ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಯಾನಿ ತಪಾಸಣೆ ವಿಡಿಯೊ ನಕಲಿ

ಪ್ರಚೋದನಕಾರಿ ಕೃತ್ಯ: ಅಮೆರಿಕ ಸರ್ಕಾರ ಟೀಕೆ
Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ವಿವಸ್ತ್ರಗೊಳಿಸಿ ತಪಾಸಣೆಗೊಳಿಸಿದ್ದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ನಕಲಿ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

‘ಈ ವಿಡಿಯೊ ಖೋಬ್ರಾಗಡೆ ಅವ­ರಿಗೆ ಸಂಬಂಧಿ­ಸಿದ್ದಲ್ಲ. ಇದನ್ನು ಉದ್ದೇಶ­ಪೂರ್ವಕವಾಗಿ ಹೆಣೆಯ­ಲಾಗಿದೆ. ಇದು ಅತ್ಯಂತ ಅಪಾಯಕಾರಿ ಹಾಗೂ ಪ್ರಚೋ­­ದನ­ಕಾರಿ ಕೃತ್ಯ’ ಎಂದು ಅಮೆ­ರಿಕದ ವಿದೇಶಾಂಗ ಇಲಾಖೆ ಉಪ­ವಕ್ತಾರೆ ಮೇರಿ ಹಾರ್ಫ್‌ ಹೇಳಿದ್ದಾರೆ.

ಭದ್ರತಾ ಅಧಿಕಾರಿಗಳು ತಮ್ಮ ವಶದಲ್ಲಿರುವ ಮಹಿಳೆಯನ್ನು ವಿವಸ್ತ್ರ­ಗೊಳಿಸಿ ತಪಾಸಣೆ ಮಾಡುತ್ತಿ­ರುವ ದೃಶ್ಯ­ವನ್ನೊಳಗೊಂಡ ವಿಡಿಯೊ ಸಾಮಾ­­­ಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಇದು ನಕಲಿ ವಿಡಿಯೊ. ಸಾಚಾ­ತನವನ್ನು ಖಚಿತಪಡಿಸಿಕೊಳ್ಳದೇ ಕೆಲ­ವೊಂದು ಸುದ್ದಿತಾಣಗಳು ಇದನ್ನು ಹರಿ­ಬಿಟ್ಟಿವೆ. ಇದು ಬೇಜವಾ­ಬ್ದಾರಿ­ತನ­ವನ್ನು ಎತ್ತಿ ತೋರಿಸುತ್ತದೆ. ಅಲ್ಲದೇ ಇದೊಂದು ಭಂಡತನ­ದಿಂದ ಕೂಡಿದ ಕೃತ್ಯ. ಇದನ್ನು ಖಂಡಿಸಲೇಬೇಕು. ಖಂಡಿತ­ವಾಗಿಯೂ ಇದು ಖೋಬ್ರಾ­ಗಡೆಗೆ ಸಂಬಂಧಿಸಿ­ದ್ದಲ್ಲ’ ಎಂದು ಮೇರಿ ಹಾರ್ಫ್‌ ಪ್ರತಿಕ್ರಿಯಿಸಿದ್ದಾರೆ.

‘ವಿಡಿಯೊ ವಿಷಯವಾಗಿ ವಿದೇ­ಶಾಂಗ ಇಲಾಖೆ­ಯು ಭದ್ರತಾ ಅಧಿಕಾರಿ­ಗಳೊಂದಿಗೆ ಚರ್ಚಿಸಿದೆ. ಇದು ನಕಲಿ ವಿಡಿಯೊ ಎನ್ನುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಾನು ಆ ವಿಡಿಯೊ ನೋಡಿಲ್ಲ’ ಎಂದು ತಿಳಿಸಿದ್ದಾರೆ.

ಸ್ವಾಗತ: ನವದೆಹಲಿ-­ಯಲ್ಲಿ­ರುವ ಅಮೆ­ರಿಕದ ರಾಯಭಾರ ಕಚೇರಿ ಹೊರಗೆ ಹೆಚ್ಚುವರಿಯಾಗಿ 150 ಪೊಲೀಸರನ್ನು  ನಿಯೋಜಿಸುವ ಭಾರತದ ನಿರ್ಧಾರ­ವನ್ನು ಅಮೆರಿಕ ಸ್ವಾಗತಿಸಿದೆ.

‘ದೆಹಲಿಯಲ್ಲಿರುವ ಎಲ್ಲ ರಾಜ­ತಾಂತ್ರಿಕರ ಸುರಕ್ಷೆ ಹಾಗೂ ಭದ್ರತೆಗೆ ಭಾರತವು ಬದ್ಧವಾಗಿದೆ ಎಂದು ವಿದೇ­ಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಹೇಳಿಕೆಗಳನ್ನು ನಾವು ಸ್ವಾಗತಿಸು­ತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ಮನಮೋಹನ್‌ ಹೇಳಿಕೆಗೆ ಅನುಮೋದನೆ
‘ದೇವಯಾನಿ ಪ್ರಕರಣದಿಂದ ಉಭಯ ದೇಶಗಳ ಬಾಂಧವ್ಯದಲ್ಲಿ ಅಪಶ್ರುತಿ ಮೂಡಿದೆ’ ಎಂದು ಪ್ರಧಾನಿ ಮನ­ಮೋಹನ್‌ ಸಿಂಗ್‌ ನೀಡಿದ ಹೇಳಿಕೆ­ಯನ್ನು ಒಪ್ಪಿಕೊಂಡಿ­ರುವ ಅಮೆರಿಕ, ‘ಮೈತ್ರಿ ಬಲಪಡಿಸಲು  ಗಮನ ಹರಿಸಲಾಗುತ್ತಿದೆ’ ಎಂದು ಹೇಳಿದೆ.

‘ಎರಡೂ ದೇಶಗಳು ಒಟ್ಟಾಗಿ ಮಾಡ ಬೇಕಾಗಿರುವ ಕೆಲಸ ಬೇಕಾ-­ದಷ್ಟಿದೆ. ಆದ ಕಾರಣ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗಬೇಕು. ಆ ನಿಟ್ಟಿ­ನಲ್ಲಿ ನಾವು ಹೆಚ್ಚಿನ ಗಮನ ಹರಿಸಿ­ದ್ದೇವೆ’ ಎಂದು  ಹಾರ್ಫ್‌ ತಿಳಿಸಿದ್ದಾರೆ.

‘ಖೋಬ್ರಾಗಡೆ ಅವರಿಗೆ ಸಂಪೂರ್ಣ ರಾಜ ತಾಂತ್ರಿಕ ರಕ್ಷಣೆ ನೀಡುವ ಸಂಬಂಧ ಕಾನೂನು ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿರುವ  ಕಡತ ಬಂದು ತಲುಪಿದೆ. ಈ ಕಡತದ ಪರಿಶೀಲನೆ ನಡೆಯುತ್ತಿದೆ.   ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎನ್ನು­ವುದು ಈಗಲೇ ಗೊತ್ತಾಗುತ್ತಿಲ್ಲ. ಇನ್ನೊಂ­ದೆಡೆ, ರಾಜತಾಂತ್ರಿಕ ಚರ್ಚೆ ಕೂಡ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT