ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಹೆಸರಲ್ಲಿ ರಕ್ತದೋಕುಳಿ

Last Updated 19 ಫೆಬ್ರುವರಿ 2012, 8:55 IST
ಅಕ್ಷರ ಗಾತ್ರ

ಗಜೇಂದ್ರಗಡ: ದೇವಸ್ಥಾನದ ಆವರಣದ ಒಂದು ಭಾಗದಲ್ಲಿ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತ ಗೊಂಡಿದ್ದ ದುರ್ಗಾಮಾತೆಯ ಮೂರ್ತಿಗೆ ಉಧೋ.. ಉಧೋ.. ಎನ್ನುತ್ತ ನೂರಾರು ಜನರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಯಿಂದ ಕುಣಿದಾಡಿದರು. 

  ಆವರಣದ ಇನ್ನೊಂದು ಕಡೆ ನೂರಾರು ಜನರು ಮೂಕ ಪ್ರಾಣಿಗಳಾದ ಆಡು, ಕುರಿ, ಟಗರು, ಕೋಳಿಗಳ ರುಂಡ ಮುಂಡಗಳನ್ನು ಚಂಡಾಡಿ ಆವರಣದ ನೆಲದಲ್ಲಿ ರಕ್ತದೋಕುಳಿ ನಡೆಸಿ ಕುಣಿದು ಕುಪ್ಪಳಿಸುತ್ತಿದ್ದರು.

ಇಂಥ ತದ್ವಿರುದ್ದ ಎರಡು ಘಟನೆಗಳಿಗೆ ಸಾಕ್ಷಿಯಾಗಿದ್ದು ಶನಿವಾರ ಇಲ್ಲಿನ ದುರ್ಗಾದೇವಿ ಜಾತ್ರಾ ಮಹೋತ್ಸವ. ಸ್ಥಳೀಯ ದುರ್ಗಾ ಮಂದಿರಕ್ಕೆ ರೋಣ ತಾಲ್ಲೂಕು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಸಾಕಷ್ಟು ಸಂಖ್ಯೆಯ ಭಕ್ತರು ನಡೆದುಕೊಳ್ಳುತ್ತಾರೆ.

ಅದರಲ್ಲಿ ಬಹುತೇಕ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಬಂದು ದೇವಿಗೆ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಕಳೆದ ಐದು ವರ್ಷಗಳ ಹಿಂದೆ ಜಿಲ್ಲಾಡಳಿತ ದೇವಸ್ಥಾನದ ಆವರಣದೊಳಗೆ ಪ್ರಾಣಿಬಲಿ ಕೊಡುವುದನ್ನು ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಜೊತೆಗೆ ದೇವಸ್ಥಾನದ ಟ್ರಸ್ಟ್ ಕಮಿಟಿ ಕೂಡ ಭಕ್ತರಲ್ಲಿ ಪ್ರಾಣಿ ಬಲಿ ಕೊಡದಂತೆ ಮನವಿ ಮಾಡಿಕೊಂಡಿತ್ತು.


ಹೀಗಾಗಿ ಆ ವರ್ಷ ಬಹುತೇಕವಾಗಿ ದೇವಸ್ಥಾನದ ಒಳಗಡೆ ಪ್ರಾಣಿ ಬಲಿ ನಡೆಯಲಿಲ್ಲ. ಕೆಲವರು ಹೊರಗಡೆ ಕದ್ದುಮುಚ್ಚಿ ಬಲಿ ಕೊಟ್ಟಿದ್ದರು.


ಆದರೆ, ಪ್ರಸಕ್ತ ವರ್ಷ ಜಿಲ್ಲಾಡಳಿತ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗಟ್ಟಲು ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ.  ಇಷ್ಟೆಲ್ಲ ನಿರಾತಂಕವಾಗಿ ಪ್ರಾಣಿಬಲಿ ನಡೆಯುತ್ತಿದ್ದರೂ ಸ್ಥಳದಲ್ಲಿಯೇ ಇದ್ದ ಗಜೇಂದ್ರಗಡ ಠಾಣೆಯ ಪಿ.ಎಸ್.ಐ. ಸೇರಿದಂತೆ ಸಾಕಷ್ಟು ಸಂಖ್ಯೆಯ ಪೊಲೀಸರು ತಮಗೆ ಅದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಇದ್ದದ್ದೂ ಸಾಕಷ್ಟು ಜನರನ್ನು ಆಶ್ಚರ್ಯಗೊಳಿಸಿತು.


ಬ್ಯಾಟಿ ಹಾಕಿ ದೇವರಿಗೆ ನಮ್ಮ ಭಕ್ತಿ ಅರ್ಪಿಸುತ್ತೇವೆ. ನಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ದೇವರಿಗೆ ಹರಿಕೆ ಮಾಡಿಕೊಂಡಿದ್ದೇವೆ. ಅದರಂತೆ ಕುರಿಯನ್ನು ದೇವಿಗೆ ಅರ್ಪಿಸುತ್ತಿದ್ದೇವೆ. ನಮಗೆಲ್ಲ ಒಳ್ಳೆದಾಗಲಿ ಎಂದೇ ಭಕ್ತಿಯಿಂದ ಮಾಡುತ್ತಿದ್ದೇವೆ. ಇದರಲ್ಲಿ ತಪ್ಪೇನಿಲ್ಲ~ ಎಂದು ದೇವಿಗೆ ಪ್ರಾಣಿ ಬಲಿಕೊಟ್ಟ ಹನಮವ್ವ, ಬರಮಪ್ಪ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡರು.


ಪಟ್ಟಣದ ದುರ್ಗಾದೇವಿ ಜಾತ್ರೆಯ ಮಾದರಿಯಲ್ಲಿಯೇ ಮಂಗಳವಾರ ಇಲ್ಲಿಗೆ ಸಮೀಪದ ಕೊಡಗಾನೂರ, ರಾಜೂರ ಗ್ರಾಮದ ನಡೆದ ದುರ್ಗಾದೇವಿ ಜಾತ್ರೆಯಲ್ಲಿಯು ಪ್ರಾಣಿಗಳನ್ನು  ಬಲಿ ಕೊಡುವ ಕಾರ್ಯ ನಿರ್ಭಯವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT