ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

Last Updated 1 ಅಕ್ಟೋಬರ್ 2012, 5:05 IST
ಅಕ್ಷರ ಗಾತ್ರ

ರಾಮನಗರ: ಕೆಟ್ಟದ್ದನ್ನು ಮಾಡುವುದು ಸುಲಭದ ಕೆಲಸ. ಒಳ್ಳೆಯವರಾಗಿ ಜೀವನ ನಡೆಸುವುದು ತುಂಬಾ ಕಷ್ಟ. ಆದರೆ ಈ ಜೀವನದಿಂದ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ರುದ್ರಮುನಿ ಹೇಳಿದರು.

ನಗರದ ಜಿಲ್ಲಾ ಬಂದೀಖಾನೆಯಲ್ಲಿ ಶನಿವಾರ ಸಂಜೆ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಕೆಟ್ಟ ಕೆಲಸಗಳನ್ನು ಮಾಡುತ್ತಾ ಶಾಂತಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ.

ಅಪರಾಧ ಕೃತ್ಯಗಳನ್ನು ಮಾಡುವ ಮೂಲಕ ಬೇರೊಬ್ಬರಿಗೆ ನೋವು ಕೊಟ್ಟು ಕ್ಷಣಿಕವಾಗಿ ಸುಖಜೀವನ ನಡೆಸುವ ಬದಲು ಕಷ್ಟಪಟ್ಟು ಗಳಿಸಿದ ಹಣದಲ್ಲಿ ನೆಮ್ಮದಿಯ ಜೀವನ ನಡೆಸುವುದು ಸೂಕ್ತ~ ಎಂದು ಹೇಳಿದರು.

ಮನುಷ್ಯರು ತಾವು ಮಾಡಿದ ತಪ್ಪಿಗೆ ನ್ಯಾಯಾಲಯ ನೀಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ದೇವರು ನೀಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ತಪ್ಪು ಮಾಡಿದವರಿಗೆ ಖಂಡಿತಾ ಶಿಕ್ಷೆಯಾಗುತ್ತದೆ ಎಂದರು.

ಕೈದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇರುವುದು ವಿಷಾದನೀಯ. ಇಲ್ಲಿರುವ 143ಕ್ಕೂ ಹೆಚ್ಚು ಮಂದಿ ಕೈದಿಗಳಲ್ಲಿ ಒಬ್ಬನೇ ಒಬ್ಬ ತಾನು ಮಾಡಿರುವುದು ತಪ್ಪು ಎಂದು ಅರಿತು, ಮುಂದೆ ಒಳ್ಳೆಯ ರೀತಿಯಲ್ಲಿ ಜೀವನ ಮಾಡುವ ತೀರ್ಮಾನಕ್ಕೆ ಬಂದರೆ ಈ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ನ್ಯಾಯಾಧೀಶರಾದ ಕೆ.ನಾರಾಯಣ ಪ್ರಸಾದ್ ಮಾತನಾಡಿ, `ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಂಡು, ಮುಂದಿನ ಜೀವನವನ್ನು ಉತ್ತಮವಾಗಿಸಿಕೊಳ್ಳಬೇಕು~ ಎಂದು ತಿಳಿಸಿದರು.

ವಕೀಲರಾದ ಎಂ.ಎನ್.ನಂದಿನಿ `ಆಪಾದನೆಯ ರಾಜಿ~, ಎಸ್.ಲೋಕೇಶ್ `ಕಾನೂನು ಸೇವೆಗಳ ಕಾಯ್ದೆ-1987~ ಕುರಿತು ಉಪನ್ಯಾಸ ನೀಡಿದರು.

ಜೈಲು ಅಧೀಕ್ಷಕಿ ಆರ್. ಲತಾ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಸಣ್ಣೇಗೌಡ, ವಿಷಕಂಠು, ವಕೀಲರಾದ ಪೂರ್ಣಿಮಾ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಜಿಲ್ಲಾ ಕಾರಾಗೃಹ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT