಖೆಯ ಆದೇಶದಂತೆ, ವಿದ್ಯುತ್ ಬಿಲ್ (ಆರ್‌ಆರ್‌ನಂ.), ಪಡಿತರ ಚೀಟಿ ಹಾಗೂ ಸಂಪರ್ಕ ಹೊಂದಿರುವ ಗ್ಯಾಸ್‌ನ ಅಧಿಕೃತ ದಾಖಲೆಗಳ ನಕಲನ್ನು ನೀಡಿ ಪುನರಾವರ್ತನೆಗೊಳಿಸುವಂತೆ ಸೂಚಿಸಲಾಗಿದೆ. ಆದರೆ, ಇದರ ಬಗ್ಗೆ ಗ್ರಾಮಾಂತರ ಪ್ರದೇಶದಲ್ಲಿನ ಬಹಳಷ್ಟು ಗ್ರಾಹಕರಿಗೆ ಅರಿವಿಲ್ಲದಂತಾಗಿದೆ.

ಕಡುಬಡವರಿಗೆ ಭಾಗ್ಯಜ್ಯೋತಿ ವಿದ್ಯುತ್ ದೀಪ ಅಳವಡಿಸಿದ್ದರೂ ಅನೇಕರು ವಿದ್ಯುತ್ ಬಿಲ್ ಪಾವತಿಸಿಲ್ಲ. ಪಟ್ಟಣದಲ್ಲಿ ಸ್ವಂತ ಮನೆ ಇಲ್ಲದವರು, ವಠಾರದಲ್ಲಿರುವ ಹತ್ತಾರು ಮನೆಯಲ್ಲಿ ವಾಸವಿದ್ದರೂ ಮೀಟರ್ ಅಳವಡಿಕೆ ಒಂದು ಅಥವಾ ಎರಡು ಇರುತ್ತದೆ. ಒಟ್ಟು ಕುಟುಂಬದಲ್ಲಿ ವಾಸಿಸುವವರು ಇದರಿಂದ ಹೊರತಲ್ಲ.

ಪ್ರಮುಖ ಸಮಸ್ಯೆ ಎಂದರೆ ಬಾಡಿಗೆದಾರರದ್ದು. ನೂತನವಾಗಿ ಬಾಡಿಗೆ ಮನೆಗೆ ಹೋದಲ್ಲಿ ಹಿಂದೆ ಬಾಡಿಗೆ ಇದ್ದವರಿಗೆ ವಿದ್ಯುತ್ ಬಿಲ್ ನೀಡಿ ಗ್ಯಾಸ್ ಸಂಪರ್ಕ ಹೊಂದಿರುವ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ.

ಇಂತಹ ಹಲವಾರು ಸಮಸ್ಯೆಗಳಿದ್ದರೂ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯದೆ ಸಿಲಿಂಡರ್ ವಿತರಣೆಯನ್ನು ಮಾಡದೆ ಏಕಾಏಕಿ ಸ್ಥಗಿತಗೊಳಿಸಿರುವುದು ಎಷ್ಟು ಸರಿ ಎನ್ನುತ್ತಾರೆ ಸಾವಕನಹಳ್ಳಿ ಗ್ರಾಮದ ಗೋಪಾಲಸ್ವಾಮಿ.

ಸರ್ಕಾರ ನಾಲ್ಕು ವರ್ಷದಿಂದ ಪಡಿತರ ಸಮಸ್ಯೆ ಬಗೆಹರಿಸಿಲ್ಲ. ನೂತನವಾಗಿ ಅರ್ಜಿ ಸಲ್ಲಿಸಿದವರಿಗೂ ಕಾರ್ಡ್ ವಿತರಣೆ ಮಾಡಿಲ್ಲ. ಅಕ್ರಮ ಗ್ಯಾಸ್ ಬಳಕೆಯನ್ನೇ ಮಾನದಂಡವನ್ನಾಗಿಸಿಕೊಂಡು ಬೃಹತ್ ಪ್ರಮಾನದಲ್ಲಿ ಸಿಲಿಂಡರ್ ವಿತರಣೆ ಸ್ಥಗಿತಗೊಳಿಸಿದರೆ  ಹೇಗೆ?

ಸಮಗ್ರವಾಗಿ ಪರಿಶೀಲಿಸದೆ ಗ್ರಾಹಕರ ಮೇಲೆ ಬರೆ ಎಳೆಯುತ್ತಿರುವ ಕ್ರಮ ಸರಿಯಲ್ಲ. ಯಾವುದೇ ಪೂರಕ ದಾಖಲೆ ನೀಡುವ ಬಗ್ಗೆ ಕರಪತ್ರ ಮತ್ತು ಪ್ರಕಟಣೆ ಹೊರಡಿಸಿಲ್ಲ. ಅಕ್ರಮ ಗ್ಯಾಸ್ ಸಿಲಿಂಡರ್ ಹೊಂದಿರುವವರು ಪೂರಕವೆಂಬಂತೆ ನಕಲಿ ದಾಖಲೆಗಳನ್ನೇ ಸಾಚಾ ಎಂಬಂತೆ ನೀಡಿದ್ದಾರೆ. ಅನೇಕ ಅಂಗಡಿ ಹೋಟೆಲ್ ಇತರೆ ವಾಣಿಜ್ಯ ಬಳಕೆಗೆ ಎಗ್ಗಿಲ್ಲದೆ ಕಾಳ ಸಂತೆಯಲ್ಲಿ ಸರಬರಾಜಾಗುತ್ತಿದೆ.

ಇದಕ್ಕೆಲ್ಲಾ ಕಡಿವಾಣ ಹಾಕದೆ ಗ್ರಾಮಾಂತರ ಪ್ರದೇಶಗಳಲ್ಲಿ, ಕೂಲಿ ಕಾರ್ಮಿಕರ ಹಾಗೂ ಬಡವರ ಸಂಪರ್ಕವನ್ನು ಸ್ಥಗಿತಗೊಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT