ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದೇವರ' ಏಕದಿನ ಆಟಕ್ಕೆ ತೆರೆ

Last Updated 23 ಡಿಸೆಂಬರ್ 2012, 20:13 IST
ಅಕ್ಷರ ಗಾತ್ರ

ಬೆಂಗಳೂರು: `ಕ್ರಿಕೆಟ್ ಆಡಲೆಂದು ಈ ಭೂಮಿಗೆ ದೇವರೇ ಕಳುಹಿಸಿಕೊಟ್ಟ ಆಟಗಾರ ಸಚಿನ್ ತೆಂಡೂಲ್ಕರ್'
-ಸುನಿಲ್ ಗಾವಸ್ಕರ್ ಒಮ್ಮೆ ನೀಡಿದ್ದ ಈ ಹೇಳಿಕೆ ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದ ಪೂರ್ಣ ಪರಿಚಯ ಮಾಡಿಕೊಡುತ್ತದೆ.  ಕ್ರಿಕೆಟ್‌ನ ಅಧಿಪತಿ ತೆಂಡೂಲ್ಕರ್ ಈಗ ಏಕದಿನ ಪೀಠ ತೊರೆದಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರನ ಏಕದಿನ ಆಟಕ್ಕೆ ತೆರೆಬಿದ್ದಿದೆ.

23 ವರ್ಷಗಳ ಸುದೀರ್ಘ ಆಟದ ಬಳಿಕ ತೆಂಡೂಲ್ಕರ್ ವಿದಾಯದ ಈ ವಿಷಯ ಪ್ರಕಟಿಸಿದ್ದಾರೆ. 72 ಗಂಟೆಗಳ ಹಿಂದೆಯೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಬಿಸಿಸಿಐಗೆ ಅವರು ಈ ವಿಷಯ ತಿಳಿಸಿದ್ದು ಶನಿವಾರ ರಾತ್ರಿ.

ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ನತ್ತ ಮಾತ್ರ ಗಮನ ಹರಿಸುತ್ತಿದ್ದ ಸಚಿನ್, ಕೊನೆಯ ಏಕದಿನ ಪಂದ್ಯ ಆಡಿ ಒಂಬತ್ತು ತಿಂಗಳಾಗಿತ್ತು. ಹಾಗಾಗಿ ಅವರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂಬ ವದಂತಿ ಆಗಲೇ ಸುಳಿದಾಡುತಿತ್ತು. ಜೊತೆಗೆ ಅವರ ಇತ್ತೀಚಿನ ವೈಫಲ್ಯ ಕೂಡ ಆ ವದಂತಿಗಳಿಗೆ ಆಹಾರವಾಗಿತ್ತು. ಅದೀಗ ನಿಜವಾಗಿದೆ. ಟೆಸ್ಟ್ ಕ್ರಿಕೆಟ್ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏಷ್ಯಾಕಪ್ ಟೂರ್ನಿಯಲ್ಲಿ ಮಾರ್ಚ್ 18ರಂದು ಢಾಕಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯ ಮುಂಬೈಕರ್‌ಗೆ ಕೊನೆಯದ್ದು. ಆ ಪಂದ್ಯದಲ್ಲಿ ಇವರು 52 ರನ್ ಗಳಿಸಿದ್ದರು. ವಿಶೇಷವೆಂದರೆ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಕೂಡ ಪಾಕ್ ವಿರುದ್ಧವೇ.

`ನಾನು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದೇನೆ. ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆಡುವ ಮೂಲಕ ನನ್ನ ಬಹುದಿನಗಳ ಕನಸು ನನಸಾಗಿತ್ತು' ಎಂದು ಹೇಳುವ ಮೂಲಕ ಸಚಿನ್ ತಮ್ಮ ಜೀವನದ ಕಠಿಣ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.

`ಇಷ್ಟು ದಿನ ನನಗೆ ನೀಡಿದ ಬೆಂಬಲ ಹಾಗೂ ಪ್ರೀತಿಗೆ ನಾನು ಚಿರಋಣಿ. ಭಾರತ ತಂಡ ಮತ್ತಷ್ಟು ಉತ್ತಮ ಪ್ರದರ್ಶನ ತೋರಲಿ ಎಂದು ಹಾರೈಸುತ್ತೇನೆ' ಎಂದು ಅವರು ನುಡಿದಿದ್ದಾರೆ. ಮತ್ತೊಂದು ಏಕದಿನ ಸರಣಿಯೊಂದರಲ್ಲಿ ಆಡಿ ಆಮೇಲೆ ಸಚಿನ್ ವಿದಾಯ ಹೇಳುತ್ತಾರೆ ಎಂಬುದು ಅಭಿಮಾನಿಗಳ ಭಾವನೆ ಆಗಿತ್ತು. ಆದರೆ, ಅವರು ದಿಢೀರನೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ಭವಿಸಿದ ಒತ್ತಡ ಅದಕ್ಕೆ ಕಾರಣ ಇರಬಹುದು.

ಸಾಧನೆಗಳು ಹಾಗೂ ಮುಟ್ಟಿದ ಗುರಿಗಿಂತ ಸಚಿನ್ ನಡೆದ ಬಂದ ದಾರಿಯೇ ಬಹು ಸುಂದರ. ಅವರಾಟ ಯಾವಾಗಲೂ ಮೆಲುಕು ಹಾಕುವಂತಹದ್ದು. ನೆನಪಿಸಿಕೊಂಡರೆ ಖುಷಿ ನೀಡುವಂತಹದ್ದು. 

`ಸಚಿನ್ ತೆಂಡೂಲ್ಕರ್' ಎಂಬ ಹೆಸರೊಂದೇ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿನ ಸಂಚಲನ ಉಂಟು ಮಾಡುತ್ತದೆ. ದಾಖಲೆಗಳ ಸರಮಾಲೆಯನ್ನೇ ಅವರು ಪೋಣಿಸಿಟ್ಟಿದ್ದಾರೆ. ಸರ್ವಶ್ರೇಷ್ಠ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಒಬ್ಬ ತೆಂಡೂಲ್ಕರ್ ಸುತ್ತ ಸೃಷ್ಟಿಯಾದ ಪ್ರೀತಿ, ದಾಖಲೆ, ಅಭಿಮಾನ, ಮಾರುಕಟ್ಟೆ ಇಡೀ ಕ್ರಿಕೆಟ್ ಜಗತ್ತನ್ನೇ ಬದಲಾಯಿಸಿತು. ಅವರು ಅಂಗಳದಲ್ಲಿ ಕಾಣಿಸಿಕೊಂಡರೆ ಪ್ರಾಯೋಜಕರಿಗೆ ಲಾಭ ಎನ್ನುವ ಸನ್ನಿವೇಶ ನಿರ್ಮಾಣವಾಯಿತು. ದಶಕದ ಹಿಂದೆಯೇ ರೂ 100 ಕೋಟಿ ಜಾಹೀರಾತು ಒಪ್ಪಂದ ಮಾಡಿಕೊಂಡು ಸಂಚಲನ ಮೂಡಿಸಿದ್ದರು.

ಕ್ರಿಕೆಟ್ ದಂತಕತೆಗಳು ಎನಿಸಿರುವ ಡಾನ್ ಬ್ರಾಡ್ಮನ್, ಗಾವಸ್ಕರ್, ಲಾರಾ, ರಿಚರ್ಡ್ಸ್, ಸೋಬರ್ಸ್, ಪಾಂಟಿಂಗ್ ಅವರಂತಹ ದಿಗ್ಗಜರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಬಲ್ಲ ಆಟಗಾರ ಸಚಿನ್. ಸ್ವತಃ ಬ್ರಾಡ್ಮನ್ ಒಮ್ಮೆ ತೆಂಡೂಲ್ಕರ್ ಅವರನ್ನು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಆಸ್ಟ್ರೇಲಿಯಾಕ್ಕೆ ಆಹ್ವಾನಿಸಿದ್ದರು. ಸಚಿನ್ ಆಟದ ಶೈಲಿ ತಮ್ಮ ಆಟದ ರೀತಿ ಇದೆ ಎಂದು ಪತ್ನಿಗೆ ಬ್ರಾಡ್ಮನ್ ಹೇಳಿದ್ದರು. `ಕನಸಿನಲ್ಲೂ ಸಚಿನ್ ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್ ಎತ್ತಿದ ರೀತಿ ಆಗುತ್ತದೆ' ಎಂದು ಲೆಗ್ ಸ್ಪಿನ್ ದಂತಕತೆ ಆಸ್ಟ್ರೇಲಿಯಾದ ಶೇನ್ ವಾರ್ನ್ ಒಮ್ಮೆ ನುಡಿದಿದ್ದರು. ಇದು ಸಚಿನ್ ಆಟದ ರೀತಿಗೆ ಸಾಕ್ಷಿ.

ಅಭಿಮಾನಿಗಳ ಒತ್ತಡದೊಳಗೆ...
10ನೇ ಸಂಖ್ಯೆಯ ನೀಲಿ ಪೋಷಾಕು ತೊಟ್ಟು ಪ್ರತಿ ಬಾರಿ ಕ್ರೀಸ್‌ಗೆ ಬರುವಾಗ ಏಳುವ ಸಮುದ್ರದ ಅಲೆಗಳನ್ನು ನೆನಪಿಸುವ  ಭಾವನೆಗಳ ಭೋರ್ಗರೆತದ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಅಭಿಮಾನಿಗಳ ಪಾಲಿಗೆ ಪರಮಾನಂದ.

ಅಭಿಮಾನಿಗಳು, ಮಾಧ್ಯಮಗಳ ಒತ್ತಡದ ಅಡಿಯಲ್ಲಿಯೇ ತೆಂಡೂಲ್ಕರ್ ಆಡಿ ಯಶಸ್ಸು ಕಂಡಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳ ಕನಸನ್ನು ಹೊತ್ತು ನಡೆದು ಬಂದಿದ್ದಾರೆ. `ಕ್ರಿಕೆಟ್ ನಮ್ಮ ಧರ್ಮ, ಸಚಿನ್ ನಮ್ಮ ದೇವರು' ಎಂಬ ಬ್ಯಾನರ್‌ಗಳನ್ನು ಅಭಿಮಾನಿಗಳು ಅಂಗಳದಲ್ಲಿ ಪದೇಪದೇ ಪ್ರದರ್ಶಿಸುತ್ತ್ದ್ದಿದ್ದೆ ಅದಕ್ಕೆ ಸಾಕ್ಷಿ.

ಅವರ ಮೇಲೆ ಬಿದ್ದಷ್ಟು ಒತ್ತಡ ಈ ಕ್ರಿಕೆಟ್ ಜಗತ್ತಿನಲ್ಲಿ ಉಳಿದ ಆಟಗಾರರ ಮೇಲೆ ಬಿದ್ದಿರಲಿಕ್ಕಿಲ್ಲ. ಏಕೆಂದರೆ `ಸಚಿನ್ ತಪ್ಪೇ ಮಾಡಬಾರದು' ಎಂದು ಭಾವಿಸಿದಂತಹ ಅಭಿಮಾನಿಗಳು ಇಲ್ಲಿದ್ದಾರೆ.  90ರ ದಶಕದಲ್ಲಿ ಭಾರತ ತಂಡ ಸಚಿನ್ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಅವರು ಔಟಾದರೆ ಪಂದ್ಯ ಮುಗಿದು ಹೋಗಲು ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಒತ್ತಡದಲ್ಲಿ ಅವರು ಆಡಬೇಕಾಯಿತು.

ಸೌಮ್ಯ ಸ್ವಭಾವದ ವಿಶಿಷ್ಟ ವ್ಯಕ್ತಿತ್ವ:
ಇಷ್ಟೆಲ್ಲ ಖ್ಯಾತಿ ಹೊಂದಿದ್ದರೂ ಸೌಮ್ಯ ಸ್ವಭಾವದ ಅವರ ವ್ಯಕ್ತಿತ್ವ ಎಲ್ಲರ ಮೆಚ್ಚುಗೆಗೆ ವ್ಯಕ್ತವಾಗಿದೆ. ಅಂಗಳದ ಒಳಗೆ ಅಥವಾ ಹೊರಗೆ ತೆಂಡೂಲ್ಕರ್ ವಿರುದ್ಧ ಯಾವುದೇ ವಿವಾದಗಳಿರಲಿಲ್ಲ. ಅಂಗಳದಲ್ಲಿ ನಿರಾಸೆ ವ್ಯಕ್ತಪಡಿಸಿರಬಹುದು. ಆದರೆ ಅವರು ಸಿಟ್ಟಾಗಿದ್ದ ಉದಾಹರಣೆಗಳಿಲ್ಲ.

ಭಾರತದಲ್ಲಿ ಮಾತ್ರವಲ್ಲ; ಕ್ರಿಕೆಟ್ ಆಡುವ ಯಾವುದೇ ದೇಶದ್ಲ್ಲಲ್ಲಿ ತೆಂಡೂಲ್ಕರ್ ಬಗ್ಗೆ ವಿಶೇಷ ಅಭಿಮಾನ, ಪ್ರೀತಿ ಇದೆ. `ಭೂಮಿಗೆ ಬಂದು ಕ್ರಿಕೆಟ್ ಆಡಲು ದೇವರಿಗೆ ಸಾಧ್ಯವಿಲ್ಲ. ಹಾಗಾಗಿ ಆತ ಸಚಿನ್ ಅವರನ್ನು ಸೃಷ್ಟಿಮಾಡಿ ಕಳುಹಿಸಿದ್ದಾನೆ', `ಸಚಿನ್ ಬ್ಯಾಟ್ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಮನೆಗಳಿಗೆ ಕಳ್ಳರು ನುಗ್ಗುವ ಭಯವಿಲ್ಲ. ಏಕೆಂದರೆ ಕಳ್ಳರೂ ಸಚಿನ್ ಆಟ ನೋಡಲು ಅಂಗಳಕ್ಕೆ ಬಂದಿದ್ದಾರೆ' ಎಂದು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಅಲ್ಲಿಯ ಅಭಿಮಾನಿಗಳು ಬ್ಯಾನರ್ ಪ್ರದರ್ಶಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದರು.

ಸಚಿನ್ ಅಂಗಳಕ್ಕಿಳಿಯುವ ಸಂದರ್ಭದಲ್ಲಿ ಅಭಿಮಾನಿಗಳು ಎದ್ದು ನಿಂತು ಗೌರವ ನೀಡುತ್ತಿದ್ದರು. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಸರ್ಕಾರ `ದಿ ಆರ್ಡರ್ ಆಫ್ ಆಸ್ಟ್ರೇಲಿಯಾ' ಗೌರವ ನೀಡಿ ಸನ್ಮಾನಿಸಿದ್ದು ಅದಕ್ಕೆ ಸಾಕ್ಷಿ. ಆದರೆ ಭಾರತ ತಂಡದ ನೀಲಿ ಪೋಷಾಕಿನಲ್ಲಿ ಅವರನ್ನು ಮತ್ತೆ ಕಾಣಲು ಸಾಧ್ಯವಿಲ್ಲ.

ಟೀಕೆಗಳಿಗೆ ಬ್ಯಾಟ್‌ನಿಂದಲೇ ಪ್ರತಿಕ್ರಿಯೆ:
ಸಚಿನ್ ಶತಕ ಗಳಿಸಿದರೆ ಭಾರತ ಗೆಲ್ಲಬಹುದು, ವೈಯಕ್ತಿವಾಗಿ ಸಚಿನ್‌ಗೆ ಮೆಚ್ಚುಗೆ ವ್ಯಕ್ತವಾಗಬಹುದು. ಸಚಿನ್ ಶತಕ ಗಳಿಸಿದರೆ ಭಾರತ ಸೋಲುತ್ತೆ ಎಂದು ಬರೆಯಲು ಟೀಕಾಕಾರರಿಗೆ ಆಹಾರವೂ ಆಗಬಹುದು. ಖಂಡಿತ ಅದಷ್ಟೆ ಅಲ್ಲ. ಅವರ ಆಟ, ಶತಕ ಅದೆಷ್ಟೊ ಅಭಿಮಾನಿಗಳಲ್ಲಿ ಸ್ಫೂರ್ತಿ ತುಂಬಿದೆ. ಕಿರಿಯ ಆಟಗಾರರಿಗೆ ಭರವಸೆಯಾಗಿದೆ. ಸಚಿನ್ ಅವರ ಬ್ಯಾಟಿಂಗ್ ಲಹರಿಯನ್ನು ಪುಟಾಣಿಗಳೂ ಪುಟ್ಟ ಪುಟ್ಟ ಕೈಗಳಿಂದ ಚಪ್ಪಾಳೆ ತಟ್ಟುತ್ತ ಸವಿದಿದ್ದಾರೆ. ಮುದುಕರೂ ಗಂಟೆಗಟ್ಟಲೇ ತೆಂಡೂಲ್ಕರ್ ಬಗ್ಗೆ ಮಾತನಾಡುತ್ತಾ ಮುಸ್ಸಂಜೆ ಕಳೆದಿದ್ದಾರೆ.

ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ:
ಈ ಹಾದಿಯಲ್ಲಿ ಅವರು ಸಾಕಷ್ಟು ಟೀಕೆಗಳನ್ನೂ ಎದುರಿಸಬೇಕಾಯಿತು. ಆದರೆ ಸಚಿನ್ ಯಾವತ್ತೂ ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಆ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಾ ಬಂದಿದ್ದಾರೆ. `ಯಶಸ್ಸು ಎಂಬುದು ಒಂದು ಪಯಣ. ಆ ದಾರಿಯಲ್ಲಿ ನಿಮ್ಮ ಮೇಲೆ ಕಲ್ಲು ಎಸೆಯಲು ಕೆಲವರು ಕಾಯುತ್ತಿರುತ್ತಾರೆ. ಆದರೆ ಅದೇ ಕಲ್ಲುಗಳನ್ನು ನಾನು ಮೈಲಿಗ್ಲ್ಲಲುಗಳನ್ನಾಗಿಸಿಕೊಂಡೆ. ನನ್ನ ಇಷ್ಟು ವರ್ಷಗಳ ಪಯಣದಲ್ಲಿ ಉಬ್ಬು, ತಗ್ಗುಗಳಿದ್ದವು. ಸವಾಲು ಎದುರಾದವು. ಈಗ ಇಲ್ಲಿಗೆ ಬಂದು ನಿಂತಿದ್ದೇನೆ. ಅದೊಂದು ಅಮೋಘ ಪಯಣ' ಎಂದು ತೆಂಡೂಲ್ಕರ್ ಇತ್ತೀಚೆಗೆ ಹೇಳಿದ್ದರು.

23 ವರ್ಷಗಳ ಕ್ರಿಕೆಟ್ ಅವಧಿಯಲ್ಲಿ ಅವರು ತಿಂಗಳುಗಟ್ಟಲೇ ಕುಟುಂಬದಿಂದ ದೂರ ಇರಬೇಕಾಯಿತು. `ಮಕ್ಕಳ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ನನ್ನ ಬಗ್ಗೆ ಕಾಳಜಿ ವಹಿಸುವುದೇ ಕಷ್ಟವಾಗಿದೆ. ಕೆಲವೊಮ್ಮೆ ಸಿಟ್ಟು ಬರುತ್ತದೆ. ಆದರೆ ನನ್ನ ಪತ್ನಿ ಅಂಜಲಿ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾಳೆ. ನನ್ನ ಹಾಗೂ ಕ್ರಿಕೆಟ್ ಮಧ್ಯೆ ಬೇರೆ ಯಾವುದಕ್ಕೂ ಅವಕಾಶವಿಲ್ಲ ಎಂಬುದನ್ನು ನನ್ನ ಕುಟುಂಬದ ಪ್ರತಿಯೊಬ್ಬರೂ ಅರ್ಥಮಾಡಿಕೊಂಡಿದ್ದಾರೆ' ಎಂದು ತೆಂಡೂಲ್ಕರ್ ಕುಟುಂಬ ಹಾಗೂ ಕ್ರಿಕೆಟ್ ನಡುವಿನ ಗೆರೆಯ ಬಗ್ಗೆ ಹೇಳಿದ್ದರು.

ಜಾಗತಿಕ ರಾಯಭಾರಿ
ಸಚಿನ್ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬಲ್ಲ ಕ್ರೀಡಾಪಟು. ಜಾಗತಿಕ ರಾಯಭಾರಿ. ಕ್ರಿಕೆಟ್ ಅಂಗಳದಿಂದ ಹೊರಗೂ ಶ್ರೇಷ್ಠ ವ್ಯಕ್ತಿ ಎನಿಸಿಕೊಂಡಿದ್ದಾರೆ. ಕ್ರಿಕೆಟ್‌ನಲ್ಲಿ ಸಿಗುತ್ತಿರುವ ಹೇರಳ ಹಣ ಅವರಾಟದ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. `ನಾಳೆಯ ದಿನದ ಪಂದ್ಯದ ಬಗ್ಗೆ ಯೋಚಿಸುತ್ತಾ ನಾನು ಅದೆಷ್ಟೊ ನಿದ್ರೆ ಇಲ್ಲದೇ ರಾತ್ರಿಗಳನ್ನು ಕಳೆದಿದ್ದೇನೆ. ಯಾವ ರೀತಿ ಆಡುತ್ತೇನೆ ಎಂಬ ಚಿಂತೆಯಲ್ಲಿ ನಿದ್ರೆಯೇ ಬರುವುದಿಲ್ಲ. ಅದೊಂದು ಕುತೂಹಲದ ಅನುಭವ. ಇದೆಲ್ಲ ಹಣದಿಂದ ಸಿಗುವುದಿಲ್ಲ. ಚೆನ್ನಾಗಿ ಆಡಬೇಕು ಎಂಬುದೇ ನನಗೆ ಸ್ಫೂರ್ತಿ' ಎಂದು ಅವರೊಮ್ಮೆ ಪ್ರತಿಕ್ರಿಯಿಸಿದ್ದರು. ಸಚಿನ್ ಕ್ರಿಕೆಟ್ ಪ್ರೀತಿಸಿದ ಪರಿ ಅದ್ಭುತ. ಅಭ್ಯಾಸ ನಡೆಸುವಾಗ ಕೂಡ ಅವರ ಶ್ರದ್ಧೆ ಅಪಾರ. ಕ್ರಿಕೆಟ್‌ನ ಈ ಅರ್ಜುನನಿಗೆ ಕಾಣಿಸುತ್ತಿದ್ದದ್ದು ಚೆಂಡು ಮಾತ್ರ. ಬ್ಯಾಟ್ ಮಾಡುವಾಗ ಚೆಂಡಿನ ಮೇಲೆ ಅವರ ಏಕಾಗ್ರತೆ ಅಮೋಘ. ಆ ಶಿಸ್ತು ಅವರಿಗೆ ಯಶಸ್ಸು ತಂದುಕೊಟ್ಟಿತು.

`ನೀನು ವಿಶ್ವ ವಿಖ್ಯಾತ ಬ್ಯಾಟ್ಸ್‌ಮನ್ ಆಗುತ್ತೀಯಾ'
1989ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಸಚಿನ್ ಪಾಲಿನ ಮೊದಲ ಸರಣಿ ಅದು. ಅಂದಿನ ವಿಶ್ವ ವಿಖ್ಯಾತ ವೇಗದ ಬೌಲರ್‌ಗಳಾದ ಇಮ್ರಾನ್ ಖಾನ್, ವಾಸೀಮ್ ಅಕ್ರಂ, ವಕಾರ್ ಯೂನಿಸ್ ಅವರ ವೇಗದ ಎಸೆತಗಳಿಗೆ ತೆಂಡೂಲ್ಕರ್ ಎದೆಕೊಟ್ಟು ನಿಂತಿದ್ದರು. 16ನೇ ವಯಸ್ಸಿನಲ್ಲೇ ಕ್ರಿಕೆಟ್‌ಗೆ ಕಾಲಿರಿಸಿದ್ದ ಸಚಿನ್ ಮುಖಕ್ಕೆ ವಕಾರ್ ಎಸೆತವೊಂದು ಬಡಿದು ರಕ್ತ  ಚಿಮ್ಮಿತ್ತು. ಆದರೂ ಬ್ಯಾಟಿಂಗ್ ಮುಂದುವರೆಸಿದ್ದರು. `ಹಾಲು ಕುಡಿಯುವ ಮಗು' ಎಂದ ಮೂದಲಿಸಿದ್ದರು. ಅದನ್ನು ಮನಸ್ಸಿಗೆ ಹಾಕಿಕೊಳ್ಳದ ಮುಂಬೈಕರ್ ಮತ್ತೊಂದು ಪಂದ್ಯದಲ್ಲಿ ವಿಶ್ವ ವಿಖ್ಯಾತ ಸ್ಪಿನರ್ ಎನಿಸಿದ್ದ ಅಬ್ದುಲ್ ಖಾದಿರ್‌ಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಮೊದಲ ಎರಡು ಸಿಕ್ಸರ್ ಎತ್ತಿದಾಗ `ನೀನು ವಿಶ್ವ ವಿಖ್ಯಾತ ಬ್ಯಾಟ್ಸ್‌ಮನ್ ಆಗುತ್ತೀಯಾ' ಎಂದು ಖಾದಿರ್ ಅವತ್ತು ಭವಿಷ್ಯ ನುಡಿದಿದ್ದರು. ಆ ನಂತರ ಖಾದಿರ್ ಹಾಕಿದ ಎಸೆತವನ್ನು ಸಚಿನ್ ಮತ್ತೆ ಸಿಕ್ಸರ್‌ಗೆ ಎತ್ತಿದ್ದರು!

ನೀನು ಹತ್ತು ವರ್ಷ ಆಡಬೇಕು... ಇದು ನನ್ನ ಬೆಟ್!
ಆ ಪ್ರವಾಸದ ವೇಳೆ ಸಚಿನ್ ಜೊತೆ ಕಪಿಲ್ ದೇವ್ ಕಟ್ಟಿದ ಬೆಟ್ ಇದು. ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೆ.ಶ್ರೀಕಾಂತ್ ಅಂದಿನ ಭಾರತ ತಂಡದ ನಾಯಕ. ಆದರೆ ಸಚಿನ್ ಕ್ರಿಕೆಟ್ ಆಡಲು ಶುರು ಮಾಡಿ 23 ವರ್ಷಗಳು ಕಳೆದು ಹೋಗಿವೆ. ಕಪಿಲ್ ಕಟ್ಟಿದ ಬೆಟ್ ಡಬಲ್ ಆಗಿದೆ. 

ಸಚಿನ್ ಅವರನ್ನು ಹೇಗೆ ಔಟ್ ಮಾಡಬಹುದು ಎಂಬುದರ ಬಗ್ಗೆ ಒಮ್ಮೆ ಮೈಕಲ್ ಕ್ಯಾಸ್ಪ್ರೋವಿಚ್ ಅವರು ಚೆನ್ನೈನ ಎಂಆರ್‌ಎಫ್ ಫೌಂಡೇಷನ್‌ನಲ್ಲಿ ತರಬೇತಿ ನೀಡುತ್ತಿದ್ದ ಆಸ್ಟ್ರೇಲಿಯಾದ ಮಾಜಿ ವೇಗಿ ಡೆನಿಸ್ ಲಿಲ್ಲಿ ಅವರ ಬಳಿ ಸಲಹೆ ಕೇಳಲು ತೆರಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಲಿಲ್ಲಿ, `ತೆಂಡೂಲ್ಕರ್‌ಗೆ ಕೆಟ್ಟ ಎಸೆತಗಳನ್ನು ಹಾಕಬೇಡಿ, ಏಕೆಂದರೆ ಅವರು ಅತ್ಯುತ್ತಮ ಎಸೆತಗಳನ್ನು ಬೌಂಡರಿಗೆ ಅಟ್ಟುತ್ತಾರೆ. ಒಳ್ಳೆಯ ಎಸೆತಗಳನ್ನು ಹಾಕಲು ಪ್ರಯತ್ನಿಸು. ಅದೃಷ್ಟವಿದ್ದರೆ ಫಲ ಸಿಗಬಹುದು' ಎಂದ ಕಿವಿಮಾತು ಹೇಳಿದರು.

ಸಚಿನ್ ಹಾಗೂ 23 ವರ್ಷದ ಕ್ರಿಕೆಟ್
ಈ ಕ್ರೀಡಾ ಪ್ರಪಂಚದಲ್ಲಿ ಒಬ್ಬ ಕ್ರೀಡಾಪಟು ಅದೆಷ್ಟೊ ಸಾಧನೆ ಮಾಡಿರಬಹುದು. ವಿಶ್ವ ಚಾಂಪಿಯನ್ ಆಗಿರಬಹುದು. ಹ್ಯಾಟ್ರಿಕ್ ವಿಶ್ವಕಪ್ ಗೆದ್ದಿರಬಹುದು. 17 ಗ್ರ್ಯಾಂಡ್‌ಸ್ಲಾಮ್ ಮುಡಿಗೇರಿಸಿಕೊಂಡಿರಬಹುದು, ಒಂದೇ ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕ ಜಯಿಸಿರಬಹುದು, 100 ಶತಕೋಟಿಗಳಷ್ಟು ಹಣ ಮಾಡಿರಬಹುದು, ನೂರಾರು ವಿಶ್ವ ದಾಖಲೆ ಮಾಡಿರಬಹುದು. ಆದರೆ ಸಚಿನ್ ತೆಂಡೂಲ್ಕರ್ ಒಬ್ಬರು ಉಳಿದೆಲ್ಲವರಿಗಿಂತ ವಿಭಿನ್ನವಾಗಿ ಉಳಿಯುತ್ತಾರೆ. ಏಕೆಂದರೆ ಒಬ್ಬ ಕ್ರೀಡಾಪಟು ಅಂತರರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಆರಂಭದ ದಿನಗಳಿಂದ 23 ವರ್ಷಗಳವರೆಗೆ ಒಂದೇ ಮಟ್ಟದ ನಿರೀಕ್ಷೆ ಕಾದುಕೊಂಡ ಹೋದ ಉದಾಹರಣೆ ಇಲ್ಲ.

ವಿಶ್ವಕಪ್‌ನಲ್ಲಿ ಸಚಿನ್ ಸಾಧನೆ
1983ರಲ್ಲಿ ಕಪಿಲ್ ದೇವ್ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿದಾಗ ಸಚಿನ್ 10 ವರ್ಷದ ಮಗು. ಅದಾಗಲೇ ಸಚಿನ್ ಲೀಗ್ ಕ್ರಿಕೆಟ್‌ನಲ್ಲಿ ಆಡಲು ಶುರು ಮಾಡಿದ್ದರು. ಒಮ್ಮೆ ಅವರೇ ಹೇಳಿದಾಗ ಹಾಗೆ ಅಂತಹ ಸಾಧನೆ ಮಾಡಬೇಕು ಎಂಬ ಕನಸು ಹೊಂದಿದ್ದರಂತೆ.

ಆ ಸಾಧನೆ 2011ರ ಮಾರ್ಚ್ 2ರಂದು ನನಸಾಯಿತು. ಮುಂಬೈನ ವಾಂಖೇಡೆ ಅಂಗಳದಲ್ಲಿ ಸಚಿನ್ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದು ಖುಷಿಯ ಕಣ್ಣೀರು ಹರಿಸಿದರು. ಸಚಿನ್ ಅವರನ್ನು ಯುವ ಆಟಗಾರರಾದ ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಅಂಗಳದಲ್ಲಿ ಸಂಭ್ರಮಿಸಿದರು. ಈ ಟೂರ್ನಿಯಲ್ಲಿ ಸಚಿನ್ ಒಟ್ಟು 482 ರನ್ ಗಳಿಸಿದರು.

ಸಚಿನ್ ಒಟ್ಟು ಆರು ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದಾರೆ. 1992ರಲ್ಲಿ ಮೊದಲ ಬಾರಿ ಅವರು ವಿಶ್ವಕಪ್‌ನಲ್ಲಿ ಆಡಿದರು. 1996ರಲ್ಲಿ ಸ್ವದೇಶದಲ್ಲಿ ನಡೆದ ವಿಶ್ವಕಪ್‌ನಲ್ಲಿ ಅವರು 523 ರನ್ ಗಳಿಸಿದ್ದರು. ಆದರೆ ಆ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತು ಹೋಯಿತು. 1999ರ ಟೂರ್ನಿಯಲ್ಲೂ ನಿರಾಸೆ ಆಯಿತು. 2003ರ ವಿಶ್ವಕಪ್‌ನಲ್ಲಿ ಅವರು 673 ರನ್ ಗಳಿಸಿದ್ದರು. ಅದಕ್ಕಾಗಿ ಅವರು ಟೂರ್ನಿ ಶ್ರೇಷ್ಠ ಎನಿಸಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಆ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಿತ್ತು. ಆದರೆ 2007ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಮೊದಲ ಸುತ್ತಿನಲ್ಲೇ ಸೋಲು ಕಂಡಿತ್ತು. ಆಗ ಸಚಿನ್ ಮನೆಗೂ ಭದ್ರತೆ ಒದಗಿಸಲಾಗಿತ್ತು. ಕಾರಣ ಅಭಿಮಾನಿಗಳು ಅಷ್ಟೊಂದು ಆಕ್ರೋಶಕ್ಕೆ ಒಳಗಾಗಿದ್ದರು.

ಸಚಿನ್ ಶತಕ ಗಳಿಸಿದಾಗ ಭಾರತ ಸೋಲುತ್ತದೆಯೇ?
ಸಚಿನ್ ಶತಕ ಗಳಿಸಿ ಭಾರತ ಸೋತಾಗೆಲ್ಲಾ ಟೀಕಾಕಾರರದ್ದು ಒಂದೇ ಮಾತು. `ಸಚಿನ್ ಶತಕ ಗಳಿಸಿದಾಗಲೆಲ್ಲಾ ಭಾರತ ಸೋಲುತ್ತೆ' ಎಂಬ ರಾಗವದು. ಆದರೆ ಅಂಕಿ ಅಂಶಗಳು ಆ ಟೀಕೆಗಳನ್ನು ಸುಳ್ಳಾಗಿಸುತ್ತವೆ. ಏಕೆಂದರೆ ಅವರ 49 ಏಕದಿನ ಶತಕಗಳಲ್ಲಿ 33ರಲ್ಲಿ ಭಾರತ ಗೆದ್ದಿದೆ. 96 ಅರ್ಧ ಶತಕಗಳಲ್ಲಿ 58ರಲ್ಲಿ ಭಾರತ ಗೆದ್ದಿದೆ. 463 ಪಂದ್ಯಗಳಲ್ಲಿ 233ರಲ್ಲಿ ಜಯ ಲಭಿಸಿದೆ.

ಮರೆಯಲಾಗದ ಓವರ್
1993ರ ಹೀರೊ ಕಪ್ ಯಾವುದೇ ಕಾರಣಕ್ಕೂ ಅಭಿಮಾನಿಗಳ ಮನದಿಂದ ಅಳಿಸಿ ಹೋಗದು. ಅದಕ್ಕೆ ಕಾರಣ ಸಚಿನ್ ಮಾಡಿದ್ದ ಆ ಕೊನೆಯ ಓವರ್. ಆ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ ಗೆಲ್ಲಲು ದಕ್ಷಿಣ ಆಫ್ರಿಕಾಕ್ಕೆ ಕೊನೆಯ ಓವರ್‌ನಲ್ಲಿ ಆರು ರನ್ ಬೇಕಿತ್ತು.

ಕೋಲ್ಕತ್ತದಲ್ಲಿ ನಡೆದಿದ್ದ ಆ ಪಂದ್ಯವನ್ನು ಅಜರುದ್ದೀನ್ ಮುನ್ನಡೆಸುತ್ತಿದ್ದರು. ಏನು ಮಾಡಬೇಕು ಎಂಬ ಒತ್ತಡಕ್ಕೆ ಸಿಲುಕಿದ್ದರು. ಆಗ ಅಜರ್ ಬಳಿ ತೆರಳಿದ ಸಚಿನ್, `ನಾನು ಈ ಓವರ್ ಬೌಲ್ ಮಾಡುತ್ತೇನೆ' ಎಂದರು. ಒಂದು ಕ್ಷಣ ಎಲ್ಲರೂ ಕಕ್ಕಾಬಿಕ್ಕಿಯಾದರು.

ಆದರೂ ಸಚಿನ್ ಕೈಗೆ ಅಜರ್ ಚೆಂಡು ನೀಡಿದರು. ಸಚಿನ್ ಬೌಲ್ ಮಾಡಿದರು. ಆ ಪಂದ್ಯವನ್ನು ಭಾರತ 2 ರನ್‌ಗಳಿಂದ ಗೆದ್ದುಕೊಂಡಿತು. ಅಷ್ಟೇ ಏಕೆ?  ಹೀರೊ ಕಪ್ ಕೂಡ ಭಾರತದ ಪಾಲಾಯಿತು.

ಸಚಿನ್ ಹೆಸರಿಡಲು ಕಾರಣ...
ಸಚಿನ್ ತಂದೆ ರಮೇಶ್ ತೆಂಡೂ ಲ್ಕರ್ ಮರಾಠಿ ಕಾದಂಬರಿಕಾರ. ತಾಯಿ ರಜನಿ ಇನ್ಸೂರೆನ್ಸ್ ಕಂಪೆನಿ ಯಲ್ಲಿ ಉದ್ಯೋಗದಲ್ಲಿದ್ದರು. ರಮೇಶ್ ತೆಂಡೂಲ್ಕರ್ ಅವರಿಗೆ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್  ಕಂಡರೆ ತುಂಬಾ ಪ್ರೀತಿ. ಅವರ ಪರಮ ಅಭಿಮಾನಿಯಾಗಿದ್ದರು. ಹಾಗಾಗಿ ಅವರು ತಮ್ಮ ಪುತ್ರನಿಗೆ ಸಚಿನ್ ಎಂದು ಹೆಸರು ಇಟ್ಟರು.

ನೀನು ಹತ್ತು ವರ್ಷ ಆಡಬೇಕು.. ಇದು ನನ್ನ ಬೆಟ್!
ಆ ಪ್ರವಾಸದ ವೇಳೆ ಸಚಿನ್ ಜೊತೆ ಕಪಿಲ್ ದೇವ್ ಕಟ್ಟಿದ ಬೆಟ್ ಇದು. ಈಗ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಕೆ.ಶ್ರೀಕಾಂತ್ ಅಂದಿನ ಭಾರತ ತಂಡದ ನಾಯಕ. ಆದರೆ ಸಚಿನ್ ಕ್ರಿಕೆಟ್ ಆಡಲು ಶುರು ಮಾಡಿ 23 ವರ್ಷಗಳ ಕಳೆದು ಹೋಗಿವೆ. ಕಪಿಲ್ ಕಟ್ಟಿದ ಬೆಟ್ `ಡಬಲ್' ಆಗಿದೆ.

`ಸಚಿನ್ ಕ್ರಿಕೆಟ್ ಆಟಗಾರರಿಗೆ ಒಂದು ಗುರಿ ನಿರ್ಮಿಸಿಕೊಟ್ಟಿದ್ದಾರೆ. ಅಕಸ್ಮಾತ್ ನಾನು 20 ವರ್ಷ ಕ್ರಿಕೆಟ್ ಆಡಿದರೆ ಗಾಲಿ ಕುರ್ಚಿಯಲ್ಲಿ ಕುಳಿತು ಬ್ಯಾಟಿಂಗ್ ಮಾಡಬೇಕಾಗುತ್ತದೆ' 
-ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ

`ಕಪಿಲ್ ದೇವ್ ಲಾರ್ಡ್ಸ್ ಅಂಗಳದಲ್ಲಿ 1983ರ ವಿಶ್ವಕಪ್ ಎತ್ತಿ ಹಿಡಿದಾಗ ನಾನು ಕ್ರಿಕೆಟ್ ಆಡಲು ಶುರು ಮಾಡಿದ್ದೆ. ಹತ್ತನೇ ವಯಸ್ಸಿನಿಂದಲೇ ವಿಶ್ವಕಪ್ ಗೆಲ್ಲಬೇಕೆಂಬ ಕನಸು ಕಂಡಿದ್ದೆ'
-ಸಚಿನ್ ತೆಂಡೂಲ್ಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT